ಪತ್ರಕರ್ತರ ರಾಜೀನಾಮೆ ವಿಚಾರ: ಮೋದಿ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ

7

ಪತ್ರಕರ್ತರ ರಾಜೀನಾಮೆ ವಿಚಾರ: ಮೋದಿ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ

Published:
Updated:

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಡನೆ ಮಾತನಾಡುವ ವೇಳೆ, ಮಹಿಳೆಯೊಬ್ಬರು ಕೃಷಿಯಲ್ಲಿ ಆದಾಯ ಗಳಿಸಿರುವುದಾಗಿ ಹೇಳಿದ್ದು 'ಸುಳ್ಳು' ಎಂದು ವರದಿ ಮಾಡಿದ್ದ ವರದಿಗಾರರಿಬ್ಬರು ನಂತರದ ಬೆಳವಣಿಗೆಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ರಾಜೀನಾಮೆ ಹಿಂದೆ ಮೋದಿ ಸರ್ಕಾರದ ಕೈವಾಡವಿದೆ’ ಎಂದು ಹರಿಹಾಯ್ದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಜ್ರಿವಾಲ್‌, ‘ಮುಕ್ತ ಮಾಧ್ಯಮ ವ್ಯವಸ್ಥೆ ಪ್ರಜಾಪ್ರಭುತ್ವದ ಜೀವಾಳ. ಆದರೆ, ಮೋದಿ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿ ನರಕಕ್ಕೆ ದೂಡುತ್ತಿದೆ. ಎರಡು ದಿನಗಳಲ್ಲಿ ಎಬಿಪಿ ಸುದ್ದಿ ವಾಹಿನಿಯ ಇಬ್ಬರು ಹಿರಿಯ ಪತ್ರಕರ್ತರು ರಾಜೀನಾಮೆ ನೀಡಿರುವುದು ಇದಕ್ಕೆ ಮತ್ತೊಂದು ಸಾಕ್ಷಿ. ಮಾಧ್ಯಮಗಳು ಈಗಲಾದರೂ ದನಿ ಎತ್ತಬೇಕಿದೆ. ಇಲ್ಲವಾದರೆ ಸಮಯ ಮೀರಿ ಹೋಗುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಳೆದ ತಿಂಗಳು ಮೋದಿ ಅವರ ಜೊತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ್ದ ಛತ್ತೀಸ್‌ಗಢದ ಮಹಿಳೆ, ತಾವು ಭತ್ತದ ಬದಲು ಸೀತಾಫಲ ಬೆಳೆಯಲು ಆರಂಭಿಸಿರುವುದರಿಂದ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಆದಾಯ ಗಳಿಸಿರುವುದಾಗಿ ಹೇಳಿಕೊಂಡಿದ್ದರು.

ಆ ಮಹಿಳೆಯನ್ನು ಎಬಿಪಿ ಸುದ್ದಿ ವಾಹಿನಿಯ ಸಂಪಾದಕೀಯ ವಿಭಾಗದ ಮುಖ್ಯಸ್ಥ ಮಿಲಿಂದ್‌ ಖಂಡೇಕರ್‌ ಹಾಗೂ ನಿರೂಪಕ ಪುಣ್ಯ ಪ್ರಸುನ್‌ ಬಾಜ್‌ಪೇಯಿ ಸಂದರ್ಶಿಸಿದ್ದರು. ಈ ವೇಳೆ ಮಹಿಳೆ, ಮೋದಿ ಅವರೊಂದಿಗೆ ಮಾತನಾಡುವಾಗ ಸುಳ್ಳು ಹೇಳುವಂತೆ ತಮಗೆ ದೆಹಲಿಯ ಅಧಿಕಾರಿಗಳು ಕಾರ್ಯಕ್ರಮಕ್ಕೂ ಮೊದಲು ಹೇಳಿಕೊಟ್ಟಿದ್ದರು’ ಎಂದು ಹೇಳಿಕೊಂಡಿದ್ದರು.

ಈ ಸಂದರ್ಶನ ವಾಹಿನಿಯ ಪ್ರಮುಖ ಕಾರ್ಯಕ್ರಮ ‘ಮಾಸ್ಟರ್‌ಸ್ಟ್ರೋಕ್‌’ನಲ್ಲಿ ಪ್ರಕಟವಾಗಿತ್ತು. ಇದು ಪ್ರಸಾರವಾಗುತ್ತಿದ್ದಂತೆ ಸುದ್ದಿ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಸಂಸ್ಥೆಯ ಮಾಧ್ಯಮ ಸಿದ್ಧಾಂತ ಕುರಿತು ಪ್ರಶ್ನೆ ಮಾಡಿದ್ದರು.

ಲೋಕಸಭೆಯಲ್ಲೂ ಚರ್ಚೆ

ಪತ್ರಕರ್ತರ ರಾಜೀನಾಮೆ ವಿಚಾರವು ಲೋಕಸಭೆಯಲ್ಲಿ ಶುಕ್ರವಾರ ಚರ್ಚೆಯಾಯಿತು.

ರಾಜೀನಾಮೆ ವಿಚಾರವನ್ನು ಅತ್ಯಂತ ದುಃಖದ ವಿಚಾರ ಎಂದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಇದಕ್ಕಾಗಿ ಕೇಂದ್ರ ಸರ್ಕಾರವು ಸುದ್ದಿ ಸಂಸ್ಥೆ ಮೇಲೆ ಒತ್ತಡ ಹಾಕಿದೆ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !