ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ವಿದ್ಯಾರ್ಥಿಗೆ ನಿಫಾ ಸೋಂಕು

311 ಜನರ ಆರೋಗ್ಯ ಕುರಿತು ನಿಗಾ: ಆರೋಗ್ಯ ಸಚಿವೆ
Last Updated 4 ಜೂನ್ 2019, 19:32 IST
ಅಕ್ಷರ ಗಾತ್ರ

ಕೊಚ್ಚಿ: ಕಳೆದ ವರ್ಷ ಕೇರಳದ ಜನರಲ್ಲಿ ಆತಂಕ ಮೂಡಿಸಿದ್ದ ನಿಫಾ ಸೋಂಕು ಈ ವರ್ಷವೂ ಮರುಕಳಿಸಿದೆ.

ಕಾಲೇಜು ವಿದ್ಯಾರ್ಥಿಯೊಬ್ಬರಿಗೆ ನಿಫಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಮಂಗಳವಾರ ತಿಳಿಸಿದ್ದಾರೆ.

‘ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 23 ವರ್ಷದ ವಿದ್ಯಾರ್ಥಿಯ ಆರೋಗ್ಯ ಸ್ಥಿರವಾಗಿದೆ. ಸದ್ಯಕ್ಕೆ ಜೀವರಕ್ಷಕ ಸೌಲಭ್ಯ ಕಲ್ಪಿಸಿಲ್ಲ. ಜ್ವರದಿಂದಾಗಿ ಕೆಲವೊಮ್ಮೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ ಅಷ್ಟೆ. ರೋಗಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

‘ವಿದ್ಯಾರ್ಥಿಗೆ ಮೊದಲು ಚಿಕಿತ್ಸೆ ನೀಡಿದ್ದ ಇಬ್ಬರು ದಾದಿಯರಿಗೆ, ಗಂಟಲು ನೋವು ಹಾಗೂ ಜ್ವರ ಬಂದಿದೆ. ಇಬ್ಬರನ್ನೂ ಆರೋಗ್ಯ ಇಲಾಖೆ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಿದೆ.ವಿದ್ಯಾರ್ಥಿ ಜತೆ ಸಂಪರ್ಕಕ್ಕೆ ಬಂದಿದ್ದ 311 ಜನರ ಪಟ್ಟಿ ತಯಾರಿಸಲಾಗಿದ್ದು, ಇವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವರಲ್ಲಿ ಇಬ್ಬರು ಜ್ವರದಿಂದ ಬಳಲುತ್ತಿದ್ದಾರೆ. ಒಬ್ಬರನ್ನು ಇಲ್ಲಿನ ಕಳಮಶ್ಶೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಎರ್ನಾಕುಳಂ ವಾಸಿಯಾಗಿರುವ ವಿದ್ಯಾರ್ಥಿ ಇಡುಕ್ಕಿ ಜಿಲ್ಲೆಯ ತೊಡುಪುಳದ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾನೆ. ಜ್ವರದಿಂದ ಬಳಲುತ್ತಿದ್ದ ಇವರು ತರಬೇತಿ ಕಾರ್ಯಕ್ರಮಕ್ಕೆಂದು ತನ್ನ ಸ್ನೇಹಿತರ ಗುಂಪಿನೊಂದಿಗೆ ತ್ರಿಶೂರ್‌ಗೆ ತೆರಳಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಯ ರಕ್ತದ ಮಾದರಿಯನ್ನು ಮಣಿಪಾಲ ಹಾಗೂ ಕೇರಳದಲ್ಲಿರುವ ವೈರಾಣು ಅಧ್ಯಯನ ಸಂಸ್ಥೆಯಲ್ಲಿ ಮೊದಲು ಪರೀಕ್ಷೆಗೊಳಪಡಿಸಲಾಗಿತ್ತು. ನಿಫಾ ಸೋಂಕು ತಗುಲಿರುವುದು ಈ ಪರೀಕ್ಷೆಗಳಲ್ಲಿ ತಿಳಿದುಬಂದಿತ್ತು. ಬಳಿಕಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯಲ್ಲಿ (ಎನ್‌ಐವಿ) ಈ ರಕ್ತದ ಮಾದರಿ ಪರಿಶೀಲಿಸಿದಾಗ ಸೋಂಕು ದೃಢಪಟ್ಟಿದೆ.

ಆತಂಕ ಸೃಷ್ಟಿಸದಂತೆ ಮನವಿ: ‘ಸಾಮಾಜಿಕ ಜಾಲತಾಣಗಳ ಬಳಕೆದಾರರು ಜನರಲ್ಲಿ ಆತಂಕ ಸೃಷ್ಟಿಸಬಾರದು. ಇಂತಹ ಕೃತ್ಯಗಳಲ್ಲಿ
ತೊಡಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.ಜನರು ಕಳವಳ ಪಡದೆ, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕಳೆದ ವರ್ಷ ಕೋಯಿಕ್ಕೋಡ್‌ನಲ್ಲಿ ಇದೇ ರೀತಿ ಪರಿಸ್ಥಿತಿ ಬಂದಾಗ ಅದನ್ನು ಎದುರಿಸಿದ್ದೇವೆ’ ಎಂದು ಶೈಲಜಾ ತಿಳಿಸಿದ್ದಾರೆ. ಕಳೆದ ವರ್ಷ ಕೇರಳದಲ್ಲಿ 17 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದರು.

ರೋಗನಿರೋಧಕ ಔಷಧ ಸರಬರಾಜು

‘ಆಸ್ಟ್ರೇಲಿಯಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ನಿಫಾ ರೋಗನಿರೋಧಕ ಔಷಧವನ್ನು ಒದಗಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಭರವಸೆ ನೀಡಿದ್ದಾರೆ’ ಎಂದು ಶೈಲಜಾ ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಸಜ್ಜು: ಕೋಯಿಕ್ಕೋಡ್‌ನ ವೈದ್ಯರ ತಂಡ ಈಗಾಗಲೇ ಕೊಚ್ಚಿಗೆ ತಲುಪಿದೆ. ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎರ್ನಾಕುಳಂ ಜಿಲ್ಲಾ ಕೇಂದ್ರದಲ್ಲಿ ನಿಯಂತ್ರಣ ಕೇಂದ್ರ ಸ್ಥಾಪಿಸಲಾಗಿದೆ.

ಜಾಗತಿಕ ಪಿಡುಗು ಪಟ್ಟಿಯಲ್ಲಿ ಉಲ್ಲೇಖ

ಎಬೊಲಾ, ಝಿಕಾ ರೀತಿ ನಿಫಾ ಸಹ ಜಾಗತಿಕ ಪಿಡುಗು ಉಂಟುಮಾಡುವ ಎಂಟು ವಿಧದ ಸೋಂಕುಗಳ ಪಟ್ಟಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಬಾವಲಿ ಹಕ್ಕಿ ಈ ನಿಫಾ ವೈರಾಣುವಿನ ಮೂಲ. ಬಾವಲಿಗಳು ಸೇವಿಸಿದ ಹಣ್ಣುಗಳು ಅಥವಾ ಅವುಗಳನ್ನು ತಿಂದ ಪ್ರಾಣಿಗಳ ಮೂಲಕ ಈ ಸೋಂಕು, ಪ್ರಾಣಿಗಳು ಹಾಗೂ ಮನುಷ್ಯರಿಗೆ ಹರಡುತ್ತದೆ.

ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಬೆಂಗಳೂರು: ಕೇರಳದಲ್ಲಿ ನಿಫಾ ಸೋಂಕು ಹರಡುತ್ತಿದ್ದು, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನಾಲಯವು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.

ರೋಗ ಹರಡುವ ರೀತಿ ಮತ್ತು ರೋಗದ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ ಎಂದು ಅದು ಹೇಳಿದೆ. ಅದರಲ್ಲಿಯೂ, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಧಿಕಾರಿಗಳು ನಿಫಾ ಕುರಿತು ಕಡ್ಡಾಯವಾಗಿ ಪ್ರತಿದಿನ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
***


ಸವಾಲು ಎದುರಿಸಲು ಆರೋಗ್ಯ ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಜನರು ಆತಂಕ ಪಡಬೇಕಾಗಿಲ್ಲ

–ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT