ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ 5.0: ವಿನಾಯಿತಿಯೇ ಹೆಚ್ಚು

ಇನ್ನೆರಡು ವಾರ ವಿಸ್ತರಣೆಗೆ ಮುಖ್ಯಮಂತ್ರಿಗಳ ಒತ್ತಾಯ: ಧಾರ್ಮಿಕ ಸ್ಥಳಗಳು, ಹೋಟೆಲ್‌ ತೆರೆಯುವ ಸಾಧ್ಯತೆ
Last Updated 29 ಮೇ 2020, 19:16 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಾಣು ತಡೆಗಾಗಿ ಹೇರಲಾದ ಲಾಕ್‌ಡೌನ್‌ 4.0 ಕೊನೆಯ ಹಂತ ತಲುಪಿದೆ. ಜೂನ್‌ 1ರಿಂದ ಐದನೆಯ ಹಂತದ ಲಾಕ್‌ಡೌನ್‌ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‍ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಭೇಟಿಯಾಗಿ ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಚರ್ಚಿಸಿದ್ದಾರೆ.ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಶಾ ಅವರು ಗುರುವಾರ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಮೋದಿ ಜತೆಗೆ ಅವರು ಹಂಚಿಕೊಂಡಿದ್ದಾರೆ. ಲಾಕ್‌ಡೌನ್‌ ಅನ್ನು ಇನ್ನೂ ಹದಿನೈದು ದಿನ ವಿಸ್ತರಿಸಬೇಕು ಎಂದು ಹೆಚ್ಚಿನ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿರುವುದನ್ನು ಪ್ರಧಾನಿಯ ಗಮನಕ್ಕೆ ತಂದಿದ್ದಾರೆ.

ವ್ಯಾಪಾರ ವಹಿವಾಟುಗಳನ್ನು ಹಳಿಗೆ ತರುವುದಕ್ಕಾಗಿ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಇನ್ನಷ್ಟು ವಿನಾಯಿತಿ ಬೇಕು ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಕೇಂದ್ರವು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರಧಾನಿಯ ಪ್ರತಿ ತಿಂಗಳ ‘ಮನದ ಮಾತು’ ಬಾನುಲಿ ಭಾಷಣ ಇದೇ ಭಾನುವಾರ ಪ್ರಸಾರವಾಗಲಿದೆ. ಈ ಭಾಷಣದಲ್ಲಿಯೇ ಮುಂದಿನ ಲಾಕ್‌ಡೌನ್‌ನ ವಿವರಗಳು ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಅತಿ ಹೆಚ್ಚು ಕೊರೊನಾ ಪ್ರಕರಣಗಳಿರುವ 13 ನಗರಗಳ ಜಿಲ್ಲಾಧಿಕಾರಿಗಳು ಮತ್ತು ನಗರಪಾಲಿಕೆ ಆಯುಕ್ತರ ಜತೆಗೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಗುರುವಾರ ಚರ್ಚೆ ನಡೆಸಿದ್ದಾರೆ. ಹೆಚ್ಚು ಪ್ರಕರಣಗಳಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ ಸೋಂಕು ಪ್ರಸರಣ ತಡೆಗಟ್ಟುವ ಕಾರ್ಯತಂತ್ರವನ್ನು ಕೇಂದ್ರವು ಜಾರಿಗೆ ತರಬಹುದು ಎನ್ನಲಾಗಿದೆ. ಹಾಗಾಗಿ, ಜಿಲ್ಲಾಡಳಿತ ಮತ್ತು ನಗರ ಪಾಲಿಕೆಗಳಿಗೆ ಸೋಂಕು ತಡೆಗಟ್ಟುವುದಕ್ಕಾಗಿ ಹೆಚ್ಚಿನ ಅಧಿಕಾರ ನೀಡುವ ಸಾಧ್ಯತೆಯೂ ಇದೆ.

ಸಾಮಾನ್ಯ ರೈಲು ಸಂಚಾರ ಆರಂಭಿಸುವುದನ್ನು ಇನ್ನೂ ಒಂದು ತಿಂಗಳು ಮುಂದೂಡಬೇಕು ಎಂದು ಪಶ್ಚಿಮ ಬಂಗಾಳ, ಛತ್ತೀಸಗಡ, ಬಿಹಾರ, ರಾಜಸ್ಥಾನ ಮತ್ತು ಒಡಿಶಾ ಸರ್ಕಾರಗಳು ಕೇಂದ್ರವನ್ನು ಕೋರಿವೆ. ರೈಲು ಸಂಚಾರ ಆರಂಭವಾದರೆ ಸೋಂಕು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂಬ ಆತಂಕವನ್ನು ಈ ರಾಜ್ಯಗಳು ವ್ಯಕ್ತಪಡಿಸಿವೆ. ಶ್ರಮಿಕ ವಿಶೇಷ ರೈಲುಗಳು ‘ಕೊರೊನಾ ಎಕ್ಸ್‌ಪ್ರೆಸ್‌’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ರೈಲುಗಳ ಮೂಲಕ ಸಾವಿರಾರು ವಲಸೆ ಕಾರ್ಮಿಕರನ್ನು ರಾಜ್ಯಗಳಿಗೆ ಕಳುಹಿಸುತ್ತಿರುವುದನ್ನು ಅವರು ಟೀಕಿಸಿದ್ದಾರೆ.

ಧಾರ್ಮಿಕ ಸ್ಥಳಗಳನ್ನು ತೆರೆಯಬೇಕು ಎಂಬ ಯೋಚನೆ ಮಮತಾ ಅವರಿಗೆ ಇದೆ. ಹೋಟೆಲುಗಳನ್ನು ಆರಂಭಿಸುವ ಬಗ್ಗೆ ಒಡಿಶಾ ಸರ್ಕಾರ ಯೋಚಿಸುತ್ತಿದೆ. ಹೋಟೆಲ್ ಉದ್ಯಮ, ರೆಸ್ಟೊರೆಂಟ್‌ ಮತ್ತು ಜಿಮ್‌ಗಳಿಗೆ ವಿನಾಯಿತಿ ನೀಡಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳು ಕೂಡ ಲಾಕ್‌ಡೌನ್‌ ನಿರ್ಬಂಧಗಳನ್ನು ಪೂರ್ಣವಾಗಿ ತೆರವು ಮಾಡಲು ಉತ್ಸುಕವಾಗಿಲ್ಲ. ರಾಜ್ಯ ಗಡಿಗಳನ್ನು ತೆರೆಯಬಾರದು ಎಂದು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಹೇಳಿದ್ದಾರೆ.

ಸೋಂಕು ಪ್ರಮಾಣ ಹೆಚ್ಚಾಗಿರುವ ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವಿಮಾನಗಳ ಸಂಖ್ಯೆ ಕಡಿತ ಮಾಡಬೇಕು. ಈ ರಾಜ್ಯಗಳಿಂದ ಬರುವವರ ಪ್ರತ್ಯೇಕವಾಸಕ್ಕೆ ಬೇಕಾದ ಸೌಲಭ್ಯಗಳು ಇಲ್ಲ ಎಂದು ಕರ್ನಾಟಕ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT