ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾಯ್ದೆ ಅಮಾನತು ವಿರುದ್ಧ ಐಎಲ್‌ಒಗೆ ಪತ್ರ

Last Updated 25 ಮೇ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ರಾಜ್ಯಗಳು ಕಾರ್ಮಿಕ ಕಾಯ್ದೆಯನ್ನು ಅಮಾನತಿನಲ್ಲಿ ಇರಿಸಿವೆ. ಈ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ‘ಪ್ರಬಲ ಮತ್ತು ಪರಿಣಾಮಕಾರಿ’ ಒತ್ತಡ ಹೇರಬೇಕು ಎಂದು ಕೋರಿ ಹತ್ತು ಕಾರ್ಮಿಕ ಸಂಘಟನೆಗಳು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ (ಐಎಲ್‌ಒ) ಸೋಮವಾರ ಪತ್ರ ಬರೆದಿವೆ.

ಇದು ಐಎಲ್‌ಒಗೆ ಈ ವಿಚಾರದಲ್ಲಿ ಕಳುಹಿಸಲಾದ ಎರಡನೇ ಪತ್ರ. 11 ದಿನಗಳ ಹಿಂದೆ ಮೊದಲ ಪತ್ರ ಬರೆಯಲಾಗಿತ್ತು. ಐಎಲ್‌ಒದ ಗುರಿ ಮತ್ತು ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದ ಹಲವು ನಿದರ್ಶನಗಳು ಇವೆ. ಐಎಲ್‌ಒ ನಿಯಮಗಳಿಗೆ ಭಾರತವು ಬದ್ಧವಾಗಿರಬೇಕಿಲ್ಲ ಎಂಬುದು ಇದಕ್ಕೆ ಕಾರಣ ಎಂದು ಮೊದಲ ಪತ್ರದಲ್ಲಿ ಹೇಳಲಾಗಿತ್ತು.

‘ಕಾರ್ಮಿಕ ಕಾನೂನು ಸುಧಾರಣೆಗಳು ಎಂದು ಹೇಳಿಕೊಂಡು ರಾಜ್ಯ ಸರ್ಕಾರಗಳು ತರುತ್ತಿರುವ ಬದಲಾವಣೆಗಳಿಗೆ ಕೇಂದ್ರ ಪ್ರತಿರೋಧ ತೋರುತ್ತಿಲ್ಲ ಬದಲಿಗೆ ಸಮ್ಮತಿಯೇ ಇದೆ ಎಂದು ಭಾವಿಸಲು ಸ್ಪಷ್ಟ ಕಾರಣಗಳಿವೆ. ಹಾಗಾಗಿಯೇ, ಕಾರ್ಮಿಕರ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಸಲು ರಾಜ್ಯಗಳು ಮುಂದಾಗಿವೆ’ ಎಂದು ಎರಡನೇ ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಕೋವಿಡ್‌ 19ಕ್ಕೆ ಸಂಬಂಧಿಸಿದ ಲಾಕ್‌ಡೌನ್‌ ಜಾರಿಯಲ್ಲಿರುವಾಗಲೇ ದುರುದ್ದೇಶದ ಕ್ರಮಗಳನ್ನು ರಾಜ್ಯಗಳು ಕೈಗೊಂಡಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಪ್ರತಿರೋಧ ತೋರುವುದು ಕೂಡ ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇಂಟಕ್‌, ಎಐಟಿಯುಸಿ, ಎಚ್‌ಎಂಎಸ್‌, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್‌ ಮತ್ತು ಯುಟಿಯುಸಿ ಕಾರ್ಮಿಕ ಸಂಘಟನೆಗಳು ಈ ಪತ್ರ ಬರೆದಿವೆ.

ಕಾರ್ಮಿಕ ಕಾಯ್ದೆಗಳನ್ನು ಅಮಾನತು ಮಾಡುವ ರಾಜ್ಯಗಳ ನಿರ್ಧಾರಕ್ಕೆ ಕೇಂದ್ರ ಬೆಂಬಲ ನೀಡುತ್ತಿರುವುದು ದುರದೃಷ್ಟಕರ. ಈಗಿನ ಬದಲಾವಣೆಯು ಉದ್ಯೋಗದಾತರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಕಾರ್ಮಿಕರನ್ನು ತಮಗೆ ಬೇಕಾದಂತೆ ಬಳಸಿಕೊಂಡು, ಬಳಿಕ ಮನೆಗೆ ಕಳುಹಿಸಲು ಅವಕಾಶ ದೊರೆತಿದೆ. ಕಾರ್ಮಿಕರ ಚೌಕಾಸಿ ಹಕ್ಕು ಮೊಟಕಾಗಿದೆ ಮತ್ತು ವೃತ್ತಿ ಸುರಕ್ಷತೆಯ ಹಕ್ಕಿನಿಂದ ಕೂಡ ಅವರು ವಂಚಿತರಾಗಿದ್ದಾರೆ ಎಂದು ಕಾರ್ಮಿಕರ ಸಂಘಟನೆಗಳು ಹೇಳಿವೆ.

ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಕೆಲಸದ ಅವಧಿ ಹೆಚ್ಚಿಸುವ ಅವಕಾಶವನ್ನು ನೀಡಲಾಗಿದೆ. ಕಾರ್ಮಿಕರು ಸಂಘಟನೆ ಕಟ್ಟಿಕೊಳ್ಳುವ ಹಕ್ಕನ್ನೂ ಕೆಲವು ರಾಜ್ಯಗಳಲ್ಲಿ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT