ಬಾಲಕರ ಉಡುಪಿನಲ್ಲಿ ಬಾಲಕಿಯರು!

ಮಂಗಳವಾರ, ಏಪ್ರಿಲ್ 23, 2019
31 °C
ಕಾಮುಕರಿಂದ ರಕ್ಷಣೆಗೆ ಹೊಸ ತಂತ್ರದ ಮೊರೆ

ಬಾಲಕರ ಉಡುಪಿನಲ್ಲಿ ಬಾಲಕಿಯರು!

Published:
Updated:
Prajavani

ಕೊಲ್ಲಂ: ದಕ್ಷಿಣ ಕೇರಳದ ಕೊಲ್ಲಂ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ನೀವು ಹೋದರೆ, ಕೊರವ ಕುಟುಂಬಕ್ಕೆ ಸೇರಿದ ಹತ್ತು ವರ್ಷದ ಮಕ್ಕಳು ಆಡುತ್ತಿರುವುದು ನಿಮ್ಮ ಕಣ್ಣಿಗೆ ಬೀಳುತ್ತದೆ. ಪ್ಯಾಂಟು, ಜೀನ್ಸ್‌ ಪ್ಯಾಂಟು, ಶರ್ಟ್‌, ಚಡ್ಡಿಯನ್ನು ತೊಟ್ಟಿರುತ್ತಾರೆ. ಅವರ ಬಟ್ಟೆ, ಕೇಶವಿನ್ಯಾಸ ನೋಡಿ ನೀವು ಈ ಮಕ್ಕಳನ್ನು ಬಾಲಕರು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಅವರು ಬಾಲಕಿಯರು. 

ಹುಡುಗಿಯರ ರಕ್ಷಣೆಯ ಉದ್ದೇಶದಿಂದ ಅವರಿಗೆ ಬಾಲಕರ ವೇಷ ಹಾಕಿದ್ದಾರೆ ಅವರ ಪೋಷಕರು. ರಾಜಸ್ಥಾನದಿಂದ ಇಲ್ಲಿನ ಒಚಿರಾಗೆ ವಲಸೆ ಬಂದಿರುವ ಕೊರವ ಕುಟುಂಬದ ಹೆಣ್ಣುಮಕ್ಕಳು ಬಾಲಕರ ವೇಷದಲ್ಲಿ ತಿರುಗಾಡುತ್ತಿದ್ದಾರೆ. 

ಯುವಕನೊಬ್ಬ ಈ ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸಿ,15 ವರ್ಷದ ಬಾಲಕಿಯನ್ನು ಅಪಹರಿಸಿದ್ದರಿಂದ ಈ ಕುಟುಂಬ ಇತ್ತೀಚೆಗೆ ಸುದ್ದಿಯಲ್ಲಿತ್ತು. ಆ ಯುವಕ ಸ್ಥಳೀಯ ಸಿಪಿಎಂ ನಾಯಕನ ಮಗನಾಗಿದ್ದರಿಂದ ಈ ಘಟನೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಗಲಾಟೆ ಮಾಡಿದ್ದವು. ಪ್ರತಿಭಟನೆಯನ್ನೂ ನಡೆಸಿದ್ದವು. 

ಆದರೆ, ಯುವಕ ಮತ್ತು ಆ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವದಂತಿಯೂ ಹಬ್ಬಿತ್ತು. 

ಬಾಲಕಿ ಮತ್ತು ಯುವಕನನ್ನು ಪೊಲೀಸರು ಇನ್ನೂ ಪತ್ತೆಹಚ್ಚಿಲ್ಲ. ಇವರಿಗಾಗಿ ಕರ್ನಾಟಕ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿರುವ ಗೊಂಬೆಗಳನ್ನು ಮಾರಾಟ ಮಾಡುವ ಈ ಕುಟುಂಬದಲ್ಲಿ ಪತಿ, ಪತ್ನಿ ಮತ್ತು ಏಳು ಮಕ್ಕಳು ಇವೆ. ಈ ಪೈಕಿ ಐವರು 5ರಿಂದ 15ವರ್ಷದ ಹೆಣ್ಣುಮಕ್ಕಳಿದ್ದಾರೆ. ಮೂರು ವರ್ಷಗಳಿಂದ ಈ ಕುಟುಂಬ ಒಚಿರಾದಲ್ಲಿ ವಾಸವಿದೆ. 

‘ಯುವಕರಿಂದ ಮಕ್ಕಳನ್ನು ರಕ್ಷಿಸಲು ಹೀಗೆ ಬಾಲಕರ ಉಡುಪನ್ನು ಹಾಕಲಾಗಿದೆ. ರಸ್ತೆ ಬದಿ ಗೊಂಬೆಗಳನ್ನು ಮಾರಾಟ ಮಾಡುವಾಗ ಈ ಮಕ್ಕಳು ಅಪ್ಪನಿಗೆ ನೆರವು ನೀಡುತ್ತವೆ’ ಎಂದು ಸರ್ಕಾರಿ ನೌಕರರೊಬ್ಬರು ಹೇಳಿದ್ದಾರೆ. 

ಯುವಕರು ಚುಡಾಯಿಸುವುದರಿಂದ ತಪ್ಪಿಸಿಕೊಳ್ಳಲು ಮಕ್ಕಳಿಗೆ ಬಾಲಕರ ಉಡುಪು ಹಾಕಿಸುವಂತೆ ಸ್ಥಳೀಯ ಪೊಲೀಸರೇ ಸಲಹೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags: 

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !