ಬುಧವಾರ, ನವೆಂಬರ್ 20, 2019
27 °C
ಕಾಂಗ್ರೆಸ್‌, ಸೋನಿಯಾ ವಿರುದ್ಧ ಖಟ್ಟರ್‌ ವಾಗ್ದಾಳಿ

ಹರಿಯಾಣ ವಿಧಾನಸಭಾ ಚುನಾವಣೆ: ಬೆಟ್ಟ ಅಗೆದು ಸತ್ತ ಇಲಿ ಹಿಡಿದರು

Published:
Updated:
Prajavani

ಸೋನಿಪತ್‌ (ಹರಿಯಾಣ): ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸೋನಿಯಾ ವಿರುದ್ಧ ಪುನಃ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌, ‘ಕುಟುಂಬ ಆಧಾರಿತ ಪಕ್ಷಗಳಿಗೆ ಸರಿಯಾಗಿ ಬುದ್ಧಿ ಕಲಿಸಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ನೆಹರೂ– ಗಾಂಧಿ ಕುಟುಂಬದ ಹೊರಗಿನವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್‌ ಮೂರು ತಿಂಗಳು ಹುಡುಕಾಟ ನಡೆಸಿತು.

ಕೊನೆಗೆ ಆ ಪರಿವಾರದವರೇ ಆದ ಸೋನಿಯಾ ಅವರನ್ನು ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಒಟ್ಟಿನಲ್ಲಿ ಕಾಂಗ್ರೆಸ್‌ನವರು ಬೆಟ್ಟ ಅಗೆದು ಇಲಿ ಹಿಡಿದರು, ಅದೂ ಸತ್ತ ಇಲಿ’ ಎಂದರು.

‘ಕುಟುಂಬ ಆಧಾರಿತ ಪಕ್ಷಗಳು ಎಂಥ ನಾಟಕವಾಡುತ್ತಿವೆ ಎಂಬುದು ನಿಮಗೆ ತಿಳಿದಿದೆ. ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ತೊರೆದಿದ್ದ ರಾಹುಲ್‌, ತಮ್ಮ ಕುಟುಂಬದ ಹೊರಗಿನ ವ್ಯಕ್ತಿಯನ್ನು ಆ ಹುದ್ದೆಗೆ ಆಯ್ಕೆ ಮಾಡುವಂತೆ ಸೂಚಿಸಿದ್ದರು.

ಕೊನೆಗೂ ಕಾಂಗ್ರೆಸ್‌ ಪಕ್ಷವು ‘ಪರಿವಾರವಾದ’ ರಾಜಕೀಯದಿಂದ ಹೊರ ಬರುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಮುಂದೆ ಏನಾಯಿತು ಎಂಬುದು ನಿಮಗೇ ತಿಳಿದಿದೆ’ ಎಂದರು.

ಒಂದು ವಾರದ ಹಿಂದೆಯೂ ಸೋನಿಯಾ ವಿರುದ್ಧ ಖಟ್ಟರ್‌, ತೀವ್ರ ವಾಗ್ದಾಳಿ ನಡೆಸಿದ್ದರು.

 ಸಿಪಿಎಂಗೆ ಆದಿವಾಸಿಗಳ ಬೆಂಬಲ

ಮುಂಬೈ: ಹಲವು ವರ್ಷಗಳಿಂದ ಶಿವಸೇನಾ ಪಕ್ಷವನ್ನು ಬೆಂಬಲಿಸುತ್ತಿದ್ದ, ಮಹಾರಾಷ್ಟ್ರದ ಆಂಬೆಸರಿ ಹಾಗೂ ನಾಗಝರಿ ಜಿಲ್ಲೆಗಳ ಆದಿವಾಸಿ ಸಮುದಾಯದ 50ಕ್ಕೂ ಹೆಚ್ಚು ಕಾರ್ಯಕರ್ತರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ವಿನೋದ್‌ ನಿಕೋಲೆ ಅವರ ಗೆಲುವಿಗಾಗಿ ಶ್ರಮಿಸಲು ನಿರ್ಧರಿಸಿದ್ದಾರೆ.

ಈ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಸಲುವಾಗಿ ಸಿಪಿಎಂ ಈಚೆಗೆ ಆಂಬೆಸರಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆ ಆಯೋಜಿಸಿತ್ತು. ಪಂಚಾಯತ್‌ ಸಮಿತಿ ಸದಸ್ಯ ವಿಜಯ್‌ ನಾಗರೆ, ನಾಗಝರಿ ಗ್ರಾಮದ ಮಾಜಿ ಸರ್‌ಪಂಚ್‌ಗಳಾದ ವಸಂತ ವಾಸವಳ ಹಾಗೂ ಧುಲುರಾಮ್‌ ತಾಂಡೇಲ್‌ ಹಾಗೂ ಎರಡೂ ಗ್ರಾಮಗಳ ಅನೇಕ ಗ್ರಾಮ ಪಂಚಾಯತ್‌ ಸದಸ್ಯರು ಶಿವಸೇನಾ ತ್ಯಜಿಸಿ ಸಿಪಿಎಂ ಸೇರಿದರು.

ನಿಕೋಲೆ ಅವರು ದಹಾನು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಇಲ್ಲಿ ಅವರಿಗೆ ಎನ್‌ಸಿಪಿ, ಕಾಂಗ್ರೆಸ್‌, ಬಹುಜನ ವಿಕಾಸ ಅಘಾಡಿ ಹಾಗೂ ಲೋಕಭಾರತಿ ಪಕ್ಷಗಳು ಬೆಂಬಲ ನೀಡಿವೆ..

**

ಖಟ್ಟರ್‌ ಹೇಳಿಕೆಯು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತದೆ. ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಅವರು ಕ್ಷಮೆ ಯಾಚಿಸಬೇಕು
- ಕಾಂಗ್ರೆಸ್‌ ಪಕ್ಷದ ಟ್ವೀಟ್‌

ಪ್ರತಿಕ್ರಿಯಿಸಿ (+)