ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದ ಮುನ್ನೆಲೆಯಲ್ಲಿ ಅಯೋಧ್ಯೆ: ದೇಶದ ಉದ್ದಗಲಕ್ಕೆ ಪಸರಿಸಿದ ಅಡ್ವಾಣಿ

Last Updated 9 ನವೆಂಬರ್ 2019, 19:33 IST
ಅಕ್ಷರ ಗಾತ್ರ

ವಿವಾದವನ್ನು ದೇಶದ ಉದ್ದಗಲಕ್ಕೆ ಪಸರಿಸಿದ ಅಡ್ವಾಣಿ
1986ರಲ್ಲಿ ಬಾಬರಿ ಮಸೀದಿಯ ಮುಚ್ಚಿದ್ದ ಬಾಗಿಲನ್ನು ತೆರೆಸುವ ಮೂಲಕ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ರಾಮ ಭಕ್ತರಿಗೆ ಪೂಜೆಗೆ ಅವಕಾಶ ನೀಡಿದರು. ಅದು ರಾಜಕೀಯ ಉದ್ದೇಶದ ನಡೆಯಾಗಿತ್ತು. ಆದರೆ, ಅಯೋಧ್ಯೆ ವಿಚಾರದಲ್ಲಿ ರಾಜಕೀಯ ಹೆಜ್ಜೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು ಬಿಜೆಪಿಯ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ.

ಅಲ್ಲಿಯವರೆಗೂ ವಿಶ್ವಹಿಂದೂ ಪರಿಷತ್‌ ಹಾಗೂ ಇತರ ಹಿಂದೂ ಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲವನ್ನಷ್ಟೇ ನೀಡುತ್ತಿದ್ದ ಬಿಜೆಪಿ, 1980ರ ದಶಕದ ಕೊನೆಯಲ್ಲಿ ಹೋರಾಟವನ್ನು ಸಾರಾಸಗಟಾಗಿ ತನ್ನ ಕೈಗೆತ್ತಿಕೊಂಡಿತು. ಅದರ ಪರಿಣಾಮವೇ 1990ರಲ್ಲಿ ಅಡ್ವಾಣಿ ಅವರು ಆರಂಭಿಸಿದ ‘ರಾಮ ರಥಯಾತ್ರೆ’. ಇದು ಅಯೋಧ್ಯೆ ಹೋರಾಟವನ್ನು ಭಾರತದ ರಾಜಕಾರಣದ ಮುನ್ನೆಲೆಯಲ್ಲಿ ಗಟ್ಟಿಯಾಗಿ
ಪ್ರತಿಷ್ಠಾಪಿಸಿಬಿಟ್ಟಿತು. ಜತೆಗೆ ಬಿಜೆಪಿಗೆ ರಾಜಕೀಯ ಪಕ್ಷವಾಗಿ ದೃಢ ನೆಲೆಯನ್ನೂ ಒದಗಿಸಿತು.

‘ವಿಎಚ್‌ಪಿಯ ಹೋರಾಟವನ್ನು ಬೆಂಬಲಿಸುವುದಷ್ಟೇ ರಥಯಾತ್ರೆಯ ಉದ್ದೇಶ’ ಎಂದು ಹೇಳಿಕೊಂಡಿದ್ದರೂ, ಈ ಯಾತ್ರೆಯು ಅಡ್ವಾಣಿಯ ನಾಯಕತ್ವವನ್ನು ಹೊಸ ಎತ್ತರಕ್ಕೆ ಏರಿಸುವುದರ ಜೊತೆಗೆ, ಬಿಜೆಪಿಗೆ ದೇಶದಾದ್ಯಂತ, ವಿಶೇಷವಾಗಿ ಉತ್ತರ ಭಾರತದಲ್ಲಿ ನೆಲೆ ವಿಸ್ತರಣೆಗೆ ಮತ್ತು ಆ ನೆಲೆಯನ್ನು ಗಟ್ಟಿ ಮಾಡಿಕೊಳ್ಳುವಲ್ಲಿಯೂ ಮಹತ್ವದ ಪಾತ್ರ ವಹಿಸಿತು ಎಂಬುದೂ ನಿಜ.

1990ರ ಸೆಪ್ಟೆಂಬರ್‌ 25ರಂದು ಸೋಮನಾಥದಿಂದ ಅಡ್ವಾಣಿ ಅವರು ರಾಮ ರಥಯಾತ್ರೆ ಆರಂಭಿಸಿದರು. ಅದು ಅಯೋಧ್ಯೆಯಲ್ಲಿ ಕೊನೆಗೊಳ್ಳಬೇಕಾಗಿತ್ತು. ಸ್ವತಂತ್ರ ಭಾರತದಲ್ಲಿ ಅದಕ್ಕೂ ಹಿಂದೆ ಇಂಥ ಯಾತ್ರೆ ನಡೆದಿರಲಿಲ್ಲ. ಪ್ರತಿ ದಿನ ಕನಿಷ್ಠ 300 ಕಿ.ಮೀ. ಪ್ರಯಾಣ, ದಾರಿಯುದ್ದಕ್ಕೂ ನೂರಾರು ಗ್ರಾಮಗಳಿಗೆ ಭೇಟಿ, ದಿನಕ್ಕೆ ಐದರಿಂದ ಆರು ರ್‍ಯಾಲಿಗಳಲ್ಲಿ ಭಾಷಣ, ಸಾವಿರಾರು ಸ್ವಯಂಸೇವಕರ ಪಾಲ್ಗೊಳ್ಳುವಿಕೆ... ಒಟ್ಟಿನಲ್ಲಿ ಈ ಯಾತ್ರೆಯು ಹಿಂದೂ ಸಮುದಾಯದಲ್ಲಿ ಧಾರ್ಮಿಕ ಭಾವನೆಯ ಜೊತೆಗೆ ಉಗ್ರ ಧಾರ್ಮಿಕತೆಯನ್ನೂ ಜಾಗೃತಗೊಳಿಸಿತು. ದೇಶದ ಅತಿ ದೊಡ್ಡ ಚಳವಳಿಗಳಲ್ಲಿ ಇದೂ ಒಂದು ಎಂದು ಗುರುತಿಸಬಹುದಾಗಿದೆ.

ಯಾತ್ರೆಯ ಸಂದರ್ಭದಲ್ಲಿ ನಡೆದ ಹಲವು ರ್‍ಯಾಲಿಗಳಲ್ಲಿ ಪ್ರಚೋದನಕಾರಿ ಮಾತುಗಳು ಕೇಳಿಬಂದವು. ಮಹಾರಾಷ್ಟ್ರದಲ್ಲಿ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್‌ ಠಾಕ್ರೆ ಅವರು ಕೆಲವು ರ್‍ಯಾಲಿಗಳಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಪರಿಣಾಮ, ಯಾತ್ರೆಯ ಸಂದರ್ಭದಲ್ಲಿ ಉತ್ತರ ಭಾರತದ ಅನೇಕ ನಗರಗಳಲ್ಲಿ ಗಲಭೆಗಳು ನಡೆದವು. ಕೆಲವರು ಪ್ರಾಣ ಕಳೆದುಕೊಂಡರು. ಯಾತ್ರೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಿದವು. ಸರ್ಕಾರವು ಅಡ್ವಾಣಿಗೆ ಎಚ್ಚರಿಕೆಗಳನ್ನು ರವಾನಿಸಿತು. ದೆಹಲಿಯಲ್ಲೇ ಕೆಲವು ದಿನಗಳ ಕಾಲ ಉಳಿದ ಅಡ್ವಾಣಿ, ‘ಧೈರ್ಯವಿದ್ದರೆ ಬಂಧಿಸಿ’ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. ಗಲಭೆಗಳು ಹೆಚ್ಚಬಹುದೆಂಬ ಕಾರಣಕ್ಕೆ ಸರ್ಕಾರ ಅವರನ್ನು ಬಂಧಿಸಲಿಲ್ಲ. ಆದರೆ ಅಕ್ಟೋಬರ್‌, 23ರಂದು ಅಡ್ವಾಣಿಯನ್ನು ಬಂಧಿಸಲು ಪ್ರಧಾನಿ ವಿ.ಪಿ. ಸಿಂಗ್‌ ಅವರು ಬಿಹಾರದ ಮುಖ್ಯಮಂತ್ರಿ ಲಾಲುಪ್ರಸಾದ್‌ ಅವರಿಗೆ ಅನುಮತಿ ನೀಡಿದರು. ಬಿಹಾರ ಸರ್ಕಾರವು ಅಡ್ವಾಣಿಯನ್ನು ಬಂಧಿಸಿ ಅತಿಥಿಗೃಹದಲ್ಲಿಟ್ಟಿತು.

ಸರ್ಕಾರದ ಕಠಿಣ ಕ್ರಮಗಳ ಹೊರತಾಗಿಯೂ ಸಾವಿರಾರು ಕಾರ್ಯಕರ್ತರು ಯಾತ್ರೆಯನ್ನು ಮುಂದುವರಿಸಿ ಅಯೋಧ್ಯೆಯತ್ತ ಹೊರಟರು. ಉತ್ತರ ಪ್ರದೇಶದಲ್ಲಿ 1.50 ಲಕ್ಷ ಕಾರ್ಯಕರ್ತರನ್ನು ಬಂಧಿಸಲಾಯಿತು. ಅಯೋಧ್ಯೆಯಲ್ಲಿ ಸ್ವಯಂಸೇವಕರು– ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ನಡೆಯಿತು. ಈ ಘರ್ಷಣೆಯಲ್ಲಿ ಸುಮಾರು 20 ಮಂದಿ ಪ್ರಾಣ ತೆತ್ತರು. ಇದು ದೇಶದ ವಿವಿಧ ಭಾಗಗಳಲ್ಲಿ ಗಲಭೆಗಳು ಸೃಷ್ಟಿಯಾಗಲು ಕಾರಣವಾಯಿತು. ನೂರಾರು ಮಂದಿ ಸತ್ತರು. ಇಡೀ ದೇಶ ಕೆಂಡದ ಮೇಲೆ ನಿಲ್ಲುವ ಸಂದರ್ಭ ಸೃಷ್ಟಿಯಾಯಿತು.

ಇಂಥ ಯಾವುದೇ ಘಟನೆ ನಡೆದಾಗ ಅದಕ್ಕೆ ರಾಜಕೀಯ ಪ್ರತಿಕ್ರಿಯೆಯೂ ನಡೆಯುವುದು ಸಾಮಾನ್ಯ. 1990ರಲ್ಲೂ ಅದೇ ನಡೆಯಿತು. ವಿ.ಪಿ. ಸಿಂಗ್‌ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬಾಹ್ಯ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿತು. 1991ರಲ್ಲಿ ಮತ್ತೆ ಚುನಾವಣೆ ನಡೆಯಿತು. ಅದರಲ್ಲಿ ಬಿಜೆಪಿಯು ಗಮನಾರ್ಹ ಸಾಧನೆಯನ್ನು ಮಾಡಿತು. ಬಿಜೆಪಿಯ ಮತಗಳಿಕೆ ಪ್ರಮಾಣ ದ್ವಿಗುಣಗೊಂಡಿತ್ತು. ಕರ್ನಾಟಕ, ಆಂಧ್ರಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗಳಿಸಿತು. ಲೋಕಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವೆನಿಸಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು.

ರಾಜಕೀಯವಾಗಿ ಬಲಿಷ್ಠಗೊಂಡ ಬಿಜೆಪಿ ಆ ನಂತರವೂ ಹೋರಾಟವನ್ನು ಮುಂದುವರಿಸಿತು. 1992ರಲ್ಲಿ ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ಕರಸೇವೆ ನಡೆದು, ಡಿಸೆಂಬರ್‌ 6ರಂದು ವಿವಾದಿತ ಕಟ್ಟಡವನ್ನು ಕೆಡವಲಾಯಿತು.

ವಿವಾದದ ಬೀಗ ತೆಗೆದ ರಾಜೀವ್‌ ಗಾಂಧಿ
‘ವಿಚ್ಛೇದಿತ ಮಹಿಳೆ ಶಾಬಾನೊ, ಆಕೆಯ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು’ ಎಂದು ಸುಪ್ರೀಂ ಕೋರ್ಟ್‌ 1985ರ ಏಪ್ರಿಲ್‌ 23ರಂದು ತೀರ್ಪು ನೀಡಿತು. ಒಂದೂವರೆ ಶತಮಾನ ಹಳೆಯದಾದ ಅಯೋಧ್ಯೆ ನಿವೇಶನ ವಿವಾದದ ದಿಕ್ಕನ್ನು ಬದಲಿಸಲು ಈ ತೀರ್ಪು ಕಾರಣವಾಯಿತು ಎಂಬುದು ವಿಚಿತ್ರವೆನಿಸಿದರೂ ಸತ್ಯ.

ಶಾಬಾನೊ ಪ್ರಕರಣದ ತೀರ್ಪು, ಮುಸ್ಲಿಂ ಮೂಲಭೂತವಾದಿಗಳ ಅಸಮಾಧಾನಕ್ಕೆ ಕಾರಣವಾಯಿತು. ‘ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ತಿದ್ದುವ ಅಧಿಕಾರ ಯಾರಿಗೂ ಇಲ್ಲ’ ಎಂದು ಅವರು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಮೇಲೆ ಒತ್ತಡ ಹೇರಿದರು. ಕಾಂಗ್ರೆಸ್‌ ಪಕ್ಷದ ವೋಟ್‌ಬ್ಯಾಂಕ್‌ಗೆ ಈ ತೀರ್ಪು ಕನ್ನಹಾಕಬಹುದು ಎಂದು ಭಾವಿಸಿದ ರಾಜೀವ್‌, ಕಾನೂನು ತಿದ್ದುಪಡಿ ಮೂಲಕ ಸುಪ್ರೀಂ ಕೋರ್ಟ್‌ನ ತೀರ್ಪು ಅಸಿಂಧುವಾಗುವಂತೆ ಮಾಡಿದರು. ಇದು, ದೇಶದಲ್ಲಿ ಇನ್ನೊಂದು ರೀತಿಯ ಚರ್ಚೆ ಹುಟ್ಟಿಕೊಳ್ಳಲು ಕಾರಣವಾಯಿತು.

‘ಧರ್ಮದ ಆಧಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್‌ನದ್ದು ಹುಸಿ ಜಾತ್ಯತೀತವಾದ’ ಎಂಬ ಚರ್ಚೆ ಜೋರಾಯಿತು. ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದ ವಿಶ್ವಹಿಂದೂ ಪರಿಷತ್ತಿಗೆ ಇದು ಹೊಸ ಅಸ್ತ್ರವಾಗಿ ಲಭಿಸಿತು. ಹಿಂದೂಗಳು ಕಾಂಗ್ರೆಸ್‌ನಿಂದ ದೂರವಾಗುತ್ತಿರುವುದು ರಾಜೀವ್‌ ಗಾಂಧಿಗೆ ಸ್ಪಷ್ಟವಾಗಿ ಕಾಣಿಸತೊಡಗಿತು. ಅವರನ್ನೂ ಸಮಾಧಾನಪಡಿಸುವ ಅನಿವಾರ್ಯತೆ ಎದುರಾದಾಗ ರಾಜೀವ್‌ ಅವರ ಕೈಗೆ ಸಿಕ್ಕಿದ್ದು, ಅಯೋಧ್ಯೆಯ ರಾಮಮಂದಿರಕ್ಕೆ ಜಡಿದಿದ್ದ ಬೀಗದ ಕೈಗಳು. ಬೀಗ ತೆಗೆಸಿ, ಪೂಜೆಗೆ ಅವಕಾಶ ನೀಡಲಾಯಿತು.

ಈ ತೀರ್ಮಾನದ ಮೂಲಕ ಎರಡೂ ಧರ್ಮೀಯರ ಆತಂಕಗಳನ್ನು ನಿವಾರಿಸಬಹುದು ಎಂಬುದು ರಾಜೀವ್ ಹಾಗೂ ಕಾಂಗ್ರೆಸ್‌ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ ಎಲ್ಲವೂ ಅವರು ಭಾವಿಸಿದಂತೆ ನಡೆಯಲಿಲ್ಲ. ಉದ್ವಿಗ್ನತೆ ಹೆಚ್ಚಾಯಿತು. ಹಿಂದುತ್ವದ ರಾಜಕಾರಣವು ಪ್ರವರ್ಧಮಾನಕ್ಕೆ ಬರುತ್ತಿದ್ದ ವೇಳೆಯಲ್ಲೇ ಅಲ್ಪಸಂಖ್ಯಾತ ಸಮುದಾಯದ ‘ವೈಯಕ್ತಿಕ ಕಾನೂನಿನ’ ನಿಯಂತ್ರಣ ವಿಚಾರವಾಗಿ ಮಧ್ಯಪ್ರವೇಶ ಮಾಡಿದ್ದು ರಾಜೀವ್‌ಗೆ ದುಬಾರಿಯಾಗಿ ಪರಿಣಮಿಸಿತು.

ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲೇಬೇಕು’ ಎಂಬ ಹೋರಾಟವನ್ನು ತೀವ್ರಗೊಳಿಸಿದವು. ಶಾಬಾನೊ ಪ್ರಕರಣದ ನಂತರ, ‘ದೇಶದಲ್ಲಿ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ’ ಎಂದು ಆತಂಕಕ್ಕೆ ಒಳಗಾಗಿದ್ದ ಹಿಂದೂ ಮಧ್ಯಮವರ್ಗವು ಬಿಜೆಪಿಯತ್ತ ವಾಲಲು ಆರಂಭಿಸಿತು. ಇದರ ಜೊತೆಯಲ್ಲೇ 1989ರಲ್ಲಿ ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆಮೂಲೆಗಳಿಂದ ಇಟ್ಟಿಗೆ ಸಂಗ್ರಹ ಅಭಿಯಾನ ಆರಂಭವಾಯಿತು. ಶಿಲಾನ್ಯಾಸಕ್ಕೆ ಸರ್ಕಾರ ಅನುಮತಿ ನೀಡಿತು. 1989ರ ನವೆಂಬರ್‌ ತಿಂಗಳಲ್ಲಿ ಶಿಲಾನ್ಯಾಸವೂ ನಡೆಯಿತು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಹ ರಾಜೀವ್‌ ಮುಂದಾಗಿದ್ದರು. ಆದರೆ ಕಾಂಗ್ರೆಸ್‌ನ ಇತರ ನಾಯಕರು ಅವರನ್ನು ತಡೆದರು. ಬಳಿಕ, ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ರಾಜೀವ್‌ ಅವರು ‘ಸದ್ಭಾವನಾ ಯಾತ್ರೆ’ ಆರಂಭಿಸಿದರು. ಆದರೆ ಫಲ ನೀಡಲಿಲ್ಲ. ಕೆಲವೇ ತಿಂಗಳ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು.

ಅಯೋಧ್ಯೆಯ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡುವವರೆಗೂ, ಧರ್ಮದ ವ್ಯಾಪ್ತಿಯೊಳಗೇ ಇದ್ದ ಅಯೋಧ್ಯೆ ವಿವಾದವು 1986ರಲ್ಲಿ ರಾಜಕೀಯ ಅಂಗಳಕ್ಕೆ ಉರುಳಿತು. ರಾಮಮಂದಿರಕ್ಕೆ ಶಿಲಾನ್ಯಾಸ ನಡೆದ ನಂತರದಲ್ಲಿ ಬಾಬರಿ ಮಸೀದಿ– ರಾಮಮಂದಿರ ಹೋರಾಟವು ರಾಜಕೀಯ ಹಾದಿಯಲ್ಲಿ ನಡೆದದ್ದೇ ಹೆಚ್ಚು. ದೇಶದ ರಾಜಕೀಯ ಚಿತ್ರಣ ಬದಲಾಗುವುದಕ್ಕೆ ಇದು ನಾಂದಿಯಾಯಿತು.

ರಾಜೀವ್‌ ಅವರ ನಿರ್ಧಾರದಿಂದ ಅಯೋಧ್ಯೆಯ ಒಟ್ಟಾರೆ ಚಿತ್ರಣವೇನೂ ಬದಲಾಗಲಿಲ್ಲ. ಭೌತಿಕವಾಗಿ ಅದು ಮಸೀದಿಯಾಗಿಯೇ ಇತ್ತು. ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ. ಆದರೆ, ಹಿಂದೂಗಳು ಅದನ್ನು ರಾಮ ಮಂದಿರ ಎಂದು ಒಪ್ಪಿಕೊಂಡು ತೀರ್ಥಯಾತ್ರೆ ಕೈಗೊಳ್ಳುತ್ತಿದ್ದರು. ಅಂದರೆ, ರಾಜೀವ್‌ ಅವರ ತೀರ್ಮಾನವು ಅಲ್ಲಿನ ವಾಸ್ತವ ಸ್ಥಿತಿಯನ್ನು ಒಂದಿಷ್ಟೂ ಬದಲಿಸಲಿಲ್ಲ. ಆದರೆ ಇದಾದ ನಂತರ ರಾಜೀವ್‌ ಅವರನ್ನು ಕುರಿತ ವ್ಯಾಖ್ಯಾನ ಬದಲಾಯಿತು. ‘ಈ ವಿಚಾರದಲ್ಲಿ ಅವರು ಹಿಂದೂಗಳ ಪರ ವಹಿಸಿದರು’ ಎಂದು ವ್ಯಾಖ್ಯಾನಿಸಲಾಯಿತು. ರಾಜೀವ್‌ ಬಗ್ಗೆ ಇದ್ದ ‘ಆಧುನಿಕ ಚಿಂತನೆಗಳನ್ನು ಹೊಂದಿದವರು ಮತ್ತು ಪ್ರಗತಿಪರ’ ಎಂಬ ವರ್ಚಸ್ಸಿಗೆ ಈ ಎರಡು ನಿರ್ಧಾರಗಳು ಧಕ್ಕೆ ತಂದವು.

ರಾಮಮಂದಿರದ ಬೀಗವನ್ನು ತೆರೆಯುವ ನಿರ್ಧಾರವನ್ನು ರಾಜೀವ್‌ ಕೈಗೊಳ್ಳದೇ ಇದ್ದಿದ್ದರೆ 1989ರ ಲೋಕಸಭಾ ಚುನಾವಣೆಯಲ್ಲಿ 86 ಸ್ಥಾನಗಳನ್ನು ಪಡೆಯಲು ಬಿಜೆಪಿಗೆ ಸಾಧ್ಯವಾಗುತ್ತಿರಲಿಲ್ಲವೇನೋ! ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ವಿ.ಪಿ. ಸಿಂಗ್‌ ನೇತೃತ್ವದಲ್ಲಿ ಸರ್ಕಾರ ರಚನೆಯೂ ಸಾಧ್ಯವಾಗುತ್ತಿರಲಿಲ್ಲವೇನೋ!

1989ರ ಬಳಿಕ ಅಯೋಧ್ಯೆ ವಿಚಾರ ಎಲ್ಲಾ ಪಕ್ಷಗಳಿಗೂ ‘ಅನಿವಾರ್ಯ’ವಾಯಿತು. ಎಡಪಂಥೀಯ ಧೋರಣೆಯ ಬುದ್ಧಿಜೀವಿಗಳು ಪ್ರಧಾನ ವೇದಿಕೆಗೆ ಬಂದು, ‘ಮಸೀದಿ ಇದ್ದ ಜಾಗದಲ್ಲಿ ದೇವಸ್ಥಾನ ಇದ್ದಿರಲೇ ಇಲ್ಲ. ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬುದು ಆಧಾರರಹಿತ ವಾದ. ವಿಶ್ವಹಿಂದೂ ಪರಿಷತ್ತಿನವರು ಈ ವಿವಾದಕ್ಕೆ ರಾಜಕೀಯ ಬೆರೆಸುತ್ತಿದ್ದಾರೆ’ ಎಂಬ ವಾದವನ್ನು ಮುಂದಿಟ್ಟರು.

‘ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ’ ಎಂಬ ‘ಎಲ್ಲರೂ ಒಪ್ಪಿಕೊಂಡಿದ್ದ’ ವಾದವನ್ನು ಬದಲಿಸಲು ಪ್ರಯತ್ನಗಳು ನಡೆದವು. ‘ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ಹಿಂದೂಗಳ ವಾದವನ್ನು ಬ್ರಿಟಿಷರು ಒಪ್ಪಿದ್ದರು. ಆದರೆ, ಅದು ಶತಮಾನಗಳಷ್ಟು ಹಿಂದಿನ ಘಟನೆಯಾಗಿದ್ದರಿಂದ, ಕಟ್ಟಡವನ್ನು ಹಿಂದೂಗಳಿಗೆ ಒಪ್ಪಿಸಲು ಬ್ರಿಟಿಷರು ನಿರಾಕರಿಸಿದ್ದರು’ ಎಂದು ಮುಸ್ಲಿಂ ಪರ ವಾದಿಗಳು 1880ರ ದಶಕದಲ್ಲಿ ನ್ಯಾಯಾಲಯದಲ್ಲಿ ಹೇಳಿದ್ದರು (2003ರಲ್ಲಿ ಅಲ್ಲಿ ಉತ್ಖನನ ನಡೆಸುವಂತೆ ಆದೇಶ ನೀಡುವ ಮೂಲಕ ಈ ವಿಚಾರದಲ್ಲಿ ಇದ್ದ ಎಲ್ಲಾ ಸಂದೇಹಗಳನ್ನೂ ಸುಪ್ರೀಂ ಕೋರ್ಟ್ ದೂರ ಮಾಡಿಕೊಂಡಿತು).

1989ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಾಂಗ್ರೆಸ್‌, ಅಯೋಧ್ಯೆ ವಿಚಾರದಲ್ಲಿ ಚರ್ಚೆ ಆಯೋಜಿಸುವಂತೆ ವಿ.ಪಿ. ಸಿಂಗ್‌ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೇರಿತು. ಚರ್ಚೆಯ ಸಂದರ್ಭದಲ್ಲಿ, ಬುದ್ಧಿಜೀವಿಗಳ ವಾದವನ್ನು ಸಮರ್ಥಿಸಿಕೊಳ್ಳಲು ಬೇಕಾದ ಪುರಾವೆಗಳನ್ನು ನೀಡಲು ಎಡಪಂಥೀಯ ನಾಯಕರಿಗೆ ಸಾಧ್ಯವಾಗಲಿಲ್ಲ. ಆ ಸಮಯದಲ್ಲೇ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿ, ಮುಸ್ಲಿಂ ಸಮುದಾಯದವರಿಗೆ ಪರಿಹಾರ ನೀಡಿ ಜಾಗವನ್ನು ಹಿಂದೂಗಳಿಗೆ ಒಪ್ಪಿಸಿದ್ದಿದ್ದರೆ, ಅಯೋಧ್ಯೆ ವಿವಾದ ಇತ್ಯರ್ಥವಾಗಿ ಈಗ ಮೂರು ದಶಕಗಳಾಗುತ್ತಿದ್ದವು. ಆದರೆ ಹಾಗಾಗಲಿಲ್ಲ, ಸಂಬಂಧ ಇನ್ನಷ್ಟು ಹದಗೆಡುತ್ತಾ ಹೋಯಿತು. 1991ರಲ್ಲಿ ರಾಜೀವ್‌ ಹತ್ಯೆಯಾದರು. ಆ ನಂತರ ಧರ್ಮದ ಆಧಾರದ ಧ್ರುವೀಕರಣವೂ ತೀವ್ರವಾಗುತ್ತಾ ಹೋಯಿತು. 1992ರಲ್ಲಿ ಬಾಬರಿ ಮಸೀದಿ ನೆಲಸಮಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT