ಶನಿವಾರ, ಡಿಸೆಂಬರ್ 14, 2019
24 °C
ರಾಹುಲ್ ಗಾಂಧಿ ಕ್ಷೇತ್ರದಲ್ಲಿ ದುರಂತ

ವಯನಾಡ್| ಹಾವು ಕಚ್ಚಿದೆ ಎಂದರೂ ಎಚ್ಚರ ವಹಿಸದ ಶಿಕ್ಷಕರು!: ವಿದ್ಯಾರ್ಥಿನಿ ಸಾವು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಯನಾಡ್‌: ಶಾಲಾ ಕೊಠಡಿಯಲ್ಲಿ ಹಾವು ಕಚ್ಚಿ ಐದನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ದುರಂತ ಇಲ್ಲಿನ ಸುಲ್ತಾನ್‌ ಬತ್ತೇರಿಯಲ್ಲಿ ಬುಧವಾರ ಸಂಭವಿಸಿದೆ. ಘಟನೆ ಬಳಿಕ ವಿದ್ಯಾರ್ಥಿನಿಯ ಪೋಷಕರು ಹಾಗೂ ಸ್ನೇಹಿತರು ಶಾಲಾ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದು, ತರಗತಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಮೃತ ವಿದ್ಯಾರ್ಥಿನಿಯ ಸಹಪಾಠಿಗಳು ಹೇಳುವಂತೆ, ಎಸ್‌.ಶೆಹಲ(9) ತರಗತಿ ಕೊಠಡಿಯಲ್ಲಿ ಕುಳಿತಿದ್ದಾಗ ಆಕೆಯ ಕಾಲಿಗೆ ಹಾವು ಕಚ್ಚಿದೆ. ಕೂಡಲೇ ಶಿಕ್ಷಕರಿಗೆ ವಿಚಾರ ತಿಳಿಸಲಾಗಿದೆಯಾದರೂ, ಸಣ್ಣ ಗಾಯವಾಗಿರಬೇಕು ಎಂದು ನಿರ್ಲಕ್ಷಿಸಿದ್ದಾರೆ. ಆದರೆ, ವಿದ್ಯಾರ್ಥಿನಿಯ ಕಾಲು ನೀಲಿ ಬಣ್ಣಕ್ಕೆ ತಿರುಗಿದ ನಂತರ, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕೊಯಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

ವಿದ್ಯಾರ್ಥಿನಿಗೆ ಹಾವು ಕಚ್ಚಿರುವ ಬಗ್ಗೆ ಸಹಪಾಠಿಗಳು, ಶಿಕ್ಷಕರಿಗೆ ಮಧ್ಯಾಹ್ನ 3.10 ರಲ್ಲಿ ತಿಳಿಸಿದ್ದಾರೆ. ಮಾತ್ರವಲ್ಲದೆ ಶಿಕ್ಷಕರು ವಿದ್ಯಾರ್ಥಿನಿಯ ಪೋಷಕರು ಬರುವವರೆಗೆ(4.00 ಗಂಟೆವರೆಗೆ) ಕಾಯ್ದರು. ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರೆ ಆಕೆ ಬದುಕುತ್ತಿದ್ದಳು ಎಂದು ಹೇಳಿಕೆ ನೀಡಿದ್ದಾರೆ.

‘ನಮ್ಮಿಂದ ವಿಳಂಬವಾಗಿಲ್ಲ’ ಎಂದಿರುವ ಶಾಲೆಯ ಮುಖ್ಯಶಿಕ್ಷಕ ‍ಪಿ.ಮೋಹನನ್‌, ‘ವಿದ್ಯಾರ್ಥಿನಿ ಸಾವಿಗೆ ತಾಲ್ಲೂಕು ಆಸ್ಪತ್ರೆಯವರೇ ಕಾರಣ’ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಕುಟುಂಬದವರು, ‘ಸುಲ್ತಾನ್‌ ಬತ್ತೇರಿ ಸರ್ಕಾರಿ ಶಾಲಾ ಕೊಠಡಿಯಲ್ಲಿ ಸಾಕಷ್ಟು ಬಿರುಕುಗಳು ಹಾಗೂ ಬಿಲಗಳಿವೆ. ಹೀಗಾಗಿ ವಿಷ ಜಂತುಗಳು ಒಳಗೆ ಬರುತ್ತವೆ. ಈ ಸಂಬಂಧ ಸಾಕಷ್ಟು ಬಾರಿ ದೂರು ನೀಡಲಾಗಿದೆಯಾದರೂ ಯಾರೊಬ್ಬರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಶಿಕ್ಷಣಾಧಿಕಾರಿಗಳು ಮೃತ ವಿದ್ಯಾರ್ಥಿನಿಯ ತರಗತಿ ಶಿಕ್ಷಕಿ ಸಾಜಿಲ್‌ ಸಿ.ವಿ ಅವರನ್ನು ಅಮಾನತು ಮಾಡಿದ ಬಳಿಕ, ಕೇರಳ ಶಿಕ್ಷಣ ಸಚಿವ ಸಿ.ರವೀಂದ್ರನಾಥ್‌ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಆದೀಲ್‌ ಅಬ್ದುಲ್ಲಾ ಪ್ರಕರಣದ ವರದಿ ನೀಡುವಂತೆ, ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಶಾಲೆಗೆ ನಿರ್ದೇಶನ ನೀಡಿದ್ದಾರೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಯನಾಡ್‌ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು