ಭಾನುವಾರ, ಏಪ್ರಿಲ್ 5, 2020
19 °C

ಗುರಿ ಮುಟ್ಟದ ‘ಆ್ಯಕ್ಟ್ ಈಸ್ಟ್’

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ‘ಆ್ಯಕ್ಟ್ ಈಸ್ಟ್’ ನೀತಿಯು (ಪೂರ್ವ ಭಾಗದ ದೇಶಗಳ ಜತೆಗಿನ ಸಂಬಂಧ ವೃದ್ಧಿ) ವಾಸ್ತವದಿಂದ ಬಹು ದೂರವೇ ಉಳಿದಿದೆ. ಭಾರತದ ಪೂರ್ವ ಬಂದರುಗಳಿಂದ ಈಶಾನ್ಯ ಭಾರತ ಹಾಗೂ ಮ್ಯಾನ್ಮಾರ್‌ಗೆ ಸಂಪರ್ಕ ಕಲ್ಪಿಸುವ ಬಹುಮಾದರಿ ಸರಕು ಸಾಗಣೆ ಕಾರಿಡಾರ್ ಪೂರ್ಣಗೊಂಡಿಲ್ಲ. ನೀಡಲಾಗಿದ್ದ ಹಲವು ಗುಡುವುಗಳನ್ನು ಯೋಜನೆ ದಾಟಿದೆ.

ಜಲಮಾರ್ಗದಲ್ಲಿ ಸಾಗುವ ‘ಕಲಾದಾನ್ ಬಹುಮಾದರಿ ಸಾರಿಗೆ ಯೋಜನೆ’ಯು (ಕೆಎಂಟಿಟಿಪಿ) 2017ರಲ್ಲೇ ಪೂರ್ಣಗೊಂಡಿದೆ. ಆದರೆ ರಸ್ತೆ ಮಾರ್ಗದ ಯೋಜನೆ ಇನ್ನೂ ಕುಂಟುತ್ತಿದೆ. 2020ರ ಮೇ ತಿಂಗಳೊಳಗೆ ಇದನ್ನು ಪೂರ್ಣಗೊಳಿಸಬೇಕಿತ್ತು. ಯೋಜನೆ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷಗಳು ಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಗೆ ಸರ್ಕಾರ ಮಾಹಿತಿ ನೀಡಿದೆ. 

₹2,904 ಕೋಟಿ ಮೊತ್ತದ ಕೆಎಂಟಿಟಿಪಿ ಯೋಜನೆಯು ವಿದೇಶಾಂಗ ವ್ಯವಹಾರಗಳ ಇಲಾಖೆಯ ಪರಿಕಲ್ಪನೆ. ಯೋಜನೆಯು ಜಲ ಹಾಗೂ ಭೂ ಮಾರ್ಗಗಳನ್ನು ಒಳಗೊಂಡಿದೆ. ಕಲಾದಾನ್ ನದಿಯ ಮೂಲಕ ಮ್ಯಾನ್ಮಾರ್‌ನ ಪೆಲೆಟ್ವಾ ನದಿಯನ್ನು ಸಂಪರ್ಕಿಸುವುದು ಯೋಜನೆ ಉದ್ದೇಶ. ಹಾಗೆಯೇ ರಸ್ತೆ ಮಾರ್ಗವು ಪೆಲೆಟ್ವಾವನ್ನು ಭಾರತ–ಮ್ಯಾನ್ಮಾರ್ ಗಡಿಯ ಮಿಜೋರಾಂನ ಜೋರಿನ್‌ಪುರಿಯ ಜೊತೆ ಜೋಡಿಸುತ್ತದೆ. ಯೋಜನೆ ಮೂಲಕ ಈಶಾನ್ಯದ ಸಂಪರ್ಕ ಸಮಸ್ಯೆ ಬಗೆಹರಿಯಲಿದೆ.

ರಸ್ತೆ ಮಾರ್ಗದ ಕಾಮಗಾರಿಯು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುಕ್ಕೆ ಸ್ಥಾಯಿಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ನಿಖರವಾಗಿ ಯೋಜನೆ ರೂಪಿಸದಿರುವುದು ಹಾಗೂ ಮೇಲ್ವಿಚಾರಣೆಯ ವೈಫಲ್ಯ ಇದಕ್ಕೆ ಕಾರಣ ಎಂದು ತಿಳಿಸಿದೆ.

ಇಡೀ ಭಾಗದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿರುವ ಯೋಜನೆ ವಿಳಂಬಕ್ಕೆ ಕಾರಣವಾಗಿರುವ ಅಂಶಗಳತ್ತ ತುರ್ತಾಗಿ ಗಮನಹರಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. 

ಭಾರತದ ಒಳನಾಡು ಜಲಸಾರಿಗೆ ಪ್ರಾಧಿಕಾರವು ಯೋಜನೆಯ ಜಲಮಾರ್ಗದ ಸಲಹೆಗಾರನಾಗಿ ಕೆಲಸ ಮಾಡುತ್ತಿದೆ. ಇಕ್ರಾನ್ ಇನ್‌ಫ್ರಾಸ್ಟ್ರಕ್ಚರ್ ಸರ್ವಿಸ್ ಲಿಮಿಟೆಡ್ ಸಂಸ್ಥೆಯು ರಸ್ತೆ ಮಾರ್ಗದ ಯೋಜನೆಯನ್ನು ನಿರ್ವಹಿಸುತ್ತಿದೆ. ಜಲಮಾರ್ಗದ ಯೋಜನೆಯನ್ನು ಎಸ್ಸಾರ್ ಸಂಸ್ಥೆ 2010ರಲ್ಲಿ ಕೈಗೆತ್ತಿಕೊಂಡು ಏಳು ವರ್ಷಗಳಲ್ಲಿ ಮುಗಿಸಿತ್ತು. ಬಂದರಿನಲ್ಲಿ ಕಾರ್ಯಾಚರಣೆ ಫೆಬ್ರುವರಿ 1ರಿಂದ ಆರಂಭವಾಗಿದ್ದು, ಮ್ಯಾನ್ಮಾರ್ ಸರ್ಕಾರಕ್ಕೆ ಅದನ್ನು ಹಸ್ತಾಂತರಿಸಲಾಗಿದೆ.

ವಿಳಂಬಕ್ಕೆ ಕಾರಣ?
* ಪಾಲುದಾರ ಸಂಸ್ಥೆ ಸಿಅಂಡ್‌ಸಿ ಕನ್‌ಸ್ಟ್ರಕ್ಷನ್ ಎದುರಿಸಿದ ಆರ್ಥಿಕ ಬಿಕ್ಕಟ್ಟು
* ಭಾರತ–ಮ್ಯಾನ್ಮಾರ್ ಗಡಿಯ ಯೋಜನಾ ಸ್ಥಳ ತಲುಪಲು ಇರುವ ಅಡ್ಡಿ
* ಗಡಿ ಭಾಗದ ಯೋಜನಾ ವಲಯದಲ್ಲಿರುವ ಪ್ರತಿಕೂಲ ಭದ್ರತಾ ಪರಿಸ್ಥಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು