ಶುಕ್ರವಾರ, ಫೆಬ್ರವರಿ 26, 2021
29 °C
‘ಸ್ಪಷ್ಟ ನಿಲುವು ತಾಳಬೇಕು’

ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ; ರೈತಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಕಷ್ಟದಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಖಾಸಗಿ ಬ್ಯಾಂಕ್‌ಗಳು, ಫೈನಾನ್ಸ್‌ ಕಂಪನಿಗಳು ಸಾಲ ಮರುಪಾವತಿಗಾಗಿ ನಿತ್ಯವೂ ರೈತರಿಗೆ ನೋಟಿಸ್‌ ನೀಡುತ್ತಿವೆ. ಇದರಿಂದಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ 14 ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ.

ಆದರೆ, ಈ ಉತ್ಪನ್ನಗಳು ನಿಗದಿತ ದರಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ. ಸರ್ಕಾರ ಸೂಕ್ತ ಕಾನೂನು ರೂಪಿಸುವ ಮೂಲಕ ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.

ಬೆಳೆ ವಿಮೆ ಯೋಜನೆಯೂ ಕಾಗದದಲ್ಲಿ ಮಾತ್ರ ಜಾರಿಯಾಗಿದೆ. ಸಾವಿರಾರು ಕೋಟಿ ವಿಮಾ ಮೊತ್ತ ಪಾವತಿಸಿರುವ ರೈತರಿಗೆ ಬರಗಾಲ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪದ ಸಂದರ್ಭವೂ ವಿಮೆ ಹಣ ಸಿಗುತ್ತಿಲ್ಲ. ಬದಲಿಗೆ, ವಿಮಾ ಕಂಪೆನಿಗಳಿಗೇ ಹೆಚ್ಚಿನ ಲಾಭವಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ರೈತರ ಒಟ್ಟು ಸಾಲ ₹ 1.17 ಲಕ್ಷ ಕೋಟಿಯಷ್ಟಿದೆ ಎಂದು ಲೆಕ್ಕ ನೀಡಿ, ಆ ಪೈಕಿ ₹ 48,000 ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇಡೀ ರಾಜ್ಯಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಸಹಕಾರಿ ಸಂಸ್ಥೆಗಳಲ್ಲಿನ ಕೆಲವೇ ಕೆಲವು ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಲು ಮುಂದಾಗಿರುವ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರ ಸಾಲದ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂಬ ಸಬೂಬು ನೀಡುತ್ತಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಾಳು ಮೆಣಸು ಆಮದನ್ನು ನಿಷೇಧಿಸುವ ಮೂಲಕ ರಾಜ್ಯದ ಬೆಳೆಗಾರರನ್ನು ಉತ್ತೇಜಿಸಬೇಕು ಎಂದು ಮನು ಸೋಮಯ್ಯ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು