ಸರ್ಕಾರದ ಒತ್ತಡಕ್ಕೆ ಪತ್ರಕರ್ತರು ಮನೆಗೆ

7
ಲೋಕಸಭೆಯಲ್ಲೂ ಪ್ರತಿಧ್ವನಿ: ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ

ಸರ್ಕಾರದ ಒತ್ತಡಕ್ಕೆ ಪತ್ರಕರ್ತರು ಮನೆಗೆ

Published:
Updated:

ನವದೆಹಲಿ: ‘ಸರ್ಕಾರದ ವಿರುದ್ಧ ಸುದ್ದಿ ಪ್ರಕಟಿಸಿದ ಕಾರಣಕ್ಕೆ ಮೂವರು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. 

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಖರ್ಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ‘ಕೃಷಿಯಲ್ಲಿ ನನ್ನ ಆದಾಯ ದುಪ್ಪಟ್ಟು ಆಗಿದೆ ಎಂದು ಛತ್ತೀಸಗಡದ ಮಹಿಳೆಯೊಬ್ಬರು, ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಂವಾದದಲ್ಲಿ ಹೇಳಿದ್ದರು. ಆ ಮಹಿಳೆಯ ಹೇಳಿಕೆಯನ್ನು ಪರಿಶೀಲಿಸಿ ಸುದ್ದಿ ಮಾಡಿದ್ದ ವಾಹಿನಿಯ ಮೇಲೆ ಸರ್ಕಾರ ಒತ್ತಡ ಹಾಕಿದೆ. ವಾಹಿನಿಯ ವ್ಯವಸ್ಥಾಪಕ ಸಂಪಾದಕ ಮತ್ತು ಇಬ್ಬರು ನಿರೂಪಕರು ಕೆಲಸ ಬಿಟ್ಟು ಮನೆಗೆ ಹೋಗಿದ್ದಾರೆ’ ಎಂದು ಖರ್ಗೆ ಆರೋಪಿಸಿದರು.

ಆ ಸುದ್ದಿ ಪ್ರಕಟಿಸಿದ್ದ ವಾಹಿನಿ ಮತ್ತು ಪತ್ರಕರ್ತರ ಹೆಸರನ್ನೂ ಖರ್ಗೆ ಪ್ರಸ್ತಾಪಿಸಿದ್ದರು. ಖಾಸಗಿ ಸಂಸ್ಥೆ ಮತ್ತು ಅದರ ಕಾರ್ಮಿಕರ ಹೆಸರುಗಳನ್ನು ಕಡತದಿಂದ ತೆಗೆದು ಹಾಕುವಂತೆ ಸ್ಪೀಕರ್ ಸುಮಿತ್ರಾ ಮಹಾಜನ್ ಆದೇಶಿಸಿದರು.

‘ಸಂವಿಧಾನವು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಮಾಧ್ಯಮಗಳನ್ನು ಹತ್ತಿಕ್ಕುವುದು ಸರಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಿದ್ದರೆ, ನಾವೆಲ್ಲಾ ಮಾತನಾಡುವುದು ಹೇಗೆ?’ ಎಂದು ಖರ್ಗೆ ಆಕ್ರೋಶ 
ವ್ಯಕ್ತಪಡಿಸಿದರು.

ಖರ್ಗೆ ಆವರ ಆರೋಪವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅಲ್ಲಗೆಳೆದರು.

‘ಆ ಸುದ್ದಿವಾಹಿನಿ ಸುಳ್ಳು ಮತ್ತು ತಪ್ಪು ಸುದ್ದಿಗಳನ್ನು ಪ್ರಸಾರ ಮಾಡಿತ್ತು. ಆದರೂ ಅವರ ವಿರುದ್ಧ ನಾವು ಕ್ರಮ ತೆಗೆದುಕೊಂಡಿಲ್ಲ. ಪತ್ರಕರ್ತರು ಕೆಲಸ ಬಿಟ್ಟಿದ್ದು, ಆ ವಾಹಿನಿಯ ಆಂತರಿಕ ವಿಚಾರ.

ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಆ ವಾಹಿನಿಯ ವೀಕ್ಷಕರ ಸಂಖ್ಯೆ ಕಡಿಮೆಯಾಗಿತ್ತು, ಟಿಆರ್‌ಪಿ ಸಹ ಇಳಿಕೆಯಾಗಿತ್ತು. ಹೀಗಾಗಿ ಕೆಲವರು ಕೆಲಸ ಕಳೆದುಕೊಂಡಿರಬಹುದು’ ಎಂದು ರಾಥೋಡ್ ಹೇಳಿದರು.

‘ಮಾಸ್ಟರ್‌ ಸ್ಟ್ರೋಕ್‌’ಗೆ ಸಿಗ್ನಲ್‌ ಕಟ್
ಛತ್ತೀಸಗಡದ ಮಹಿಳೆಯನ್ನು ಮಾತನಾಡಿಸಿ ಎಬಿಪಿ ನ್ಯೂಸ್ ತನ್ನ ಜನಪ್ರಿಯ ಕಾರ್ಯಕ್ರಮ ‘ಮಾಸ್ಟರ್‌ ಸ್ಟ್ರೋಕ್‌’ನಲ್ಲಿ ವರದಿ ಪ್ರಸಾರ ಮಾಡಿತ್ತು. ‘ಆದಾಯ ದುಪ್ಪಟ್ಟು ಆಗಿದೆ ಎಂದು ಹೇಳುವಂತೆ ಅಧಿಕಾರಿಗಳು ಒತ್ತಡ ಹೇರಿದ್ದರು ಎಂದು ಆ ಮಹಿಳೆ ಹೇಳಿದ್ದಾರೆ’ ಎಂದು ಎಬಿಪಿ ಹೇಳಿತ್ತು. ಈ ಕಾರ್ಯಕ್ರಮವು ಪ್ರತಿದಿನ ರಾತ್ರಿ 9ರಿಂದ 10ಗಂಟೆವರೆಗೆ ಪ್ರಸಾರವಾಗುತ್ತದೆ.

ಆದರೆ ಈಚಿನ ದಿನಗಳಲ್ಲಿ ಕಾರ್ಯಕ್ರಮ ಪ್ರಸಾರವಾಗುವಾಗ ಸಿಗ್ನಲ್‌ ಕಟ್‌ ಆಗುತ್ತದೆ. ಇದು ಸರ್ಕಾರದ್ದೇ ಕೈವಾಡ ಎಂದು ಹಲವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ. ಆಲ್ಲದೆ ಅದನ್ನು ‘ಡೈರೆಕ್ಟ್‌ ಟು ಹೋಮ್’ ಸೇವಾದಾತರ ಗಮನಕ್ಕೂ ತಂದಿದ್ದಾರೆ. ‘ಇದು ವಾಹಿನಿಯ ಕಡೆಯಿಂದ ಆಗುತ್ತಿರುವ ಸಮಸ್ಯೆಯೇ ಹೊರತು. ನಮ್ಮಿಂದ ಆಗುತ್ತಿರುವುದಲ್ಲ’ ಎಂದು ಟಾಟಾ ಸ್ಕೈ, ಡಿಶ್‌ ಟಿ.ವಿ ಮತ್ತು ಭಾರ್ತಿ ಏರ್‌ಟೆಲ್ ಇಂಡಿಯಾ ತಮ್ಮ ಚಂದಾದಾರರಿಗೆ ಸ್ಪಷ್ಟನೆ ನೀಡಿವೆ.

ಆದರೆ ಎಬಿಪಿ ನ್ಯೂಸ್ ಈ ಬಗ್ಗೆ ಈವರೆಗೆ ಯಾವುದೇ ವಿವರಣೆ ನೀಡಿಲ್ಲ.

‘ಟಾಟಾ ಸ್ಕೈನಲ್ಲಿ ಕಾರ್ಯಕ್ರಮ ಪ್ರಸಾರವಾಗುವಾಗ ಸಿಗ್ನಲ್ ಕಟ್ ಆಗುತ್ತಿದೆ. ಆದರೆ ಅದೇ ಸಮಯದಲ್ಲಿ ಅಂತರ್ಜಾಲದಲ್ಲಿ ‘ಮಾಸ್ಟರ್‌ ಸ್ಟ್ರೋಕ್’ ಯಾವುದೇ ಅಡೆತಡೆ ಇಲ್ಲದೆ ಪ್ರಸಾರವಾಗುತ್ತಿದೆ. ಇದು ಎಬಿಪಿ ನ್ಯೂಸ್‌ ಕಡೆಯಿಂದ ಆಗುತ್ತಿರುವ ಸಮಸ್ಯೆಯಂತೆ ನನಗೆ ಕಾಣುತ್ತಿಲ್ಲ’ ಎಂದು ಪವನ್ ತ್ರಿಪಾಠಿ ಎಂಬುವವರು ಟ್ವೀಟ್‌ನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಫ್ರೀ ಮೀಡಿಯಾ ಡೈಡ್ ಇನ್‌ ಇಂಡಿಯಾ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ.

***

ಸರ್ಕಾರದ ಹೇಳಿಕೆಗಳ ಪರಿಶೀಲನೆಗೆ ಮುಂದಾಗುತ್ತಿ ದ್ದಂತೆ ಮಾಧ್ಯಮಗಳನ್ನು ಬೆದರಿಸಲಾ ಗುತ್ತಿದೆ. ಕೆಲಸ ಮಾಡಿದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಿದೆ</p>
ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ

***

ಆ ವಾಹಿನಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತದೆ. ಹೀಗಾಗಿ ಜನರೇ ಅದನ್ನು ನೋಡುತ್ತಿಲ್ಲ. ಆದರೆ ಇದಕ್ಕೆಲ್ಲಾ ನಾವೇ ಕಾರಣ ಎಂದು ನೀವು ಆರೋಪಿಸುತ್ತಿದ್ದೀರಿ
ರಾಜ್ಯವರ್ಧನ್ ಸಿಂಗ್ ರಾಥೋಡ್,  ಮಾಹಿತಿ ಮತ್ತು ಪ್ರಸಾರ ಸಚಿವ

***

ಸ್ವತಂತ್ರ ಮಾಧ್ಯಮಗಳು ಪ್ರಜಾಪ್ರಭುತ್ವದ ಜೀವನಾಡಿ. ಆದರೆ ಈ ಜೀವನಾಡಿಗಳನ್ನು ಹೊಸಕಿಹಾಕಲು ಮೋದಿ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ
ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !