ರಾಜಕೀಯದಲ್ಲೊಂದು ಎಲ್ಲೆ ಮೀರಿದ ಸ್ನೇಹ

7

ರಾಜಕೀಯದಲ್ಲೊಂದು ಎಲ್ಲೆ ಮೀರಿದ ಸ್ನೇಹ

Published:
Updated:

ಬೆಂಗಳೂರು: ‘ನನ್ನ ರಾಜಕೀಯ ಜೀವನದ ಅವಿಭಾಜ್ಯ ಅಂಗ ಅಟಲ್ ಬಿಹಾರಿ ವಾಜಪೇಯಿ. ವಾಜಪೇಯಿ ಅವರು ಐವತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಪಕ್ಷದಲ್ಲಿ ನನ್ನ ಆತ್ಮೀಯರಾಗಿದ್ದಾರೆ. ಅವರ ನಾಯಕತ್ವವನ್ನು ನಾನು ಎಲ್ಲ ಸಂದರ್ಭಗಳಲ್ಲೂ ಹಿಂದೆಮುಂದೆ ಯೋಚಿಸದೆ ಒಪ್ಪಿಕೊಂಡಿದ್ದೇನೆ...’

ವಾಜಪೇಯಿ ಕುರಿತು ಇಷ್ಟು ಆತ್ಮೀಯ ಮಾತುಗಳನ್ನು ಆಡಿದ ರಾಜಕೀಯ ವ್ಯಕ್ತಿ ಯಾರಿರಬಹುದು ಎಂದು ಹೆಚ್ಚು ಚಿಂತಿಸಬೇಕಾದ ಅಗತ್ಯ ಇಲ್ಲ. ವಾಜಪೇಯಿ ಅವರ ಶಾಶ್ವತ ಮಿತ್ರ ಎಲ್.ಕೆ. ಅಡ್ವಾಣಿ ಮಾತ್ರ ಹೀಗೆ ಹೇಳಬಲ್ಲರು. ವಾಜಪೇಯಿ ತಮ್ಮ ಜೀವನದಲ್ಲಿ ಅದೆಷ್ಟು ಮಹತ್ವದ ವ್ಯಕ್ತಿ ಎಂಬುದನ್ನು ವಿವರಿಸಲು ಅಡ್ವಾಣಿ ಅವರು ತಮ್ಮ ಜೀವನ ಚರಿತ್ರೆ ‘ಮೈ ಕಂಟ್ರಿ ಮೈ ಲೈಫ್‌’ನಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ. ವಾಜಪೇಯಿ ಅವರನ್ನು ತಾವು ವ್ಯಕ್ತಿಗತವಾಗಿ ಗ್ರಹಿಸಿದ ಬಗೆ ಹೇಗೆ ಎಂಬುದರಿಂದ ಆರಂಭಿಸಿ, ವಾಜಪೇಯಿ ಮೇಲೆ ಪ್ರಭಾವ ಬೀರಿದ ತಮ್ಮ ಕೆಲವು ರಾಜಕೀಯ ತೀರ್ಮಾನಗಳವರೆಗೆ ಅಡ್ವಾಣಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

1995ರಲ್ಲಿ ಮುಂಬೈನಲ್ಲಿ ನಡೆದ ಪಕ್ಷದ ಮಹಾ ಅಧಿವೇಶನದಲ್ಲಿ ಅಡ್ವಾಣಿ ಅವರು ‘ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ವಾಜಪೇಯಿ ಆಗಿರುತ್ತಾರೆ’ ಎಂದು ಘೋಷಿಸಿದರು. ಆಗ ಅಡ್ವಾಣಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆಗಿದ್ದರು. ಈ ಪ್ರಸಂಗದ ಬಗ್ಗೆ ಅಡ್ವಾಣಿ ವಿವರವಾಗಿ ಬರೆದಿದ್ದಾರೆ.

‘ನಾನು ಆ ಘೋಷಣೆಯನ್ನು ಏಕೆ ಮಾಡಿದೆ?’ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಕೆಲವು ವಿವರಗಳನ್ನು ಬರೆದಿದ್ದಾರೆ. ‘ಪಕ್ಷಕ್ಕೆ ಜನಾದೇಶ ದೊರೆತರೆ ಸರ್ಕಾರವನ್ನು ಮುನ್ನಡೆಸಲು ನೀವು (ಅಡ್ವಾಣಿ) ಸೂಕ್ತ ವ್ಯಕ್ತಿ ಎಂದು ಹಲವರು ಹೇಳಿದ್ದಾರೆ. ಆದರೆ, ಅವರ ಆ ಅಭಿಪ್ರಾಯವನ್ನು ನಾನು ಒಪ್ಪಲಾರೆ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಜನರ ದೃಷ್ಟಿಯಲ್ಲಿ ನಾನು ಜನನಾಯಕನಿಗಿಂತ ಹೆಚ್ಚಾಗಿ ಚಿಂತಕನಂತೆ ಕಾಣಿಸುತ್ತೇನೆ. ಅಯೋಧ್ಯೆ ಚಳವಳಿಯು ಭಾರತದ ರಾಜಕೀಯದಲ್ಲಿ ನನ್ನ ಕುರಿತ ಚಿತ್ರಣವನ್ನು ಬದಲಿಸಿದೆ ಎಂಬುದು ನಿಜ. ಆದರೆ, ಅಟಲ್‌ಜಿ ನಮ್ಮ ನಾಯಕ. ಜನಸಮೂಹದ ನಡುವೆ ಹೆಚ್ಚಿನ ಸ್ವೀಕಾರವನ್ನೂ ಉನ್ನತವಾದ ಸ್ಥಾನವನ್ನೂ ಅವರು ಹೊಂದಿದ್ದಾರೆ’ ಎಂದು ಅಡ್ವಾಣಿ ತಮ್ಮ ಗೆಳೆಯನ ಬಗ್ಗೆ ಹೇಳಿದ್ದಾರೆ.

ಮತ್ತೂ ಮುಂದುವರೆದು ಅಡ್ವಾಣಿ ಅವರು, ‘ಬಿಜೆಪಿಗೆ ಇರುವ ಸಾಂಪ್ರದಾಯಿಕ ಸೈದ್ಧಾಂತಿಕ ಬೆಂಬಲಿಗರನ್ನೂ ಮೀರುವ ಆಕರ್ಷಕ ವ್ಯಕ್ತಿತ್ವ ಅವರಿಗೆ ಇದೆ. ಅವರು ಬಿಜೆಪಿಯ ಮಿತ್ರಪಕ್ಷಗಳಿಗೆ ಒಪ್ಪಿಗೆಯಾಗುತ್ತಾರೆ. ಅಷ್ಟೇ ಅಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ವಾಜಪೇಯಿ ಅವರು ದೇಶದ ಜನರಿಗೆ ಒಪ್ಪಿತರಾಗುವ ವ್ಯಕ್ತಿ.’

ವಾಜಪೇಯಿ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅಡ್ವಾಣಿ ಅವರು ಬಹುದೊಡ್ಡ ತ್ಯಾಗ ಮಾಡಿದ್ದಾರೆ ಎಂದು ಕೆಲವರು ಹೇಳಿದರು. ಈ ಮಾತನ್ನು ಕೂಡ ಅಡ್ವಾಣಿ ಅವರು ನಿರಾಕರಿಸಿಬಿಟ್ಟರು. ‘ನಾನು ಮಾಡಿರುವುದು ತ್ಯಾಗವಲ್ಲ. ಪಕ್ಷ ಹಾಗೂ ರಾಷ್ಟ್ರಕ್ಕೆ ಯಾವುದು ಒಳಿತು ಎಂಬುದನ್ನು ಆಲೋಚಿಸಿದ್ದರ ಪರಿಣಾಮ ಈ ತೀರ್ಮಾನ’ ಎಂದು ದೃಢ ದನಿಯಲ್ಲಿ ಹೇಳಿದರು ಅಡ್ವಾಣಿ. ಬಹುಶಃ, ರಾಜಕೀಯದಲ್ಲಿ ಒಬ್ಬ ಜೀವದ ಗೆಳೆಯ ಮಾತ್ರ ಇಂತಹ ಮಾತು ಹೇಳಬಲ್ಲನೇನೋ.

‘ಹವಾಲಾ ಪ್ರಕರಣ’ದಲ್ಲಿ ಅಡ್ವಾಣಿ ಅವರ ಹೆಸರು ಕೇಳಿ ಬಂದಾಗ, ‘ನ್ಯಾಯಾಂಗ ನನ್ನನ್ನು ನಿರ್ದೋಷಿ ಎಂದು ಹೇಳುವವರೆಗೂ ನಾನು ಲೋಕಸಭೆಯನ್ನು ಪ್ರವೇಶಿಸುವುದಿಲ್ಲ’ ಎಂದು ಅಡ್ವಾಣಿ ಘೋಷಿಸಿದರು. ಹಾಗಾಗಿ 1996ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಗಾಂಧಿನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿಲ್ಲ. ಅಡ್ವಾಣಿ ಅವರ ಪಾಲಿಗೆ ಮನೆಯಂತೆ ಆಗಿರುವ ಗಾಂಧಿನಗರ ಕ್ಷೇತ್ರದಲ್ಲಿ ಆಗ ಸ್ಪರ್ಧಿಸಿದ್ದು ವಾಜಪೇಯಿ!

‘ಅಟಲ್‌ಜಿ ಜೊತೆಗಿನ ನಿಮ್ಮ ಸ್ನೇಹ ಇಷ್ಟು ವರ್ಷ ಬಾಳಿದ್ದು ಹೇಗೆ? ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿರಲೇ ಇಲ್ಲವೇ’ ಎಂದು ಹಲವರು ಅಡ್ವಾಣಿ ಅವರನ್ನು ಪ್ರಶ್ನಿಸಿದ್ದಾರೆ. ‘ನನ್ನ ಹಾಗೂ ಅಟಲ್‌ ನಡುವಣ ಸಂಬಂಧದಲ್ಲಿ ಸ್ಪರ್ಧೆ ಇರಲಿಲ್ಲ. ಆದರೆ, ನಮ್ಮಿಬ್ಬರ ವ್ಯಕ್ತಿತ್ವ ಬೇರೆ ಬೇರೆ ಆಗಿರುವ ಕಾರಣ, ಅಭಿಪ್ರಾಯ ಭೇದ ಖಂಡಿತ ಇತ್ತು. ಹೀಗಿದ್ದರೂ ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂಬ ತತ್ವದಲ್ಲಿನ ನಂಬಿಕೆ ನಮ್ಮ ಬಾಂಧವ್ಯಕ್ಕೆ ಗಟ್ಟಿತನ ಕೊಟ್ಟಿತು. ಅಭಿಪ್ರಾಯ ಭೇದಗಳು ಪರಸ್ಪರ ನಂಬಿಕೆ ಹಾಗೂ ಗೌರವವನ್ನು ಹಾಳುಮಾಡಲು ಅವಕಾಶ ಕೊಡಲಿಲ್ಲ. ಇವುಗಳಿಗಿಂತ ಮುಖ್ಯವಾಗಿ, ನಾನು ಅಟಲ್‌ಜಿ ಅವರನ್ನು ನನ್ನ ಪಾಲಿನ ಹಿರಿಯನನ್ನಾಗಿ, ನನ್ನ ನಾಯಕನನ್ನಾಗಿ ಪ್ರಶ್ನಿಸದೇ ಒಪ್ಪಿಕೊಂಡಿದ್ದೆ’ ಎಂದು ಅಡ್ವಾಣಿ ಬರೆದಿದ್ದಾರೆ.

ಅಡ್ವಾಣಿ ಅವರ ಅಭಿಲಾಷೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಅಟಲ್‌ ಅವರಲ್ಲೂ ಇತ್ತು. ಯಾವುದಾದರೂ ವಿಚಾರದಲ್ಲಿ ಅಡ್ವಾಣಿ ಅವರ ಆಲೋಚನೆಗಳು ಏನು ಎಂಬುದು ವಾಜಪೇಯಿ ಅವರಿಗೆ ಅರ್ಥವಾದಾಗ, ಆ ವಿಚಾರದಲ್ಲಿ ವಾಜಪೇಯಿ ಅವರಿಗೆ ಗಂಭೀರ ತಕರಾರುಗಳು ಇಲ್ಲದಿದ್ದರೆ, ‘ಜೊ ಅಡ್ವಾಣಿಜಿ ಕೆಹ್ತೆ ಹೈ ವೊ ಠೀಕ್‌ ಹೈ’ (ಅಡ್ವಾಣಿ ಅವರು ಹೇಳುತ್ತಿರುವುದು ಸರಿ ಇದೆ) ಎನ್ನುತ್ತಿದ್ದರು ವಾಜಪೇಯಿ.

ಅಡ್ವಾಣಿ ಮತ್ತು ಅಟಲ್ ಪರಸ್ಪರ ಮೊದಲ ಬಾರಿಗೆ ಭೇಟಿ ಆಗಿದ್ದು 1952ರಲ್ಲಿ. ಅದಾದ ನಂತರ ಅವರು ಭಾರತದ ರಾಜಕೀಯದಲ್ಲಿ ಎಲ್ಲೆಗಳನ್ನು ಮೀರಿದ ಗೆಳೆತನಕ್ಕೆ ಸಾಕ್ಷಿಯಾಗಿ ನಿಂತರು. ಇಬ್ಬರೂ ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು, ಒಟ್ಟಿಗೆ ಪಕ್ಷಕ್ಕಾಗಿ ಕೆಲಸ ಮಾಡಿದರು, ತುರ್ತು ಪರಿಸ್ಥಿತಿ ಘೋಷಣೆಯಾದಾಗ ಇಬ್ಬರೂ ಜೈಲಿಗೆ ಹೋದರು, ಜನತಾ ಪಕ್ಷದ ಸರ್ಕಾರ ರಚನೆಯಾದಾಗ ಇಬ್ಬರೂ ಕೇಂದ್ರದಲ್ಲಿ ಸಚಿವರಾದರು, ಎನ್‌ಡಿಎ ಮೈತ್ರಿಕೂಟ ರಚಿಸಲು ಇಬ್ಬರೂ ಜೊತೆಯಾಗಿ ಕೆಲಸ ಮಾಡಿದರು... ರಾಜಕೀಯದಲ್ಲಿ ಇಂಥದ್ದೊಂದು ಸ್ನೇಹ ಅಪರೂಪದ್ದಲ್ಲವೇ?

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !