ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಚುನಾವಣೆಗೆ ಸಿದ್ಧ: ರಾವತ್‌

ನಾಲ್ಕು ರಾಜ್ಯಗಳ ವಿಧಾನಸಭೆ ಜತೆ ಲೋಕಸಭೆಗೂ ಚುನಾವಣೆ ನಡೆಸಲು ಸನ್ನದ್ಧ
Last Updated 15 ಆಗಸ್ಟ್ 2018, 19:52 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜತೆಗೆ ಲೋಕಸಭೆ ಚುನಾವಣೆಯನ್ನೂ ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ನಡೆಸುವ ಸಾಮರ್ಥ್ಯವನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ, ಛತ್ತೀಸಗಡ, ಮಿಜೋರಾಂ ಮತ್ತು ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿವೆ. ಅವಧಿಗೆ ಮುನ್ನವೇ ಲೋಕಸಭೆಗೂ ಚುನಾವಣೆ ನಡೆಸುವುದಾದರೆ ಏಕಕಾಲಕ್ಕೆ ಚುನಾವಣೆ ನಡೆಸಲು ಆಯೋಗವು ಎಲ್ಲ ರೀತಿಯಲ್ಲಿ ಸಿದ್ಧವಾಗಿದೆ ಎಂದರು.

2019ರ ಮೇ ತಿಂಗಳಲ್ಲಿ ನಡೆಯಬೇಕಾಗಿರುವ ಲೋಕಸಭಾ ಚುನಾವಣೆಯನ್ನು ಇದೇ ವರ್ಷದ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲೇ ನಡೆಸಬಹುದು ಎನ್ನುವ ಊಹಾಪೋಹಗಳಿವೆ. ಹೀಗಾಗಿ, ರಾಜಕೀಯ ವಲಯದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ನಾಲ್ಕು ವಿಧಾನಸಭೆಗಳಿಗೆ ಚುನಾವಣೆ ನಡೆಯಬಹುದು ಎನ್ನುವ ಚರ್ಚೆ ನಡೆಯುತ್ತಿದೆ.

‘ಲೋಕಸಭೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಅಗತ್ಯವಿರುವಷ್ಟು ವಿದ್ಯುನ್ಮಾನ ಮತಯಂತ್ರಗಳು ಸೆಪ್ಟೆಂಬರ್‌ ತಿಂಗಳ ಅಂತ್ಯಕ್ಕೆ ಸಿದ್ಧವಾಗಲಿವೆ. ನವೆಂಬರ್‌ ತಿಂಗಳ ಅಂತ್ಯಕ್ಕೆ 17.5 ಲಕ್ಷ ವಿವಿಪ್ಯಾಟ್‌ಗಳು ಸಿದ್ಧವಾಗಲಿವೆ’ ಎಂದು ರಾವತ್‌ ತಿಳಿಸಿದ್ದಾರೆ.

’ಲೋಕಸಭೆ ಚುನಾವಣೆಯಲ್ಲಿ 10 ಲಕ್ಷ ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳು ಬೇಕಾಗುತ್ತವೆ. ನಾಲ್ಕು ರಾಜ್ಯಗಳಲ್ಲಿನ 2 ಲಕ್ಷ ಮತಗಟ್ಟೆಗಳಿಗೆ ಈ ಎರಡೂ ಉಪಕರಣ ಪೂರೈಸಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

**

ನಾಲ್ಕು ವಿಧಾನಸಭೆಗಳ ಜತೆ ಲೋಕಸಭೆಗೂ ಒಟ್ಟಿಗೆ ಚುನಾವಣೆ ನಡೆಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆಯೋಗ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ.
–ಒ.ಪಿ. ರಾವತ್‌ ,ಮುಖ್ಯ ಚುನಾವಣಾ ಆಯುಕ್ತ

**

ಕಠಿಣ ಕಾನೂನುಗಳ ಶಿಫಾರಸು ಸಾಧ್ಯತೆ

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಕಾನೂನು ಆಯೋಗ ಕಠಿಣ ಕಾನೂನುಗಳನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ. ಇದೇ ತಿಂಗಳು ಈ ಬಗ್ಗೆ ವರದಿ ನೀಡಲಿದೆ.

’ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದಕ್ಕೆ ಬೆಂಬಲ ಅಥವಾ ವಿರೋಧದ ಬಗ್ಗೆ ಅಭಿಪ್ರಾಯ ತಿಳಿಸುತ್ತಿಲ್ಲ. ಈ ಚುನಾವಣೆಗಳನ್ನು ಯಾವ ರೀತಿಯಲ್ಲಿ ನಡೆಸುವ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಅದನ್ನು ನಾವು ಮಾಡುತ್ತೇವೆ’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಂವಿಧಾನಕ್ಕೆ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಆಯೋಗ ಶಿಫಾರಸು ಮಾಡಲಿದೆ. ಆದರೆ, ಈ ಶಿಫಾರಸುಗಳನ್ನು ಸರ್ಕಾರ ಕಡ್ಡಾಯವಾಗಿ ಜಾರಿ ಮಾಡಬೇಕಾಗಿಲ್ಲ. ಆಯೋಗ ನೀಡುವ ಮಹತ್ವದ ಮಾಹಿತಿಯಿಂದ ರಾಜಕೀಯ ಪಕ್ಷಗಳು ಮತ್ತು ಸಂಘ–ಸಂಸ್ಥೆಗಳಿಗೆ ಚರ್ಚೆ ನಡೆಸಲು ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT