ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ | ಅಂಗಡಿಗಳಿಗೆ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ

ಕೋವಿಡ್‌ ಸೂಕ್ಷ್ಮ ಪ್ರದೇಶಗಳಿಗೆ, ಮಾಲ್‌ಗಳಿಗೆ ಅನ್ವಯಿಸುವುದಿಲ್ಲ
Last Updated 26 ಏಪ್ರಿಲ್ 2020, 3:40 IST
ಅಕ್ಷರ ಗಾತ್ರ

ನವದೆಹಲಿ: ವಾರದ ಹಿಂದೆಯಷ್ಟೇ ಲಾಕ್‌ಡೌನ್‌ನಿಂದ ಕೆಲವು ವಲಯಗಳಿಗೆ ವಿನಾಯಿತಿ ನೀಡಿದ್ದ ಕೇಂದ್ರ ಸರ್ಕಾರವು ಶನಿವಾರದಿಂದ ಜಾರಿಯಾಗುವಂತೆ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳಿಗೂ ವಿನಾಯಿತಿ ನಿಡಿದೆ.

‘ನಗರ ಪ್ರದೇಶದ ವಸತಿ ಸಂಕೀರ್ಣದಲ್ಲಿರುವ ಅಂಗಡಿಗಳು ಮತ್ತು ಪ್ರತ್ಯೇಕವಾಗಿರುವ, ನೋಂದಾಯಿತ ಅಂಗಡಿಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಬಹುದು. ಗ್ರಾಮೀಣ ಮತ್ತು ಅರೆ ನಗರ ಪ್ರದೇಶದ ಎಲ್ಲಾ ನೋಂದಾಯಿತ ಅಂಗಡಿಗಳು ವ್ಯಾಪಾರ ಚಟುವಟಿಕೆಗಳನ್ನು ನಡೆಸಬಹುದು’ ಎಂದು ಕೇಂದ್ರದ ಗೃಹ ಸಚಿವಾಲಯವು ಶುಕ್ರವಾರ ರಾತ್ರಿ ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ.

ನಗರಸಭೆ ಮತ್ತು ನಗರಪಾಲಿಕೆ ವ್ಯಾಪ್ತಿಯೊಳಗೆ ಬಾರದ ವಾಣಿಜ್ಯ ಸಂಕೀರ್ಣಗಳಿಗೂ ವಿನಾಯಿತಿ ನೀಡಬಹುದು. ಆದರೆ, ಇಂಥ ಅಂಗಡಿಗಳಲ್ಲಿ ಹಿಂದೆ ಇದ್ದ ಸಿಬ್ಬಂದಿಯಲ್ಲಿ ಶೇ 50ರಷ್ಟು ಮಂದಿ ಮಾತ್ರ ಕೆಲಸ ಮಾಡಬೇಕು. ಸಿಬ್ಬಂದಿಯು ಕಡ್ಡಾಯವಾಗಿ ಮಾಸ್ಕ್‌, ಕೈಗವಸು ಧರಿಸಿರಬೇಕು ಮತ್ತು ಅಂತರವನ್ನು ಕಾಯ್ದುಕೊಳ್ಳಬೇಕು. ಕೋವಿಡ್‌–19 ಸೂಕ್ಷ್ಮ ಪ್ರದೇಶಗಳಿಗೆ ಮತ್ತು ಮಾಲ್‌ಗಳಲ್ಲಿರುವ ಅಂಗಡಿಗಳಿಗೆ ಈ ಸಡಿಲಿಕೆಯು ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.

ಸರ್ಕಾರದ ಈ ಆದೇಶದಿಂದ ಸಣ್ಣ ವ್ಯಾಪಾರಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಹೋಟೆಲ್‌, ಸಲೂನ್‌ ಮತ್ತು ಮದ್ಯದಂಗಡಿಗಳು, ಚಿತ್ರಮಂದಿರ, ಜಿಮ್‌, ಕ್ರೀಡಾ ಸಂಕೀರ್ಣ, ಈಜುಕೊಳ, ಬಾರ್‌ ಹಾಗೂ ಸಭಾಂಗಣಗಳನ್ನು ತೆರೆಯುವಂತಿಲ್ಲ. ಇ–ಕಾಮರ್ಸ್‌ ಕಂಪನಿಗಳು ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಸೂಚಿಸಲಾಗಿದೆ.

ಏ. 20ರಿಂದ ಜಾರಿಯಾಗುವಂತೆ ಕೃಷಿ, ತೋಟಗಾರಿಕೆ, ಉದ್ಯೋಗ ಖಾತ್ರಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಲವು ಕಂಪನಿಗಳು, ನಗರಪಾಲಿಕೆ ವ್ಯಾಪ್ತಿಯ ಹೊರಗಿನ ಮತ್ತು ಸ್ಥಳೀಯ ಕಾರ್ಮಿಕರನ್ನು ಬಳಸಿ ಮಾಡಬಹುದಾದ ನಿರ್ಮಾಣ ಕಾಮಗಾರಿ ಮುಂತಾದವು
ಗಳಿಗೆ ವಿನಾಯಿತಿ ನೀಡಲಾಗಿತ್ತು.

ಕೆಲ ರಾಜ್ಯಗಳಲ್ಲಿ ಜಾರಿ
ಕೆಲವು ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುಮತಿ ನೀಡಿದ್ದರೂ ಕರ್ನಾಟಕ ರಾಜ್ಯ ಸರ್ಕಾರವು ಲಾಕ್‌ಡೌನ್‌ ಸಡಿಲಿಕೆಯ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

‘ಸದ್ಯಕ್ಕೆ ಲಾಕ್‌ಡೌನ್‌ ಸಡಿಲಿಸುವುದಿಲ್ಲ’ ಎಂದು ಸೋಂಕು ತೀವ್ರವಾಗಿರುವ ಕೆಲವು ರಾಜ್ಯಗಳು ಹೇಳಿವೆ.

ಲಾಕ್‌ಡೌನ್‌ ಅವಧಿ ಮುಗಿಯುವ, ಮೇ 3ರವರೆಗೆ ನಿಯಮಾವಳಿಯಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ರಾಜ್ಯದ ಪರಿಸ್ಥಿತಿಯ ಅವಲೋಕನ ನಡೆಸಿ, ವರದಿ ನೀಡುವಂತೆ ಜಾರ್ಖಂಡ್‌ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ವರದಿ ಬಂದ ನಂತರವೇ ಲಾಕ್‌ಡೌನ್‌ ಸಡಿಲಿಕೆ ಕುರಿತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.

ಕೇರಳ ಸೇರಿದಂತೆ ಹಲವು ರಾಜ್ಯಗಳು, ಕೇಂದ್ರದ ಸೂಚನೆಯಂತೆ ಲಾಕ್‌ಡೌನ್‌ ಅನ್ನು ಸಡಿಲಗೊಳಿಸಿವೆ. ಕೆಲವು ರಾಜ್ಯಗಳಲ್ಲಿ ಶನಿವಾರವೇ ಗ್ರಾಮೀಣ ಪ್ರದೇಶಗಳ ಅಂಗಡಿಗಳು ತೆರೆದಿದ್ದವು.

ತಯಾರಿಕಾ ಘಟಕಕ್ಕೆ ವಿನಾಯಿತಿ
ಬೆಂಗಳೂರು: ತಯಾರಿಕಾ ಘಟಕಗಳಿಗೂ ಲಾಕ್‌ಡೌನ್‌ ನಿರ್ಬಂಧದಿಂದ ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಲಾಕ್‌ಡೌನ್‌ ಸಡಿಲಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ಪೂರಕವಾಗಿ ಇದೇ 22ರಂದು ರಾಜ್ಯ ಸರ್ಕಾರ ಕೆಲವು ನಿರ್ಬಂಧಗಳಿಗೆ ವಿನಾಯಿತಿ ನೀಡಿತ್ತು. ಇದೀಗ ತಯಾರಿಕಾ ಘಟಕಗಳು ಮತ್ತು ಅವುಗಳ ಕಾರ್ಯಾಚರಣೆಗೆ ಸಂಬಂಧಿಸಿದ ಪೂರೈಕೆ ಜಾಲಕ್ಕೂ ವಿನಾಯಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT