ಕೇರಳ ಪ್ರವಾಹ:245 ಸಾವು, ಶವಾಗಾರಗಳು ಭರ್ತಿ; ಮೃತ ದೇಹ ಹೂಳಲು ಆಗದು, ಸುಡಲು ಪರದಾಟ

7

ಕೇರಳ ಪ್ರವಾಹ:245 ಸಾವು, ಶವಾಗಾರಗಳು ಭರ್ತಿ; ಮೃತ ದೇಹ ಹೂಳಲು ಆಗದು, ಸುಡಲು ಪರದಾಟ

Published:
Updated:
Deccan Herald

ಕೊಚ್ಚಿ: ಜಲಪ್ರಳಯದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ’ಆಪರೇಷನ್‌ ಮದದ್‌’ ಭಾನುವಾರ ಮತ್ತಷ್ಟು ಚುರುಕುಗೊಂಡಿದೆ. ನೌಕಾಪಡೆಯ ರಕ್ಷಣಾ ತಂಡ ಜೆಮಿನಿ ಬೋಟ್‌ಗಳು, ಈಜು ತಜ್ಞರೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. 

ಶುಕ್ರವಾರದ ಕಾರ್ಯಾಚರಣೆಯಲ್ಲಿ ದೋಣಿಗಳ ಮೂಲಕವೇ 3,375 ಜನರನ್ನು ರಕ್ಷಿಸಿ, ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಮುಂಗಾರು ಪ್ರವೇಶವಾದಾಗಿನಿಂದ ಒಟ್ಟು 380 ಜನ ಸಾವಿಗೀಡಾಗಿದ್ದಾರೆ. ಇದರಲ್ಲಿ ಆಗಸ್ಟ್‌ 8ರಿಂದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 245 ತಲುಪಿದೆ. ಅಂದಾಜು 6 ಲಕ್ಷ ಜನರನ್ನು 3,000 ಗಂಜಿಕೇಂದ್ರಗಳಿಗೆ ರವಾನಿಸಲಾಗಿದೆ. 

ಪ್ರಾರ್ಥನಾ ಮಂದಿಗಳು, ಶಾಲೆ–ಕಾಲೇಜು ಹಾಗೂ ಆಸ್ಪತ್ರೆ ಕಟ್ಟಡಗಳಲ್ಲಿಯೇ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಕಲಮಸ್ಸೇರಿ ಶವಾಗಾರ ಭರ್ತಿ!

ಕಲಮಸ್ಸೇರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಶವಾಗಾರ ಮೃತ ದೇಹಗಳಿಂದ ಭರ್ತಿಯಾಗಿದ್ದು, ಆಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇಲ್ಲಿನ ಆಸ್ಪತ್ರೆಯಲ್ಲಿ 6 ಫ್ರೀಜರ್‌ಗಳಿದ್ದು, ಎಲ್ಲ ಫ್ರೀಜರ್‌ಗಳಲ್ಲಿಯೂ ಮೃತ ದೇಹಗಳಿವೆ. ಭಾನುವಾರ ಎರಡು ಶವಗಳ ಪರೀಕ್ಷೆ ನಡೆಸಲಾಗಿದ್ದು, ಇನ್ನು ಉಳಿದ ಶವಗಳ ಪರೀಕ್ಷೆ ನಡೆಯಬೇಕಿದೆ. ಮೃತ ದೇಹಗಳ ಸಂಬಂಧಿಕರೇ ಮೊಬೈಲ್‌ ಫ್ರೀಜರ್‌ಗಳನ್ನು ತರಬೇಕಾಗಿ ಆಸ್ಪತ್ರೆ ತಿಳಿಸಿದೆ.

ಮೃತ ದೇಹಗಳ ಅಂತಿಮ ಸಂಸ್ಕಾರಕ್ಕೂ ತೊಂದರೆ ಉಂಟಾಗಿದೆ. ಬಹುತೇಕ ಭೂಪ್ರದೇಶ ಪ್ರವಾಹದಿಂದ ಕೊಚ್ಚಿ ಹೋಗಿದ್ದು, ಶವ ಹೂಳುವುದು ಸಾಧ್ಯವಾಗುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಮೃತ ದೇಹಗಳನ್ನು ಸುಡುವಂತೆ ತಜ್ಞರು ಸಲಹೆ ನೀಡಿದ್ದಾರೆ. 

ರಕ್ಷಣಾ ಕಾರ್ಯ

ಈಜು–ಮುಳುಗು ತಜ್ಞರನ್ನು ಒಳಗೊಂಡ 72 ತಂಡಗಳನ್ನು ಕೇರಳ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿದೆ. ಎರ್ನಾಕುಲಂನಲ್ಲಿ 42 ತಂಡಗಳು ಒಂದು ಜೆಮಿನಿ ಬೋಟ್‌ ಸಹಾಯದೊಂದಿಗೆ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಮಾಡುತ್ತಿವೆ. ಪಿಝಾಲಾ ದ್ವೀಪ, ಎಡಪಲ್ಲಿ, ಪೆರಂಬೂರ್‌, ಅಲುವಾ, ಚೆಂಗನ್ನೂರು ಹಾಗೂ ಕಡಂಗಲ್ಲೂರ್‌ ಸೇರಿ ವಿವಿಧ ಕಡೆ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಐಎನ್‌ಎಸ್‌ ಗರುಡಾದಿಂದ ರಕ್ಷಣಾ ಸಾಮಗ್ರಿಗಳು ವಿತರಣೆಯಾಗುತ್ತಿವೆ. ಅತ್ಯಂತ ಕ್ಲಿಷ್ಟ ಪ್ರದೇಶಗಳಲ್ಲಿ ಎಎಲ್‌ಎಚ್‌, ಸೀ ಕಿಂಗ್‌, ಚೇತಕ್‌ ಹಾಗೂ ಎಂಐ 17 ವಿಮಾನಗಳು ಕಾರ್ಯಾಚರಿಸಿದ್ದು, ಈವರೆಗೂ 154 ಜನರನ್ನು ರಕ್ಷಿಸಲಾಗಿದೆ. ಮನೆಯ ಮಹಡಿಗಳ ಮೇಲೆ ಹಾಗೂ ಸಂತ್ರಸ್ತರು ಆಶ್ರಯ ಪಡೆದಿರುವ ಚರ್ಚ್‌ಗಳ ಬಳಿ ಆಹಾರ ಪೊಟ್ಟಣಗಳು ಮತ್ತು ಬಾಟಲಿಗಳಲ್ಲಿ ಕುಡಿಯುವ ನೀರನ್ನು ವಿಮಾನಗಳಿಂದ ಹಾಕಲಾಗುತ್ತಿದೆ. ಒಟ್ಟು 22 ಹೆಲಿಕಾಪ್ಟರ್‌ಗಳು ಹಾಗೂ 119 ದೋಣಿಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ ₹500 ಕೋಟಿ ತುರ್ತು ಪರಿಹಾರ ಘೋಷಣೆ ಮಾಡುವ ಜತೆಗೆ ಹೆಚ್ಚುವರಿ ಹೆಲಿಕಾಪ್ಟರ್‌ ಹಾಗೂ ದೋಣಿಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. 

ನೌಕಾ ನೆಲೆಯಿಂದ ವಿಮಾನ ಹಾರಾಟ

ಕೊಚ್ಚಿನ್ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿರುವುದರಿಂದ ವಿಮಾನ ಸೇವೆಗಳನ್ನು ಆಗಸ್ಟ್‌ 26ರ ವರೆಗೂ ಸ್ಥಗಿತಗೊಳಿಸಲಾಗಿದೆ. ಸೋಮವಾರದಿಂದ ಕೊಚ್ಚಿ ನೌಕಾ ನೆಲೆಯಿಂದ ವಿಮಾನ ಸೇವೆಗೆ ಅವಕಾಶ ನೀಡಲಾಗಿದ್ದು, ಕೊಚ್ಚಿ–ಬೆಂಗಳೂರು ನಡುವೆ ವಿಮಾನ ಹಾರಾಟ ನಿಗದಿಯಾಗಿದೆ. 70 ಸೀಟುಗಳ ಎಟಿಆರ್‌ ವಿಮಾನಗಳು ಕಾರ್ಯಾಚರಿಸಲಿವೆ. 

ರೆಡ್‌ ಅಲರ್ಟ್ ಇಲ್ಲ

ಪಥನಂತಿಟ್ಟ, ಎರ್ನಾಕುಲಂ, ಅಲಪುಳ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಉಳಿದಂತೆ ಕೇರಳದಾದ್ಯಂತ ರೆಡ್‌ ಅಲರ್ಟ್‌ ಹಿಂಪಡೆಯಲಾಗಿದೆ. 

ಹೌಸ್‌ಬೋಟ್‌ ಮಾಲೀಕರ ಬಂಧನ

ಅಲ‍ಪುಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೌಸ್‌ಬೋಟ್‌ಗಳನ್ನು ನೀಡಲು ನಿರಾಕರಿಸಿದ ಮಾಲೀಕರನ್ನು ಬಂಧಿಸಲಾಗಿದೆ. ಕೇರಳದ ಲೋಕೋಪಯೋಗಿ ಸಚಿವ ಜಿ.ಸುಧಾಕರನ್‌ ನೀಡಿದ ಆದೇಶದ ಮೇರೆಗೆ ವಿಚಾರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ.

 

 

 

 

 

 

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !