ಭಾನುವಾರ, ಸೆಪ್ಟೆಂಬರ್ 15, 2019
25 °C
ಉಗ್ರಗಾಮಿ ಶಿಬಿರಗಳಲ್ಲಿ ನರ್ಸ್ ಆಗಿ ಕೆಲಸ ಮಾಡಲು ಒತ್ತಾಯ

‘ಐಎಸ್‌’ ಸೇರಲು ನಿರಾಕರಣೆ; ಕೇರಳದಲ್ಲಿ ಮಹಿಳೆಗೆ ಹಿಂಸೆ

Published:
Updated:

ತಿರುವನಂತಪುರ: ಐಎಸ್‌ ಉಗ್ರಗಾಮಿ ಸಂಘಟನೆ  ಶಿಬಿರಗಳಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡಲು  ನಿರಾಕರಿಸಿದ್ದಕ್ಕೆ ಚಿತ್ರಹಿಂಸೆ ಅನುಭವಿಸಿದ ಕರಾಳ ಚಿತ್ರಣವನ್ನು ಕೇರಳದ ಮಹಿಳೆಯೊಬ್ಬರು ಅನಾವರಣಗೊಳಿಸಿದ್ದಾರೆ.

ತನಗಾದ ನೋವು, ಸಂಕಟಗಳನ್ನು ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹೆರಾ ಅವರು ನಡೆಸಿದ ಅದಾಲತ್‌ನಲ್ಲಿ 26 ವರ್ಷದ ಈ ಮಹಿಳೆ ಬಿಚ್ಚಿಟ್ಟಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ‌ರಾನ್ನೀ ಮೂಲದ ಈ ಮಹಿಳೆ, ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಎರಡು ವರ್ಷಗಳ ಹಿಂದೆ ದೂರು ನೀಡಿದರೂ ಸಮರ್ಪಕ ತನಿಖೆ ಕೈಗೊಳ್ಳಲಿಲ್ಲ ಎಂದು ದೂರಿದ್ದಾರೆ. ಹೀಗಾಗಿ, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್‌ ಮುಖ್ಯಸ್ಥರು ಆದೇಶ ನೀಡುವ ಸಾಧ್ಯತೆ ಇದೆ.

‍ಪ್ರಕರಣದ ವಿವರ: ಮೂರು ವರ್ಷಗಳ ಹಿಂದೆ ಹೈದರಾಬಾದ್‌ನ ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿದೆ. ಸಹೋದ್ಯೋಗಿ ಜತೆಗಿನ ಮಹಿಳೆ ಸ್ನೇಹ ಪ್ರೇಮಕ್ಕೆ ತಿರುಗಿದೆ.

ಮುಸ್ಲಿಂ ಆಗಿದ್ದ ಆತ ತೆಲಂಗಾಣದ ಮಿರ‍್ಯಾಲಗುಡಾ ನಿವಾಸಿ. ಮಹಿಳೆ ಹಿಂದೂ. ಒಮ್ಮೆ ಕ್ರೈಸ್ತ ಧರ್ಮಕ್ಕೆ ಸೇರಿದ್ದ ಈತ ಮತ್ತೆ ಇಸ್ಲಾಂಗೆ ಮತಾಂತರಗೊಂಡಿದ್ದ ಎಂದು ಮಹಿಳೆ ತಿಳಿಸಿದ್ದಾರೆ.

‘ಗರ್ಭಿಣಿಯಾದಾಗ ಒತ್ತಾಯದಿಂದ ಗರ್ಭಪಾತ ಮಾಡಿಸಿದ. ಬಳಿಕ, ವಿವಾಹವಾಗುವಂತೆ ಒತ್ತಾಯಿಸಿದಾಗ ಇಸ್ಲಾಂಗೆ ಮತಾಂತರವಾಗಬೇಕು ಮತ್ತು ಐಎಸ್‌ ಶಿಬಿರಗಳಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸತೊಡಗಿದ. ಇದರಿಂದ, ಹೆಚ್ಚು ಹಣವೂ ದೊರೆಯುತ್ತದೆ ಎಂದು ಆಮಿಷವೊಡ್ಡಿದ್ದ. ಒತ್ತಡಗಳಿಗೆ ಮಣಿಯದಿದ್ದಾಗ ಪದೇ ಪದೇ ಚಿತ್ರ ಚಿತ್ರಹಿಂಸೆ ನೀಡತೊಡಗಿದ’ ಎಂದು ಮಹಿಳೆ ದೂರಿದ್ದಾರೆ.

2017ರಲ್ಲಿ ಆತನಿಂದ ದೂರವಾಗಿ, ರಾನ್ನೀಯಲ್ಲಿ ಮಹಿಳೆ ವಾಸಿಸುತ್ತಿದ್ದಾರೆ. ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ಪತ್ತನಂತಿಟ್ಟ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇದು ‘ಲವ್‌ ಜಿಹಾದ್‌’ ಪ್ರಕರಣ ಎಂದು ಶಂಕಿಸಲಾಗಿದೆ. ಹೈದರಾಬಾದ್‌ನಲ್ಲಿ ಜಾಲ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.

Post Comments (+)