ಮಂಗಳವಾರ, ಸೆಪ್ಟೆಂಬರ್ 21, 2021
24 °C
ಗಡ್‌ಚಿರೋಲಿಯಲ್ಲಿ ಬಾಂಬ್‌ ದಾಳಿ: ಚಾಲಕ, ಕಮಾಂಡೊಗಳು ಹುತಾತ್ಮ

ಮಹಾರಾಷ್ಟ್ರ: ನಕ್ಸಲ್‌ ಅಟ್ಟಹಾಸಕ್ಕೆ 16 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ನಕ್ಸಲ್‌ ಬಾಧಿತ ಜಿಲ್ಲೆ ಗಡ್‌ಚಿರೋಲಿಯಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ 
ಕುರ್ಖೇಡಾ ತಾಲ್ಲೂಕಿನಲ್ಲಿ ಬುಧವಾರ ಬೆಳಿಗ್ಗಿನ ಜಾವ 3.30ರ ಹೊತ್ತಿಗೆ ನಕ್ಸಲರು ಹೇಯ ದಾಳಿ ನಡೆಸಿ 15 ಪೊಲೀಸರು ಮತ್ತು ಅವರು ಪ್ರಯಾಣಿಸುತ್ತಿದ್ದ ವಾಹನದ ಚಾಲಕನನ್ನು ಹತ್ಯೆ ಮಾಡಿದ್ದಾರೆ. 

ವಿಶೇಷ ಕಮಾಂಡೊ ಪಡೆ ಸಿ–60 ತುಕಡಿಯ ಭಾಗವಾಗಿರುವ ತ್ವರಿತ ಕಾರ್ಯಪಡೆಯ ತಂಡವು (ಕ್ಯುಆರ್‌ಟಿ) ಖಾಸಗಿ ವಾಹನವೊಂದರಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.  

ಕುರ್ಖೇಡಾ ತಾಲ್ಲೂಕಿನಲ್ಲಿ ಮಂಗಳವಾರದಿಂದಲೇ ಬಿಗುವಿನ ಪರಿಸ್ಥಿತಿ ಸೃಷ್ಟಿಯಾಗಿತ್ತು. ಮಹಾರಾಷ್ಟ್ರ–ಛತ್ತೀಸಗಡ ಹೆದ್ದಾರಿಯ ದಾದಾಪುರ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಬಳಕೆಯಾಗುತ್ತಿದ್ದ ಲಾರಿಗಳು ಮತ್ತು ಭಾರಿ ವಾಹನಗಳು ಸೇರಿ 37 ವಾಹನಗಳನ್ನು ನಕ್ಸಲರು ಮಂಗಳವಾರ ಸುಟ್ಟು ಹಾಕಿದ್ದರು. 

ವಾಹನಗಳಿಗೆ ಬೆಂಕಿ ಇಟ್ಟ ಬಳಿಕ ಈ ಪ್ರದೇಶದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿತ್ತು. ಪೊಲೀಸ್‌ ವಾಹನಗಳ ಓಡಾಟ ಹೆಚ್ಚಾಗಿತ್ತು. ಹೀಗೆ ವಾಹನ ಸಾಗುತ್ತಿದ್ದಾಗ ನಕ್ಸಲರು ನೆಲಬಾಂಬ್‌ ಸ್ಫೋಟಿಸಿ ದುರಂತಕ್ಕೆ ಕಾರಣರಾಗಿದ್ದಾರೆ. 

ಸ್ಫೋಟದ ನಂತರ ಗುಂಡು ಹಾರಾಟದ ಸದ್ದು ಕೇಳಿ ಬಂತು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಈ ಸುದ್ದಿಯನ್ನು ಪೊಲೀಸರು ದೃಢಪಡಿಸಿಲ್ಲ. 

ಗುಪ್ತಚರ ವೈಫಲ್ಯ ಅಲ್ಲ: ಗುಪ್ತಚರ ವೈಫಲ್ಯದಿಂದಾಗಿ ಕಮಾಂಡೊಗಳು ಪ್ರಾಣ ತೆರಬೇಕಾಯಿತು ಎಂಬ ಆರೋಪವನ್ನು ಮಹಾರಾಷ್ಟ್ರ ಪೊಲೀಸ್‌ ಮಹಾ ನಿರ್ದೇಶಕ ಸುಬೋಧ್‌ ಜೈಸ್ವಾಲ್‌ ನಿರಾಕರಿಸಿದ್ದಾರೆ. ನಕ್ಸಲರಿಗೆ ತಕ್ಕ ಪ್ರತ್ಯುತ್ತರ ನೀಡಲು ಪೊಲೀಸರು ಸಜ್ಜಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ‘ಇದೊಂದು ದೊಡ್ಡ ನಷ್ಟ. ಆದರೆ ಇದು ಗುಪ್ತಚರ ವೈಫಲ್ಯ ಅಲ್ಲ’ ಎಂದು ಅವರು ತಿಳಿಸಿದ್ದಾರೆ.

ಮತದಾನಕ್ಕೆ ಆಕ್ರೋಶ

ಗಡ್‌ಚಿರೋಲಿ ಜಿಲ್ಲೆಯಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮತದಾನವಾಗಿದೆ. ಅದು ನಕ್ಸಲ್‌ ಮುಖಂಡರ ನಿದ್ದೆಗೆಡಿಸಿದೆ ಎಂದು ನಕ್ಸಲ್‌ ನಿಗ್ರಹ ಕಾರ್ಯಾಚರಣೆಯ ಮುಖ್ಯಸ್ಥ, ವಿಶೇಷ ಪೊಲೀಸ್‌ ಮಹಾ ನಿರೀಕ್ಷಕ ಶರದ್‌ ಶೇಲರ್‌ ಹೇಳಿದ್ದಾರೆ. ಗಡ್‌ಚಿರೋಲಿ–ಚಿಮುರು ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಮತದಾನವಾಗಿತ್ತು. ಅಲ್ಲಿ ಶೇ 71.98ರಷ್ಟು ಜನರು ಹಕ್ಕು ಚಲಾಯಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಈ ಬಾರಿ ದಾಖಲಾದ ಅತಿ ಹೆಚ್ಚು ಮತಪ್ರಮಾಣ. 

ಮತದಾನ ಬಹಿಷ್ಕರಿಸುವಂತೆ ಮತ್ತು ಮತದಾನಕ್ಕೆ ಅಡ್ಡಿ ಮಾಡುವಂತೆ ನಕ್ಸಲರು ಕರೆ ಕೊಟ್ಟಿದ್ದರು. ಆದರೆ ಜನರು ಇದರಿಂದ ಬೆದರದೆ ಮತಗಟ್ಟೆಗೆ ಬಂದಿದ್ದರು. ಮತದಾನಕ್ಕೆ  ಕೆಲವೇ ದಿನ ಮೊದಲು ನೆರೆಯ ಬಸ್ತಾರ್‌ನಲ್ಲಿ ನಕ್ಸಲ್‌ ದಾಳಿ ನಡೆದಿತ್ತು. ಅದರಲ್ಲಿ ಛತ್ತೀಸಗಡದ ಶಾಸಕ ಸೇರಿ ನಾಲ್ವರು ಮೃತಪಟ್ಟಿದ್ದರು.

ಪ್ರತೀಕಾರವೇ?

2018ರ ಏಪ್ರಿಲ್‌ 22–23ರಂದು ನಕ್ಸಲ್‌ ನಿಗ್ರಹ ಪಡೆ ಮತ್ತು ಸಿಆರ್‌ಪಿಎಫ್‌ ಜಂಟಿ ಕಾರ್ಯಾ ಚರಣೆ ನಡೆಸಿದ್ದವು. ಸಿ–60 ಕಮಾಂಡೊ ತಂಡವು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಇದರಲ್ಲಿ 40 ನಕ್ಸಲರು ಹತ್ಯೆಯಾಗಿದ್ದರು. ನಕ್ಸಲರಲ್ಲಿ ಆದ ಸಾವು ನೋವಿಗೆ ಸಂಬಂಧಿಸಿ ಇದುವೇ ಅತ್ಯಂತ ದೊಡ್ಡ ಮಟ್ಟದ ಯಶಸ್ಸು ಎಂದು ಹೇಳಲಾಗುತ್ತಿದೆ. ಈಗ, ಸಿ–60 ಕಮಾಂಡೊಗಳ ಮೇಲೆಯೇ ನಕ್ಸಲರು ದಾಳಿ ನಡೆಸಿದ್ದಾರೆ.

ನಿರ್ಲಕ್ಷ್ಯ ಕಾರಣವೇ?

ನಕ್ಸಲ್‌ ನಿಗ್ರಹ ಚಟುವಟಿಕೆಯಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸಲಾಗಿಲ್ಲ ಎಂಬ ಕೂಗು ನಕ್ಸಲ್‌ ದಾಳಿಯ ಬಳಿಕ ಕೇಳಿ ಬಂದಿದೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದ ಸಂದರ್ಭದಲ್ಲಿಯೇ ಕಮಾಂಡೊಗಳು ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಕೇಳಲಾಗುತ್ತಿದೆ.

ಸಿ–6 ಕಮಾಂಡೊಗಳು ಸಾಗುವ ದಾರಿಯ ವಿವರಗಳು ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಮತ್ತು ಅವರು ಖಾಸಗಿ ವಾಹನದಲ್ಲಿ ಯಾಕೆ ಸಂಚರಿಸಿದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರದ ಗೃಹ (ಗ್ರಾಮೀಣ) ಸಚಿವ ದೀಪಕ್‌ ಕೇಸರ್ಕರ್‌ ಹೇಳಿದ್ದಾರೆ. 

‘ಖಾಸಗಿ ವಾಹನ ಬಳಸಿದ್ದು ಯಾಕೆ? ಸಾಗುತ್ತಿದ್ದ ದಾರಿಯ ಬಗ್ಗೆ ಚಾಲಕನಿಗೆ ಸರಿಯಾದ ತಿಳಿವಳಿಕೆ ಇತ್ತೇ? ಇಂತಹ ಮಾರ್ಗಗಳಲ್ಲಿ ಹೋಗುವಾಗ ವಹಿಸಬೇಕಾದ ಎಚ್ಚರಿಕೆ ಅವರಿಗೆ ಗೊತ್ತಿತ್ತೇ’ ಎಂದು ಗುಪ್ತಚರ ಪರಿಣತ ಶಿರೀಶ್‌ ಇನಾಮ್‌ದಾರ್‌ ಪ್ರಶ್ನಿಸಿದ್ದಾರೆ. 

ತ್ವರಿತ ಕಾರ್ಯಪಡೆಯ ತಂಡ ಸಾಗುವಾಗ ಅದಕ್ಕೂ ಮುಂಚೆ ರಸ್ತೆ ಪರಿಶೀಲನಾ ತಂಡ ಸಾಗಬೇಕು. ಇಂತಹ ಪ್ರಕ್ರಿಯೆಗಳ ಬಗ್ಗೆ ಮೇಲಧಿಕಾರಿಗಳು ಎಚ್ಚರಿಕೆ ವಹಿಸಿದ್ದರೇ ಎಂದೂ ಅವರು ಕೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು