ಶನಿವಾರ, ಫೆಬ್ರವರಿ 22, 2020
19 °C

ಬಹುಕೋಟಿ ಸಾಲ ಹಗರಣ: ತನಿಖೆಗೆ ಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇನಾಮಿ ಸಾಲಗಾರರಿಗೆ ಕೋಟ್ಯಂತರ ಮೊತ್ತದ ಸಾಲ ನೀಡಿದ ಹಗರಣಕ್ಕೆ ಸಂಬಂಧಿಸಿದಂತೆ ವಿಜಯನಗರದ ‘ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್‌‌’ ನಿರ್ದೇಶಕರು ಹಾಗೂ ಬೇನಾಮಿ ಸಾಲಗಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌, ನಗರ ಪೊಲೀಸರಿಗೆ ಆದೇಶಿಸಿದೆ.

ವಂಚನೆಗೊಳಗಾದ ಬ್ಯಾಂಕಿನ ಠೇವಣಿದಾರ ಆರ್‌.ಕುಮಾರ್ ದಾಖಲಿಸಿರುವ ಖಾಸಗಿ ದೂರನ್ನು 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಶುಕ್ರವಾರ ವಿಚಾರಣೆ ನಡೆಸಿ, ‘ಮೇಲ್ನೋಟಕ್ಕೆ ದೂರಿನಲ್ಲಿ ಅವ್ಯವಹಾರ ಕಂಡುಬಂದಿರುವ ಕಾರಣ ತನಿಖೆ ನಡೆಸಿ, ಮಾರ್ಚ್‌ 30ರಂದು ಅಂತಿಮ ವರದಿ ಸಲ್ಲಿಸಬೇಕು’ ಎಂದು ವಿಜಯ ನಗರ ಪೊಲೀಸರಿಗೆ ಆದೇಶಿಸಿದರು.

ಜನತಾ ಸೇವಾ ಕೋಆಪರೇಟಿವ್ ಬ್ಯಾಂಕ್‌‌ನ ಅಧ್ಯಕ್ಷ ಸಿ. ರಾಮು, ನಿರ್ದೇಶಕರಾದ ಎಚ್.ಸಿ. ಗೋಪಾಲ್, ಎನ್‌.ಸಿ. ಶ್ಯಾಮನೂರು, ಜಿ. ಸಿದ್ದಪ್ಪ, ಪಿ.ಮರಿಯಪ್ಪ, ಪಿ.ಎಲ್‌.ವೆಂಕಟೇಶ್ ಮೂರ್ತಿ, ಶಿವಲಿಂಗಯ್ಯ, ಸುಮಿತ್ರಾ, ಕೆ.ಜಯರಾಂ, ಎಲ್‌. ರಾಜಮೂರ್ತಿ, ಎನ್‌.ಮಂಜುನಾಥ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯ ಹಾಗೂ ಬೇನಾಮಿ ಸಾಲಗಾರರಾದ ಪ್ರವೀಣ್ ಮೋಹನ್, ಎನ್‌.ಮಹೇಶ್ ಸೇರಿದಂತೆ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಲಾಗಿದೆ.

ಪ್ರಕರಣವೇನು?: ‘2015 ರಿಂದ 2018ರ ಅವಧಿಯಲ್ಲಿ ಬ್ಯಾಂಕ್‌ನ ನಿರ್ದೇಶಕ ಮಂಡಳಿ ನಗರದ ತಿರುಮಲ ಕನ್ಸ್ಟ್ರಕ್ಷನ್ಸ್ ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ₹42 ಕೋಟಿಗೂ ಹೆಚ್ಚು ಮೊತ್ತದ ಸಾಲವನ್ನು ಅನಧಿಕೃತವಾಗಿ ಮಂಜೂರು ಮಾಡಿದೆ. ಈ ಮೂಲಕ ಸಾವಿರಾರು ಠೇವಣಿದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ’ ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರರ ಪರ ವಕೀಲ ಸಿ.ಎಚ್‌.ಹನುಮಂತರಾಯ ವಾದ ಮಂಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)