ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಮಕ್ಕಳ ರಕ್ಷಿಸಲು ಸಲಹೆ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ
Last Updated 13 ಜೂನ್ 2018, 10:09 IST
ಅಕ್ಷರ ಗಾತ್ರ

ಮೈಸೂರು: ಕಾರ್ಖಾನೆ, ಹೋಟೆಲು ಮೊದಲಾದ ಸ್ಥಳಗಳಲ್ಲಿ ಮಕ್ಕಳು ದುಡಿಯುತ್ತಿದ್ದರೆ ರಕ್ಷಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ ಸಲಹೆ ನೀಡಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದುಡಿಸುವ ಮೂಲಕ ಮಕ್ಕಳ ಶೋಷಣೆ ಹೆಚ್ಚು ನಡೆಯುತ್ತಿತ್ತು. ಈಗ ಸ್ವಲ್ಪ ಕಡಿಮೆಯಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ದುಡಿಸುವ ಹಾಗಿಲ್ಲ. 14ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ತೊಡಗಿಸಬಾರದು ಎನ್ನುವ ಕಾನೂನು ಇದೆ. ಬಾಲಕಾರ್ಮಿಕರನ್ನು ರಕ್ಷಿಸಲು ಸಾರ್ವಜನಿಕರೂ ಮುಂದಾಗಬೇಕು. ಬಾಲಕಾರ್ಮಿಕರು ಕಂಡರೆ ದೂರು ದಾಖಲಿಸಬೇಕು ಎಂದು ಕಿವಿಮಾತು ಹೇಳಿದರು.

‘ಬಡತನದ ಕಾರಣಕ್ಕೆ ತಮ್ಮ ಮಕ್ಕಳನ್ನು ದುಡಿಯಲು ಗ್ಯಾರೇಜ್‌, ಮನೆಗೆಲಸ, ಬೀಡಿ ಕಟ್ಟಲು ಕಳುಹಿಸುತ್ತಾರೆ. ಕಾಯ್ದೆ ಪ್ರಕಾರ ಹಾಗೆ ಮಾಡುವಂತಿಲ್ಲ. ಜತೆಗೆ, ಹಾಗೆ ದುಡಿಸಿಕೊಳ್ಳುವವರಿಗೆ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಲಾಗುವುದು. ಜತೆಗೆ, ದುಡಿಯಲು ಕಳುಹಿಸುವ ಹೆತ್ತವರಿಗೂ ಶಿಕ್ಷೆಯಿದೆ. ಇದಕ್ಕಾಗಿ ಅಸಂಘಟಿತ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಅತಿಥಿಯಾಗಿದ್ದ ಆರ್‌ಎಲ್‌ಎಚ್‌ಪಿ (ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ) ನಿರ್ದೇಶಕಿ ಕೆ.ಸರಸ್ವತಿ ಮಾತನಾಡಿ, ‘ಮಕ್ಕಳು ತುಂಬ ಹೊತ್ತು ಕೆಲಸ ಮಾಡುತ್ತಾರೆ ಎನ್ನುವುದರ ಜತೆಗೆ, ಕಡಿಮೆ ಸಂಬಳ ಕೊಡಬಹುದು ಎನ್ನುವ ಕಾರಣಕ್ಕೆ ದುಡಿಸಿಕೊಳ್ಳುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೃಷಿ, ಮನೆಗೆಲಸ, ಜೀತುದಾಳುಗಳಾಗಿ ದುಡಿಯುವ ಮಕ್ಕಳಿದ್ದಲ್ಲಿ ದಾಳಿ ಮಾಡಿ ರಕ್ಷಿಸಿದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ದುಡಿಯಲು ಕಳಿಸುವ ಹೆತ್ತವರಲ್ಲಿ ಹಾಗೂ ದುಡಿಸಿಕೊಳ್ಳುವ ಮಾಲೀಕರಲ್ಲಿ ಅರಿವು ಮೂಡಿಸಬೇಕು. ಮತ್ತೆ ಮುಂದುವರೆಸಿದರೆ ಶಿಕ್ಷೆ ಕೊಡಬೇಕು’ ಎಂದು ಆಗ್ರಹಿಸಿದರು.

ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ.ಮಹಮ್ಮದ್‌ ಮಜೀರುಲ್ಲಾ, ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ.ತಮ್ಮಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಸುರೇಶ್, ಎಚ್‌.ಡಿ.ಕೋಟೆಯ ನಿಸರ್ಗ ಫೌಂಡೇಷನ್ ಕಾರ್ಯದರ್ಶಿ ನಂಜುಂಡಯ್ಯ, ಜ್ಞಾನಜ್ಯೋತಿ ಸಂಸ್ಥೆ ಸಂಸ್ಥಾಪನಾ ಕಾರ್ಯದರ್ಶಿ ಎಂ.ಎಸ್‌.ಹೇಮಾವತಿ ಹಾಜರಿದ್ದರು.

ಅಧ್ಯಕ್ಷತೆ ವಹಿಸಿದ್ದ ಡಿಸಿಪಿ ಎನ್‌.ವಿಷ್ಣುವರ್ಧನ್, ‘2012ರಲ್ಲಿ ಮಕ್ಕಳ ಪೊಲೀಸ್‌ ಘಟಕವನ್ನು ನಗರದಲ್ಲಿ ಆರಂಭಿಸಲಾಯಿತು. ಇದುವರೆಗೆ 1 ಸಾವಿರ ಪ್ರಕರಣಗಳು ದಾಖಲಾಗಿವೆ. ಬಾಲಕಾರ್ಮಿಕರು ಕಂಡು ಬಂದರೆ ದೂರವಾಣಿ 100ಕ್ಕೆ ಕರೆ ಮಾಡಿ ದೂರು ದಾಖಲಿಸಿ. ಇಲ್ಲವೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಬಹುದು. ಹೆಸರು ಗೋಪ್ಯವಾಗಿಡಲಾಗುವುದು. ಹೆಸರು ಹಾಕದೆಯೂ ತಿಳಿಸಬಹುದು’ ಎಂದರು.

ನಂತರ ‘ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ ಕಾಯ್ದೆ’ ಕುರಿತು ವಕೀಲ ಎನ್‌.ಸುಂದರರಾಜ್ ಉಪನ್ಯಾಸ ನೀಡಿದರು.

ಕಾಯೋಕೆ ನೀವು ಇಲ್ವಾ?

‘ಕೆಲ ವರ್ಷಗಳ ಹಿಂದೆ ಕೆ.ಆರ್‌. ಸರ್ಕಲ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ ನಾಲ್ಕೈದು ಮಹಿಳೆಯರು ಕೊರಳಲ್ಲಿ ಚಿನ್ನದ ಸರಗಳನ್ನು ಎದ್ದು ಕಾಣುವ ಹಾಗೆ ಹಾಕಿಕೊಂಡಿದ್ದರು. ಹೀಗೆ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಕ್ಕೆ ಕಾಯೋಕೆ ನೀವು ಇಲ್ವಾ? ಎಂದು ಪ್ರಶ್ನಿಸಿದ್ದರು’ ಎಂದು ಡಿಸಿಪಿ ಎನ್‌.ವಿಷ್ಣುವರ್ಧನ್ ಸ್ಮರಿಸಿದರು.

‘ಮಂಗಳೂರಲ್ಲಿ ಕರ್ತವ್ಯ ನಿರ್ವಹಿಸುವಾಗ ಮಾಲ್‌ಗೆ ಬಂದಿದ್ದ ದಂಪತಿ, ತಮ್ಮ ಮಗುವನ್ನು ಆಟವಾಡಲು ಬಿಟ್ಟು ಸೆಲ್ಫಿ ತೆಗೆದುಕೊಳ್ಳಲು ಓಡಾಡುತ್ತಿದ್ದರು. ಮಗು ಮೇಲೆ ನಿಗಾ ಇಡಿ ಎಂದು ಹೇಳಿದಾಗ ನಮ್ಮ ಮಗು, ನಾವು ನೋಡಿಕೊಳ್ಳುತ್ತೇವೆ ಎಂದು ನನಗೇ ದಬಾಯಿಸಿದ್ದರು. ಮಕ್ಕಳ ಕಾಳಜಿ ವಹಿಸುವುದರ ಜತೆಗೆ, ಗಮನಿಸುತ್ತಿರಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT