ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸಿಆರ್‌–ಕಾಂಗ್ರೆಸ್‌ ಸೌಹಾರ್ದ ಪಂದ್ಯ: ಮೋದಿ

Last Updated 27 ನವೆಂಬರ್ 2018, 19:40 IST
ಅಕ್ಷರ ಗಾತ್ರ

ನಿಜಾಮಾಬಾದ್/ಮೆಹಬೂಬ್‌ ನಗರ (ತೆಲಂಗಾಣ): ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್‌ ಮತ್ತು ಟಿಆರ್‌ಎಸ್‌ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ‘ಸೌಹಾರ್ದ ಪಂದ್ಯ’ ಆಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಕೆ. ಚಂದ್ರೇಖರ ರಾವ್‌ (ಕೆಸಿಆರ್‌) ನೇತೃತ್ವದ ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಅವರು ನಿಜಾಮಾಬಾದ್‌ ಪ್ರಚಾರ ಸಭೆಯಲ್ಲಿಮಂಗಳವಾರ ಟೀಕಿಸಿದರು. ಈ ಕ್ಷೇತ್ರದಲ್ಲಿ ಕೆಸಿಆರ್‌ ಪುತ್ರಿ ಕೆ. ಕವಿತಾ ಸ್ಪರ್ಧಿಸಿದ್ದಾರೆ.

ಕೆಸಿಆರ್ ಕೂಡ ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕೀಯದ ಹಾದಿ ತುಳಿಯುತ್ತಿದ್ದಾರೆ. ಏಕೆಂದರೆ ಅವರು ರಾಜಕೀಯದ ಆರಂಭಿಕ ತರಬೇತಿ ಪಡೆದದ್ದು ಕಾಂಗ್ರೆಸ್‌ ನೇತೃತ್ವದ ಯುಪಿಎ ಗರಡಿಯಲ್ಲಿ ಎಂದು ಮೋದಿ ಲೇವಡಿ ಮಾಡಿದರು.

ತೆಲಂಗಾಣದಲ್ಲಿ ನೀರು, ರಸ್ತೆ, ವಿದ್ಯುತ್‌ನಂತಹ ಮೂಲಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಾಂಗ್ರೆಸ್‌ನ ಪ್ರತಿರೂಪ ಟಿಆರ್‌ಎಸ್‌. ಎರಡೂ ಪಕ್ಷಗಳಿಗೂ ಒಂದೇ ಒಂದು ಮತ ಚಲಾವಣೆಯಾಗದಂತೆ ನೋಡಿಕೊಳ್ಳಿ ಅವರು ಮನವಿ ಮಾಡಿದರು.

ಮತಕ್ಕಾಗಿ ಎಂತಹ ಸುಳ್ಳು: ಮೆಹಬೂಬ್‌ ನಗರದಲ್ಲಿ ಮಾತನಾಡಿದ ಕೆಸಿಆರ್‌ ಅವರು ಮೋದಿಗೆ ತಿರುಗೇಟು ನೀಡಿದ್ದಾರೆ. ‘ಮತಗಳಿಸುವ ಏಕೈಕ ಉದ್ದೇಶದಿಂದ ಇಂಥ ಹಸಿ, ಹಸಿಯಾದ ಸುಳ್ಳುಗಳನ್ನು ಹೇಳುವುದು ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದುದಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ತೆಲಂಗಾಣದಲ್ಲಿ ವಿದ್ಯುತ್‌ ಕೊರತೆ ಇಲ್ಲ. ಕೃಷಿಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್‌ ನೀಡುವ ದೇಶದ ಏಕೈಕ ರಾಜ್ಯ ತೆಲಂಗಾಣ. ಬಿಜೆಪಿ ಆಡಳಿತವಿರುವ ರಾಜ್ಯಗಳು ಅಲ್ಲ’ ಎಂದಿದ್ದಾರೆ.

**

ಅಧಿಕಾರ ಕೈತಪ್ಪುವ ಅಸುರಕ್ಷಿತ ಭಾವದಿಂದ ತೊಳಲಾಡುತ್ತಿರುವ ಕೆಸಿಆರ್‌ ಜ್ಯೋತಿಷಿಗಳ ಮಾತು ನಂಬಿ ಸದಾ, ಯಜ್ಞ, ಯಾಗಾದಿಗಳಲ್ಲಿ ತೊಡಗಿದ್ದಾರೆ. ನಿಂಬೆಹಣ್ಣು, ಮಿರ್ಚಿ ಕಟ್ಟಿಕೊಂಡು ತಿರುಗುತ್ತಾರೆ.

ನರೇಂದ್ರ ಮೋದಿ, ಪ್ರಧಾನಿ

**

ಮೋದಿ ಹೆದರಿಸಿದ ತಕ್ಷಣ ಹೆದರಲು ನಾನೇನೂ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಲ್ಲ. ತೆಲಂಗಾಣದಲ್ಲಿ ಟಿಆರ್‌ಎಸ್‌ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

–ಕೆ. ಚಂದ್ರಶೇಖರ್‌ ರಾವ್‌, ಟಿಆರ್‌ಎಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT