ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಹಗರಣ: ಜೇಟ್ಲಿ ನೆರವು ಕೇಳಿದ್ದ ಲಾಲು

ಮಹಾಂಮೈತ್ರಿ ಸರ್ಕಾರ ಉರುಳಿಸಲು ಆರ್‌ಜೆಡಿ ಮುಖ್ಯಸ್ಥ ಸಿದ್ಧವಾಗಿದ್ದರು: ಸುಶೀಲ್‌ ಕುಮಾರ್‌ ಆರೋಪ
Last Updated 17 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಪಟ್ನಾ: ‘ತಮ್ಮ ವಿರುದ್ಧದ ಮೇವು ಹಗರಣವನ್ನು ದುರ್ಬಲಗೊಳಿಸಲು ಸಹಕಾರ ನೀಡಿದರೆ ಬಿಹಾರದ ಮೈತ್ರಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರ ಸ್ಥಾಪನೆಗೆ ನೆರವಾಗುತ್ತೇನೆ ಎಂದು ಲಾಲು ಪ್ರಸಾದ್‌ ಅವರು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಮುಂದೆ ಪ್ರಸ್ತಾವ ಇಟ್ಟಿದ್ದರು’ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಈ ವಿಚಾರವನ್ನು ತಿಳಿಸಿದ ಅವರು, ‘ಲಾಲು ಅವರು ಕೇಂದ್ರದ ಮಾಜಿ ಸಚಿವರಾಗಿದ್ದ ಪ್ರೇಮ್‌ ಚಂದ್‌ ಗುಪ್ತಾ ಅವರನ್ನು ತಮ್ಮ ಪ್ರತಿನಿಧಿಯಾಗಿ ಅರುಣ್‌ ಜೇಟ್ಲಿ ಬಳಿಗೆ ಮಾತುಕತೆಗೆ ಕಳುಹಿಸಿದ್ದರು. ಗುಪ್ತಾ ಅವರು ಮೂರರಿಂದ ನಾಲ್ಕು ಬಾರಿ ಜೇಟ್ಲಿ ಅವರನ್ನು ಭೇಟಿಯಾಗಿದ್ದರು. ಆದರೆ ಈ ಪ್ರಸ್ತಾವವನ್ನು ತಳ್ಳಿಹಾಕಿದ್ದ ಜೇಟ್ಲಿ, ‘ಸಿಬಿಐ ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ಕೆಲಸ ಕಾರ್ಯಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಮಧ್ಯವರ್ತಿಯ ಮೂಲಕ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾದ ನಂತರ ಲಾಲು ಸ್ವತಃ ಜೇಟ್ಲಿ ಅವರಿಗೆ ಕರೆಮಾಡಿ ಮಾತನಾಡಿದ್ದರು. ಆಗಲೂ ಜೇಟ್ಲಿ ಅವರು, ‘ಭ್ರಷ್ಟಾಚಾರ ಆರೋಪಿಗಳಿಗೆ ನೆರವಾಗಬಾರದು ಎಂಬುದು ಬಿಜೆಪಿ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ನೀತಿ’ ಎಂದು ಸ್ಪಷ್ಟವಾಗಿ ಹೇಳಿದ್ದರು’ ಎಂದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಯಾವಾಗಲೂ ವಿಷ ಕಾರುವ ಲಾಲು, ಸ್ವಾರ್ಥಕ್ಕಾಗಿ ನಮ್ಮ ಸಹಕಾರ ಕೇಳಲು ಹಿಂಜರಿಯುವುದಿಲ್ಲ. ಒಂದೆಡೆ ನಿತೀಶ್‌ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದ ಲಾಲು, ಇನ್ನೊಂದು ಕಡೆ ಅವರ ಸರ್ಕಾರವನ್ನು ಉರುಳಿಸಲು ಸಿದ್ಧವಾಗಿದ್ದರು. ಈ ವಿಚಾರವನ್ನು ಸ್ವತಃ ಲಾಲು ಅವರೇ ಅನೇಕ ಸಲ ನನ್ನ ಬಳಿ ಹೇಳಿಕೊಂಡಿದ್ದರು. ಲಾಲು ಅವರ ಪ್ರತಿನಿಧಿಯಾಗಿದ್ದ ಗುಪ್ತಾ, ಅರುಣ್‌ ಜೇಟ್ಲಿ ಹಾಗೂ ಆಗ ಬಿಜೆಪಿಯಲ್ಲಿದ್ದು, ಈಗ ನಿತೀಶ್‌ ಅವರ ಆಪ್ತರಾಗಿರುವ ಸಂಜಯ್‌ ಝಾ ಅವರೂ ನನ್ನ ಬಳಿ ಇದನ್ನು ಹೇಳಿದ್ದಾರೆ’ ಎಂದು ಮೋದಿ ತಿಳಿಸಿದರು.

ಸುಶೀಲ್‌ ಕುಮಾರ್‌ ಮೋದಿ ಅವರ ಈ ಆರೋಪವನ್ನು ಲಾಲು ಅವರ ಪುತ್ರ ತೇಜಸ್ವಿ ಯಾದವ್‌ ತಳ್ಳಿಹಾಕಿದ್ದು, ‘ನಾವು ಯಾವತ್ತೂ ಬಿಜೆಪಿ ಸಹಕಾರವನ್ನು ಕೋರಿಲ್ಲ. ಬಿಜೆಪಿಯ ಕೋಮುವಾದಿ ರಾಜಕಾರಣದ ವಿರುದ್ಧ ನಾವು ನಿರ್ಭಯವಾಗಿ ಹೋರಾಡುತ್ತ ಬಂದಿದ್ದೇವೆ. ಲಾಲು ಅವರು ಅಡ್ವಾಣಿ ಅವರ ರಥಯಾತ್ರೆಯನ್ನೇ ತಡೆದಿದ್ದರು. ಚುನಾವಣೆಯಲ್ಲಿ ಸೋಲಾಗುವ ಭಯದಿಂದ ಬಿಜೆಪಿ ನಾಯಕರು ಇಂಥ ಹೇಳಿಕೆ ಕೊಡಲು ಆರಂಭಿಸಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮೋದಿ ಅಲೆಯಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು 2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಎದುರಿಸಿ, ಬಿಜೆಪಿಯ ಓಟಕ್ಕೆ ತಡೆ ಒಡ್ಡಿ ಬಿಹಾರದಲ್ಲಿ ಮೈತ್ರಿ ಸರ್ಕಾರ ಸ್ಥಾಪಿಸಿದ್ದವು. 2017ರವರೆಗೂ ಈ ಸರ್ಕಾರ ಅಸ್ತಿತ್ವದಲ್ಲಿತ್ತು. 2017ರಲ್ಲಿ ನಿತೀಶ್‌ ಕುಮಾರ್‌ ಅವರು ಈ ಮೈತ್ರಿಯನ್ನು ಮುರಿದು ಮತ್ತೆ ಎನ್‌ಡಿಎ ಒಳಗೆ ಸೇರಿಕೊಂಡಿದ್ದರು.

***

ಕೇಂದ್ರ ಒಪ್ಪಿಗೆ ಕೊಟ್ಟರೆ 24 ಗಂಟೆಗಳೊಳಗೆ ಬಿಹಾರದ ಮಹಾಮೈತ್ರಿ ಸರ್ಕಾರವನ್ನು ಉರುಳಿಸುವ ಭರವಸೆಯನ್ನು ಲಾಲು ಕೊಟ್ಟಿದ್ದುದು ನಿಜ

– ಸಂಜಯ್‌ ಝಾ, ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT