ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಬಿಸಿ ತುಪ್ಪವಾಗಿರುವ ಶತ್ರುಘ್ನ, ಆಜಾದ್‌ಗೆ ಬಿಜೆಪಿ ಖೆಡ್ಡಾ

ಐವರು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ಕೈತಪ್ಪುವ ಸಾಧ್ಯತೆ
Last Updated 28 ಡಿಸೆಂಬರ್ 2018, 20:01 IST
ಅಕ್ಷರ ಗಾತ್ರ

ಪಟ್ನಾ: ಬಿಜೆಪಿಗೆ ಬಿಸಿ ತುಪ್ಪವಾಗಿರುವ ಸಂಸದರಾದ ಶತ್ರುಘ್ನ ಸಿನ್ಹಾ ಹಾಗೂ ಕೀರ್ತಿ ಆಜಾದ್‌ ಸೇರಿದಂತೆ ಐವರು ಹಾಲಿ ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ, ಜೆಡಿಯು ಮತ್ತು ಎಲ್‌ಜೆಪಿ ಸ್ಥಾನ ಹೊಂದಾಣಿಕೆ ನಂತರ ಬಿಜೆಪಿಯ ಯಾವ ಹಾಲಿ ಸಂಸದರಿಗೆ ಟಿಕೆಟ್‌ ತಪ್ಪಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಸ್ಥಾನ ಹೊಂದಾಣಿಕೆ ಅವಕಾಶವನ್ನು ಅತ್ಯಂತ ಜಾಣ್ಮೆಯಿಂದ ಉಪಯೋಗಿಸಿಕೊಂಡಿರುವ ಬಿಜೆಪಿ ವರಿಷ್ಠರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.

ಪಟ್ನಾ ಸಾಹಿಬ್‌ ಮತ್ತು ದರ್ಭಾಂಗ ಲೋಕಸಭಾ ಕ್ಷೇತ್ರಗಳನ್ನು ಜೆಡಿಯುಗೆ ಬಿಟ್ಟು ಕೊಡಲು ನಿರ್ಧರಿಸಿರುವ ಬಿಜೆಪಿ ವರಿಷ್ಠರು ಆ ಮೂಲಕ ಬಂಡುಕೋರರ ಧ್ವನಿ ಅಡಗಿಸಲು ಮುಂದಾಗಿದ್ದಾರೆ.

ನಟ ಶತ್ರುಘ್ನ ಸಿನ್ಹಾ ಅವರು ಎರಡು ಅವಧಿಗೆ ಬಿಹಾರದ ಪಟ್ನಾ ಸಾಹಿಬ್‌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಮಾಜಿ ಕ್ರಿಕೆಟ್‌ ಆಟಗಾರ ಆಜಾದ್‌ ದರ್ಭಾಂಗ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ನಟ ಶತ್ರುಘ್ನ ಸಿನ್ಹಾ ಅವರು ಮೋದಿ ವಿರೋಧಿ ಪಾಳಿಯಲ್ಲಿ ಗುರುತಿಸಿಕೊಂಡಿದ್ದರು.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಕಟ್ಟಾ ವಿರೋಧಿಯಾಗಿರುವ ಕೀರ್ತಿ ಆಜಾದ್‌ ಅವರನ್ನು ಈಗಾಗಲೇ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯಲ್ಲಿ ಜೇಟ್ಲಿ ಅಕ್ರಮ ಎಸಗಿದ್ದಾರೆ ಎಂದು ಆಜಾದ್‌ ಬಹಿರಂಗವಾಗಿ ಆರೋಪ ಮಾಡುವ ಮೂಲಕ ಬಿಜೆಪಿ ವರಿಷ್ಠರ ಅವಕೃಪೆಗೆ ಪಾತ್ರರಾಗಿದ್ದರು.

ಆಜಾದ್‌ ಪ್ರತಿನಿಧಿಸುತ್ತಿದ್ದ ದರ್ಭಾಂಗ್‌ ಕ್ಷೇತ್ರದಿಂದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆಪ್ತ ಸಂಜಯ್‌ ಝಾ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ನಿತೀಶ್‌ ಕುಮಾರ್‌ ಸೇಡು: ಜೆಡಿಯು ತೊರೆದು 2014ರಲ್ಲಿ ಬಿಜೆಪಿ ಸೇರಿ ಸಂಸದರಾಗಿದ್ದ ಛೆಡಿ ಪಾಸ್ವಾನ್‌, ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಸತೀಶ್‌ ದುಬೆ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೆಡಿಯುಗೆ ಕೈಕೊಟ್ಟು ಬಿಜೆಪಿ ಸೇರಿದ ಛೆಡಿ ಪಾಸ್ವಾನ್‌ ಮೇಲೆ ನಿತೀಶ್‌ ಕುಮಾರ್‌ ತೀವ್ರ ಅಸಮಾಧಾನವಿದೆ. ಹೀಗಾಗಿ ಛೆಡಿ ಪ್ರತಿನಿಧಿಸುತ್ತಿದ್ದ ಸಸಾರಾಮ್‌ ಜೆಡಿಯು ಪಾಲಾಗಲಿದೆ. ವಾಲ್ಮೀಕಿನಗರದ ಸಂಸದ ದುಬೆ ಅಪರಾಧ ಹಿನ್ನೆಲೆ ಅವರಿಗೆ ಮುಳುವಾಗಲಿದೆ.

ಕನ್ಹಯ್ಯಾ ವಿರುದ್ಧ ಎಲ್‌ಜೆಪಿ ಅಭ್ಯರ್ಥಿ

ಒಂದು ಕಾಲಕ್ಕೆ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಪ್ರತಿನಿಧಿಸುತ್ತಿದ್ದ ಬಿಹಾರದ ಪ್ರಸಿದ್ಧ ಬೇಗುಸರಾಯ್‌ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡಲು ಬಿಜೆಪಿ ಒಪ್ಪಿಕೊಂಡಿದೆ.

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಂಸದ ಭೋಲಾ ಸಿಂಗ್‌ ಇತ್ತೀಚೆಗೆ ಕೊನೆಯುಸಿರೆಳೆದಿದ್ದಾರೆ.

ಎಡ ಪಕ್ಷಗಳ ಭದ್ರಕೋಟೆಯಾಗಿರುವ ಬೇಗುಸರಾಯ್‌ ಕ್ಷೇತ್ರ ಈ ಬಾರಿ ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕಜನಶಕ್ತಿ (ಎಲ್‌ಜೆಪಿ) ಪಕ್ಷದ ಪಾಲಾಗಲಿದೆ ಎಂದು ಮೈತ್ರಿಕೂಟದ ಅಧಿಕೃತ ಮೂಲಗಳು ತಿಳಿಸಿವೆ.

ಈ ಕ್ಷೇತ್ರದಿಂದ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ ಅವರು ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಕನ್ಹಯ್ಯಾ ಕುಮಾರ್‌ ಮೂಲತಃ ಬೇಗುಸರಾಯ್‌ ನಿವಾಸಿ.

ಸ್ಥಾನ ಹೊಂದಾಣಿಕೆ

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ 31 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಇದರಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆದ್ದಿತ್ತು.

2019ರ ಚುನಾವಣೆಗೆ ಬಿಜೆಪಿ 17, ಜೆಡಿಯು 17 ಹಾಗೂ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) 6 ಸ್ಥಾನಗಳನ್ನು ನೀಡಲಾಗಿದೆ. ಸದ್ಯ ಬಿಜೆಪಿ ಗೆದ್ದಿರುವ ಐದು ಲೋಕಸಭಾ ಕ್ಷೇತ್ರಗಳನ್ನು ಜೆಡಿಯುಗೆ ಬಿಟ್ಟು ಕೊಡಬೇಕಾಗಿದೆ.

* ಜೆಡಿಯುಗೆ ಈ ಕ್ಷೇತ್ರಗಳನ್ನು ಬಿಟ್ಟು ಕೊಡುವ ಮೂಲಕ ಬಿಜೆಪಿ ಲೋಕಸಭೆ ಚುನಾವಣೆಗೂ ಮುನ್ನವೇ ಐದು ಸ್ಥಾನಗಳನ್ನು ಕಳೆದುಕೊಂಡಿದೆ

–ಶತ್ರುಘ್ನ ಸಿನ್ಹಾ,ನಟ, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT