ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ– ಸ್ವಾಮಿ ಜಂಗೀ ಕುಸ್ತಿಗೆ ಅಖಾಡ ಸಿದ್ಧ

‘ಮಾವಿನ ಮಡಿಲಲ್ಲಿ’ ಕಾಂಗ್ರೆಸ್‌– ಜೆಡಿಎಸ್‌ ನೇರ ಹಣಾಹಣಿ
Last Updated 5 ಮೇ 2018, 12:58 IST
ಅಕ್ಷರ ಗಾತ್ರ

ಕೋಲಾರ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ‘ಮಾವಿನ ಮಡಿಲು’ ಶ್ರೀನಿವಾಸಪುರ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮತದಾರರ ಮನದಲ್ಲಿ ರಾಜಕೀಯ ಲೆಕ್ಕಾಚಾರಗಳು ರಿಂಗಣಿಸುತ್ತಿವೆ.

ಕ್ಷೇತ್ರದ ಮಾವಿನ ತೋಪುಗಳಲ್ಲಿ, ರಸ್ತೆ ಬದಿಯ ಚಹಾ ಅಂಗಡಿಗಳಲ್ಲಿ ಈಗ ಚುನಾವಣೆಯದೇ ಚರ್ಚೆ. ಊರ ಹೊರಗಿನ ತೋಟದ ಮನೆಗಳು ರಾಜಕೀಯ ತಂತ್ರಗಾರಿಕೆಯ ಕೇಂದ್ರ ಬಿಂದುಗಳು. ರೆಡ್ಡಿ (ವೆಂಕಟಶಿವಾರೆಡ್ಡಿ)– ಸ್ವಾಮಿ (ರಮೇಶ್‌ಕುಮಾರ್‌) ಜಂಗೀ ಕುಸ್ತಿಗೆ ಅಖಾಡ ಸಿದ್ಧವಾಗಿದ್ದು, ಚುನಾವಣಾ ಕಣ ರಂಗೇರಿದೆ.

ಪಕ್ಷ ರಾಜಕಾರಣಕ್ಕೆ ಅತೀತವಾಗಿರುವ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಕಾಂಗ್ರೆಸ್‌ನಿಂದ ಮತ್ತು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಬಿಸಿಲ ಝಳ ಲೆಕ್ಕಿಸದೆ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಹಳ್ಳಿ ಹಳ್ಳಿ ಸುತ್ತಿ ಮತದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ.

ರೆಡ್ಡಿ– ಸ್ವಾಮಿ ನಡುವೆ ನೇರ ಹಣಾಹಣಿ ಇದ್ದು, ಉಭಯ ನಾಯಕರ ಬೆಂಬಲಿಗರ ಪಕ್ಷಾಂತರ ಪರ್ವ ಶುರುವಾಗಿದೆ. ರಮೇಶ್‌ಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿ 22 ತಿಂಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ. ವೆಂಕಟಶಿವಾರೆಡ್ಡಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳು ಮತ್ತು ರಮೇಶ್‌ಕುಮಾರ್‌ರ ಕನಸಿನ ಕೂಸಾದ ಕೆ.ಸಿ ವ್ಯಾಲಿ ಯೋಜನೆಯನ್ನು ಜರಿಯುತ್ತಾ ಮತ ಬೇಟೆ ನಡೆಸುತ್ತಿದ್ದಾರೆ.

ಬಿಜೆಪಿ ಹುರಿಯಾಳು ವೈದ್ಯ ಡಾ.ಕೆ.ಎನ್‌.ವೇಣುಗೋಪಾಲ್‌ ಕ್ಷೇತ್ರದಲ್ಲಿ ಕಮಲ ಅರಳಿಸುವ ಉಮೇದಿನಲ್ಲಿದ್ದಾರೆ. ಈ ಬಾರಿ ರೆಡ್ಡಿ– ಸ್ವಾಮಿಗೆ ಬದಲಾಗಿ ತಮ್ಮನ್ನು ಆಶೀರ್ವದಿಸಿದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ವೇಣುಗೋಪಾಲ್‌ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಮೂರು ಪಕ್ಷಗಳಿಗೂ ಬಂಡಾಯದ ಬಿಸಿಯಿಲ್ಲ.

ಮತದಾರರೆಷ್ಟು?: ರಾಯಲ್ಪಾಡು, ನೆಲವಂಕಿ, ರೋಣೂರು, ಯಲ್ದೂರು, ಕಸಬಾ, ಹೋಳೂರು ಮತ್ತು ಸುಗಟೂರು ಹೋಬಳಿಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ 2,05,932 ಮತದಾರರಿದ್ದಾರೆ. ಈ ಪೈಕಿ 1,03,315 ಪುರುಷ ಮತದಾರರು, 1,02,610 ಮಹಿಳಾ ಮತದಾರರು ಮತ್ತು 7 ಮಂದಿ ಇತರ ಮತದಾರರಿದ್ದಾರೆ. ಹೊಸದಾಗಿ 1,739 ಮತದಾರರು ಸೇರ್ಪಡೆಯಾಗಿದ್ದಾರೆ.

**
ಕ್ಷೇತ್ರದ ಮತದಾರರು ಮಾವು ಸಂಸ್ಕರಣ ಘಟಕ ಸ್ಥಾಪನೆ, ಎಪಿಎಂಸಿ ಮಾರುಕಟ್ಟೆ ಸುಧಾರಣೆ, ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹಾತೊರೆಯುತ್ತಿದ್ದಾರೆ. ಆದರೆ, ಅಭ್ಯರ್ಥಿಗಳು ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸದೆ ತಮ್ಮ ಹಿಂದಿನ ಸಾಧನೆ ಹಾಗೂ ಮುಖ ವರ್ಚಸ್ಸನ್ನು ಪಣಕ್ಕಿಟ್ಟು ಮತ ಕೇಳುತ್ತಿದ್ದಾರೆ
– ಸಿ.ವಿ.ಶಿವಪ್ರಸಾದ್‌, ಚಲ್ದಿಗಾನಹಳ್ಳಿಯ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT