ಗುರುವಾರ , ಏಪ್ರಿಲ್ 15, 2021
24 °C
ರಾಮ ಮಂದಿರ ನಿರ್ಮಾಣಕ್ಕೆ ಹಣಕಾಸಿನ ಮುಗ್ಗಟ್ಟು

ಅಯೋಧ್ಯೆ: ಕುಂಟುತ್ತಾ ಸಾಗಿದೆ ಕಾಮಗಾರಿ

ಬಿ.ಎಸ್‌. ಅರುಣ್‌ Updated:

ಅಕ್ಷರ ಗಾತ್ರ : | |

Prajavani

ಅಯೋಧ್ಯೆ: ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣದ ಬೇಡಿಕೆಯನ್ನು ಬಿಜೆಪಿ ಕೈಬಿಟ್ಟಿದೆ. ಹಾಗಾಗಿ, ‘ಭವ್ಯ ದೇಗುಲ’ದ ಕೆಲಸಕ್ಕಾಗಿ ರೂಪುಗೊಂಡಿರುವ ಕರಸೇವಕಪುರದಲ್ಲಿ ನಡೆಯುತ್ತಿರುವ ಕೆಲಸಕ್ಕೆ ಹಿನ್ನಡೆಯಾಗಿದೆ.

ದೇಗುಲ ನಗರಿಯ ‘ಕಾರ್ಯಶಾಲಾ’ದಲ್ಲಿ 1990ರ ದಶಕದಲ್ಲಿ ಕೆಲಸ ಆರಂಭಿಸಿದಾಗ ಇದ್ದ ಕುಶಲಕರ್ಮಿಗಳ ಸಂಖ್ಯೆ ಸುಮಾರು ನೂರು. ಈಗ ಅದು 4–5ಕ್ಕೆ ಇಳಿದಿದೆ.

ಕುಶಲಕರ್ಮಿಗಳ ಕೆಲಸದಲ್ಲಿ ಶೇಕಡ 50ರಷ್ಟು ಮುಗಿದಿದೆ. ಹಾಗಿದ್ದರೂ, ಕೆಲಸ ಪೂರ್ಣಗೊಳ್ಳುವ ದಾರಿ ಇನ್ನೂ ಬಹಳ ದೂರವಿದೆ. 

ಕಾಮಗಾರಿ ಪೂರ್ಣಗೊಂಡರೂ ದೇಗುಲ ನಿರ್ಮಾಣವು ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ಅವಲಂಬಿತ ಎಂಬುದು ಇನ್ನೊಂದು ವಿಚಾರ.

ಆಗ್ರಾ ಸಮೀಪದ ಕ್ವಾರೆಗಳಿಂದ ತರಲಾದ ನಸುಗೆಂಪು ಬಣ್ಣದ ಬನಿಸ್‌ಪಾದ್‌ ಸುಣ್ಣದ ಕಲ್ಲುಗಳನ್ನು ಸುಂದರವಾಗಿ ಕೆತ್ತಿ ಇರಿಸಲಾಗಿದೆ. ಬಯಲಿನಲ್ಲಿ ಇರಿಸಿರುವ ಈ ಸ್ತಂಭಗಳಲ್ಲಿ ಕಪ್ಪು ಕಲೆಗಳು ಕಾಣಿಸುತ್ತಿವೆ. ‘ಶ್ರೀರಾಮ’ ಎಂದು ಕೆತ್ತಿರುವ ಇಟ್ಟಿಗೆಗಳನ್ನು ಓರಣವಾಗಿ ಜೋಡಿಸಲಾಗಿದೆ. ಆದರೆ ಅವುಗಳಲ್ಲಿ ಬಿರುಕುಗಳು ಮೂಡಿವೆ.

ದೇಗುಲ ನಿರ್ಮಾಣದ ಕೆಲಸಗಳಿಗಾಗಿಯೇ ವಿಶ್ವ ಹಿಂದೂ ಪರಿಷತ್‌ನ ರಾಮಜನ್ಮಭೂಮಿ ನ್ಯಾಸವು ಕರಸೇವಕ‍ಪುರವನ್ನು ಸ್ಥಾಪಿಸಿದೆ. 1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ 1993ರಲ್ಲಿ ನ್ಯಾಸವನ್ನು ಸ್ಥಾಪಿಸಲಾಗಿತ್ತು. 

ನ್ಯಾಸ ಸ್ಥಾಪನೆಯಾಗಿ ಸುಮಾರು ಎರಡು ದಶಕಗಳು ಸಂದಿವೆ. ಈಗ ನ್ಯಾಸವು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ. ರಾಮ ಮಂದಿರ ನಿರ್ಮಾಣದ ಬೇಡಿಕೆಯನ್ನು ಬಿಜೆಪಿ ಕೈಬಿಟ್ಟ ಕಾರಣ ಹಣಕಾಸಿನ ಹರಿವು ನಿಧಾನವಾಗಿದೆ ಎಂದು ಹೇಳಲಾಗುತ್ತಿದೆ. 

‘ಎರಡು ಅಂತಸ್ತಿನ ದೇಗುಲ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗಿತ್ತು. ಮೊದಲ ಅಂತಸ್ತನ್ನು ಪೂರ್ಣಗೊಳಿಸುವಷ್ಟು ಕೆಲಸ ಈಗಾಗಲೇ ಮುಗಿದಿದೆ. ಹಸಿರು ನಿಶಾನೆ ಸಿಕ್ಕ ಕೂಡಲೇ ಎರಡನೇ ಅಂತಸ್ತಿನ ಕೆಲಸ ಆರಂಭಿಸುತ್ತೇವೆ’ ಎಂದು ಕರಸೇವಕಪುರದ ಕಾರ್ಯಶಾಲೆಯ ಹೊಣೆ ಹೊತ್ತಿರುವ ಅನ್ನುಭಾಯ್‌ ಸೋಮಪುರ ಹೇಳುತ್ತಾರೆ. 

ಹಣಕಾಸಿನ ಹರಿವು ನಿಂತಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ದಾನಿಗಳು ನೀಡುವ ಅಲ್ಪ ದೇಣಿಗೆಯಿಂದಲೇ ಈಗ ಕಾಮಗಾರಿ ಮುಂದು ವರಿಯುತ್ತಿದೆ ಎಂದೂ ಅವರು ಹೇಳುತ್ತಾರೆ. 

268 ಅಡಿ ಉದ್ದ, 140 ಅಡಿ ಅಗಲ ಮತ್ತು ಕಲಶದವರೆಗೆ 128 ಅಡಿ ಎತ್ತರದ ದೇಗುಲ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗಿತ್ತು. ಸುಂದರ ಕೆತ್ತನೆಯ 212 ಸ್ತಂಭಗಳು ದೇಗುಲದಲ್ಲಿ ಇರಲಿವೆ. ಒಂದೊಂದು ಅಂತಸ್ತಿನಲ್ಲಿ 106 ಸ್ತಂಭಗಳು ಬರಲಿವೆ. ಪ್ರಸ್ತಾವಿತ ಮಂದಿರದ ಮರದ ಮಾದರಿಯೊಂದನ್ನು ಕಾರ್ಯಶಾಲೆಯಲ್ಲಿ ಇರಿಸಲಾಗಿದೆ. 

‘ದೇಗುಲದ ಬಾಗಿಲು ಮತ್ತು ನೆಲವನ್ನು ಅಮೃತಶಿಲೆಯಿಂದ ರಚಿಸಲಾಗುವುದು. ಕಲಶವನ್ನು ಶಿಲೆಯಿಂದ ರಚಿಸಿ ಅದಕ್ಕೆ ಚಿನ್ನದ ಲೇಪನ ಮಾಡಲಾಗುವುದು’ ಎಂದು ಅನ್ನುಭಾಯ್‌ ಹೇಳುತ್ತಾರೆ.

ಅವರು ಗುಜರಾತ್‌ನವರು. ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕರೆ ದೇಗುಲದ ಕೆಲಸ ಪೂರ್ಣಗೊಳ್ಳಲು 4–5 ವರ್ಷ ಬೇಕಾದಿತು ಎಂದು ಅವರು ಅಂದಾಜಿಸುತ್ತಾರೆ.

ದಿನಕ್ಕೆ ಸಾವಿರ ಭಕ್ತರು
ಕರಸೇವಕಪುರಕ್ಕೆ ಪ್ರತಿ ದಿನ ಸುಮಾರು ಒಂದು ಸಾವಿರ ಜನರು ಭೇಟಿ ನೀಡುತ್ತಾರೆ. ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಮಂದಿರಕ್ಕೆ ಬಂದವರೆಲ್ಲರೂ ಕರಸೇವಕಪುರಕ್ಕೂ ಭೇಟಿ ಕೊಡುತ್ತಾರೆ. ತಾತ್ಕಾಲಿಕ ಮಂದಿರಕ್ಕೆ ಭಾರಿ ಬಂದೋಬಸ್ತು ಒದಗಿಸಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು