ಭಾನುವಾರ, ಆಗಸ್ಟ್ 25, 2019
28 °C

ಪರ್ತಕರ್ತ ಬಷೀರ್‌ ಬೈಕ್‌ಗೆ ಡಿಕ್ಕಿ ಹೊಡೆದ ಪ್ರಕರಣ: ಐಎಎಸ್ ಅಧಿಕಾರಿ ಜೈಲಿಗೆ

Published:
Updated:
Prajavani

ತಿರುವನಂತಪುರ: ಕಾರು ಡಿಕ್ಕಿ ಹೊಡೆದು ಪತ್ರಕರ್ತ ಮೃತಪಟ್ಟ ಪ್ರಕರಣದ ಆರೋಪಿ ಐಎಎಸ್‌ ಅಧಿಕಾರಿ ಶ್ರೀರಾಮ್‌ ವೆಂಕಟರಾಮನ್‌ ಅವರನ್ನು ಭಾನುವಾರ ಜೈಲಿಗೆ ಕಳುಹಿಸಲಾಗಿದೆ. ಅಪಘಾತದಲ್ಲಿ ಗಾಯವಾಗಿದೆ ಎಂದು ಶ್ರೀರಾಮ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಐಷಾರಾಮಿ ವ್ಯವಸ್ಥೆ ಮಾಡಲಾಗಿತ್ತು ಎಂದು ಮೃತ ಪತ್ರಕರ್ತ ಬಷೀರ್‌ ಕುಟುಂಬ ಆರೋಪಿಸಿತ್ತು.

ಶ್ರೀರಾಮ್‌ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಆಸ್ಪತ್ರೆಯಲ್ಲಿ ಐಷಾರಾಮಿ ಸೌಲಭ್ಯಗಳಲ್ಲದೆ ಮೊಬೈಲ್‌ ಬಳಕೆಗೆ ಅವಕಾಶ ನೀಡಲಾಗಿತ್ತು ಎಂದು ಬಷೀರ್‌ ಕುಟುಂಬ ದೂರಿತ್ತು. ಪತ್ರಕರ್ತರ ವೇದಿಕೆಗಳು ಕುಟುಂಬದ ಸದಸ್ಯರ ಜತೆ ಸೇರಿ ಭಾನುವಾರ ಪ್ರತಿಭಟನೆ ನಡೆಸಿದ್ದವು. 

ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದು ಪೊಲೀಸರು ಆಸ್ಪತ್ರೆಗೆ ತಿಳಿಸಿದ್ದರು. ಅನಂತರ ನ್ಯಾಯಾಂಗ ಬಂಧನ ಪ್ರಕ್ರಿಯೆಗಳನ್ನು ಮುಗಿಸಲು ಆ್ಯಂಬುಲೆನ್ಸ್‌ನಲ್ಲಿ ಸ್ಥಳೀಯ ಮ್ಯಾಜಿಸ್ಟ್ರೇಟ್‌ ನಿವಾಸಕ್ಕೆ ಹಾಜರುಪಡಿಸಿದರು. ಆ್ಯಂಬುಲೆನ್ಸ್‌ ಒಳಗೇ ಶ್ರೀರಾಮ್‌ ಅವರ ತಪಾಸಣೆ ನಡೆಸಿ ಕಾರಾಗೃಹಕ್ಕೆ ಕಳುಹಿಸುವಂತೆ ಆದೇಶಿಸಿದರು.

ಸಿರಾಜ್‌ ಪತ್ರಿಕೆಯ ಬ್ಯೂರೊ ಮುಖ್ಯಸ್ಥರಾಗಿದ್ದ ಬಷೀರ್‌ ಅವರ ಬೈಕ್‌ಗೆ ಶನಿವಾರ ಮುಂಜಾನೆ ಶ್ರೀರಾಮ್ ಅವರ ಕಾರು ಡಿಕ್ಕಿ ಹೊಡೆದಿತ್ತು. ಮದ್ಯ ಸೇವಿಸಿದ್ದ  ಶ್ರೀರಾಮ್‌ ಅವರೇ ಕಾರು ಚಲಾಯಿಸುತ್ತಿದ್ದರು ಎಂಬುದು ದೃಢಪಟ್ಟಿತ್ತು. ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಕೇರಳ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ.  

ಕಾನೂನಿನ ವಿರುದ್ಧ ಹೋದ ಯಾರೇ ಆಗಲಿ, ಅವರ ಸ್ಥಾನ ಯಾವುದೇ ಇದ್ದರು ಅಂಥವರನ್ನು ನಮ್ಮ ಸರ್ಕಾರ ರಕ್ಷಿಸುವುದಿಲ್ಲ

-ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ

Post Comments (+)