ಭೂರಹಿತ ರೈತರಿಗೂ ಕಿಸಾನ್ ಸಮ್ಮಾನ್

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಭೂರಹಿತ ಮತ್ತು ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವ ರೈತರನ್ನು ಹೊರಗೆ ಇಡಬಾರದಿತ್ತು ಎಂಬ ಅಭಿಪ್ರಾಯವನ್ನು ಸಂಸತ್ತಿನ ಕೃಷಿ ಸ್ಥಾಯಿ ಸಮಿತಿಯು ಅಭಿಪ್ರಾಯಪಟ್ಟಿದೆ.
ಪ್ರಧಾನ ಮಂತ್ರಿ ಕಿಸಾಸ್ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷಕ್ಕೆ ₹6 ಸಾವಿರ ನೆರವು ನೀಡಲಾಗುತ್ತಿದೆ. ಇದನ್ನು ಮೂರು ಸಮಾನ ಕಂತುಗಳಲ್ಲಿ (₹2 ಸಾವಿರ) ಪಾವತಿಸಲಾಗುತ್ತಿದೆ.
ಈಶಾನ್ಯ ಭಾರತದಲ್ಲಿ ಸಾಮುದಾಯಿಕ ಕೃಷಿ ನಡೆಸುವ ರೈತರನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಪಿ.ಸಿ.ಗದ್ದಿಗೌಡರ್ ಅಧ್ಯಕ್ಷತೆಯ ಸಮಿತಿ ಹೇಳಿದೆ. ಆದರೆ, ಗುತ್ತಿಗೆ ಆಧಾರದಲ್ಲಿ ಬೇಸಾಯ ಮಾಡುವ ಮತ್ತು ಪಂಚಾಯಿತಿ ಅಥವಾ ಸರ್ಕಾರದ ಜಮೀನಿನಲ್ಲಿ ಬೇಸಾಯ ಮಾಡುವ ರೈತರನ್ನು ಯೋಜನೆಯ ವ್ಯಾಪ್ತಿಗೆ ತಂದಿಲ್ಲ. ಇಂತಹ ರೈತರನ್ನು ಯೋಜನೆಯಿಂದ ಕೈಬಿಟ್ಟಿರುವುದರಿಂದ ಅವರಿಗೆ ಅನ್ಯಾಯವಾಗಿದೆ ಎಂದು ಸಮಿತಿಯ ವರದಿ ಹೇಳಿದೆ.
ಭೂರಹಿತ ಮತ್ತು ಗುತ್ತಿಗೆ ಆಧಾರದಲ್ಲಿ ಬೇಸಾಯ ಮಾಡುವ ರೈತರನ್ನು ಯೋಜನೆ ವ್ಯಾಪ್ತಿಗೆ ತರಬೇಕು. ರಾಜ್ಯ ಸರ್ಕಾರಗಳ ಜತೆ ಸಮನ್ವಯದಲ್ಲಿ ಮೂರು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು ಎಂದು ಸಮಿತಿಯು ಸಲಹೆ ನೀಡಿದೆ.
ಪಶ್ಚಿಮ ಬಂಗಾಳವನ್ನು ಬಿಟ್ಟು ಬೇರೆ ಎಲ್ಲ ರಾಜ್ಯಗಳಲ್ಲಿ ಯೋಜನೆ ಜಾರಿಯಾಗಿದೆ. ಅಲ್ಲಿನ ಸರ್ಕಾರವು ಫಲಾನುಭವಿಗಳ ಪಟ್ಟಿಯನ್ನು ಕೇಂದ್ರಕ್ಕೆ ಇನ್ನೂ ಸಲ್ಲಿಸಿಲ್ಲ. ಹಾಗಾಗಿ, ಅಲ್ಲಿ ಯೋಜನೆ ಜಾರಿ ವಿಳಂಬವಾಗಿದೆ.
8.3 ಕೋಟಿ ರೈತರಿಗೆ ಮಾತ್ರ ಈವರೆಗೆ ನೆರವು ತಲುಪಿಸಲು ಸಾಧ್ಯವಾಗಿದೆ. ಎಲ್ಲ ರೈತರಿಗೆ ಯೋಜನೆಯ ಫಲ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.