ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ‘ಅಫ್ಗನ್ ತಂಡದ ಪಯಣ ಸುಂದರ’

Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಗ ನಾನು ಮಹೇಂದ್ರ ಸಿಂಗ್ ದೋನಿಯಂತಹ ಅಪ್ರತಿಮ ಆಟಗಾರ ಮತ್ತು ನಾಯಕ ಒಡ್ಡಿದ್ದ ಸ್ಪರ್ಧೆಯಿಂದಾಗಿ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಅದಕ್ಕಾಗಿ ನನಗೆ ದುಃಖವಿಲ್ಲ. ನಾನು ಸ್ಥಾನ ಕಳೆದುಕೊಂಡಿದ್ದು ಸಾಧಾರಣ ಆಟಗಾರನಿಗಾಗಿ ಅಲ್ಲ ಎಂಬ ತೃಪ್ತಿ ಇದೆ’–

ಭಾರತ ಟೆಸ್ಟ್‌ ಕ್ರಿಕೆಟ್ ತಂಡಕ್ಕೆ ಎಂಟು ವರ್ಷಗಳ ನಂತರ ಮರುಪ್ರವೇಶ ಮಾಡುತ್ತಿರುದ ದಿನೇಶ್ ಕಾರ್ತಿಕ್ ಅವರ ಮನದ ಮಾತುಗಳು ಇವು.

ಗುರುವಾರ ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಣ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅವರು ಆಡಲಿದ್ದಾರೆ. 2010ರ ನಂತರ ಅವರು ಭಾರತ ತಂಡಕ್ಕೆ ಮರುಪ್ರವೇಶ ಮಾಡುತ್ತಿದ್ದಾರೆ. ಈ ಮೊದಲು ತಂಡದಲ್ಲಿ ಸ್ಥಾನ ಪಡೆದಿದ್ದ ವೃದ್ಧಿಮಾನ್ ಸಹಾ ಗಾಯಗೊಂಡಿದ್ದರಿಂದ ತಮಿಳುನಾಡಿನ ದಿನೇಶ್ ಅವಕಾಶ ಪಡೆದರು.

ಮಂಗಳವಾರ ಇಲ್ಲಿ ಅಭ್ಯಾಸ ಆರಂಭಿಸುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆ ಸಂದರ್ಭದಲ್ಲಿ ನನ್ನ ನಿರಂತರವಾಗಿ ಉತ್ತಮ ಫಾರ್ಮ್‌ ಕಾಪಾಡಿಕೊಳ್ಳುವಲ್ಲಿ ವಿಫಲನಾಗಿದ್ದೆ. ಆದರೆ ದೋನಿ  ನಿರಂತರವಾಗಿ ಚೆನ್ನಾಗಿ ಆಡುತ್ತಲೇ ಸಾಗಿದರು. ಕ್ರಿಕೆಟ್‌ನಲ್ಲಿ ಏನೆಲ್ಲ ಬದಲಾವಣೆಗಳು ಘಟಿಸಿದರೂ ದೋನಿ ಅವರ ಆಟ ರಂಗೇರುತ್ತಲೇ ಇತ್ತು. ಅವರು ಸರ್ವಶ್ರೇಷ್ಠ ನಾಯಕರಾಗಿ ಬೆಳೆದರು’ ಎಂದು ದಿನೇಶ್ ವಿಶ್ಲೇಷಿಸಿದರು.

‘ದೋನಿಯವರು ವಿಶೇಷ ಆಟಗಾರ. ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಶ್ರೇಷ್ಠ ಮಟ್ಟದ ಸಾಮರ್ಥ್ಯ ಉಳಿಸಿಕೊಳ್ಳಲಿಲ್ಲ ಎಂದು ಹೇಳಿಕೊಳ್ಳಲು ಹಿಂಜರಿಕೆ ಇಲ್ಲ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅಗತ್ಯವಿದ್ದ ಮಟ್ಟಕ್ಕೆ ನಾನು ಆಡಲಿಲ್ಲ’ ಎಂದರು.

‘ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ಇಲ್ಲಿಯವರೆಗಿನ ಪಯಣವು ಅತ್ಯಂತ ಅಮೋಘವಾಗಿದೆ. ಈ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿರುವುದು ಸುದೈವ. ಅವರು ಚೆನ್ನಾಗಿ ಆಡಬಲ್ಲರು. ಆದರೆ ನಮ್ಮ (ಭಾರತ) ತಂಡದ ಆಟಗಾರರಿಗೆ ಇರುವಷ್ಟು ಅನುಭವ ಅವರಿಗೆ ಇಲ್ಲ. ಟೆಸ್ಟ್‌ ಕ್ರಿಕೆಟ್ ಅವರಿಗೆ ಹೊಸದು. ಇದರೊಂದಿಗೆ ಅವರು ಹೊಸ ಜಗತ್ತಿಗೆ ತೆರೆದುಕೊಳ್ಳಲಿದ್ದಾರೆ’ ಎಂದು 33 ವರ್ಷದ ಕಾರ್ತಿಕ್ ಹೇಳಿದರು.

2004ರಲ್ಲಿ  ಮುಂಬೈನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ದಿನೇಶ್ ಪದಾರ್ಪಣೆ ಮಾಡಿದ್ದರು. 2010ರವರೆಗೂ ಅವರು 23 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಅವರ ಖಾತೆಯಲ್ಲಿ ಒಂದು ಸಾವಿರ ರನ್, ಒಂದು ಶತಕ ಮತ್ತು  ಏಳು ಅರ್ಧಶತಕಗಳು ಇವೆ.

**

ಕ್ಯುರೇಟರ್ ಜೊತೆ ಕೋಚ್ ಮಾತುಕತೆ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಶ್ರೀರಾಮ್ ಅವರೊಂದಿಗೆ ಮಾತನಾಡಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮುನ್ನ ಇಲ್ಲಿಯ ಪಿಚ್‌ ಮೇಲ್ಮೈಯನ್ನು ಪರಿಷ್ಕರಣೆ ಮಾಡಲಾಗಿತ್ತು. ಐಪಿಎಲ್‌ನಲ್ಲಿ ಒಟ್ಟು ಏಳು ಪಂದ್ಯಗಳು ಇಲ್ಲಿ ನಡೆದಿದ್ದವು. ಸ್ಪರ್ಧಾತ್ಮಕವಾಗಿದ್ದ ಪಿಚ್‌ನಲ್ಲಿ ರನ್‌ಗಳ ಹೊಳೆಯೂ ಹರಿದಿತ್ತು. ಸ್ಪಿನ್ನರ್‌ಗಳೂ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT