ಕೇರಳ ಬಿಜೆಪಿಯಲ್ಲಿ ಭಿನ್ನಮತ: ಅಮಿತ್ ಶಾ ಫೇಸ್‍ಬುಕ್ ಪುಟದಲ್ಲಿ ಕಾಮೆಂಟ್ ಸುರಿಮಳೆ

7

ಕೇರಳ ಬಿಜೆಪಿಯಲ್ಲಿ ಭಿನ್ನಮತ: ಅಮಿತ್ ಶಾ ಫೇಸ್‍ಬುಕ್ ಪುಟದಲ್ಲಿ ಕಾಮೆಂಟ್ ಸುರಿಮಳೆ

Published:
Updated:

ತಿರುವನಂತಪುರ: ಕೇರಳ ಬಿಜೆಪಿ ಘಟಕದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕೇರಳದ ಬಿಜೆಪಿ ಕಾರ್ಯಕರ್ತರು ಅಮಿತ್ ಶಾ ಅವರ ಫೇಸ್‍ಬುಕ್ ಪುಟದಲ್ಲಿ ಕಾಮೆಂಟುಗಳ ಸುರಿಮಳೆಗೆರೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಕೇರಳ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ವರದಿ ನೀಡುವಂತೆ ರಾಜ್ಯದ ಉಸ್ತುವಾರಿ ವಹಿಸಿರುವ ಮುರಳೀಧರ್ ರಾವ್‍ಗೆ ಆದೇಶಿಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

'ಅಮ್ಮ' (ಅಸೋಸಿಯೇಶನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್) ಸಂಘಟನೆಗೆ ನಟ ದಿಲೀಪ್‍ನ್ನು ಕರೆತಂದಿರುವ ವಿಷಯಕ್ಕೆ  ಸಂಬಂಧಿಸಿದಂತೆ ವಿ. ಮುರಳೀಧರನ್ ನೀಡಿದ್ದ ಹೇಳಿಕೆಯಿಂದಾಗಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಸಿನಿಮಾ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಬಿಜೆಪಿ ನಾಯಕರು, ತನಗೆ ಅವಮಾನವಾಗಿದೆ ಎಂದು ಬಿಜೆಪಿ ಕಾರ್ಯಕರ್ತೆ ಲಸಿತಾ ಪಾಲಕ್ಕಲ್ ದೂರು ನೀಡಿದ್ದರೂ ಈ ಬಗ್ಗೆ ಗಮನ ಹರಿಸದಿರುವುದು ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ.

ಏನಿದು ಲಸಿತಾ ಪಾಲಕ್ಕಲ್ ಪ್ರಕರಣ? 
ಬಿಜೆಪಿ ಕಾರ್ಯಕರ್ತೆ ಲಸಿತಾ ಪಾಲಕ್ಕಲ್ ವಿರುದ್ಧ ನಟ ಸಾಬು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಈ ಬಗ್ಗೆ ಲಸಿತಾ ದೂರು ನೀಡಿದ್ದರೂ ಬಿಜೆಪಿ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಬಿಜೆಪಿಯ ಈ ನಿಲುವನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಮುರಳೀಧರನ್ ಅವರ ಫೇಸ್‍ಬುಕ್‍ನಲ್ಲಿ ದೂರು ನೀಡಿದ್ದಾರೆ. ಇಲ್ಲಿ ಕಾಮೆಂಟುಗಳ ಮೂಲಕವೇ ವಾಗ್ವಾದವೂ ನಡೆದಿದೆ. ಇದೀಗ ಇದೇ ವಿಷಯವನ್ನು ಉಲ್ಲೇಖಿಸಿ ಕಾರ್ಯಕರ್ತರು ಅಮಿತ್ ಶಾ ಅವರ ಫೇಸ್‍ಬುಕ್ ಪುಟದಲ್ಲಿ ಕಾಮೆಂಟು ಮಾಡುತ್ತಿದ್ದಾರೆ.

ವಿ.ಮುರಳೀಧರನ್ ಫೇಸ್‍ಬುಕ್ ಪುಟದಲ್ಲಿ ಕಾರ್ಯಕರ್ತರ ಕಾಮೆಂಟ್ ವಾರ್
ಕೇರಳ ಸಿನಿಮಾ ಕಲಾವಿದರ ಸಂಘಟನೆಯಾದ ಅಮ್ಮ ಸಂಘಟನೆಗೆ ರಾಜೀನಾಮೆ ನೀಡಿ ಹೊರನಡೆದ ನಟಿಯರಿಗೆ ಬೆಂಬಲ ನೀಡಿ ಬಿಜೆಪಿ ಸಂಸದ ಹಾಗೂ ಕೇರಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ವಿ. ಮುರಳೀಧರನ್ ಬುಧವಾರ ಫೇಸ್‍ಬುಕ್‍ನಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದರು. ಆದರೆ ತಮ್ಮದೇ ಕಾರ್ಯಕರ್ತೆಯನ್ನು ಅವಮಾನಿಸಿದ ಪ್ರಕರಣದಲ್ಲಿ ಬಿಜೆಪಿ ಮೌನ ವಹಿಸಿರುವುದು ಯಾಕೆ ಎಂಬುದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ಈ ಪೋಸ್ಟ್ ನ ಕಾಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಮ್ಮದೇ ಪಕ್ಷದ ನಾಯಕನಲ್ಲಿ ಈ ರೀತಿ ಕೇಳುವುದಕ್ಕೆ ಬೇಸರವಾಗುತ್ತಿದೆ. ಆದರೆ ಕೇಳದಿರುವುದು  ಸರಿಯಲ್ಲ. ತಮ್ಮ ಸಹೋದರಿಯೊಬ್ಬಳನ್ನು ಒಬ್ಬ ವ್ಯಕ್ತಿ ಮಂಚಕ್ಕೆ ಕರೆದರೆ ಆ ಬಗ್ಗೆ ಮೌನ ವಹಿಸಿ ಫೆಮಿನಿಚ್ಚಿಗಳಿಗೆ (ಫೆಮಿನಿಸ್ಟ್ ಗಳನ್ನು ಲೇವಡಿ ಮಾಡಲು ಬಳಸಲ್ಪಡುವ ಪದ) ಬೆಂಬಲ ನೀಡುತ್ತಿದ್ದೀರಾ? ಎಂಬ ಕಾಮೆಂಟು ಮೂಲಕ ಮುರಳೀಧರನ್‍ ಅವರನ್ನು ಪ್ರಶ್ನಿಸಲಾಗಿದೆ.

ವಿ. ಮುರಳೀಧರನ್ ಅವರ ಫೇಸ್‍ಬುಕ್ ಪೋಸ್ಟ್ ಹೀಗಿದೆ

ಅವಳೊಂದಿಗೆ
ಮಲಯಾಳಂ ಸಿನಿಮಾ ಕಲಾವಿದರ ಸಂಘಟನೆಯಾದ ಅಮ್ಮದಿಂದ ನಟಿ ಭಾವನಾ ಸೇರಿದಂತೆ ಮೂವರು ನಟಿಯರು ರಾಜೀನಾಮೆ ನೀಡಿ ಹೊರ ನಡೆದಿರುವುದು ಉತ್ತಮ ನಿರ್ಧಾರಗಳಲ್ಲೊಂದಾಗಿದೆ.
ಮೋಹನ್‌‍ಲಾಲ್ ಎಂಬ ಮಹಾ ನಟ ಅಮ್ಮ ಸಂಘಟನೆಯ ಅಧ್ಯಕ್ಷ ಸ್ಥಾನ ವಹಿಸಿದ ನಂತರ ಕೈಗೊಂಡ ಮೊದಲ ನಿರ್ಧಾರ ದಿಲೀಪ್‍ನ್ನು ಸಂಘಟನೆಗೆ ವಾಪಸ್ ಕರೆತಂದಿರುವುದು  ಬೇಸರದ ಸಂಗತಿ. ಮೋಹನ್‍ಲಾಲ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತ ತೀರ್ಮಾನ ಇದಾಗಿದೆ.
ಶ್ರೀಮತಿ ಭಾವನಾ ಬರೆದ ರಾಜೀನಾಮೆ ಪತ್ರದಲ್ಲಿ ಎಲ್ಲ ವಿಷಯಗಳನ್ನು ಹೇಳಿರುವುದರಿಂದ ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಎಲ್ಲರೂ ಸಮಾನರು ಎಂಬ ಕಾನೂನುಗಳನ್ನು ಕಡೆಗಣಿಸಿ ಕೆಲವರನ್ನು ದೊಡ್ಡವರು ಎಂದು ಪರಿಗಣಿಸುತ್ತಿರುವುದು ಅಮ್ಮ ಸಂಘಟನೆಯಲ್ಲಿ ಕಾಣುತ್ತಿದೆ. ಅಮ್ಮ ಸಂಘಟನೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಯ್ಡುಕೊಳ್ಳಲು ಮೋಹನ್ ಲಾಲ್ ಯತ್ನಿಸಬೇಕು ಮತ್ತು  ಸಂಘಟನೆಯನ್ನು ಮುನ್ನಡೆಸಬೇಕೆಂದು ಅವರನ್ನು ಪ್ರೀತಿಸುವ ಲಕ್ಷಾಂತರ ಮಲಯಾಳಿಗಳಲ್ಲಿ ಒಬ್ಬನಾದ ನಾನು ಈ ರೀತಿ ವಿನಂತಿಸುತ್ತೇನೆ.


ಈ ಪೋಸ್ಟ್ ಗೆ ಲಸಿತಾ ಪಾಲಕ್ಕಲ್ ನಾನೊಬ್ಬಳು ಸಿನಿಮಾ ನಟಿ ಅಲ್ಲ, ಸಾಮಾನ್ಯ ಸ್ತ್ರೀ ಎಂಬ ಕಾರಣದಿಂದಾಗಿರಬಹುದು ಎಂದು ಕಾಮೆಂಟಿಸಿದ್ದರು. ಈ ಕಾಮೆಂಟಿನ ನಂತರ ಲಸಿತಾ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕಾರ್ಯಕರ್ತರು ಅಮಿತ್ ಶಾ ಅವರ ಫೇಸ್‌‍ಬುಕ್ ಪೇಜ್‌ನಲ್ಲಿ ಕೇರಳ ಬಿಜೆಪಿಯ ಅವಸ್ಥೆ ಬಗ್ಗೆ ಕಾಮೆಂಟ್ ಸುರಿಮಳೆಗೈದಿದ್ದಾರೆ.

ಅಮಿತ್ ಶಾ ಫೇಸ್‍ಬುಕ್  ಪುಟದಲ್ಲಿ ಮಲಯಾಳಂ ಕಾಮೆಂಟ್!

ಕೇರಳ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಮತ್ತು ಅಸಮಧಾನವನ್ನು ಅಮಿತ್ ಶಾ ಅವರ ಫೇಸ್‍ಬುಕ್ ಪುಟದಲ್ಲಿ ವ್ಯಕ್ತ ಪಡಿಸಿದ್ದಾರೆ. ಅಮಿತ್ ಶಾ ಅವರ ಫೇಸ್‌‍ಬುಕ್ ಪುಟದಲ್ಲಿರುವ ಎಲ್ಲ ಪೋಸ್ಟಿನಡಿಯಲ್ಲಿಯೂ ಮಲಯಾಳಿಗಳು ಕಾಮೆಂಟು ಮಾಡುತ್ತಿದ್ದು, ಅಲ್ಲಿ ಏನು ನಡೆಯುತ್ತಿದೆ ಎಂಬುದ ಬಗ್ಗೆ ಅಮಿತ್ ಶಾಗೂ ಅರ್ಥವಾಗಿರಲಿಕ್ಕಿಲ್ಲ!

 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ,
ಕೇರಳದ ಬಿಜೆಪಿ ನಾಯಕರಿಗೆ ಹೊಡೆದು ಬುದ್ದಿ ಕಲಿಸಬೇಕಾದ ಸಮಯ ಬಂದಿದೆ. ನೀವು ಇನ್ನೂ ಸುಮ್ಮನೆ ಕುಳಿತರೆ ಕೇರಳದ ಬಿಜೆಪಿ ಕಾರ್ಯಕರ್ತರೇ ನಾಯಕರ ಮೇಲೆ ದಂಡಪ್ರಯೋಗ ಮಾಡುತ್ತಿರುವ ದೃಶ್ಯ ನೀವು ಕಾಣಬೇಕಾಗಿ ಬರುತ್ತದೆ.
ಇತೀ,
ನೊಂದ ಬಿಜೆಪಿ ಕಾರ್ಯಕರ್ತ

******

ನನಗೆ ಇಂಗ್ಲಿಷ್ ಬರಲ್ಲ, ಕೇರಳ ಬಿಜೆಪಿಯನ್ನು ಉಳಿಸಿ

Shihab Pnkd ಅವರ ಕಾಮೆಂಟ್: ಈ ರೀತಿ ನಿಮಗೆ ಕಾಮೆಂಟ್ ಮಾಡುತ್ತಿರುವವರು ಬೇರೆ ಯಾರೂ ಅಲ್ಲ ನಿಮ್ಮ ಪಕ್ಷದವರೇ, ಹಾಗಾದರೆ ಈ ಬಾರಿ ಕೇರಳದಲ್ಲಿ ಗೆಲ್ಲುತ್ತೀರಿ ಅಲ್ಲವೇ?

Akhil Gopinath ಕಾಮೆಂಟ್:  ನಮಸ್ತೆ, 

ರಕ್ತ, ಬೆವರು ಸುರಿಸಿದ್ದು ನಾವು ಸ್ವಯಂ ಸೇವಕರು. ಜನಿಸಿದ ದಿನದಿಂದ ಸಾಯುವವರೆಗೆ ಪಕ್ಷದ ಪತಾಕೆ ಹಿಡಿಯುತ್ತೇವೆ ಎಂದು ಮಾತ್ರವಲ್ಲ ಕಾವಿ ಪತಾಕೆಯನ್ನು ಹೃದಯದಲ್ಲಿರಿಸುತ್ತೇವೆ ಎಂದು ಹೇಳಿದವರು ನಾವು. ನಮಗಿರುವುದು ಒಂದೇ ಆಸೆ. ಮೊದಲು ಒಬ್ಬ ಉತ್ತಮ ಮುಖಂಡ ಬೇಕು. ಆಮೇಲೆ ಈ ನೇತೃತ್ವದಲ್ಲಿ ಬದಲಾವಣೆ ತಂದು  ಮನಸ್ಸು ಮತ್ತು ದೇಹವನ್ನು ಈ ಸಂಘಟನೆಗೆ ಅರ್ಪಿಸುವ ಒಬ್ಬ ಧೀರನನ್ನು ಕರೆತರಬೇಕು. ಕೇರಳದ ಮುಖಂಡರ ಅಹಂಕಾರ ಮತ್ತು ರಾಜಕೀಯ ಭಿನ್ನಮತವನ್ನು ಹಿಮ್ಮೆಟ್ಟಿ ರಾಜ್ಯವನ್ನು ಕಾವಿ ಕಡಲು ಮಾಡಬೇಕು. ನನ್ನಂತೆ ಇರುವ ಕೇರಳದ ಲಕ್ಷಾಂತರ ಸ್ವಯಂ ಸೇವಕರ ಒತ್ತಾಯ ಇದು.

ಭಾರತ್ ಮಾತಾ ಕೀ ಜೈ

Bibin thankachan: ಅಮಿಟ್ಟ್ ಶಾಜಿ ನಮ್ಮ ಪಂದಂಳಂ ಶಶಿಯನ್ನು ಪ್ರೆಸಿಡೆಂಟ್ ಮಾಡಲು ಬೇರೆ ಮಾರ್ಗವೇನಾದರೂ ಇದೆಯೇ?

 

Bijesh Vadakara: ಸರ್, ಕೇರಳದ ಈ ಮುಖಂಡರನ್ನಿಟ್ಟುಕೊಂಡು ನೀವು ಕೇರಳದಲ್ಲಿ ಸೀಟು ಗಿಟ್ಟಿಸಲು ಬರುತ್ತಿದ್ದೀರಾ? ಅವರಿಗೆ ಗುಂಪುಗಾರಿಕೆ ಮಾತ್ರ ಗೊತ್ತು. ಅವರು ಪಕ್ಷವನ್ನು ಅವರು ಬೆಳೆಸುವುದಿಲ್ಲ, ನಾಶ ಮಾಡುತ್ತಾರೆ. ನೀವು ಇದರಲ್ಲಿ ಮಧ್ಯಸ್ಥಿಕೆ ವಹಿಸಿತ್ತೀರಿ ಎಂದು ಭಾವಿಸುತ್ತೇನೆ.


 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !