ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸಿಆರ್‌ ಇಂದು ಪ್ರಮಾಣ ವಚನ?

ಎರಡನೇ ಅವಧಿಗೆ ತೆಲಂಗಾಣ ಮುಖ್ಯಮಂತ್ರಿ
Last Updated 12 ಡಿಸೆಂಬರ್ 2018, 19:20 IST
ಅಕ್ಷರ ಗಾತ್ರ

ಹೈದರಾಬಾದ್‌:ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ್‌ ರಾವ್ ಅವರು ಗುರುವಾರ ಎರಡನೇ ಬಾರಿಗೆ ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.

ಟಿಆರ್‌ಎಸ್‌ ಪ್ರಧಾನ ಕಚೇರಿ ತೆಲಂಗಾಣ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಸಿಆರ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಔಪಚಾರಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಕೇಂದ್ರ ಚುನಾವಣಾ ಆಯೋಗ ನಾಳೆ (ಗುರುವಾರ) ಅಧಿಸೂಚನೆ ಹೊರಡಿಸಬೇಕಿದೆ. ಒಂದು ವೇಳೆ ನಾಳೆ ಅಧಿಸೂಚನೆ ಹೊರಡಿಸಿದರೆ ನಾಳೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಟಿಆರ್‌ಎಸ್‌ ಮುಖಂಡರು ತಿಳಿಸಿದ್ದಾರೆ.

ಗುರುವಾರ ಒಳ್ಳೆಯ ಮುಹೂರ್ತ ಇದ್ದು ಕೆಸಿಆರ್‌ ಜತೆ ಇಬ್ಬರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಐದಾರು ದಿನಗಳ ನಂತರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಅವರು ಸುಳಿವು ನೀಡಿದ್ದಾರೆ.

ನಾಳೆ ಸಂಜೆಯವರೆಗೂ ಆಯೋಗದ ಅಧಿಸೂಚನೆ ಕಾಯುತ್ತೇವೆ. ಇಲ್ಲದಿದ್ದರೆ ಒಳ್ಳೆಯ ಮುಹೂರ್ತ ನೋಡಿಕೊಂಡು ಪ್ರಮಾಣ ವಚನ ಸ್ವೀಕಾರ ದಿನಾಂಕ ನಿಗದಿಪಡಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯುವ ಕಾಂಗ್ರೆಸ್‌ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ 64 ವರ್ಷದ ಕಲ್ವಕುಂಟ್ಲ ಚಂದ್ರಶೇಖರ್‌ ರಾವ್ ‘ಕೆಸಿಆರ್‌’ ಎಂದು ಚಿರಪರಿಚಿತ. 1983ರಲ್ಲಿ ಎನ್‌.ಟಿ. ರಾಮರಾವ್‌ ನೇತೃತ್ವದ ತೆಲುಗುದೇಶಂ ಸೇರಿದ ನಂತರ ಸಚಿವರಾಗಿದ್ದರು.

ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಒಕ್ಕೂಟ

ಬಿಜೆಪಿ ಮತ್ತು ಕಾಂಗ್ರೆಸ್‌ ಹೊರಗಿಟ್ಟು ಪ್ರಾದೇಶೀಕ ಪಕ್ಷಗಳ ರಾಷ್ಟ್ರೀಯ ಒಕ್ಕೂಟ ರಚಿಸುವ ಪ್ರಸ್ತಾಪವನ್ನು ಕೆ. ಚಂದ್ರಶೇಖರ್‌ ರಾವ್‌ ಮುಂದಿಟ್ಟಿದ್ದಾರೆ.

ಟಿಆರ್‌ಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ಈ ಎರಡೂ ರಾಷ್ಟ್ರೀಯ ಪಕ್ಷಗಳ ಮನಸ್ಥಿತಿ ಒಂದೇ ಎಂದು ಆರೋಪಿಸಿದ್ದಾರೆ.

ಅಧಿಕಾರ ಕೇಂದ್ರೀಕೃತವಾದ ಕಾಂಗ್ರೆಸ್‌ ಮತ್ತು ಬಿಜೆಪಿ ಜನರ ಆಶೋತ್ತರಗಳಿಗೆ ಸ್ಪಂದಿಸಲು ವಿಫಲವಾಗಿವೆ ಎಂದು ಹೇಳಿದ್ದಾರೆ.

ಎರಡೂ ಪಕ್ಷಗಳು ತಕ್ಷಣ ತಮ್ಮ ಮನಸ್ಥಿತಿ ಮತ್ತು ಕಾರ್ಯವೈಖರಿ ಬದಲಿಸಿಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಹೊಸ ಆರ್ಥಿಕ ಮತ್ತು ಕೃಷಿ ನೀತಿ ರೂಪಿಸುವ ಅಗತ್ಯವಿದೆ ಎಂದು ಕೆಸಿಆರ್‌ ಅಭಿಪ್ರಾಯಪಟ್ಟಿದ್ದಾರೆ.

ನಾಯ್ಡು ಕನಸಿಗೆ ಕಲ್ಲು

ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಸಂಘಟಿಸುವ ಮೂಲಕ ದೆಹಲಿ ಮಟ್ಟದಲ್ಲಿ ‘ಕಿಂಗ್‌ ಮೇಕರ್‌’ ಪಾತ್ರವಹಿಸಲು ಮುಂದಾಗಿದ್ದ ತೆಲುಗುದೇಶಂ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಕನಸಿಗೆ ತೆಲಂಗಾಣ ಫಲಿತಾಂಶ ಭಾರಿ ಪೆಟ್ಟು ನೀಡಿದೆ.

ತೆಲಂಗಾಣದಲ್ಲಿ ತೆಲುಗುದೇಶಂ ಸ್ಪರ್ಧಿಸಿದ್ದ 13 ಕ್ಷೇತ್ರಗಳ ಪೈಕಿ 11ರಲ್ಲಿ ಸೋಲು ಅನುಭವಿಸಿದೆ.

ಕಾಂಗ್ರೆಸ್‌, ಸಿಪಿಐ ಮತ್ತು ಟಿಜೆಎಸ್‌ ಜತೆ ಸೇರಿ ನಾಯ್ಡು ರಚಿಸಿದ್ದ ಪ್ರಜಾಕೂಟವು ಟಿಆರ್‌ಎಸ್‌ನ ಚಂದ್ರಶೇಖರ್‌ ರಾವ್‌ ಪರ ತೆಲಂಗಾಣದ ಜನರು ಒಗ್ಗೂಡುವಂತೆ ಮಾಡಿತು. ನಾಯ್ಡು ಅವರನ್ನು ತೆಲಂಗಾಣದ ವಿರೋಧಿ ಎಂಬಂತೆ ಕೆಸಿಆರ್‌ ಬಿಂಬಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT