ಮುಂಬೈ: ಮುಂಬೈನಲ್ಲಿ ನಡೆದಿದ್ದ 26/11 ಉಗ್ರರ ದಾಳಿ ಪ್ರಕರಣ, ಹಿಂದೂ ಉಗ್ರರ ಕೃತ್ಯ ಎಂದು ಬಿಂಬಿಸಲು ಲಷ್ಕರ್ ಎ ತಯಬಾ (ಎಲ್‌ಇಟಿ) ಯೋಜನೆ ರೂಪಿಸಿತ್ತು.
ಇದರ ಭಾಗವಾಗಿ, ದಾಳಿ ಪ್ರಕರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದ ಉಗ್ರ ಮಹಮ್ಮದ್ ಅಜ್ಮಲ್ ಕಸಬ್‌ಗೆ ‘ಸಮೀರ್ ಚೌಧರಿ, ಬೆಂಗಳೂರಿನ ಅರುಣೋದಯ ಕಾಲೇಜಿನ ವಿದ್ಯಾರ್ಥಿ ಹಾಗೂ ಹಿಂದೂ’ ಎಂದು ಹೆಸರಿಸಿತ್ತು.
ಕೃತ್ಯ ನಡೆದಾಗ ಅಂದು ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಐಪಿಎಸ್ ಅಧಿಕಾರಿ ರಾಕೇಶ್ ಮರಿಯಾ ತಮ್ಮ ‘ಲೆಟ್ ಮೀ ಸೇ ಇಟ್ ನೌ’ ಕೃತಿಯಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ರಾಕೇಶ್ ಅವರು ಈಗ ನಿವೃತ್ತರಾಗಿದ್ದಾರೆ.
ಸೋಮವಾರ ಈ ಕೃತಿ ಬಿಡುಗಡೆಯಾಯಿತು. ಎಲ್‌ಇಟಿ ಎಸಗಿದ್ದ ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ತನಿಖೆಯಲ್ಲಿ ಬಯಲಾಗಿತ್ತು.
ಕೃತಿಯ ಆಯ್ದ ಭಾಗಗಳ ಅನುಸಾರ, ಪಾಕಿಸ್ತಾನದ ಐಎಸ್‌ಐ ಮತ್ತು ಎಲ್ಇಟಿ ಕಸಬ್‌ನನ್ನು ಜೈಲಿನಲ್ಲಿಯೇ ಮುಗಿಸಲು ಯತ್ನಿಸಿತ್ತು. ದಾಳಿಗೂ ದಾವೂದ್ ಇಬ್ರಾಹಿಂ ಗುಂಪಿಗೂ ಸಂಬಂಧವಿದೆ ಎಂಬುದನ್ನು ನಿರೂಪಿಸಲು ಇದ್ದ ಪ್ರಮುಖ ಸಾಕ್ಷಿ ಕಸಬ್ ಆಗಿದ್ದ.
‘ಎಲ್ಲವೂ ಯೋಜನೆಯಂತೇ ನಡೆದಿದ್ದರೆ ಕಸಬ್, ಚೌಧರಿ ಆಗಿ ಸತ್ತಿರುತ್ತಿದ್ದ. ಮಾಧ್ಯಮಗಳು ದಾಳಿ ಪ್ರಕರಣಕ್ಕೆ ಹಿಂದೂ ಉಗ್ರರು ಕಾರಣ ಎಂದು ಹೊಣೆ ಮಾಡುತ್ತಿದ್ದವು’ ಎಂದು ರಾಕೇಶ್ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಹಿಂದೂ ಎಂದು ಬಿಂಬಿಸಲು ಸ್ಥಳೀಯ ವಿಳಾಸವೂ ಸೇರಿದಂತೆ ನಕಲಿ ಗುರುತಿನ ಚೀಟಿಯನ್ನು ಎಲ್‌ಇಟಿ ನೀಡಿತ್ತು. ಹಿಂದೂ ಉಗ್ರರ ಕೃತ್ಯ ಎಂದು ನಂಬಿಕೆ ಬರಬೇಕು ಎಂದು ಕಸಬ್ ಕೈಗೆ ಕೆಂಪು ದಾರವನ್ನು ಕಟ್ಟಲಾಗಿತ್ತು. ಅಂದು ಕೊಂಡಂತೆ ಆಗಿದ್ದರೆ ಪತ್ರಿಕೆಗಳಲ್ಲಿ ‘ಹಿಂದೂ ಉಗ್ರರಿಂದ ದಾಳಿ’ ಎಂಬ ತಲೆಬರಹ ಇರುತ್ತಿತ್ತು. ಅದಕ್ಕಿಂತಲೂ ಹೆಚ್ಚಾಗಿ ವಿದ್ಯುನ್ಮಾನ ಮಾಧ್ಯಮಗಳು ಬೆಂಗಳೂರಿನಲ್ಲಿ ಆತನ ಕುಟುಂಬ ಸದಸ್ಯರು, ನೆರೆವಾಸಿಗಳ ಸಂದರ್ಶನಕ್ಕೆ ಸಾಲುಗಟ್ಟಿರುತ್ತಿದ್ದರು. ಆದರೆ, ಹಾಗಾಗಲಿಲ್ಲ. ಆತ ಮಹಮ್ಮದ್ ಅಜ್ಮಲ್ ಅಮಿರ್ ಕಸಬ್, ಪಾಕಿಸ್ತಾನದ ಫರೀದ್‌ಕೋಟ್ ನಿವಾಸಿ ಎಂದೇ ಉಳಿದುಕೊಂಡ ಎಂದರು.
ಕಸಬ್‌ನನ್ನು ಜೀವಂತ ಹಿಡಿಯುವಲ್ಲಿ ಸಾಹಸ ಮೆರೆದ ಹುತಾತ್ಮ, ಮುಂಬೈನ ಕಾನ್‌ಸ್ಟೆಬಲ್ ತುಕಾರಾಂ ಒಂಬ್ಲೆ ಅವರ ಯತ್ನವು ಎಲ್‌ಇಟಿಯ ಯೋಜನೆಯನ್ನು ಬುಡಮೇಲಾಗಿಸಿತ್ತು ಎಂದು ಬರೆದಿದ್ದಾರೆ.
ಕೃತಿಯ ಪ್ರಕಾರ, ದರೋಡೆ ಕೃತ್ಯ ಎಸಗಲು ಕಸಬ್ ಎಲ್‌ಇಟಿ ಸೇರಿಕೊಂಡಿದ್ದ. ಜಿಹಾದ್‌ಗೂ ಆತನಿಗೂ ಸಂಬಂಧವಿರಲಿಲ್ಲ. ಭಾರತದಲ್ಲಿ ಮುಸಲ್ಮಾನರಿಗೆ ನಮಾಜ್ ಮಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ನಂಬುವಂತೆ ಮಾಡಲಾಗಿತ್ತು. ಆದರೆ, ಮೆಟ್ರೊ ಬಳಿಯ ಮಸೀದಿಗೆ ಭೇಟಿ ನೀಡಿದ್ದಾಗ ಅಲ್ಲಿನ ಚಿತ್ರಣ ಕಂಡು ದಿಗ್ಭ್ರಮೆಗೊಂಡಿದ್ದ ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಕಸಬ್‌ನನ್ನು ಕೃತ್ಯಕ್ಕೆ ನಿಯೋಜಿಸುವ ಮುನ್ನ ಒಂದು ವಾರ ರಜೆ ನೀಡಿದ್ದು, ₹ 1.25 ಲಕ್ಷ ನೀಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.