ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಾರಿ ರಸ್ತೆಯಲ್ಲಿ ಒಂಟೆ ಸವಾರಿ..!

ಒಳಚರಂಡಿ ಯೋಜನೆಗಾಗಿ ಅಗೆದು ಹಾಕಿರುವ ರಸ್ತೆಗಳು: ನಿವಾಸಿಗಳಿಗೆ ತಪ್ಪದ ಗೋಳು
Last Updated 9 ಜೂನ್ 2018, 10:45 IST
ಅಕ್ಷರ ಗಾತ್ರ

ಗದಗ: ‘ರಸ್ತೆಗಳ ತುಂಬೆಲ್ಲಾ ಗುಂಡಿಗಳು ಬಿದ್ದಿವೆ. ಮಳೆಯಾದರೆ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತವೆ. ಚರಂಡಿ ಸ್ವಚ್ಛಗೊಳಿಸಿ ತಿಂಗಳುಗಳೇ ಕಳೆದಿವೆ. ಕಸ ಸಂಗ್ರಹಣೆಗೆ ತೊಟ್ಟಿಗಳನ್ನು ಇಡದ ಕಾರಣ, ರಸ್ತೆಯೇ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿದೆ. ತಿಪ್ಪೆರಾಶಿಯ ಗಬ್ಬು ವಾಸನೆಯ ನಡುವೆಯೇ ಜೀವನ ಸಾಗಿಸಬೇಕಾಗಿದೆ’ ಎಂದು  ಮಸಾರಿ ಭಾಗದ ನಿವಾಸಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

ವಾರ್ಡ್‌ ನಂಬರ್ 12ರ ವ್ಯಾಪ್ತಿಗೆ ಬರುವ ಜೆ.ಟಿ.ಕಾಲೇಜು ಎದುರಿನ ರಸ್ತೆ, ಮಾಲಿಪಾಟೀಲ ಆಸ್ಪತ್ರೆಯಿಂದ ಬನ್ನಿಕಟ್ಟೆ, ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕಿವುಡ ಮಕ್ಕಳ ಶಾಲೆ ಎದುರಿನ ರಸ್ತೆ, ಕೊಳಗೇರಿ, ಪ್ರಸಾದ್ ಲಾಡ್ಜ್‌ ಬಳಿಯಿರುವ ಉಪ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಗಣಪತಿ ಗುಡಿಯ ಸುತ್ತಮುತ್ತಲಿನ ಉಪರಸ್ತೆಗಳಿಗೆ ಇಂಟರ್‌ ಲಾಕ್‌ ಅಳವಡಿಸಲಾಗಿತ್ತು. ಆದರೆ, 24X7 ನೀರಿನ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಅಗೆದ ರಸ್ತೆಗಳನ್ನು ನಂತರ ಸಮತಟ್ಟುಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರಿಂದ ರಸ್ತೆ ತುಂಬ ಉಬ್ಬುತಗ್ಗುಗಳೇ ಇವೆ. ‘ಇಲ್ಲಿ ಯಾವುದೇ ವಾಹನದಲ್ಲಿ ಸಂಚಾರ ಮಾಡಿದರೂ ಒಂಟೆಯ ಮೇಲೆ ಕುಳಿತು ಸವಾರಿ ಮಾಡಿದ  ಅನುಭವವಾಗುತ್ತದೆ’ ಎಂದು ಬಡಾವಣೆಯ ನಿವಾಸಿಯೊಬ್ಬರು ಹೇಳಿದರು.

ಮಸಾರಿ ಭಾಗದಲ್ಲಿ ಕಸ ಸಂಗ್ರಹಣೆ ತೊಟ್ಟಿಗಳನ್ನು ಇಡದ ಕಾರಣ ಇಲ್ಲಿನ ನಿವಾಸಿಗಳು ರಸ್ತೆಯ ಪಕ್ಕದಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಸಂಜೆಯ ವೇಳೆಗೆ ಹಂದಿಗಳು ಎಳೆದಾಡಿ ತ್ಯಾಜ್ಯವೆಲ್ಲ ರಸ್ತೆ ತುಂಬ ಹರಡಿಕೊಂಡಿರುತ್ತದೆ. ಮಳೆ ಸುರಿದರಂತೂ ಇಲ್ಲಿನ ನಿವಾಸಿಗಳ ಸ್ಥಿತಿ ದೇವರಿಗೇ ಪ್ರೀತಿ.

‘ಗಣಪತಿ ಗುಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸದ ಡಬ್ಬಿಗಳನ್ನು ಇಡುವಂತೆ ನಗರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಪೂರ್ಣಿಮಾ ಎಂ. ಅಸಮಾಧಾನ ವ್ಯಕ್ತಪಡಿಸಿದರು.

‘ನಗರಸಭೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಅವರು, ಹುಸಿ ಭರವಸೆ ನೀಡಿ, ಸುಮ್ಮನಾಗುತ್ತಿದ್ದಾರೆ. ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸಿವಾಸಿಗಳಾದ ಪುಟ್ಟರಾಜ ಹುನಕುಂಟಿ, ರಮೇಶ ಮುಧೋಳ, ಡಾ.ಮಾಲಿಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಮಸಾರಿ ಭಾಗದ ಗಣೇಶ ಗುಡಿ ಸಮೀಪದ ಸಂದಿ, ಉಪ್ಪಿನ ಸಂದಿಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಸ್ತೆ ದುರವಸ್ಥೆ ಸರಿಪಡಿಸಲಾಗುವುದು
ಶ್ರೀನಿವಾಸ ಹುಯಿಲಗೋಳ, 12ನೇ ವಾರ್ಡ್‌ ಸದಸ್ಯ 

–ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT