ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜುಗರದ ಕಾರಣ ಮನಮೋಹನ್‌ ಗೈರು

ನಯ್ಯರ್‌ ಅವರ ‘...ಫ್ರಮ್‌ ಜಿನ್ನಾ ಟು ಮೋದಿ’ ಪುಸ್ತಕ ಬಿಡುಗಡೆ
Last Updated 8 ಫೆಬ್ರುವರಿ 2019, 19:13 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರು ರಚಿಸಿರುವ ‘ಆನ್‌ ಲೀಡರ್ಸ್‌ ಅಂಡ್‌ ಐಕನ್ಸ್‌ ಫ್ರಮ್‌ ಜಿನ್ನಾ ಟು ಮೋದಿ’ ಪುಸ್ತಕವನ್ನು ಶುಕ್ರವಾರ ಸಂಜೆ ಇಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

‘ಕೇಂದ್ರ ಸರ್ಕಾರದ ಕಡತಗಳು ಪ್ರಧಾನಿ ಕಚೇರಿಯ ಬದಲಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ರವಾನೆಯಾಗುತ್ತಿದ್ದವು ಎಂಬ ಸತ್ಯಕ್ಕೆ ದೂರವಾದ ಅಂಶ ಪುಸ್ತಕದಲ್ಲಿ ಇರುವುದರಿಂದ ಮುಜುಗರ ಉಂಟಾಗಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಬರುತ್ತಿಲ್ಲ’ ಎಂದು ಪುಸ್ತಕ ಲೋಕಾರ್ಪಣೆಗೆ ಬರಬೇಕಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

‘ನನ್ನ ತಾಯಿ ಭಾರತಿ ಅವರಿಗೆ ಫೆಬ್ರುವರಿ 1ರಂದೇ ಪತ್ರ ಬರೆದಿರುವ ಮನಮೋಹನ್‌ ಸಿಂಗ್‌, ಕಾರ್ಯಕ್ರಮಕ್ಕೆ ಬರಲಾಗದು ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ನಯ್ಯರ್‌ ಅವರ ಪುತ್ರ ರಾಜೀವ್‌ ಸಮಾರಂಭದಲ್ಲಿ ಪ್ರಕಟಿಸಿದರು.

ಪುಸ್ತಕದಲ್ಲಿ ತಮಗೆ ಸಂಬಂಧಿಸಿದ ಅಧ್ಯಾಯವನ್ನು ಓದಿದ್ದಾಗಿ ತಿಳಿಸಿರುವ ಸಿಂಗ್‌, ‘ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಯ್ಯರ್‌ ಅವರು ಕಡತಗಳ ಸತ್ಯಾಸತ್ಯತೆ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ. ಮುಜುಗರ ಉಂಟಾಗಲಿದೆ ಎಂಬ ಕಾರಣದಿಂದಲೇ ನಾನು ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಅದಕ್ಕಾಗಿ ಕ್ಷಮೆ ಇರಲಿ’ ಎಂದು ಪತ್ರದಲ್ಲಿ ಹೇಳಿರುವುದಾಗಿ ರಾಜೀವ್‌ ಅವರು ತಿಳಿಸಿದರು.

‘ಸೋನಿಯಾ ಸಾಮ್ರಾಜ್ಯಕ್ಕೆ ಅನುಕೂಲಕರ ಎಂಬ ಕಾರಣದಿಂದಲೇ ಸಿಂಗ್‌ ಅವರು 10 ವರ್ಷ ಪ್ರಧಾನಿಯಾಗಿದ್ದರು. ಸರ್ಕಾರಿ ಕಡತಗಳು, ಸೋನಿಯಾ ಅವರ ಅಧಿಕೃತ ನಿವಾಸ (ನಂ. 10 ಜನಪಥ) ತಲುಪುತ್ತಿದ್ದವು. ಅಲ್ಲಿ ಅಹಮದ್‌ ಪಟೇಲ್‌ ಎಂಬ ಪ್ರತಿಭಾವಂತ ಮುಸ್ಲಿಂ ಮುಖಂಡ ಸರ್ಕಾರದ ಆಗುಹೋಗುಗಳ ಬಗ್ಗೆ ನಿತ್ಯವೂ ಸೋನಿಯಾಗೆ ವಿವರ ನೀಡುತ್ತಿದ್ದರು’ ಎಂದು ನಯ್ಯರ್ ಅವರು ತಮ್ಮ ಸಾವಿಗೆ 19 ದಿನ ಮೊದಲು ಪೂರ್ಣಗೊಳಿಸಿರುವ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇದೇ ಅಂಶವನ್ನು ಮಾಜಿ ಪ್ರಧಾನಿಯು ಸತ್ಯಕ್ಕೆ ದೂರ ಎಂದು ಕರೆದಿದ್ದಾರೆ ಎಂದು ತಿಳಿಸಿದ ರಾಜೀವ್‌, ‘ನಮ್ಮ ತಂದೆ ಹಾಗೆ ಜೀವಿಸಿದರು. ಹಾಗೆಯೇ ಬರೆದರು’ ಎಂದರು.

ಕಾರ್ಯಕ್ರಮದಲ್ಲಿದ್ದ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್‌, ಮನಮೋಹನ್‌ ಸಿಂಗ್‌ ಅಭಿಪ್ರಾಯವನ್ನು ಸಮರ್ಥಿಸಿಕೊಂಡರಲ್ಲದೆ, ‘ನಾನು ಯುಪಿಎ ಸರ್ಕಾರದಲ್ಲಿ ಸಚಿವನಾಗಿದ್ದೆ. ಆದರೆ, ಎಂದೂ ಸೋನಿಯಾ ನಿವಾಸ ಅಥವಾ ಪ್ರಧಾನಿ ಕಚೇರಿಯಿಂದ ಕಡತ ತರುವಂತೆ ಸೂಚನೆ ಬಂದಿರಲಿಲ್ಲ. ಪತ್ರಕರ್ತರಿಗೆ ಕೆಲವೊಮ್ಮೆ ದೊರೆಯುವ ಮಾಹಿತಿಗಳು ನಿಖರವಾಗಿರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಬಹುಶಃ ಸೋನಿಯಾಗೆ ಇಷ್ಟವಾಗದಿರಬಹುದು ಎಂಬ ಭಯದಿಂದಲೇ ಮನಮೋಹನ್‌ ಸಿಂಗ್‌ ಅವರು ಸಚಿವ ಸಿಬಲ್‌ ಅವರಿಗೆ ಕಡತ ತರುವಂತೆ ಸೂಚಿಸದಿರುವ ಸಾಧ್ಯತೆಗಳಿವೆ’ ಎಂದು ನಂತರ ನಡೆದ ಸಂವಾದದಲ್ಲಿ ಕೇಂದ್ರದ ಸಚಿವ ಹರದೀಪ್‌ ಸಿಂಗ್‌ ಪುರಿ ಅನಿಸಿಕೆ ವ್ಯಕ್ತಪಡಿಸಿದರು.

‘ಕುಲದೀಪ್‌ ನಯ್ಯರ್‌ ಅವರು ಭಾರತ ಕಂಡ ಪ್ರತಿಭಾವಂತ ಪತ್ರಕರ್ತ’ ಎಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯೂಯಾರ್ಕ್‌ನಿಂದ ಮಾತನಾಡಿದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶ್ಲಾಘಿಸಿದರು.

‘ಪತ್ರಕರ್ತರು ಭಾರತರತ್ನ ಪ್ರಶಸ್ತಿ ಪಡೆಯಲು ಅರ್ಹರು ಎಂದು ಒಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮನಮೋಹನ್ ಸಿಂಗ್, ಇಂದಿರಾ ಅವರನ್ನು ಟೀಕಿಸುತ್ತಿದ್ದೆ ಎಂಬ ಕಾರಣದಿಂದ ನನ್ನನ್ನು ಒಮ್ಮೆಯೂ ತಮ್ಮ ಮನೆಗೆ ಆಹ್ವಾನಿಸಲಿಲ್ಲ’ ಎಂದು ಪುಸ್ತಕದಲ್ಲಿ ಉಲ್ಲೇಖಿಸಿರುವ ನಯ್ಯರ್‌, ‘ಆಡಳಿತದ ಬಗ್ಗೆ ಸೋನಿಯಾ ಅವರಲ್ಲಿ ಸ್ವಂತ ಆಲೋಚನೆ ಇತ್ತಾದರೂ ಈ ದೇಶಕ್ಕೆ ಅಗತ್ಯವಿರುವಷ್ಟು ಇರಲಿಲ್ಲ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT