ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಫಲಿತಾಂಶ ಕಲಿಸಿದ ಪಾಠ: ರಾಜಕಾರಣದಲ್ಲಿ ರೈತರಿಗೆ ಮತ್ತೆ ಮಹತ್ವ

Last Updated 14 ಡಿಸೆಂಬರ್ 2018, 10:19 IST
ಅಕ್ಷರ ಗಾತ್ರ

ಭಾರತದ ಮಟ್ಟಿಗೆ ರೈತಹೋರಾಟದ ಕಿಚ್ಚು ಹೊಸದೇನು ಅಲ್ಲ. ಬಿತ್ತನೆ ಬೀಜ–ರಸಗೊಬ್ಬರ ವಿತರಣೆಯಿಂದ ಹಿಡಿದು ಬೆಂಬಲ ಬೆಲೆ ನಿಗದಿಯವರೆಗೂ ರೈತರ ಹೋರಾಟಗಳು ನಿರಂತರ. ದೇಶದ ರಾಜಕೀಯದ ಮೇಲೆ ಅವು ಉಂಟುಮಾಡಿದ ಪರಿಣಾಮವೂ ದೊಡ್ಡದು. ರೈತ ಹೋರಾಟದಿಂದಲೇ ಮುನ್ನೆಲೆಗೆ ಬಂದು ರಾಷ್ಟ್ರ ರಾಜಕಾರಣದಲ್ಲಿ ಮಿನುಗಿದವರ ಹೆಸರುಗಳು ಸಾಕಷ್ಟಿವೆ. ಏರಿದ ಏಣಿ ಮರೆತು ಮೂಲೆಗುಂಪಾದವರ ಪಟ್ಟಿಯೂ ಚಿಕ್ಕದೇನಲ್ಲ.

ಬೆಂಬಲ ಬೆಲೆ ನಿಗದಿ, ಸಾಲಮನ್ನಾ, ಬರ ಪರಿಹಾರಕ್ಕಾಗಿ ಒತ್ತಾಯಿಸಲು ಆಯಾ ರಾಜ್ಯಗಳ ರಾಜಧಾನಿಗಳತ್ತ ರೈತರು ಹೆಜ್ಜೆ ಹಾಕುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿಗೆ ಲಗ್ಗೆ ಹಾಕುವುದು, ಸಂಸತ್‌ ಭವನದೆದುರು ಪ್ರತಿಭಟನೆ ನಡೆಸುವುದೂ ಮಾಮೂಲಾಗಿದೆ. ಈರುಳ್ಳಿ ಬೆಳೆಯಲು ಸಾವಿರಾರು ರೂಪಾಯಿ ಖರ್ಚುಮಾಡಿದ್ದ ಮಹಾರಾಷ್ಟ್ರದ ರೈತರಿಬ್ಬರು, ಬೆಳೆ ಮಾರಿ ಬಂದ ಹಣವನ್ನು ಕ್ರಮವಾಗಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಖಾತೆಗೆ ರವಾನಿಸಿದ್ದನ್ನು ಸ್ಮರಿಸಬಹುದು. ರಾಷ್ಟ್ರರಾಜಕಾರಣದಲ್ಲಿ ರೈತರು ಮತ್ತೆ ಮುನ್ನೆಲೆ ಬರುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಉಂಟಾಗಿರುವ ರಾಜಕೀಯ ಜಾಗೃತಿ.

ಬಿಜೆಪಿಗೆ ವಿರೋಧಿ ಹೋರಾಟಕ್ಕೆ ವೇದಿಕೆ ಕಲ್ಪಿಸಿದಕಿಸಾನ್‌ ಮುಕ್ತಿ ಮೋರ್ಚಾ

ನವೆಂಬರ್‌ ತಿಂಗಳಲ್ಲಿಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿಯು(ಎಐಕೆಎಸ್‌ಸಿಸಿ)ದೆಹಲಿಯ ಸಂಸತ್‌ ರಸ್ತೆಯಲ್ಲಿ ನಡೆಸಿದಕಿಸಾನ್‌ ಮುಕ್ತಿ ಮೋರ್ಚಾಧರಣಿಯಲ್ಲಿ ಪಾಲ್ಗೊಳ್ಳುವಂತೆ ಎಲ್ಲ ರಾಜ್ಯಗಳ ರೈತರಿಗೆ ಕರೆ ನೀಡಿತ್ತು. ಸುಮಾರು ಇನ್ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ಇದರಲ್ಲಿ ಪಾಲ್ಗೊಂಡಿದ್ದವು. ಕಾಂಗ್ರೆಸ್‌ ಸೇರಿದಂತೆ ದೇಶದ ಹಲವು ವಿರೋಧ ಪಕ್ಷಗಳುಧರಣಿಯಲ್ಲಿ ಪಾಲ್ಗೊಂಡವು. ಇದರೊಂದಿಗೆ ಕೇಂದ್ರದ ವಿರುದ್ಧ ಮುಗಿಬೀಳಲು ವಿರೋಧ ಪಕ್ಷಗಳಿಗೆಕಿಸಾನ್‌ ಮುಕ್ತಿ ಮೋರ್ಚಾ ವೇದಿಕೆ ನೆರವಾಗಿತ್ತು.

ಕಿಸಾನ್‌ ಮುಕ್ತಿ ಮೋರ್ಚಾ ಪ್ರತಿಭಟನೆ ಸಂದರ್ಭ
ಕಿಸಾನ್‌ ಮುಕ್ತಿ ಮೋರ್ಚಾ ಪ್ರತಿಭಟನೆ ಸಂದರ್ಭ

‘ಯಾವುದೇ ವಿಚಾರವಾದರೂ ವಿಭಿನ್ನ ತತ್ವ, ಸಿದ್ಧಾಂತಗಳನ್ನು ಅನುಸರಿಸುವ ರಾಜಕೀಯ ಪಕ್ಷಗಳು ಎಲ್ಲ ಭೇದವನ್ನು ಮರೆತು ರೈತರ ಬೆನ್ನಿಗೆ ನಿಲ್ಲುವ ಮೂಲಕ, ತಮಗೆ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದವು.ಇದು 2019ರ ಸಾರ್ವತ್ರಿಕ ಚುನಾವಣೆಗೆ ರೈತಾಪಿಯಲ್ಲಿಬಿಜೆಪಿ ವಿರುದ್ಧದ ಒಮ್ಮತದ ಅಭಿಪ್ರಾಯ ಮೂಡಿಸಲು ನೆರವಾಗಲಿದೆ’ ಎಂದು ‘ದಿಪ್ರಿಂಟ್’ ಜಾಲತಾಣದಲ್ಲಿ ಯೋಗೇಂದ್ರ ಯಾದವ್ ವಿಶ್ಲೇಷಿಸಿದ್ದಾರೆ.

ಕೇಂದ್ರ ಸರ್ಕಾರಪ್ರಸ್ತಾವಿತ ಬುಲೆಟ್‌ರೈಲು ಯೋಜನೆಯಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವ ಗುಜರಾತ್‌ ಹಾಗೂ ಮಹಾರಾಷ್ಟ್ರ ರೈತರು ಆರಂಭದಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಾಣದಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಸಾಮೂಹಿಕ ವಿನಾಶವಾಗಲಿದೆ ಎಂದು ಆರೋಪಿಸಿದ್ದ ನರ್ಮದಾ ಜಿಲ್ಲೆಯ ಕೆಲವು ಬುಡಕಟ್ಟು ಜನಾಂಗದ ಗುಂಪುಗಳು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದವು.ಮಧ್ಯಪ್ರದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಪರಿಷ್ಕೃತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದ್ದ ರೈತರು ಜೂನ್‌ ತಿಂಗಳಲ್ಲಿ ಸತತ ಹತ್ತುದಿನಗಳ ಕಾಲ ಶಾಂತಿಯುತ ಹೋರಾಟ ನಡೆಸಿದ್ದರು. 2017ರ ಜೂನ್‌ನಲ್ಲಿ ನಡೆದಿದ್ದ ಮಂದಸೌರ್‌ ಪ್ರಕರಣದವೇಳೆ ಪ್ರತಿಭಟನಾನಿರತ ಆರು ರೈತರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಸಂಭವಿಸಿದ ದುರಂತ ಹಾಗೂ ಇನ್ನಿತರೆ ಕಾರಣದಿಂದಾಗಿಕಳೆದ ಒಂದು ವರ್ಷದ ಅವಧಿಯಲ್ಲಿ ರೈತರ ವಿರುದ್ಧ ಸುಮಾರು 7 ಸಾವಿರ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು. ಇವೆಲ್ಲದರ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ಆಯೋಜಿಸಲಾಗಿತ್ತು. ದೇಶದಲ್ಲಿ ರೈತರ ಪ್ರತಿಭಟನೆ ಕಾವೇರಿದ್ದಾಗ ಬಿಜೆಪಿ ಮಧ್ಯಪ್ರದೇಶ ಘಟಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ‘ದೇಶದಲ್ಲಿ ರೈತ ಚಳವಳಿಗಳು ಮಹತ್ವ ಕಳೆದುಕೊಂಡಿವೆ’ ಎನ್ನುವ ಉದ್ಧಟತನದ ಮಾತು ಅದರಲ್ಲಿತ್ತು. ಚುನಾವಣೆಯ ಸನಿಹದಲ್ಲಿ ನೀಡಿದ ಇಂಥ ಹೇಳಿಕೆಗೆ ನಂತರ ಆ ಪಕ್ಷ ತಕ್ಕ ಬೆಲೆ ತೆರುವಂತಾಯಿತು.

ಕಿಸಾನ್‌ ಮುಕ್ತಿ ಮೋರ್ಚಾ ಪ್ರತಿಭಟನೆ ಸಂದರ್ಭ
ಕಿಸಾನ್‌ ಮುಕ್ತಿ ಮೋರ್ಚಾ ಪ್ರತಿಭಟನೆ ಸಂದರ್ಭ

ಬೆಂಬಲ ಬೆಲೆ ನಿಗದಿ, ಸಾಲಮನ್ನಾ, ಬರ ಪರಿಹಾರಕ್ಕಾಗಿ ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ದಕ್ಷಿಣದ ರಾಜ್ಯಗಳ ರೈತರೂ ಕೇಂದ್ರದೆದುರು ತಮ್ಮ ಬೇಡಿಕೆ ಈಡೇರಿಸುವಂತೆ ಬೇಡಿಕೆ ಇಟ್ಟಿದ್ದರು. ದೇಶದಾದ್ಯಂತ ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ ನಾಯಕರುಕಿಸಾನ್‌ ಮುಕ್ತಿ ಮೋರ್ಚಾದಲ್ಲಿ ಭಾಗವಹಿಸಿದ್ದರು ಎಂಬುದು ಗಮನಾರ್ಹ ಸಂಗತಿ.

ಪಂಚರಾಜ್ಯಗಳ ಚುನಾವಣೆಗೆ ಮೊದಲಿನ ಈ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದ ಪರಿಣತರು ‘ಒಂದು ವೇಳೆ ಬಿಜೆಪಿಗೆ ಪೂರಕವಾದ ಫಲಿತಾಂಶವು ಹೊರಬೀಳದೇ ಇದ್ದಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ರೈತಪರ ಕಾರ್ಯತಂತ್ರ ಹೆಣೆಯುವುದು ಅನಿವಾರ್ಯವಾಗುತ್ತದೆ’ ಎಂದು ಹೇಳಿದ್ದರು. ಆಗ ತಜ್ಞರು ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. ತನಗೆ ಪೂರಕ ವಾತಾವರಣವಿದ್ದ ಮೂರು (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ) ರಾಜ್ಯಗಳಲ್ಲಿಬಿಜೆಪಿ ಅಧಿಕಾರ ಕಳೆದುಕೊಂಡಿದೆ. ‘ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದದರಿಂದಾಗಿಯೇಬಿಜೆಪಿ ಭಾರಿ ಬೆಲೆ ತೆರಬೇಕಾಯಿತು’ ಎಂದು ರಾಜಕೀಯ ಚಿಂತಕರು ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ಆತ್ಮಾವಲೋಕನದಲ್ಲಿಯೂ ಇದೇ ವಿಷಯ ಪ್ರಸ್ತಾಪವಾಗುತ್ತಿದೆ.

ರಾಜಕಾರಣದ ವಸ್ತು ‘ರೈತ’

ರೈತ ವಿರೋಧಿಹಣೆಪಟ್ಟಿಯಿಂದ ಹೊರಬರಲು ಪರಿಣಾಮಕಾರಿಯಾದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ವಿಫಲವಾಗಿದ್ದು ಸೋಲಿಗೆ ಮುಖ್ಯ ಕಾರಣ ಎಂಬ ಅಭಿಪ್ರಾಯ ಬಿಜೆಪಿ ನಾಯಕರಲ್ಲಿ ಮೂಡಿದೆ.ಹೇಳಿಕೇಳಿ ನಮ್ಮದು ಹಳ್ಳಿಗಳ ದೇಶ. ಗ್ರಾಮೀಣ ಭಾರತದ ಜನರ ಬದುಕು ಮುನ್ನಡೆಸುತ್ತಿರುವುದುಕೃಷಿ ಚಟುವಟಿಕೆಗಳೇ ಆಗಿರುವ ಕಾರಣ ರಾಜಕೀಯ ಪಕ್ಷಗಳು ಕೃಷಿಕರ ವಿಚಾರದಲ್ಲಿ ಉಡಾಫೆ ಮಾಡುವುದು ಒಳಿತಲ್ಲ ಎಂಬುದು ಅವರಿಗೆ ಮನವರಿಕೆಯಾದಂತಿದೆ.

ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ಸಂಜಯ್‌ ಕಾಕಡೆ ಅವರುವಿಧಾನಸಭೆ ಸೋಲಿನ ಬಳಿಕ ಹೇಳಿದ ಮಾತುಗಳಲ್ಲಿಯೂ ಅದು ವ್ಯಕ್ತವಾಗಿದೆ. ಅವರು, 2014ರಲ್ಲಿ ನೀಡಿದ್ದ ಭರವಸೆಗಳನ್ನು ಮರೆತಿದ್ದೇವೆ. ರಾಮಮಂದಿರ, ಪ್ರತಿಮೆ ನಿರ್ಮಾಣ ಹಾಗೂ ಸ್ಥಳಗಳ ಹೆಸರುಗಳನ್ನು ಬದಲಿಸುವತ್ತ ಗಮನ ಹರಿಸಿದ್ದೇ ಸೋಲಿಗೆ ಕಾರಣ ಎಂದಿದ್ದಾರೆ.

ಇನ್ನೊಂದೆಡೆಕಾಂಗ್ರೆಸ್‌ ಪಕ್ಷವು ಬಿಜೆಪಿ ವಿರುದ್ಧದ ರೈತರ ಕೋಪವನ್ನು ಚುನಾವಣೆ ಕಾರ್ಯತಂತ್ರವಾಗಿ ಬಳಸಿಕೊಂಡಿದೆ. ಛತ್ತೀಸಗಡದಲ್ಲಿ ಚುನಾವಣೆ ವೇಳೆಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಕೃಷಿಸಾಲ ಮನ್ನಾ ಮತ್ತು ಕನಿಷ್ಠ ಬೆಂಬಲ ಬೆಲೆಯ ವಿಚಾರಗಳಿಗೆ ಮಹತ್ವ ನೀಡಿತ್ತು.ಇದು ರೈತ ಸಮುದಾಯವನ್ನು ಬಹುವಾಗಿ ಆಕರ್ಷಿಸಿತ್ತು. ಸತತ ಮೂರುಬಾರಿ ಅಧಿಕಾರ ಅನುಭವಿಸಿದ್ದ ಬಿಜೆಪಿ ಎದುರುಕಾಂಗ್ರೆಸ್‌ ಗೆಲುವು ಕಂಡದ್ದುಪ್ರಣಾಳಿಕೆಯ ಯಶಸ್ಸು. ಇದನ್ನೇ ಉಲ್ಲೇಖಿಸಿರುವ ರಾಯಪುರ ಸಂಸದ ರಮೇಶ್‌ ಬಿಯಾಸ್‌,‘ಛತ್ತೀಸಗಡದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ರೈತರ ಬೆಂಬಲವೇ ಕಾರಣ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ರೈತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ನೆಲಕಚ್ಚಿದೆ. ರೈತರು ಬಿಜೆಪಿಯ ಬಗ್ಗೆ ಆಕ್ರೋಶಗೊಂಡಿರುವುದು ಇದಕ್ಕೆ ಕಾರಣ. ಈ ಅಂಶವನ್ನು ಕಾಂಗ್ರೆಸ್‌ ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಂಡಿತು’ ಎಂಬುದು ಕೊರ್ಬಾ ಕ್ಷೇತ್ರದ ಸಂಸದ ಬನ್ಸಿಲಾಲ್ ಮಹ್ತೊ ಪ್ರತಿಕ್ರಿಯೆ.

ಹೀಗಾಗಿ ಮುಂದಿನ ಚುನಾಣೆಗಳಲ್ಲಿ ಯಶಸ್ಸು ಗಳಿಸಲು ರಾಜಕೀಯ ಪಕ್ಷಗಳು ರೈತ ಕೇಂದ್ರಿತ ಕಾರ್ಯತಂತ್ರಗಳನ್ನು ರೂಪಿಸಿದರೆ ಅಚ್ಚರಿಯಿಲ್ಲ.

ರೈತರ ಆಕ್ರೋಶ ಮತ್ತು ಕೃಷಿ ಸಚಿವರ ಮತಗಳಿಕೆ

ರಾಜಸ್ಥಾನದಲ್ಲಿ ನಿರ್ಗಮಿತ ಮುಖ್ಯಮಂತ್ರಿವಸುಂಧರಾ ರಾಜೇ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಪ್ರಭುಲಾಲ್‌ ಸೈನಿ ಈ ಬಾರಿ ಸೋಲುಕಂಡಿದ್ದಾರೆ. ಅವರು ಪ್ರತಿನಿಧಿಸುವ ಅಂತ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಭಯ್ಯಾ ಗೆಲುವು ಕಂಡಿದ್ದಾರೆ.

ಛತ್ತೀಸಗಡದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ 34,799 ಮತಗಳ ಅಂತರದಿಂದ ಸಮೀಪದ ಸ್ಪರ್ಧಿಯನ್ನು ಹಣಿದಿದ್ದ ಬ್ರಿಜ್‌ಮೋಹನ್‌ ಅಗರ್‌ವಾಲ್ ಅವರು ರಮಣಸಿಂಗ್‌ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದವರು. ಈ ಬಾರಿಯೂ ಗೆಲುವು ಕಂಡಿದ್ದಾರೆ. ಆದರೆ, ಮತಗಳಿಕೆ ಅಂತರ 17496ಕ್ಕೆ ಇಳಿದಿದೆ. ಅದಲ್ಲದೆ ಕಳೆದ ಬಾರಿ ಶೇ. 59.25 ಮತ ಗಳಿಸಿದ್ದ ಅವರಿಗೆ ಈ ಬಾರಿ ದಕ್ಕಿರುವುದು ಕೇವಲ ಶೇ. 52 ಮಾತ್ರ.

ಕಳೆದ ಅವಧಿಗೆಮಧ್ಯಪ್ರದೇಶದಲ್ಲಿ ಕೃಷಿ ಸಚಿವರಾಗಿದ್ದ ಬಿಜೆಪಿಯ ಗೌರಿ ಶಂಕರ್‌ ಚತುರ್ವೇದಿ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮತಗಳಿಕೆ ಪ್ರಮಾಣ ಮಾತ್ರ ಗಣನೀಯವಾಗಿ ಇಳಿದಿದೆ.ತಾವು ಪ್ರತಿನಿಧಿಸುವ ಬಲಗಾಟ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಕಳೆದ ವಿಧಾನಸಭೆಯಲ್ಲಿಶೇ. 45.24 ಮತ ಗಳಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಎದುರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಶೇ. 41ರಷ್ಟು ಮಾತ್ರವೇ ಮತ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT