ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಮೇ 3ರವರೆಗೆ ಲಾಕ್‌ಡೌನ್: 20ರವರೆಗೆ ದಿಗ್ಬಂಧನ ಕಠಿಣ

ವಾರದ ಬಳಿಕ ಪರಿಸ್ಥಿತಿ ಅವಲೋಕಿಸಿ ವಿನಾಯಿತಿಯ ಚಿಂತನೆ
Last Updated 15 ಏಪ್ರಿಲ್ 2020, 0:50 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್‌ ಮತ್ತೆ 19 ದಿನ ವಿಸ್ತರಣೆಗೊಂಡು ಮೇ 3ರವರೆಗೆ ಜಾರಿಯಲ್ಲಿರಲಿದೆ. ಇದೇ 20ರವರೆಗಿನ ಮೊದಲ ವಾರದಲ್ಲಿ ದಿಗ್ಬಂಧನವು ಹೆಚ್ಚು ಕಟ್ಟುನಿಟ್ಟಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಆಯ್ದ ಕೈಗಾರಿಕೆಗಳಿಗೆ ವಿನಾಯಿತಿ ದೊರೆಯಬಹುದು, ಲಾಕ್‌ಡೌನ್‌ನಿಂದ ಭಾರಿ ಸಂಕಷ್ಟಕ್ಕೆ ಒಳಗಾಗಿರುವ ರೈತರು ಮತ್ತು ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ಬಗ್ಗೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಏನನ್ನೂ ಹೇಳಿಲ್ಲ. ದಿಗ್ಬಂಧನವನ್ನು ಇದೇ 20ರವರೆಗೆ ಕಟ್ಟುನಿಟ್ಟಾಗಿ ಪಾಲಿಸಿದರೆ ಮುಂದಿನ ದಿನಗಳಲ್ಲಿ ವಿನಾಯಿತಿ ದೊರೆಯಬಹುದು ಎಂದು ಅವರು ಹೇಳಿದ್ದಾರೆ.

ಕೊರೊನಾ ಹರಡುವಿಕೆಗೆ ಸಂಬಂಧಿಸಿ ಸೂಕ್ಷ್ಮ (ಹಾಟ್‌ಸ್ಪಾಟ್‌) ಎಂದು ಗುರುತಿಸಲಾಗಿಲ್ಲದ ಪ್ರದೇಶಗಳು ಮತ್ತು ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆ ಆಗುವ ಸಾಧ್ಯತೆ ಇಲ್ಲದ ಪ್ರದೇಶಗಳಲ್ಲಿ ಕೆಲವು ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಷರತ್ತುಬದ್ಧವಾದ ಅನುಮತಿ ನೀಡುವ ಬಗ್ಗೆ 20ರಂದು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎರಡನೇ ಹಂತದ ಲಾಕ್‌ಡೌನ್‌ ಹೇಗಿರಲಿದೆ ಎಂಬ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಸರ್ಕಾರವು ಬುಧವಾರ ಪ್ರಕಟಿಸಲಿದೆ.

ಕೊರೊನಾ ಪಿಡುಗನ್ನು ಎದುರಿಸುವ ಕ್ರಮಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಳಂಬ ಮಾಡಿದೆ ಮತ್ತು ಅಗತ್ಯ ಸನ್ನದ್ಧತೆ ಇರಲಿಲ್ಲ ಎಂಬ ಟೀಕೆಗೆ ಉತ್ತರ ನೀಡಲು ಮೋದಿಯವರು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ಭಾರತದಲ್ಲಿ ಒಂದೇ ಒಂದು ಪ್ರಕರಣ ವರದಿಯಾಗುವುದಕ್ಕೂ ಮೊದಲು ಸೋಂಕು ಇದ್ದ ದೇಶಗಳಿಂದ ಬಂದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕೇವಲ 550 ಪ್ರಕರಣಗಳು ವರದಿಯಾಗಿದ್ದಾಗಲೇ 21 ದಿನಗಳ ಲಾಕ್‌ಡೌನ್‌ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮೋದಿಯವರ ಭಾಷಣಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನಿಖರವಾದ ಕ್ರಮಗಳಿಲ್ಲ ಮತ್ತು ಆರ್ಥಿಕ ಪ‍್ಯಾಕೇಜ್‌ನ ಪ್ರಸ್ತಾಪವಿಲ್ಲ. ಇದೊಂದು ಟೊಳ್ಳು ಭಾಷಣ’ ಎಂದು ವಿರೋಧ ಪಕ್ಷಗಳು ಹೇಳಿವೆ. ಆದರೆ, ಸರ್ಕಾರದ ನಿರ್ಧಾರವನ್ನು ಬೆಂಬಲಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರದ ಸಚಿವರು ಜನರನ್ನು ಕೋರಿದ್ದಾರೆ.

ವಿಮಾನಯಾನ ಸ್ಥಗಿತ

ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಯಾನ ಸೇವೆಗಳನ್ನು ಮೇ 3ರ ಮಧ್ಯರಾತ್ರಿಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ ತಿಳಿಸಿದೆ. ಮೇ. 3ರ ಬಳಿಕ, ಈ ನಿರ್ಬಂಧಗಳನ್ನು ತೆರವು ಮಾಡುವ ಬಗ್ಗೆ ಸರ್ಕಾರ ಯೋಚನೆ ಮಾಡಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ಟಿಕೆಟ್‌ ಕಾಯ್ದಿರಿಸಿದ ಗ್ರಾಹಕರಿಗೆ ಹಣ ಹಿಂದಿರುಗಿಸದಿರಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ. ರದ್ದಾದ ವಿಮಾನಗಳಲ್ಲಿ ಟಿಕೆಟ್‌ ಕಾಯ್ದಿರಿಸಿದವರು ಮುಂದಿನ ದಿನಗಳಲ್ಲಿ ವಿಮಾನ ಯಾನ ಆರಂಭವಾದ ಬಳಿಕ ಪ್ರಯಾಣಿಸಬಹುದಾಗಿದೆ. ಹೆಚ್ಚುವರಿ ಶುಲ್ಕ ಇಲ್ಲದೆಯೇ ಟಿಕೆಟ್‌ ನೀಡಲಾಗುವುದು ಎಂದು ಸಂಸ್ಥೆಗಳು ಹೇಳಿವೆ.

ಮೇ 3 ವರೆಗೆ ರೈಲು ಸಂಚಾರ ಇಲ್ಲ

ಪ್ರಯಾಣಿಕ ರೈಲುಗಳ ಸಂಚಾರವನ್ನು ಮೇ 3ರ ವರೆಗೆ ಆರಂಭಿಸದಿರಲು ಭಾರತೀಯ ರೈಲ್ವೆ ನಿರ್ಧರಿಸಿದೆ.ಲಾಕ್‌ಡೌನ್‌ ವಿಸ್ತರಣೆಯ ಬೆನ್ನಲ್ಲೇ ರೈಲ್ವೆ ಈ ನಿರ್ಧಾರ ಪ್ರಕಟಿಸಿದೆ.ಅಗತ್ಯ ವಸ್ತುಗಳ ಸಾಗಾಟಕ್ಕೆ ಸರಕು ಸಾಗಣೆ ರೈಲುಗಳ ಸಂಚಾರ ಇರಲಿದೆ.

ಮರುಪಾವತಿ: ಮೇ 3ರವರೆಗೆ ಸಂಚಾರ ರದ್ದು ಮಾಡಲಾದ ರೈಲುಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿರುವವರಿಗೆ ಪ್ರಯಾಣ ದರವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು. ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಿದವರು ಜುಲೈ 31ರ ವರೆಗೆ ಮರುಪಾವತಿಗೆ ಸಂಬಂಧಿಸಿದಂತೆ ಕ್ಲೇಮ್ ಮಾಡಬಹುದು. ಇನ್ನೂ ರದ್ದುಗೊಳಿಸದೇ ಇರುವ ರೈಲುಗಳಲ್ಲಿ ಸಂಚರಿಸಲು ಮುಂಗಡ ಕಾಯ್ದಿರಿಸಿರುವ ಟಿಕೆಟ್‌ಗಳನ್ನು ರದ್ದು ಮಾಡುವ ಪ್ರಯಾಣಿಕರಿಗೂ ಪೂರ್ಣ ಹಣ ಮರುಪಾವತಿಸಲಾಗುವುದುಎಂದೂ ತಿಳಿಸಿದೆ.

ಡಬ್ಲ್ಯುಎಚ್‌ಒ ಮೆಚ್ಚುಗೆ

ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮೆಚ್ಚುಗೆ ವ್ಯಕ್ತಪಡಿಸಿದೆ. ‘ಸಂಖ್ಯೆಗಳ ಲೆಕ್ಕದಲ್ಲಿ ಪರಿಣಾಮದ ಬಗ್ಗೆ ಮಾತನಾಡುವುದು ಈಗಲೇ ಸಾಧ್ಯವಿಲ್ಲ. ಆದರೆ, ದೇಶವ್ಯಾಪಿಯಾಗಿ ಆರು ವಾರಗಳ ದಿಗ್ಬಂಧನದಿಂದಾಗಿ ಅಂತರ ಕಾಯ್ದುಕೊಳ್ಳುವಿಕೆ, ಸೋಂಕು ಪತ್ತೆ, ಪ್ರತ್ಯೇಕವಾಸ ಮತ್ತು ಸೋಂಕಿತರ ಸಂಪರ್ಕಗಳ ಪತ್ತೆಯಂತಹ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶ ದೊರೆಯುತ್ತದೆ. ಇದು ಸೋಂಕು ಹರಡುವಿಕೆ ತಡೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಡಬ್ಲ್ಯುಎಚ್‌ಒದ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ್‌ ಸಿಂಗ್‌ ಹೇಳಿದ್ದಾರೆ.

ಕೇಂದ್ರದ ನೆರವಿಗಾಗಿ ವೆಬಿನಾರ್‌

ಕೇಂದ್ರ ಸರ್ಕಾರವು ಕೊರೊನಾ ಸಂಕಷ್ಟ ಎದುರಿಸಲು ರಾಜ್ಯಗಳಿಗೆ ಸಾಕಷ್ಟು ಹಣ ನೀಡುತ್ತಿಲ್ಲ ಎಂಬ ಆಕ್ಷೇಪದ ನಡುವೆಯೇ ಬಿಜೆಪಿಯೇತರ ರಾಜ್ಯ ಸರ್ಕಾರಗಳ ಹಣಕಾಸು ಸಚಿವರ ‘ವೆಬಿನಾರ್‌’ (ಅಂತರ್ಜಾಲ ಮೂಲಕ ಸೆಮಿನಾರ್‌) ಈ ವಾರಾಂತ್ಯದಲ್ಲಿ ನಡೆಯಲಿದೆ. ಕೇರಳದ ಹಣಕಾಸು ಸಚಿವ ಥಾಮಸ್‌ ಐಸೆಕ್‌ ಅವರು ಈ ವೆಬಿನಾರ್‌ನ ನೇತೃತ್ವ ವಹಿಸಿದ್ದಾರೆ. ಹೆಚ್ಚುವರಿ ಅನುದಾನಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವುದು ಇದರ ಉದ್ದೇಶ.

ಸಾವು: ಮಹಾರಾಷ್ಟ್ರದಲ್ಲೇ ಹೆಚ್ಚು

ಮಹಾರಾಷ್ಟ್ರದಲ್ಲಿ ಕೊರೊನಾದಿಂದಾಗಿ ಸಾವಿನ ಪ್ರಮಾಣವು ಜಗತ್ತಿನಲ್ಲಿಯೇ ಅತಿ ಹೆಚ್ಚು ಎಂಬ ಆಘಾತಕರ ಅಂಶ ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣವು ಶೇ 6.84ರಷ್ಟಿದೆ. ಭಾರತದ ಸರಾಸರಿ ಪ್ರಮಾಣವು ಶೇ 3.27ರಷ್ಟಿದೆ. ಜಾಗತಿಕ ಮಟ್ಟದಲ್ಲಿ ಸಾವಿನ ದರವು ಶೇ 6.29ರಷ್ಟಿದೆ. ಭಾರತದಲ್ಲಿನ ಸಾವಿನ ಪ್ರಕರಣಗಳಲ್ಲಿ 160 ಮಹಾರಾಷ್ಟ್ರದಲ್ಲಿಯೇ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT