ಬಿಜೆಪಿಗೆ ಸಹಾಯ: ಕಾಂಗ್ರೆಸ್‌ ಕಾಲೆಳೆದ ಕೇಜ್ರಿವಾಲ್

ಬುಧವಾರ, ಮಾರ್ಚ್ 20, 2019
25 °C

ಬಿಜೆಪಿಗೆ ಸಹಾಯ: ಕಾಂಗ್ರೆಸ್‌ ಕಾಲೆಳೆದ ಕೇಜ್ರಿವಾಲ್

Published:
Updated:

ನವದೆಹಲಿ:  ಬಿಜೆಪಿ ವೆಬ್‌ಸೈಟ್ ಹ್ಯಾಕ್ ಆಗಿರುವ ವಿಚಾರವು ಬುಧವಾರ ಒಂದಿಷ್ಟು ರಾಜಕೀಯ ಚಕಮಕಿಗೆ ಕಾರಣವಾಯಿತು. 

ಮಂಗಳವಾರ ಹ್ಯಾಕ್‌ ಆಗಿದ್ದ ವೆಬ್‌ಸೈಟ್ ದಿನಕಳೆದರೂ ದುರಸ್ತಿ ಆಗಿಲ್ಲ. ‘ನಾವು ಸದ್ಯದಲ್ಲೇ ವಾಪಸ್ ಬರುತ್ತೇವೆ’ ಎಂಬ ಒಕ್ಕಣೆ ಮಾತ್ರ  www.bjp.org ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿತು.

ಬಿಜೆಪಿಗೆ ಏಟು ಕೊಡಲು ಮುಂದಾದ ಕಾಂಗ್ರೆಸ್, ‘ನಾವು ತಿಳಿದಿರುವಂತೆ ನೀವು ಬಹಳ ಹಿಂದೆಯೇ ಕೆಳಗೆ ಬಿದ್ದಿದ್ದೀರಿ. ಮೇಲೆ ಬರಲು ನಿಮಗೆ ಸಹಾಯ ಬೇಕೇ? ಸಹಾಯ ಮಾಡಲು ನಾವು ಸಿದ್ಧರಿದ್ದೇವೆ’ ಎಂದು ಟ್ವೀಟ್ ಮಾಡಿದೆ.

ಇದನ್ನು ಗಮನಿಸಿದ ಆಮ್ ಆದ್ಮಿ ಪಕ್ಷವು ಹೆಚ್ಚು ಜಾಣತನದಿಂದಲೇ ಟ್ರೋಲ್ ಮಾಡಿ, ಕಾಂಗ್ರೆಸ್ ವಿರುದ್ಧ ತನ್ನ ಸಿಟ್ಟು ತೀರಿಸಿಕೊಳ್ಳಲು ಮುಂದಾಯಿತು. ಎಎಪಿ ಜೊತೆ ಮೈತ್ರಿ ಇಲ್ಲ ಎಂದು ಹೇಳಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಎಎಪಿ ಈ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡಿತು. 

‘ದೆಹಲಿಯಲ್ಲಿ ನೀವು ಏನು ಮಾಡಿದ್ದಿರೋ ಹಾಗೆಯೇ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಲ್ಲಿ ಹಿನ್ನಡೆ ಕಾಣಲಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ ಅದಕ್ಕೆ ಸಹಕಾರ ನೀಡಲಿದೆ. ಹೀಗಾಗಿಯೇ (#CongressHelpingBJP) ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ರಹಸ್ಯ ಒಪ್ಪಂದವಿದೆ ಎಂದು ಹೇಳಿದ್ದು’ ಎಂಬುದಾಗಿ ಎಎಪಿ ಟ್ವಿಟರ್‌ನಲ್ಲಿ ಕುಟುಕಿದೆ.

ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿಗೆ ನಿರಾಕರಿಸಿದ್ದ ಕಾಂಗ್ರೆಸ್‌ ಅನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದ ಕೇಜ್ರಿವಾಲ್, ಕಾಂಗ್ರೆಸ್–ಬಿಜೆಪಿ ಮಧ್ಯೆ ಒಡಂಬಡಿಕೆ ಆಗಿದೆ ಎಂದು ಆರೋಪಿಸಿದ್ದರು.

ಕೇಜ್ರಿವಾಲ್ ಲಾಡೆನ್ ಇದ್ದಂತೆ: ಎಎಪಿ ಬಂಡಾಯ ಶಾಸಕ

ಎಎ‍ಪಿ ಬಂಡಾಯ ಶಾಸಕ ಕಪಿಲ್ ಮಿಶ್ರಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ. 

‘ಪುಲ್ವಾಮಾದಲ್ಲಿ ದಾಳಿ ನಡೆಸಿದ ಅದಿಲ್ ಅಹ್ಮದ್ ದಾರ್ ಉಗ್ರನಾಗುವುದಕ್ಕೆ ಆತ ಪೊಲೀಸರಿಂದ ತಿಂದ ಹೊಡೆತವೇ ಕಾರಣವಾಯಿತು ಎನ್ನಲಾಗಿದೆ. ಹಾಗಾದರೆ ಕೆನ್ನೆಯೇಟು ಒಬ್ಬ ಭಯೋತ್ಪಾದಕನನ್ನು ಸೃಷ್ಟಿಸುತ್ತದೆ ಎಂದಾದರೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒಸಾಮಾ ಬಿನ್‌ ಲಾಡೆನ್ ಆಗಿ ಕಾಣಿಸುತ್ತಾರೆ’ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಕೇಜ್ರಿವಾಲ್‌ಗೆ ಮೂರು ಜನರು ಕಪಾಳಮೋಕ್ಷ ಮಾಡಿದ್ದರು. 

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಎಬಿವಿಪಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ರಾ‌ಷ್ಟ್ರವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜೆಎನ್‌ಯು ಘನತೆಯನ್ನು ಮರುಕಳಿಸುವಂತೆ ಮಾಡಲು ನೀವೆಲ್ಲ ಹೋರಾಡುತ್ತಿದ್ದೀರಿ. ನಕ್ಸಲರು ಮತ್ತು ಕಮ್ಯುನಿಸ್ಟರು ಕೇವಲ ಜೆಎನ್‌ಯುದಿಂದ ಮಾತ್ರ ಬರುತ್ತಿಲ್ಲ, ಐಐಟಿಯಿಂದಲೂ ಅವರು ಸೃಷ್ಟಿಯಾಗುತ್ತಾರೆ’ ಎಂದು ಹೇಳುವ ಮೂಲಕ ಐಐಟಿ ಪದವೀಧರ ಕೇಜ್ರಿವಾಲ್‌ಗೆ ಮಿಶ್ರಾ ತಿರುಗೇಟು ನೀಡಿದ್ದಾರೆ. 

‘ಕೆಲವು ಹುಸಿ ಉದಾರವಾದಿಗಳು ಮತ್ತು ಕೆಲವು ಹುಸಿ ಜಾತ್ಯತೀತವಾದಿಗಳು ಪುಲ್ವಾಮಾ ದಾಳಿಯ ವ್ಯಾಖ್ಯಾನವನ್ನೇ ಬದಲಿಸಲು ಯತ್ನಿಸುತ್ತಿದ್ದಾರೆ. ‘ಯುದ್ಧಬೇಡ’ ಎಂಬ ದನಿ ಎತ್ತಿದ್ದಾರೆ. 1,400 ವರ್ಷಗಳಲ್ಲಿ ಭಾರತ ಸಾಕಷ್ಟು ಯುದ್ಧಗಳನ್ನು ನೋಡಿದೆ. ಸಮಯ ಬಂದಾಗ ಯುದ್ಧಮಾಡಿ, ಜಯಿಸಿ, ಶಾಂತಿ ಮರುಕಳಿಸಲು ಆ ಯುದ್ಧವನ್ನು ಮುಕ್ತಾಯಮಾಡಬೇಕು’ ಎಂದು ಹೇಳಿದ್ದಾರೆ.

‘ಈ ಹುಸಿ ಉದಾರವಾದಿಗಳಿಗೆ ಎರಡು ನಾಲಗೆ ಇವೆ. ಒಂದು ಕಡೆ ಯುದ್ಧ ಬೇಡ ಎಂದು ಅವರು ಹೇಳುತ್ತಾರೆ. ಮತ್ತೊಂದು ಕಡೆ ವಾಯುದಾಳಿಯ ನೈಜತೆಯನ್ನೇ ಪ್ರಶ್ನಿಸಿ, ಒಬ್ಬರೂ ಸತ್ತಿಲ್ಲವೇಕೆ ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ನಮ್ಮ 12 ಯುದ್ಧವಿಮಾನಗಳು ಒಬ್ಬ ವ್ಯಕ್ತಿಯನ್ನೂ ಕೊಂದಿಲ್ಲ ಎಂದಾದಲ್ಲಿ, ಮೋದಿ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು’ ಎಂದು ಕಪಿಲ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !