ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ಗೆ ಆಧಾರ್‌ ‘ಸುಪ್ರೀಂ’ನಲ್ಲೇ ವಿಚಾರಣೆ

ಸಾಮಾಜಿಕ ಜಾಲತಾಣದ ಖಾತೆಗಳಿಗೆ ಆಧಾರ್ ಜೋಡಣೆ ಅರ್ಜಿ
Last Updated 23 ಅಕ್ಟೋಬರ್ 2019, 3:46 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಜಾಲತಾಣದ ಖಾತೆಗಳಿಗೆ ಆಧಾರ್ ಅನ್ನು ಜೋಡಿಸುವಂತೆ ಕೋರಿ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ವರ್ಗಾಯಿಸಲಾಗಿದೆ.

ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಸಾಮಾಜಿಕ ಜಾಲತಾಣ ಸಂಸ್ಥೆ– ಫೇಸ್‌ಬುಕ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ಪೀಠ ಪುರಸ್ಕರಿಸಿದೆ.

ಎಲ್ಲ ಪ್ರಕರಣಗಳನ್ನು 2020ರ ಜನವರಿ ಕೊನೆಯ ವಾರದೊಳಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎದುರು ಇರಿಸುವಂತೆ ಸೂಚಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ಸೂಕ್ತ ಪೀಠಕ್ಕೆ ವಹಿಸಲಿದ್ದಾರೆ.

ವರ್ಗಾವಣೆಗೆ ಬೇಡಿಕೆಯಿಟ್ಟಿದ್ದ ಫೇಸ್‌ಬುಕ್ ನಿರ್ಧಾರ ವಿರೋಧಿಸುವುದನ್ನು ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕೈಬಿಟ್ಟರು. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಬಳಕೆದಾರರ ಖಾಸಗಿತನ ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಭೌಮತೆ ಕಾಯ್ದುಕೊಳ್ಳುವ ಯತ್ನವಿದು’ ಎಂದು ಸ್ಪಷ್ಟಪಡಿಸಿದರು.

ಬಳಕೆದಾರರ ಖಾಸಗಿತನ ಉಲ್ಲಂಘನೆ ಬಗ್ಗೆ ಕೆಲವು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.

ಮಾರ್ಗಸೂಚಿಗೆ 3 ತಿಂಗಳ ಅವಕಾಶ

ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ರಚಿಸಲಾಗುತ್ತಿರುವ ಮಾರ್ಗಸೂಚಿಗಳನ್ನು ಮುಂದಿನ ಜನವರಿಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

‘ಪ್ರಜಾಪ್ರಭುತ್ವಕ್ಕೆ ಹಾನಿ ಉಂಟುಮಾಡಬಲ್ಲ ಅಸ್ತ್ರವಾಗಿ ಇಂಟರ್‌ನೆಟ್‌ ರೂಪುಗೊಳ್ಳುತ್ತಿದೆ’ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT