ಕಾರ್ಮಿಕರ ಜೀವ ಉಳಿಸಿದ ಊಟ!

7
ಸಾವಿನ ದವಡೆಯಿಂದ ಪಾರಾದ ಅದೃಷ್ಟವಂತರು

ಕಾರ್ಮಿಕರ ಜೀವ ಉಳಿಸಿದ ಊಟ!

Published:
Updated:

ಮುಂಬೈ: ಘಾಟ್‌ಕೋಪರ್‌ನ ನಿರ್ಮಾಣ ಹಂತದ ಕಟ್ಟಡಕ್ಕೆ ಗುರುವಾರ ವಿಮಾನ ಅಪ್ಪಳಿಸುವ ಕೆಲವೇ ನಿಮಿಷಗಳ ಮೊದಲು ಅಲ್ಲಿದ್ದ ಕೂಲಿಕಾರ್ಮಿಕರು ಊಟಕ್ಕೆ ತೆರಳಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಬೀಚ್‌ಕ್ರಾಫ್ಟ್‌ ಕಿಂಗ್‌ ಏರ್‌ ಸಿ–90 ಎಂಬ ಖಾಸಗಿ ವಿಮಾನ ಮಧ್ಯಾಹ್ನ 1.11ಕ್ಕೆ ಅಪ್ಪಳಿಸಿದಾಗ ಅಲ್ಲಿ ಕೆಲಸ ಮಾಡುತ್ತಿದ್ದ 50 ಕೂಲಿಕಾರ್ಮಿಕರು ಊಟಕ್ಕೆ ತೆರಳಿದ್ದರು. 

‘ಊಟಕ್ಕೆ ಕುಳಿತ ಕೆಲ ನಿಮಿಷದಲ್ಲಿ ಬೆಂಕಿಯುಂಡೆ ಚಿಮ್ಮಿ ಬಂದವು. ಭಾರಿ ಸದ್ದಿನೊಂದಿಗೆ ವಿಮಾನ ಅಪ್ಪಳಿಸಿತು. ದಟ್ಟ ಹೊಗೆ, ಬೆಂಕಿ ಆವರಿಸಿತು’ ಎಂದು ಕಾರ್ಮಿಕರು ಅನುಭವ ಹಂಚಿಕೊಂಡಿದ್ದಾರೆ.

‘ತುಂತುರು ಮಳೆ ಕಾರಣ ಊಟಕ್ಕಾಗಿ ಮತ್ತೊಂದು ಕಟ್ಟಡಕ್ಕೆ ತೆರಳಿದೆವು. ಇಲ್ಲದಿದ್ದರೆ ಅದೇ ಜಾಗದಲ್ಲಿ ಊಟಕ್ಕೆ ಕೂರುತ್ತಿದ್ದೆವು’ ಎಂದು ಕಾರ್ಮಿಕರು ಹೇಳಿದ್ದಾರೆ.

‘ಅಪಘಾತ ಸ್ಥಳದ ಅಕ್ಕಪಕ್ಕದಲ್ಲಿಯೇ ಸಾಕಷ್ಟು ಬಹುಮಹಡಿ ಕಟ್ಟಡಗಳು, ಜನವಸತಿ ಪ್ರದೇಶಗಳಿವೆ. ಒಂದು ವೇಳೆ ವಿಮಾನ ಅಲ್ಲಿ ಪತನವಾಗಿದ್ದರೆ... ಅದನ್ನು ಊಹಿಸಿಕೊಳ್ಳುವುದು ಕಷ್ಟ’ ಎಂದು ಪೊಲೀಸರು ಹೇಳಿದ್ದಾರೆ.

ಕೆಟ್ಟಿದ್ದ ವಿಮಾನ!

* ಉತ್ತರ ಪ್ರದೇಶದಲ್ಲಿ 2009–10ರಲ್ಲಿ ಸಂಭವಿಸಿದ ಅಪಘಾತದ ನಂತರ ವಿಮಾನ ಐದು ವರ್ಷ ಹಾರಾಟ ನಡೆಸಿರಲಿಲ್ಲ

* 2015ರಲ್ಲಿ ಆ ವಿಮಾನವನ್ನು ಮುಂಬೈನ ಯು.ವೈ ಏವಿಯೇಷನ್‌ ಎಂಬ ಖಾಸಗಿ ವಿಮಾನಯಾನ ಸಂಸ್ಥೆ ಖರೀದಿಸಿತ್ತು

* 22 ವರ್ಷಗಳ ಹಳೆಯ ವಿಮಾನದ ದುರಸ್ತಿಗೆ ಕಂಪನಿ ₹8 ಕೋಟಿ ವೆಚ್ಚ ಮಾಡಿತ್ತು.

ವಿಮಾನದ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ

ಚಂಡೀಗಡ (ಪಿಟಿಐ): ‘ನಾನು ಪಯಣಿಸುತ್ತಿರುವ ವಿಮಾನದ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ’ ಎಂದು ಮುಂಬೈ ವಿಮಾನ ದುರಂತದಲ್ಲಿ ಮೃತಪಟ್ಟ ನಿರ್ವಹಣಾ ಎಂಜಿನಿಯರ್‌ ಸುರಭಿ ಗುಪ್ತಾ ಸ್ವತಃ ತನ್ನ ತಂದೆಗೆ ತಿಳಿಸಿದ್ದರು.

ಎಂದಿನಂತೆ ಗುರುವಾರ ಮುಂಜಾನೆ ಸೋನೆಪತ್‌ನಲ್ಲಿರುವ ತನ್ನ ತಂದೆಯ ಜತೆ ದೂರವಾಣಿಯಲ್ಲಿ ಮಾತನಾಡಿದ್ದ ಸುರಭಿ ಆತಂಕ ವ್ಯಕ್ತಪಡಿಸಿದ್ದರು.

ಕೊನೆಯ ಬಾರಿಗೆ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಸುರಭಿ, ತಾನು ಪ್ರಯಾಣಿಸಲಿರುವ ವಿಮಾನ ಸುಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದ್ದಳು ಎಂದು ಆಕೆಯ ತಂದೆ ಎಸ್‌.ಪಿ. ಗುಪ್ತಾ ತಿಳಿಸಿದ್ದಾರೆ.

ಸುಸ್ಥಿತಿಯಲ್ಲಿರದ ವಿಮಾನದ ಹಾರಾಟಕ್ಕೆ ಅನುಮತಿ ಕೊಟ್ಟವರು ಯಾರು. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಳೆದ ವರ್ಷವಷ್ಟೇ ಸುರಭಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಪತಿ ಕೂಡ ಪೈಲಟ್‌ ಆಗಿದ್ದಾರೆ.

‘ಉತ್ತರ ಪ್ರದೇಶದ ನಮ್ಮ ಹಳ್ಳಿಯ ಜನರು ಸುರಭಿಯನ್ನು ಗಗನಯಾತ್ರಿ ಕಲ್ಪನಾ ಚಾವ್ಲಾ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಇತ್ತೀಚೆಗಷ್ಟೇ ಆಕೆಯ ಸಾಧನೆ ಗುರುತಿಸಿ ಮಹಾರಾಷ್ಟ್ರ ಸರ್ಕಾರ ಗೌರವಿಸಿತ್ತು..’ ಎಂದಾಗ ಅವರ ಕಣ್ಣಾಲಿಗಳು ತುಂಬಿ ಬಂದವು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !