ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ನೆರವು ಸ್ವೀಕಾರ: ಕಾನೂನು ಮೊರೆಗೆ ಕೇರಳ ಚಿಂತನೆ

ಪ್ರವಾಹ ಪರಿಸ್ಥಿತಿ ಚರ್ಚೆಗೆ ಕೇರಳ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ
Last Updated 30 ಆಗಸ್ಟ್ 2018, 19:50 IST
ಅಕ್ಷರ ಗಾತ್ರ

ತಿರುವನಂತಪುರ: ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ವಿದೇಶದಿಂದ ಸೇರಿ ವಿವಿಧ ಭಾಗಗಳಿಂದ ನೆರವು ಹರಿದು ಬರುತ್ತಿದೆ. ಅದನ್ನು ಪಡೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಯಾವ ರೀತಿಯ ಅವಕಾಶಗಳಿವೆ ಎಂಬುದನ್ನು ಪರಿಶೀಲಿಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಅರಬ್‌ ಸಂಯುಕ್ತ ಸಂಸ್ಥಾನವು (ಯುಎಇ) ಘೋಷಿಸಿದೆ ಎಂದು ಹೇಳಲಾದ ₹700 ಕೋಟಿ ನೆರವು ಪಡೆಯಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂಬುದರ ಸುತ್ತ ಉಂಟಾದ ವಿವಾದದ ಕಾರಣಕ್ಕೆ ವಿಜಯನ್‌ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹಿಂದೆಂದೂ ಕಂಡು ಕೇಳರಿಯದ ರೀತಿಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚಿಸುವುದಕ್ಕೆ ಕರೆಯಲಾದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು.

ಮೇ 28ರಿಂದ ಮುಂಗಾರು ಆರಂಭವಾದಾಗಿನಿಂದ ರಾಜ್ಯದಲ್ಲಿ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 14 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಿಂದಾಗಿ ಆಗಿರುವ ಹಾನಿಯ ಮೊತ್ತ ರಾಜ್ಯದ ಯೋಜನಾ ವೆಚ್ಚವಾದ ₹37,247 ಕೋಟಿಗಿಂತಲೂ ಹೆಚ್ಚು ಎಂದು ಅವರು ಮಾಹಿತಿ ನೀಡಿದರು.

ಎಲ್ಲೆಡೆಯಿಂದ ಹರಿದು ಬರುತ್ತಿರುವ ನೆರವಿನ ಭರವಸೆ ರಾಜ್ಯ ಸರ್ಕಾರಕ್ಕೆ ವಿಶ್ವಾಸ ತುಂಬಿದೆ. ಕೇಂದ್ರ ಸರ್ಕಾರ ₹600 ಕೋಟಿ ನೆರವನ್ನು ಈಗಾಗಲೇ ಘೋಷಿಸಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಇನ್ನಷ್ಟು ನೆರವು ಮಂಜೂರು ಮಾಡುವ ಭರವಸೆ ಇದೆ ಎಂದು ಅವರು ಹೇಳಿದರು.

ಅಣೆಕಟ್ಟೆಗಳಿಂದ ಮುನ್ಸೂಚನೆ ಇಲ್ಲದೆ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟದ್ದೇ ಪ್ರವಾಹಕ್ಕೆ ಕಾರಣ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ. ಆಗಸ್ಟ್‌ 9ರಿಂದ 15 ನಡುವೆ 98.5 ಮಿ.ಮೀ. ಮಳೆಯಾಗಬಹುದು ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಆದರೆ, ಈ ಅವಧಿಯಲ್ಲಿ 352 ಮಿ.ಮೀ.ನಷ್ಟು ಮಳೆ ಸುರಿದಿದೆ. ನಿರಂತರ ಮಳೆಯೇ ಪ್ರವಾಹಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ದುರಂತದ ತೀವ್ರತೆಯು ಪರಿಸರ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಭೂಕುಸಿತ ನಡೆದ ಸ್ಥಳಗಳಲ್ಲಿಯೇ ನಿರ್ವಸಿತರಿಗೆ ಪುನರ್‌ವಸತಿ ಕಲ್ಪಿಸಬೇಕೇ ಎಂಬುದು ಈಗ ಮುಖ್ಯವಾಗಿರುವ ವಿಚಾರ. ಈ ವಿಷಯದಲ್ಲಿ ಒಮ್ಮತಕ್ಕೆ ಬರಲು ಪ್ರಯತ್ನಿಸಲಾಗುವುದು ಎಂದು ವಿಜಯನ್‌ ಹೇಳಿದ್ದಾರೆ.

ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾದ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಾಗ ಪರಿಸರಕ್ಕೆ ಸಂಬಂಧಿಸಿದ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿ ವಿಶ್ವಬ್ಯಾಂಕ್‌ ಅಧಿಕಾರಿಗಳ ಜತೆಗೂ ವಿಜಯನ್‌ ಮಾತುಕತೆ ನಡೆಸಿದ್ದಾರೆ. ರಾಜ್ಯದ ಹಿತಾಸಕ್ತಿಗೆ ಪೂರಕವಾಗಿದ್ದರೆ ಯಾವುದೇ ರೀತಿಯ ನೆರವು ಸ್ವೀಕರಿಸುವುದು ತಮ್ಮ ನೀತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಾಡ್ಗೀಲ್‌ ವರದಿ ಜಾರಿಗೆ ಅಚ್ಯುತಾನಂದನ್‌ ಒತ್ತಾಯ
ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಮತ್ತು ಈಗ ಆಗಿರುವಂತಹ ದುರಂತಗಳು ಮತ್ತೆ ಉಂಟಾಗದಂತೆ ಎಚ್ಚರ ವಹಿಸಲು ಮಾಧವ್ ಗಾಡ್ಗೀಲ್‌ ಸಮಿತಿ ವರದಿಯನ್ನು ಜಾರಿ ಮಾಡಬೇಕು ಎಂದು ಸಿಪಿಎಂನ ಹಿರಿಯ ಮುಖಂಡ ವಿ.ಎಸ್‌. ಅಚ್ಯುತಾನಂದನ್‌ ಒತ್ತಾಯಿಸಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಎಲ್ಲ ಅಕ್ರಮ ನಿರ್ಮಾಣಗಳನ್ನು ತೆರವು ಮಾಡಬೇಕು ಎಂದೂ ಅವರು ಹೇಳಿದ್ದಾರೆ.

***

* ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ನೆರವಿನ ಮೊತ್ತ- ₹730 ಕೋಟಿ

* ಪ್ರವಾಹದಿಂದಾಗಿ ಹಾಳಾಗಿರುವ ಕೃಷಿ ಭೂಮಿ- 57,000 ಹೆಕ್ಟೇರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT