ಸೋಮವಾರ, ಅಕ್ಟೋಬರ್ 21, 2019
21 °C
ಆರೋಪಿಯ ಮತ್ತೊಬ್ಬ ಆಪ್ತನ ನಿಧನದ ತನಿಖೆಗೆ ಮುಂದಾದ ಕೇರಳ ಪೊಲೀಸರು

ಜೋಲಿ ಹತ್ಯೆ ಸರಣಿಯಲ್ಲಿ ಇನ್ನೊಂದು ಸಾವು?

Published:
Updated:
Prajavani

ತಿರುವನಂತಪುರ: ಕೂಡತ್ತಾಯಿ ಸರಣಿ ಹತ್ಯೆಯ ಆರೋಪಿ ಜೋಲಿ ಜೋಸೆಫ್ ಅವರ ಸಂಪರ್ಕದಲ್ಲಿದ್ದ ಇನ್ನೂ ಒಬ್ಬ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೂ, ಜೋಲಿ ಅವರಿಗೂ ಸಂಬಂಧವಿದೆಯೇ ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಸ್ಥಳೀಯ ನಾಯಕ ರಾಮಕೃಷ್ಣನ್ ಎಂಬುವವರು ಅಕಾಲಿಕವಾಗಿ ಮೃತಪಟ್ಟಿದ್ದರು. ಅವರ ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಆದರೆ ಅವರು ಜೋಲಿ ಜೋಸೆಫ್ ಜತೆ ಆಪ್ತವಾಗಿದ್ದರು ಎಂಬುದು ಈಗ ಗೊತ್ತಾಗಿದೆ. ಹೀಗಾಗಿ ಈ ನಿಟ್ಟಿನಲ್ಲೂ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತಿಯ ಜತೆ ಜೋಲಿ ಜಗಳ: ಜೋಲಿ ಜೋಸೆಫ್, ಹಲವು ಕಾರಣಗಳನ್ನು ನೆಪವಾಗಿರಿಸಿಕೊಂಡು ಪತಿಯ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜೋಲಿಯ ಪತಿ ರಾಯ್‌ ಅವರಿಗೆ ಕಾಯಂ ಉದ್ಯೋಗ ಇರಲಿಲ್ಲ. ಜೋಲಿ ಬೇರೆ ಪುರುಷರೊಂದಿಗೆ ಸ್ನೇಹ ಇರಿಸಿಕೊಂಡಿದ್ದರ ಬಗ್ಗೆ ರಾಯ್‌ ಸದಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ರಾಯ್ ಮದ್ಯವ್ಯಸನಿಯಾಗಿದ್ದರು. ಇಬ್ಬರ ನಡುವೆ ಸದಾ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ರಾಯ್‌ ಅವರನ್ನು ಕೊಲ್ಲಲು ಜೋಲಿ ಸಂಚು ರೂಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಆರೂ ಕೊಲೆಗಳನ್ನು ಸಯನೈಡ್‌ ಬಳಸಿ ನಡೆಸಿರುವ ಸಾಧ್ಯತೆ ಇದೆ. ಜೋಲಿ ಅವರ ಪತಿ ರಾಯ್ ಅವರ ದೇಹವನ್ನು ಮಾತ್ರ ಶವಪರೀಕ್ಷೆಗೆ ನೀಡಲಾಗಿತ್ತು. ಅವರ ದೇಹದಲ್ಲಿ ಸಯನೈಡ್‌ ಪತ್ತೆಯಾಗಿತ್ತು. ಆದರೆ ಉಳಿದ ಐವರ ಶವಪರೀಕ್ಷೆ ನಡೆದಿಲ್ಲ. ಹೀಗಾಗಿ ಶವಗಳ ಅವಶೇಷಗಳಲ್ಲಿ ಸಯನೈಡ್‌ ಅಂಶವಿದೆಯೇ ಎಂಬುದನ್ನು ಪತ್ತೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ವಿಧಿವಿಜ್ಞಾನ ತಜ್ಞರ ನೆರವು ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

17 ವರ್ಷ ಪತ್ತೆಯಾಗದ ಹತ್ಯೆ

ಜೋಲಿ ಜೋಸೆಫ್ ಮತ್ತು ಆಕೆಯ ಸಹಚರರು ನಡೆಸಿದ್ದಾರೆ ಎನ್ನಲಾದ ಕೊಲೆಗಳು 17 ವರ್ಷದವರೆಗೆ ಗೊತ್ತಾಗಿರಲೇ ಇಲ್ಲ. ಇವೆಲ್ಲವೂ ಸಹಜ ಸಾವು ಎಂದು ಬಿಂಬಿತವಾಗುವಂತೆ ಆರೋಪಿಗಳು ಸಂಚು ರೂಪಿಸಿದ್ದರು. ಆಸ್ತಿ ಜಗಳಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಕೊಲೆಗಳ ವಿಚಾರವೂ ಗೊತ್ತಾಯಿತು.

ಜೋಲಿ ಅವರು 2002ರಲ್ಲಿ ತಮ್ಮ ಅತ್ತೆ ಅಣ್ಣಮ್ಮ ಅವರನ್ನು ಹತ್ಯೆ ಮಾಡಿದ್ದರು. ನಂತರ ಮಾವ ಟಾಮ್ ಥಾಮಸ್, ಗಂಡ ರಾಯ್ ಥಾಮಸ್ ಅವರನ್ನು ಹತ್ಯೆ ಮಾಡಿದ್ದರು. ಆನಂತರ ಅಣ್ಣಮ್ಮ ಅವರ ಸೋದರ ಮ್ಯಾಥ್ಯೂ ಅವರನ್ನು ಕೊಂದಿದ್ದರು. ರಾಯ್ ಅವರ ಸಂಬಂಧಿ ಶಾಜು ಅವರ ಪತ್ನಿ ಸಿಲಿ, ಮಗಳು ಆಲ್ಫೈನ್‌ಳ (1) ಕೊಲೆ ನಡೆದಿತ್ತು. ಆನಂತರ ಜೋಲಿ ಮತ್ತು ಶಾಜು ವಿವಾಹವಾಗಿದ್ದರು.

Post Comments (+)