ಶಬರಿಮಲೆ: ರಾಜಕೀಯಕ್ಕೆ ಎಳೆಯಲು ಪಕ್ಷಗಳ ಪಟ್ಟು

ಶನಿವಾರ, ಮಾರ್ಚ್ 23, 2019
31 °C
ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ವಿಚಾರ ಬಳಸದಿರಿ

ಶಬರಿಮಲೆ: ರಾಜಕೀಯಕ್ಕೆ ಎಳೆಯಲು ಪಕ್ಷಗಳ ಪಟ್ಟು

Published:
Updated:
Prajavani

ತಿರುವನಂತಪುರ : ‘ಚುನಾವಣಾ ಪ್ರಚಾರದಲ್ಲಿ ಶಬರಿಮಲೆ ವಿಚಾರವನ್ನು ಬಳಸಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ಟೀಕಾ ರಾಮ್ ಮೀನಾ ಅವರು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

ಶಬರಿಮಲೆ ಸೇರಿದಂತೆ ಯಾವುದೇ ಧಾರ್ಮಿಕ ವಿಚಾರವನ್ನು ಚುನಾವಣೆಗೆ ಬಳಸಿಕೊಳ್ಳಬಾರದು ಎಂದು ಅವರು ಸೋಮವಾರ ಆದೇಶ ಹೊರಡಿಸಿದ್ದರು. ಆ ಆದೇಶಕ್ಕೆ ಹಲವು ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೆ ಶಬರಿಮಲೆ ವಿಚಾರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಯೇ ತೀರುತ್ತೇವೆ ಎಂದು ಘೋಷಿಸಿದ್ದವು. ಹೀಗಾಗಿ ಚುನಾವಣಾ ಅಧಿಕಾರಿ ಈ ಸಭೆ ಕರೆದಿದ್ದರು.

ಧಾರ್ಮಿಕ ವಿಚಾರಗಳನ್ನು ಚುನಾವಣೆಗೆ ಬಳಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಈ ನಿಯಮವನ್ನು ಮೀರಿದ್ದರ ಬಗ್ಗೆ ಯಾರು
ಬೇಕಾದರೂ ದೂರು ನೀಡಬಹುದು. ದೂರನ್ನು ಪರಿಶೀಲಿಸಿ, ಉಲ್ಲಂಘನೆ ನಡೆದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೀನಾ ಅವರು ಹೇಳಿದ್ದಾರೆ.

ಕೇರಳದ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಭಿನ್ನ ನಿಲುವು ತಳೆದಿವೆ. ಈ ಆದೇಶವನ್ನು ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿಸಿವೆ. ಆದರೆ ಆಡಳಿತಾರೂಢ ಸಿಪಿಎಂ ಚುನಾವಣಾ ಅಧಿಕಾರಿಯ ಆದೇಶವನ್ನು ಸ್ವಾಗತಿಸಿದೆ.

ಈ ವಿಚಾರವನ್ನು ಚುನಾವಣೆಗೆ ಬಳಸಿಕೊಂಡೇ ತೀರುತ್ತೇವೆ ಎಂದು ರಾಜ್ಯ ಬಿಜೆಪಿ ಘಟಕವು ಬುಧವಾರ ಮತ್ತೆ ಹೇಳಿದೆ. ಈ ಹಿಂದೆ ಬಿಜೆಪಿಯ ಕೇರಳ ಘಟಕದ ಅಧ್ಯಕ್ಷರಾಗಿದ್ದ ಕುಮ್ಮನಂ ರಾಜಶೇಖರನ್ ಅವರು ಮಿಜೋರಾಂ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ವಾಪಸಾಗಿದ್ದಾರೆ. ಶಬರಿಮಲೆ ಸಂಘರ್ಷದ ವೇಳೆ ಹಲವು ಪ್ರತಿಭಟನೆಗಳನ್ನು ಅವರು ಮುನ್ನಡೆಸಿದ್ದರು. ಚುನಾವಣೆಗೆಂದೇ ಪಕ್ಷವು ಅವರನ್ನು ರಾಜ್ಯ ರಾಜಕಾರಣಕ್ಕೆ ವಾಪಸ್ ಕರೆತಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಉಲ್ಲಂಘನೆ ವಿರುದ್ಧ ಕ್ರಮ

ಧರ್ಮ ಮತ್ತು ಧಾರ್ಮಿಕ ಭಾವನೆಗಳ ಆಧಾರದಲ್ಲಿ ಮತ ಯಾಚಿಸುವುದು, ಧಾರ್ಮಿಕ ಭಾವನೆಗಳನ್ನು ಉದ್ದೀಪಿಸುವುದು, ಸುಪ್ರೀಂ ಕೋರ್ಟ್‌ನ ಯಾವುದೇ ಆದೇಶಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಶಬರಿಮಲೆ ವಿಚಾರಕ್ಕೂ ಇದು ಅನ್ವಯವಾಗಲಿದೆ. ಉಲ್ಲಂಘನೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ

-ಟೀಕಾ ರಾಮ್ ಮೀನಾ
ಕೇರಳ ಮುಖ್ಯ ಚುನಾವಣಾ ಅಧಿಕಾರಿ (ಸೋಮವಾರ ಹೊರಡಿಸಿದ್ದ ಆದೇಶ)

 

ಮಸೀದಿ ಚರ್ಚ್‌ಗೂ ಹೀಗೇ ಆಗಬಹುದು

ಇದೊಂದು ತರ್ಕವಿಲ್ಲದ ಆದೇಶ. ಇದು ಧಾರ್ಮಿಕ ಸ್ವಾತಂತ್ರ್ಯದ, ನಂಬಿಕೆ, ಆಚಾರ–ವಿಚಾರಗಳ ವಿಷಯ. ಇದು ಕೇವಲ ಶಬರಿಮಲೆಗೆ ಸೀಮಿತವಲ್ಲ. ಬದಲಿಗೆ ಮುಂದೊಂದು ದಿನ ಭೀಮಪಳ್ಳಿ ಮಸೀದಿ, ಮಲಯತ್ತೂರು ಚರ್ಚ್‌ಗಳ ವಿಚಾರದಲ್ಲೂ ಹೀಗೇ ಆಗಬಹುದು. ತಮ್ಮ ನಂಬಿಕೆಗಳು ಮತ್ತು ಆಚಾರಗಳನ್ನು ರಕ್ಷಿಸಲು ರಾಜ್ಯದ ಜನರು ಬಯಸಿದ್ದಾರೆ. ನಾವು ಅವರ ಭಾವನೆಗಳನ್ನು ಎತ್ತಿ ಹಿಡಿಯುತ್ತಿದ್ದೇವೆ ಅಷ್ಟೆ

-ಕುಮ್ಮನಂ ರಾಜಶೇಖರನ್
ಕೇರಳ ಬಿಜೆಪಿ ನಾಯಕ

ಮೂಗು ತೂರಿಸುವ ಅವಶ್ಯಕತೆ ಇಲ್ಲ

ಶಬರಿಮಲೆ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವು ಚುನಾವಣಾ ವಿಷಯವಾಗುವುದು ಶತಃಸಿದ್ಧ. ಇದರಲ್ಲಿ ಯಾರೂ ಮೂಗು ತೂರಿಸುವುದು ಸಾಧ್ಯವಿಲ್ಲ

 -ಕೆ.ಸುರೇಂದ್ರನ್
ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಅತಾರ್ಕಿಕ

ಅದ್ಯಾವ ಆಧಾರದಲ್ಲಿ ಚುನಾವಣಾ ಅಧಿಕಾರಿ ಇಂತಹ ಆದೇಶವನ್ನು ಹೊರಡಿಸಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಆದೇಶ ಅತಾರ್ಕಿಕ

-ರಮೇಶ್ ಚೆನ್ನಿತ್ತಲ, ಕಾಂಗ್ರೆಸ್‌ನ ಕೇರಳ ಘಟಕದ ಮುಖ್ಯಸ್ಥ

 

ಬಿಜೆಪಿ ಪಾಲಿಸುವುದಿಲ್ಲ

ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ನಿಯಮಗಳನ್ನೇ ಚುನಾವಣಾ ಅಧಿಕಾರಿ ಮತ್ತೆ ನೆನಪಿಸಿದ್ದಾರೆ ಅಷ್ಟೆ. ಬಿಜೆಪಿ ಯಾವ ಕಾನೂನು–ನಿಯಮಗಳನ್ನೂ ಪಾಲಿಸುವುದಿಲ್ಲ. ನೀತಿ ಸಂಹಿತೆಯನ್ನು ಬಿಜೆಪಿ ಉಲ್ಲಂಘಿಸಿದರೆ ಆಶ್ಚರ್ಯಪಡಬೇಕಿಲ್ಲ

-ಕೊಡಿಯೇರಿ ಬಾಲಕೃಷ್ಣನ್
ಕೇರಳ ಸಿಪಿಎಂ ಕಾರ್ಯದರ್ಶಿ

ಜನಪ್ರತಿನಿಧಿ ಕಾಯ್ದೆಯಲ್ಲೇ ಇದೆ ಕಡಿವಾಣ

ಚುನಾವಣೆಯಲ್ಲಿ ಧರ್ಮ, ಧಾರ್ಮಿಕ ಭಾವನೆ ಮತ್ತು ಧಾರ್ಮಿಕ ಚಿನ್ಹೆಗಳನ್ನು ಬಳಸುವಂತಿಲ್ಲ ಎಂದು 1951ರ ಜನಪ್ರಾತಿನಿಧ್ಯ ಕಾಯ್ದೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಶಬರಿಮಲೆ, ಲಿಂಗ ಸಮಾನತೆ ವಿಚಾರಗಳನ್ನು ಬೌದ್ಧಿಕ ಚರ್ಚೆಗೆ ಎತ್ತಿಕೊಳ್ಳಬಹುದು. ಆದರೆ ಚುನಾವಣೆಗೆ ಈ ವಿಷಯಗಳನ್ನು ಬಳಸಿಕೊಳ್ಳಬಾರದು. ಬಳಸಿಕೊಂಡರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ

-ಕಾಲೀಶ್ವರಂ ರಾಜ್
ಕೇರಳ ಹೈಕೋರ್ಟ್‌ನ ಹಿರಿಯ ವಕೀಲ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !