ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೀನಾ ಮುಕ್ಕ್‌...’ ಕೇರಳದ ಈ ಹಳ್ಳಿಗೂ, ಚೀನಾಕ್ಕೂ, ನೆಹರುಗೂ ಏನು ಸಂಬಂಧ?

Last Updated 26 ಜೂನ್ 2020, 15:53 IST
ಅಕ್ಷರ ಗಾತ್ರ

ಪತ್ತನಂತಿಟ್ಟ: ಕೇರಳದ ಪತ್ತನಂತಿಟ್ಟ ಜಿಲ್ಲೆಯಕುಗ್ರಾಮವೊಂದರ ಜನ ತಮ್ಮ ಹಳ್ಳಿಯ ಹೆಸರನ್ನು ಬದಲಿಸುವಂತೆ ಆಗ್ರಹಿಸುತ್ತಿದ್ದಾರೆ. ಅದರ ಹೆಸರು ‘ಚೀನಾ ಮುಕ್ಕ್‌ (ಚೀನಾ ವೃತ್ತ)’. ಅದಕ್ಕೆ ಆ ಹೆಸರಿಟ್ಟವರು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು.

ಪೂರ್ವ ಲಡಾಕ್‌ನ ಗಾಲ್ವಾನ್‌ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಾರತ-ಚೀನಾ ಹಿಂಸಾತ್ಮಕ ಘರ್ಷಣೆ ನಂತರ ಕೇರಳದ ಈ ಗ್ರಾಮದ ಜನರು 'ಚೀನಾ ಮುಕ್ಕ್‌' ಹೆಸರನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.

1952ರ ಲೋಕಸಭಾ ಚುನಾವಣೆ ವೇಳೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕ ಜವಾಹರಲಾಲ್‌ ನೆಹರು ಅವರು ಈ ಪ್ರದೇಶವನ್ನು ‘ಚೀನಾ ವೃತ್ತ’ ಎಂದು ಕರೆದಿದ್ದರು ಎಂದು ಕೊನ್ನಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಚುನಾವಣೆ ಪ್ರಚಾರಕ್ಕಾಗಿ ಕೇರಳಕ್ಕೆ ಆಗಮಿಸಿದ್ದ ಜವಾಹರಲಾಲ್‌ ನೆಹರು ಅವರಿಗೆ ಎಲ್ಲಿ ನೋಡಿದರೂ ಕಾಂಗ್ರೆಸ್‌ ಪಕ್ಷದ ಬಾವುಟವೇ ಕಾಣಿಸಿತ್ತು. ಆದರೆ, ಕೊನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶದಲ್ಲಿ ಪರಿಸ್ಥಿತಿ ದಿಢೀರ್‌ ಬದಲಾಗಿತ್ತು. ಕಮ್ಯುನಿಷ್ಟ್‌ ಪಕ್ಷದ ಭದ್ರಕೋಟೆಯಾಗಿದ್ದ ಈ ಪ್ರದೇಶದಲ್ಲಿ ಕೆಂಪು ಬಾವುಟಗಳು ರಾರಾಜಿಸುತ್ತಿದ್ದವು. ಇದರಿಂದ ಆಶ್ಚರ್ಯಗೊಂಡಿದ್ದ ನೆಹರು ಇದೇನು ‘ಚೀನಾ ವೃತ್ತ’ವೇ ಎಂದು ಪ್ರಶ್ನೆ ಮಾಡಿದ್ದರು. ಆಗಿನಿಂದ ಈ ಪ್ರದೇಶವನ್ನು ‘ಚೀನಾ ಮುಕ್ಕ್‌’ ಎಂದು ಕರೆಯಲಾಗುತ್ತಿದೆ,’ ಎಂದು ಕೊನ್ನಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮಕ್ಕೆ ಮರುನಾಮಕರಣ ಮಾಡಲು ಬಯಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪ್ರವೀಣ್‌ ಪ್ಲವಿಲಾಯಿಲ್‌ ಪ್ರಸ್ತಾವನೆಯನ್ನೂ ಮಂಡಿಸಿದ್ದಾರೆ. ಈ ಬಗ್ಗೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಜನೀ ಹೇಳಿದ್ದಾರೆ.

ಸದ್ಯ ಕೊನ್ನಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರ ಹೊಂದಿದೆ. 18 ಸದಸ್ಯ ಬಲದ ಪಂಚಾಯಿತಿಯಲ್ಲಿ ಯುಡಿಎಫ್‌ 12 ಸದಸ್ಯರನ್ನು ಹೊಂದಿದೆ. ಸಿಪಿಐಎಂ 5 ಸದಸ್ಯರನ್ನು ಹೊಂದಿದ್ದು, ಒಬ್ಬ ಪಕ್ಷೇತರ ಸದಸ್ಯರು ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT