ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟ್ಟರ್‌ ವಿರುದ್ಧ ಮಾಜಿ ಯೋಧ

Last Updated 29 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಚಂಡೀಗಡ: ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಕರ್ನಾಲ್‌ನಲ್ಲಿ ಒಬ್ಬ ವಿಶಿಷ್ಟ ಸ್ಪರ್ಧಿಯನ್ನು ಎದುರಿಸಬೇಕಾಗಿದೆ.

ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್‌) ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ, ವಿಡಿಯೊ ಬಹಿರಂಗ ಮಾಡಿದ್ದ ತೇಜ್‌ಬಹದೂರ್‌ ಯಾದವ್‌ ಅವರು ಈ ಬಾರಿ ಖಟ್ಟರ್‌ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ತೇಜ್‌ಬಹದೂರ್‌ ಅವರನ್ನು 2017ರಲ್ಲಿಯೇ ಬಿಎಸ್‌ಎಫ್‌ನಿಂದ ವಜಾ ಮಾಡಲಾಗಿದೆ.

ಅವರು ಜನತಾ ಜನನಾಯಕ ಪಕ್ಷಕ್ಕೆ (ಜೆಜೆಪಿ) ಸೇರ್ಪಡೆಯಾಗಿದ್ದು, ಪಕ್ಷವು ಕರ್ನಾಲ್‌ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಮುಂದಾಗಿದ್ದ ತೇಜ್‌ಬಹದೂರ್‌ ಅವರು ವಾರಾಣಸಿ ಕ್ಷೇತ್ರದಿಂದ ನಾಮಪತ್ರವನ್ನೂ ಸಲ್ಲಿಸಿದ್ದರು. ಅದು ತಿರಸ್ಕೃತವಾಗಿತ್ತು. ‘ನನ್ನದು ಭ್ರಷ್ಟಾಚಾರದ ವಿರುದ್ಧದ ಹೋರಾಟ. ವಿಧಾನಸಭಾ ಚುನಾವಣೆಯಲ್ಲಿ ಜೆಜೆಪಿ ಬಹುಮತ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡುತ್ತಾ ಅವರು ವಿಶ್ವಾಸ ವ್ಯಕ್ತಪಡಿಸಿದರು. ಹರಿಯಾಣದ ಮಹೀಂದ್ರಗಡದವರಾದ ತೇಜ್‌ಬಹದೂರ್‌ ಚುನಾವಣಾ ರಾಜಕಾರಣಕ್ಕೆ ಬರಲು ಬಹಳ ಸಮಯದಿಂದ ಪ್ರಯತ್ನ ನಡೆಸುತ್ತಿದ್ದರು. ‘ಅನೇಕ ರಾಜಕೀಯ ಪಕ್ಷಗಳು ನನ್ನನ್ನು ಸಂಪರ್ಕಿಸಿವೆ’ ಎಂದು ಅವರು ಹಿಂದೆ ಹೇಳಿಕೊಂಡಿದ್ದರು.

‘ತೇಜ್‌ಬಹದೂರ್‌ ಅವರು ಖಟ್ಟರ್‌ಗೆ ಇಲ್ಲಿ ದೊಡ್ಡ ಸವಾಲನ್ನು ಒಡ್ಡಲಾರರು. ಕರ್ನಾಲ್‌ ಕ್ಷೇತ್ರವು ಖಟ್ಟರ್‌ ಅವರ ಭದ್ರ ಕೋಟೆ. ಆದರೆ, ಪ್ರತಿಸ್ಪರ್ಧಿಗಳ ವಿರುದ್ಧ ತೇಜ್‌ಬಹದೂರ್‌ ಮಾಡುವ ಆರೋಪಗಳು, ಅವರು ನೀಡುವ ಹೇಳಿಕೆಗಳ ಕಾರಣಕ್ಕೆ ಚುನಾವಣಾ ಕಣ ರಂಗೇರಲಿದೆ’ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್‌ 21ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ನಾಲ್ವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಕಾಂಗ್ರೆಸ್‌ ಮಣೆ ಹಾಕಿದೆ.

ಮುಕುಲ್‌ ವಾಸ್ನಿಕ್‌ ನೇತೃತ್ವದ, ಎಐಸಿಸಿ ಕೇಂದ್ರ ಚುನಾವಣಾ ಸಮಿತಿಯು 51 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಸಂಜೆ ಪ್ರಕಟಿಸಿದೆ.

ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಅವರಿಗೆ ನಾಂದೇಡ್‌ ಜಿಲ್ಲೆಯ ಭೋಕರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಇವರು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಶಂಕರರಾವ್‌ ಚೌಹಾಣ್ ಅವರ ಪುತ್ರ. ಪ್ರಸಕ್ತ ಈ ಕ್ಷೇತ್ರವನ್ನು ಅವರ ಪತ್ನಿ ಅಮಿತಾ ಚೌಹಾಣ್‌ ಪ್ರತಿನಿಧಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶ್‌ಮುಖ್‌ ಅವರ ಪುತ್ರ ಅಮಿತ್‌ ದೇಶ್‌ಮುಖ್‌ ಲಾತೂರ್‌ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್‌ ಪಾಟೀಲ್‌ ನಿಲಂಗೇಕರ್‌ ಅವರ ಪುತ್ರ ಅಶೋಕ್‌ ನಿಲಂಗೇಕರ್‌ ಅವರಿಗೆ ನಿಲಂಗ ಕ್ಷೇತ್ರದಿಂದ ಮತ್ತು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಗೃಹಸಚಿವ ಸುಶೀಲ್‌ಕುಮಾರ್‌ ಶಿಂಧೆ ಅವರ ಪುತ್ರಿ ಪ್ರಣತಿ ಶಿಂಧೆ ಅವರಿಗೆ ಸೊಲ್ಲಾಪುರ ನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಾಳಾಸಾಹೇಬ್‌ ಥೋರಟ್‌ ಅವರು ಸಂಗಮೇರ್‌ ಕ್ಷೇತ್ರದಿಂದ, ಹಿಂದಿನ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ವಿಜಯ್‌ ವಡ್ಡಟ್ಟಿವರ್‌ ಬ್ರಹ್ಮಪುರಿ ಕ್ಷೇತ್ರದಿಂದ ಸ್ಪರ್ಧಿಸುವರು ಎಂದು ಪಕ್ಷ ಹೇಳಿದೆ.

ಬಿಜೆಪಿ ಮೇಲೆ ಸೇನಾ ಒತ್ತಡ

ಬಿಜೆಪಿ ಜೊತೆಗಿನ ಮೈತ್ರಿ ಮಾತುಕತೆ ಅಂತಿಮಗೊಳ್ಳುವುದಕ್ಕೂ ಮುನ್ನವೇ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿಗೆ ‘ಎಬಿ’ ಫಾರಂಗಳನ್ನು ವಿತರಿಸುವ ಮೂಲಕ ಬಿಜೆಪಿ ಮೇಲೆ ಶಿವಸೇನಾ ಒತ್ತಡ ಹಾಕಿದೆ.

ಔರಂಗಾಬಾದ್‌ ಪಶ್ಚಿಮ ಕ್ಷೇತ್ರಕ್ಕೆ ಸಂಜಯ್‌ ಶಿರಸಾಟ್‌, ಕೊಲ್ಹಾಪುರ ಉತ್ತರ ಕ್ಷೇತ್ರಕ್ಕೆ ರಾಜೇಶ್‌ ಕ್ಷೀರಸಾಗರ್‌ ಹಾಗೂ ಸಾವಂತವಾಡಿ ಕ್ಷೇತ್ರಕ್ಕೆ ದೀಪಕ್‌ ಕೇಸರ್‌ಕರ್‌ ಅವರನ್ನು ಆಯ್ಕೆಮಾಡಿ ಸೇನಾದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಭಾನುವಾರ ಎಬಿ ಫಾರಂ ಹಂಚಿದ್ದಾರೆ. ಇವರು ಮೂವರೂ ಹಾಲಿ ಶಾಸಕರಾಗಿದ್ದು ಆಯಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಬಿಜೆಪಿ– ಶಿವಸೇನಾ ಮೈತ್ರಿ ಮಾತುಕತೆ ನಡೆಯುತ್ತಿದ್ದರೂ ಅದಕ್ಕೆ ಇನ್ನೂ ಅಂತಿಮ ರೂಪ ಲಭಿಸಿಲ್ಲ. ಮೈತ್ರಿ ಅಬಾಧಿತ ಎಂದು ಎರಡೂ ಪಕ್ಷಗಳ ನಾಯಕರು ಹೇಳಿದ್ದಾರೆ. ಆದರೆ ಭಾನುವಾರದ ಬೆಳವಣಿಗೆಯು ಮೈತ್ರಿಯಲ್ಲಿ ಒಡಕಿನ ಸಾಧ್ಯತೆಯನ್ನು ತೆರೆದಿಟ್ಟಿದೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಕಂದಾಯ ಸಚಿವ ಚಂದ್ರಕಾಂತ ಪಾಟೀಲ್‌ ಅವರು ಸೋಮವಾರ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT