ಗುರುವಾರ , ಆಗಸ್ಟ್ 6, 2020
24 °C

ಜನತಂತ್ರ ಹಬ್ಬದ ಹೂರಣ: A to Z

ಶೆಮಿನ್‌ ಜಾಯ್‌ Updated:

ಅಕ್ಷರ ಗಾತ್ರ : | |

ಪ್ರಜಾತಂತ್ರದ ಹಬ್ಬ ಜೋರಾಗಿಯೇ ನಡೆಯುತ್ತಿದೆ. ಭಾರತವನ್ನು ಮುಂದಿನ ಐದು ವರ್ಷ ಯಾರು ಆಳಬೇಕು ಎಂಬುದನ್ನು 89.87 ಕೋಟಿ ಜನರು ನಿರ್ಧರಿಸಲಿದ್ದಾರೆ. ಒಂದೆಡೆ, ಬಹಳ ಬಲಯುತ ಎಂದು ಕಾಣಿಸುತ್ತಿರುವ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಇವೆ. ಇನ್ನೊಂದೆಡೆ ಚೆಲ್ಲು ಚೆದುರಾಗಿರುವ ವಿರೋಧ ಪಕ್ಷಗಳಿವೆ. ಚುನಾವಣೆ ಬಳಿಕ ಒಂದಾಗಿ ಸರ್ಕಾರ ರಚಿಸುವುದಾಗಿ ಈ ಪಕ್ಷಗಳು ಹೇಳುತ್ತಿವೆ. ಬಿಜೆಪಿ ಮರಳಿ ಅಧಿಕಾರಕ್ಕೇರಲು ಯತ್ನಿಸುತ್ತಿದೆ, ಅದಕ್ಕೆ ಅವಕಾಶವೇ ಸಿಗದಂತೆ ಮಾಡಬೇಕು ಎಂಬುದು ವಿರೋಧ ಪಕ್ಷಗಳ ಯತ್ನವಾಗಿದೆ. ಈ ಬಾರಿಯ ಚುನಾವಣೆಯ ‘ಎ’ ಯಿಂದ ‘ಝಡ್‌’ವರೆಗಿನ ವಿಷಯಗಳನ್ನು ಶೆಮಿನ್‌ ಜಾಯ್‌ ಕಟ್ಟಿ ಕೊಟ್ಟಿದ್ದಾರೆ...

A - ಅಯೋಧ್ಯೆ ಮತ್ತು ಅಮಿತ್‌ ಶಾ
ಅಯೋಧ್ಯೆ ಈ ಬಾರಿ ಸದ್ದೇ ಮಾಡಿಲ್ಲ, ಆದರೆ, ಅಮಿತ್‌ ಶಾ ಸದ್ದು ಎಲ್ಲೆಲ್ಲೂ ಕೇಳಿಸುತ್ತಿದೆ. ಹಿಂದುತ್ವವನ್ನು ನೆಚ್ಚಿಕೊಂಡಿರುವ ಬಿಜೆಪಿಗೆ ಈ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಮತ್ತು ರಾಮಮಂದಿರ ಬಹುದೊಡ್ಡ ಅಸ್ತ್ರಗಳಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರದ ಬಗ್ಗೆ ಒಂದು ಪ್ಯಾರಾ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಈ ಬಗ್ಗೆ ಯಾವ ಮಾತನ್ನೂ ಆಡದಿರಲು ನಿರ್ಧರಿಸಿದ್ದಾರೆ. ಬಹುಶಃ, ಮತ ಗಳಿಕೆಗೆ ಇದಕ್ಕಿಂತಲೂ ಪ್ರಬಲವಾದ ಅಸ್ತ್ರ ತಮ್ಮಲ್ಲಿದೆ ಎಂದು ಅವರು ಭಾವಿಸಿರಬೇಕು. ಸಂಪೂರ್ಣ ಗೈರುಹಾಜರಿಯಿಂದ ಅಯೋಧ್ಯೆ ಮತ್ತು ಸರ್ವವ್ಯಾಪಿ ಹಾಜರಿಯಿಂದ ಶಾ ಈ ಬಾರಿ ಗಮನ ಸೆಳೆದಿದ್ದಾರೆ. ಶಾ ಅವರನ್ನು ಆಧುನಿಕ ಚಾಣಕ್ಯ ಎಂದು ಬಿಜೆಪಿಯವರು ಬಣ್ಣಿಸುತ್ತಾರೆ. ಎಲ್‌.ಕೆ. ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ಅವರು ಈ ಬಾರಿ ಸ್ಪರ್ಧಿಸಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿಯಾದರೆ ಶಾ ಅವರೇ ಗೃಹ ಸಚಿವ ಎಂಬ ವದಂತಿಗಳು ಹರಿದಾಡುತ್ತಿವೆ. 

B - ಬಾಲಾಕೋಟ್‌
ಬಾಲಾಕೋಟ್‌ ಮೇಲಿನ ದಾಳಿಯ ಶ್ರೇಯ ತಮ್ಮದು ಎಂದು ಚುನಾವಣೆ ಸಂದರ್ಭದಲ್ಲಿ ಎದೆ ತಟ್ಟಿಕೊಂಡು ಹೇಳುವುದೇ ತಪ್ಪೇ? ಅದು ಸಹಜವೇ. ಆದರೆ, ಮಾಜಿ ಸೈನಿಕರು ಸೇರಿ ಬಹಳಷ್ಟು ಮಂದಿ ಅದನ್ನು ಒಪ್ಪುವುದಿಲ್ಲ. ಸೇನಾ ಕಾರ್ಯಾಚರಣೆಯ ಶ್ರೇಯವನ್ನು ಚುನಾವಣಾ ಪ್ರಚಾರಕ್ಕೆ ಎಳೆದು ತರಬಾರದು ಎಂಬುದು ಅವರ ವಾದ. ಪುಲ್ವಾಮಾ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವಾಯುದಾಳಿಯ ಪ್ರತೀಕಾರ ಈ ಬಾರಿ ಚುನಾವಣೆಯ ಕೇಂದ್ರ ಸ್ಥಾನದಲ್ಲಿದೆ. ‘ಮೋದಿ ನಮಗೆ ಹೊಡೆದರು, ಮೋದಿ ನಮಗೆ ಹೊಡೆದರು’ ಎಂದು ಪಾಕಿಸ್ತಾನ ಹಲುಬುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಬಾಲಾಕೋಟ್‌ ಅನ್ನು ಇರಿಸಿಕೊಂಡು ದೇಶದ ಸುರಕ್ಷತೆಯನ್ನು ಚುನಾವಣೆಯ ಮುಖ್ಯ ವಿಷಯವಾಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಭಾರತದ ಸೇನೆಯನ್ನು ‘ಮೋದಿಯವರ ಸೇನೆ’ ಎಂದೂ ಹೇಳಲಾಗಿದೆ. ಇದು ಭಾರತದ ಸೇನೆಯನ್ನು ಖಾಸಗಿ ಪಡೆಯಾಗಿಸುವ ಕೆಲಸ ಎಂದು ಕೆಲವು ಆಕ್ಷೇಪಿಸಿದ್ದಾರೆ.

C - ಕರ್ಸ್‌ (ಶಾಪ)
ಸಾಧು ಸಂತರು ಚುನಾವಣಾ ಕಣಕ್ಕೆ ಇಳಿಯುವುದು ಹೊಸದೇನಲ್ಲ. ಆದರೆ, ಅಭ್ಯರ್ಥಿಯೊಬ್ಬರ ಶಾಪ ಚುನಾವಣಾ ಕಣ ಪ್ರವೇಶಿಸಿದ್ದು ಇದೇ ಮೊದಲೇನೋ. ತಮಗೆ ಮತ ಹಾಕದಿದ್ದರೆ ಶಾಪಕ್ಕೆ ಗುರಿಯಾಗುತ್ತೀರಿ ಎಂದವರು ಬಿಜೆಪಿಯ ಸಾಕ್ಷಿ ಮಹಾರಾಜ್‌. ಮಾಲೆಗಾಂವ್‌ ಬಾಂಬ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಮುಂಬೈ ದಾಳಿಯ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಸಾವಿಗೆ ತಮ್ಮ ಶಾಪವೇ ಕಾರಣ ಎಂದರು. ಮಾಲೆಗಾಂವ್‌ ಪ್ರಕರಣದಲ್ಲಿ ಪ್ರಜ್ಞಾ ಅವರನ್ನು ಕರ್ಕರೆ ಬಂಧಿಸಿದ್ದರು. ಬಿಜೆಪಿ ಹಿಂದುತ್ವವನ್ನು ಆಕ್ರಮಣಕಾರಿಯಾಗಿ ಮುನ್ನೆಲೆಗೆ ತಂದದ್ದರ ಸೂಚನೆ ಪ್ರಜ್ಞಾ ಅವರ ಚುನಾವಣಾ ರಾಜಕಾರಣ ಪ್ರವೇಶ ಎಂದು ಹೇಳಲಾಗುತ್ತಿದೆ. 

D - ದೇವೇಗೌಡ
ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದಕ್ಕೂ ಮುಂಚೆ ದೇವೇಗೌಡ ಅವರು ಎದುರಿಸುತ್ತಿರುವ ಕೊನೆಯ ಚುನಾವಣೆ ಇದಾಗಿರಬಹುದು. ಈ ಬಾರಿ ಅವರ ಮುಂದಿರುವ ಸವಾಲು ಅಗಾಧ. ತಮ್ಮ ಭದ್ರಕೋಟೆ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟ ಉತ್ತಮ ಸಾಧನೆ ಮಾಡುವುದು ಗೌಡರ ಮಗ ಕುಮಾರಸ್ವಾಮಿಯವರ ಸರ್ಕಾರದ ಉಳಿವಿಗೆ ಬಹಳ ಮುಖ್ಯ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಗೌಡರು ಬಹಳಷ್ಟನ್ನು ಕಂಡಿದ್ದಾರೆ. ಹಾಗಾಗಿ ಭವಿಷ್ಯವೇನೂ ಎಂಬುದು ಅವರಿಗೆ ಅರಿವಾಗಿರಬಹುದು.

E - ಎಲೆಕ್ಷನ್‌ ಕಮಿಷನ್‌
ಚುನಾವಣಾ ಋತುವಿನಲ್ಲಿ ಚುನಾವಣಾ ಆಯೋಗಕ್ಕಿಂತ ಮುಖ್ಯವಾದ ಮತ್ತೊಂದು ಸಂಸ್ಥೆ ಇಲ್ಲ. 543 ಕ್ಷೇತ್ರಗಳು, 89.87 ಕೋಟಿ ಮತದಾರರು, ನೂರಾರು ಅಭ್ಯರ್ಥಿಗಳು, ನೀತಿ ಸಂಹಿತೆ ಉಲ್ಲಂಘನೆ ಮೇಲೆ ಕಣ್ಣು, ಮತದಾನ ಮತ್ತು ಮತ ಎಣಿಕೆಯ ಹೊರೆ– ಆಯೋಗಕ್ಕೆ ಇರುವ ಕೆಲಸ ಅಪಾರ. ಮತಯಂತ್ರ ಮತ್ತು ಅದರ ಬಗ್ಗೆ ಇರುವ ಅವಿಶ್ವಾಸ ಆಯೋಗದ ಮೇಲಿನ ಹೆಚ್ಚುವರಿ ಹೊರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದರೂ ಆಯೋಗ ಕಣ್ಣು ಮುಚ್ಚಿ ಕೂತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಕೆಲವು ಮುಖಂಡರ ಮೇಲೆ ಕೇಳಿ ಬಂದಿರುವ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳತ್ತ ಗಮನ ಹರಿಸಿ ಎಂದು ಸುಪ್ರೀಂ ಕೋರ್ಟ್‌ ಕೂಡ ಆಯೋಗಕ್ಕೆ ತಿವಿದಿದೆ. ಆಯೋಗಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಯಾರಾದರೂ ಭಾವಿಸಿದರೆ ಅದಕ್ಕೆ ಕಾರಣಗಳನ್ನು ಕೊಡಲು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಅವರಿಗೆ ಸಾಧ್ಯವಾಗದು. 

F - ರೈತರು (ಫಾರ್ಮರ್)
ರೈತರ ಆಕ್ರೋಶ ಹಲವರಿಗೆ ಬಿಸಿಮುಟ್ಟಿಸಿದೆ. ಈ ಸಿಟ್ಟಿಗೆ ನರೇಂದ್ರ ಮೋದಿ ಸರ್ಕಾರವೂ ಗುರಿಯಾಗಿದೆ. ರೈತರ ಬವಣೆ, ಸಾಲದ ಹೊರೆ, ಬರ, ಬೆಂಬಲ ಬೆಲೆಗೆ ಆಗ್ರಹಿಸಿ ದೇಶದ ಹಲವೆಡೆ ನಡೆದ ಪ್ರತಿಭಟನೆಗಳು ದೇಶದ ಬಹುತೇಕ ರೈತರನ್ನು ಒಗ್ಗೂಡಿಸಿದವು. ಈ ಚಳವಳಿಗೆ ದಲಿತರ ಮತ್ತು ವಿದ್ಯಾರ್ಥಿಗಳ ಸಿಟ್ಟೂ ಜತೆಗೂಡಿ ಮೋದಿ ಸರ್ಕಾರದ ವಿರುದ್ಧ ಅಲೆಯೊಂದನ್ನು ಸೃಷ್ಟಿಸಿತ್ತು. ಮಧ್ಯಪ್ರದೇಶದ ಮಂದಸೌರ್ ಗೋಲಿಬಾರ್, ಮಹಾರಾಷ್ಟ್ರದ ರೈತರ ಮಹಾಪಾದಯಾತ್ರೆಗಳು, ದೆಹಲಿಯಲ್ಲಿ ತಮಿಳನಾಡಿನ ರೈತರ ಅರೆಬೆತ್ತಲೆ ಪ್ರತಿಭಟನೆಗಳು ರೈತರ ಕಾರ್ಯಸೂಚಿಯೊಂದು ರೂಪುಗೊಳ್ಳಲು ಕಾರಣವಾಯಿತು. ರೈತರ ಸಿಟ್ಟನ್ನು ಶಮನಗೊಳಿಸುವ ಪ್ರಯತ್ನಕ್ಕೆ ಮೋದಿ ಸರ್ಕಾರ ಕೈ ಹಾಕಿದೆ. ರೈತರ ಖಾತೆಗಳಿಗೆ ವಾರ್ಷಿಕ ₹ 6,000 ಜಮೆ ಮಾಡುವುದಾಗಿ ಮೋದಿ ಘೋಷಿಸಿದ್ದರು, ಅದನ್ನು ಜಾರಿಗೂ ತಂದರು. ಆದರೆ ಇದರಿಂದ ರೈತರ ಸಿಟ್ಟು ಶಮನವಾಗಿದೆಯೇ?

G - ಘಟಬಂಧನ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಉದ್ದೇಶದಿಂದ ದೇಶದಾದ್ಯಂತ ಮಹಾಮೈತ್ರಿಕೂಟ (ಮಹಾ ಘಟಬಂಧನ) ರಚಿಸಿಕೊಳ್ಳಲು ವಿರೋಧ ಪಕ್ಷಗಳು ಮುಂದಾಗಿದ್ದವು. ಆದರೆ ಈ ಯತ್ನಕ್ಕೆ ನಿರೀಕ್ಷಿತ ಫಲ ದೊರೆತಿಲ್ಲ. ವಿರೋಧ ಪಕ್ಷಗಳು ಕೆಲವು ರಾಜ್ಯಗಳಲ್ಲಿ ರಾಜ್ಯಮಟ್ಟದ ಮೈತ್ರಿ ಮಾಡಿಕೊಳ್ಳಲ್ಲಷ್ಟೇ ಶಕ್ತವಾದವು. ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಮಾಡಿಕೊಂಡು, ಆ ಮೈತ್ರಿಯಿಂದ ಕಾಂಗ್ರೆಸ್‌ ಅನ್ನು ಹೊರಗಿಟ್ಟಿವೆ. ಪಶ್ಚಿಮ ಬಂಗಾಳ, ದೆಹಲಿ, ಹರಿಯಾಣ ಮತ್ತು ಚಂಡಿಗಡದಲ್ಲಿ ಎಎಪಿ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ವಿಫಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಪ್ರತ್ಯೇಕವಾಗಿ ಕಣಕ್ಕೆ ಇಳಿದಿವೆ. ಇಲ್ಲೂ ಮೈತ್ರಿ ವಿಫಲವಾಗಿದೆ. ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮಾಡಿಕೊಂಡಿರುವ ಮೈತ್ರಿಯಲ್ಲಿ ಎಡಪಕ್ಷಗಳನ್ನು ಹೊರಗಿಡಲಾಗಿದೆ. ಮಹಾಮೈತ್ರಿಯ ಮಾತನಾಡಿದ್ದ ಈ ನಾಯಕರು ಈಗ ಪರಸ್ಪರರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ.

H - ಹಿಂದುತ್ವ
ಹಿಂದುತ್ವ ಬಿಜೆಪಿಯ ಚುನಾವಣಾ ರಾಜಕಾರಣದ ಮೂಲಮಂತ್ರ. ರಾಮ ಮಂದಿರದ ವಿಷಯ ಮೇಲೇಳದಿದ್ದರೂ ಬಿಜೆಪಿಯ ಹಿಂದುತ್ವಕ್ಕೆ ಯಾವುದೇ ತೊಡಕಾಗಿಲ್ಲ. ಅದಕ್ಕಿಂತಲೂ ಭಾರಿ ಸದ್ದು ಮಾಡುತ್ತಿರುವ 370ನೇ ವಿಧಿ, ರಾಷ್ಟ್ರೀಯ ಪೌರತ್ವ ಮಸೂದೆಗಳು ಬಿಜೆಪಿಯ ಬತ್ತಳಿಕೆಯಲ್ಲಿವೆ. ಇವುಗಳಿಂದ ಬಿಜೆಪಿಗೆ ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ವಿವಾದ, ತ್ರಿವಳಿ ತಲಾಕ್ ನಿಷೇಧ ವಿಚಾರಗಳೂ ಬಿಜೆಪಿಯ ಚುನಾವಣೆಯ ವಿಷಯಗಳಾಗಿವೆ. ನೆರೆಯ ದೇಶಗಳ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಮೂಲಕ ಅಕ್ರಮ ವಲಸಿಗರನ್ನು ಹೊರಗಟ್ಟುವ ನಿರ್ಧಾರಗಳನ್ನು ಬಳಸಿಕೊಂಡು ಬಿಜೆಪಿ ಮತ ಯಾಚಿಸುತ್ತಿದೆ. ‘ಈ ಮೂಲಕ ಬಿಜೆಪಿಯು ಮುಸ್ಲಿಮರನ್ನು ಗುರಿ ಮಾಡುತ್ತಿದೆ’ ಎಂದು ವಿಪಕ್ಷಗಳು ಟೀಕಿಸುತ್ತಲೇ ಇವೆ.

I - ಇಂಟರ್‌ನೆಟ್‌
ಈ ಚುನಾವಣೆಯಲ್ಲಿ ಇಂಟರ್‌ನೆಟ್‌ ಅರ್ಥಾತ್ ಅಂತರ್ಜಾಲವು ಬಹಳ ಪ್ರಮುಖವಾದ ಪಾತ್ರ ವಹಿಸಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಜನರಲ್ಲಿ ಸುಳ್ಳು ಸುದ್ದಿಗಳನ್ನು ಹರಡಲು ಅಂತರ್ಜಾಲ ನೆರವಾಗಿದೆ. ಕೈಗೆಟಕುವ ಬೆಲೆಯಲ್ಲಿ ಅಂತರ್ಜಾಲ ಸೇವೆ ಲಭ್ಯವಿರುವುದರಿಂದ ದೇಶದ ಜನರ ಬೆರಳ ತುದಿಯಲ್ಲೇ ಪ್ರಪಂಚ ಲಭ್ಯವಿದೆ. ಅಂತರ್ಜಾಲವು ಈ ಬಾರಿಯ ಚುನಾವಣಾ ವಿಷಯವಲ್ಲ. ಆದರೆ ಅಂತರ್ಜಾಲದ ಮೂಲಕ ಜೀವ ಪಡೆದುಕೊಳ್ಳುವ ವಾಟ್ಸ್‌ಆ್ಯಪ್‌ನಲ್ಲಿ ರಾಜಕೀಯ ಪಕ್ಷಗಳು ಯುದ್ಧವನ್ನೇ ಸಾರಿವೆ. 

J - ಉದ್ಯೋಗ (ಜಾಬ್‌) ಅಥವಾ ನಿರುದ್ಯೋಗ
‘ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ’ ಎಂದು ಮೋದಿ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಮುದ್ರಾ, ಕೌಶಲ ಭಾರತ, ಭಾರತದಲ್ಲೇ ತಯಾರಿಸಿ ಯೋಜನೆಗಳು ಕೋಟ್ಯಂತರ ಉದ್ಯೋಗ ಸೃಷ್ಟಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು ಹೇಳುತ್ತಿದ್ದಾರೆ. ಆದರೆ ದೇಶದ ಔದ್ಯೋಗಿಕ ಸ್ಥಿತಿಗತಿಯ ವರದಿಯನ್ನು ಸರ್ಕಾರ ತಡೆಹಿಡಿದಿದೆ. ನಿರುದ್ಯೋಗದ ಮಟ್ಟ 45 ವರ್ಷಗಳಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿದೆ ಎನ್ನುತ್ತಿವೆ ಮೂಲಗಳು. ‘ಪಕೋಡಾ’ ಮಾಡುವುದೂ ಉದ್ಯೋಗ ಎನ್ನುತ್ತಿದ್ದಾರೆ ಮೋದಿ. ‘ಐದು ವರ್ಷಗಳಲ್ಲಿ ಸೃಷ್ಟಿಯಾದ 10 ಕೋಟಿ ಉದ್ಯೋಗಗಳು ಎಲ್ಲಿ’ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.

K - ಕನ್ಹಯಾ ಕುಮಾರ್ ಮತ್ತು ಕೇಜ್ರಿವಾಲ್
ಈ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಯುವ ನಾಯಕರಲ್ಲಿ ಕನ್ಹಯಾ ಕುಮಾರ್ ಮೊದಲಿಗ. ಬಿಹಾರದ ಬೇಗುಸರಾಯ್‌ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಕನ್ಹಯಾ ಹೊಸ ಸಂಚಲನ ಮೂಡಿಸಿದ್ದಾರೆ. ಆದರೆ ಕಾಂಗ್ರೆಸ್‌–ಆರ್‌ಜೆಡಿ ಅಭ್ಯರ್ಥಿಯೂ ಕಣದಲ್ಲಿರುವ ಕಾರಣ, ಬಿಜೆಪಿಯ ಗಿರಿರಾಜ್ ಸಿಂಗ್‌ ವಿರುದ್ಧ ಕನ್ಹಯಾ ಹೋರಾಟ ಕಠಿಣವಾಗಲಿದೆ. ಇದೇ ರೀತಿ ದೇಶದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ಅರವಿಂದ ಕೇಜ್ರಿವಾಲ್ ಅವರ ಸ್ಥಿತಿ ಈಗ ಮಾಡು ಇಲ್ಲವೇ ಮಡಿ ಎಂಬಂತಿದೆ. ಈ ಚುನಾವಣೆಯಲ್ಲಿ ದೆಹಲಿಯಲ್ಲಿ ಗೆಲುವು ಸಾಧಿಸದಿದ್ದರೆ, ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯು ಕೇಜ್ರಿವಾಲ್‌ಗೆ ಕಠಿಣವಾಗಲಿದೆ.

L - ಲಾಲು... ಜೈಲು
‘ಸಮೋಸಾದಲ್ಲಿ ಆಲೂ (ಆಲೂಗಡ್ಡೆ) ಇರುವವರೆಗೂ, ಬಿಹಾರದಲ್ಲಿ ಲಾಲು ಇರುತ್ತಾನೆ’– ಇದು ಲಾಲು ಪ್ರಸಾದ್ ಅವರ ಜನಪ್ರಿಯ ಘೋಷಣೆಗಳಲ್ಲಿ ಒಂದು. ತುರ್ತು ಸಂದರ್ಭಗಳನ್ನು ಚಾಣಾಕ್ಷತನದಿಂದ ನಿಭಾಯಿಸುತ್ತಿದ್ದ ಲಾಲು ಈಗ ಜೈಲಿನಲ್ಲಿದ್ದಾರೆ. ಎದುರಾಳಿಗಳ ತಂತ್ರಕ್ಕೆ ತಕ್ಕ ಪ್ರತಿತಂತ್ರ ರೂಪಿಸುತ್ತಿದ್ದ ಲಾಲು ಅವರ ಅನುಪಸ್ಥಿತಿಯನ್ನು ಬಿಹಾರದ ವಿಪಕ್ಷಗಳ ಪಾಳಯ ಮತ್ತು ಸ್ವತಃ ಬಿಹಾರ ರಾಜಕಾರಣ ಎದುರಿಸುತ್ತಿದೆ. ಈ ಅನುಪಸ್ಥಿತಿಯು ಲಾಲು ಪುತ್ರ ತೇಜಸ್ವಿ ಯಾದವ್ ಅವರನ್ನು ಹೇಗೆ ರೂಪಿಸುತ್ತದೆ ಎಂಬುದು ಈ ಚುನಾವಣೆಯ ಕುತೂಹಲಕಾರಿ ಅಂಶಗಳಲ್ಲಿ ಒಂದು.

 

M - ಮೋದಿ, ಮಾಯಾ, ಮಮತಾ
ಈ ಚುನಾವಣೆಯಲ್ಲಿ ಮತ್ತು ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚು ಪೈಪೋಟಿ ನೀಡಿದವರಲ್ಲಿ, ನೀಡುತ್ತಿರುವವರಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮೊದಲಿಗರು. ಮೋದಿ ಹೇಗೆ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೋ ಹಾಗೆಯೇ ಮಾಯಾ ಮತ್ತು ಮಮತಾ ಸಹ ಆ ಹುದ್ದೆಯ ಆಕಾಂಕ್ಷಿಗಳು. ಆದರೆ ಈ ಇಬ್ಬರೂ ತಮ್ಮ ಆಕಾಂಕ್ಷೆಯನ್ನು ಬಹಿರಂಗಪಡಿಸಿಲ್ಲ. ಈ ಇಬ್ಬರು ನಾಯಕಿಯರೂ ಮೋದಿ ವಿರುದ್ಧದ ವಾಗ್ದಾಳಿಗೆ ಬಿಡುವು ನೀಡಿಲ್ಲ, ಜತೆಗೆ ರಾಹುಲ್ ಗಾಂಧಿ ವಿರುದ್ಧವೂ. 

N - ‘ನ್ಯಾಯ’ಕ್ಕಾಗಿ ಕಾಂಗ್ರೆಸ್‌
ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಜನರಿಗೆ ‘ನ್ಯಾಯ್‌’ ಸಿಗಲಿದೆ ಎನ್ನುತ್ತಿದೆ ಕಾಂಗ್ರೆಸ್‌. ದೇಶದ ಬಡ ಕುಟುಂಬಗಳ ಖಾತೆಗೆ ವಾರ್ಷಿಕ ₹ 72,000 ನೇರವಾಗಿ ಜಮೆ ಮಾಡುತ್ತೇವೆ. ನೋಟುರದ್ದತಿ ಮತ್ತು ಜಿಎಸ್‌ಟಿ ಮೂಲಕ ಬಿಜೆಪಿ ಮಾಡಿರುವ ಅನ್ಯಾಯವನ್ನು ಈ ಮೂಲಕ ಸರಿಪಡಿಸುತ್ತೇವೆ. ನ್ಯಾಯ ಒದಗಿಸುತ್ತೇವೆ ಎನ್ನುತ್ತಿದೆ ಕಾಂಗ್ರೆಸ್‌.

O - ಒಡಿಶಾ

ಒಡಿಶಾ ರಾಜಕಾರಣದಲ್ಲಿನ ತಮ್ಮ ಹಿಡಿತವನ್ನು ಬಿಜೆಡಿಯ ನವೀನ್ ಪಟ್ನಾಯಕ್ ಕಳೆದುಕೊಳ್ಳುತ್ತಿದ್ದಾರೆಯೇ? ಬಿಜೆಡಿ ಈ ಹಿಂದೆ ಗೆದ್ದಿದ್ದ ಸ್ಥಾನಗಳನ್ನು ಉಳಿಸಿಕೊಳ್ಳಲಿದೆಯೇ? ಬಿಜೆಡಿ ನಾಯಕತ್ವದಲ್ಲಿ ಬದಲಾವಣೆಯಾಗಲಿದೆಯೇ? ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಬಿಜೆಪಿ ತನ್ನ ಸಾಧನೆ ಸುಧಾರಿಸಿಕೊಳ್ಳಲಿದೆಯೇ? ಒಡಿಶಾದಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿರುವ ಪ್ರಶ್ನೆಗಳಿವು.

P - ಪ್ರಿಯಾಂಕಾ, ಪಾಕಿಸ್ತಾನ
ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದು ಈ ಚುನಾವಣೆಯ ಮಹಾ ಬೆಳವಣಿಗೆಗಳಲ್ಲಿ ಒಂದು. ಪ್ರಿಯಾಂಕಾ ಪ್ರವೇಶದಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆಯೇ ಮತ್ತು ಬಿಜೆಪಿಗೆ ತೊಡಕಾಗಲಿದೆಯೇ ಎಂಬುದು ಈಗಿನ ಚರ್ಚೆಯ ವಿಷಯ.

‘ಪಾಕಿಸ್ತಾನದ ಒಳಗೆ ನುಗ್ಗಿ, ಉಗ್ರರನ್ನು ಹುಡುಕಿ ಹುಡುಕಿ ಹೊಡೆದಿದ್ದೇವೆ’ ಎನ್ನುತ್ತಿದೆ ಸರ್ಕಾರ. ಈ ಧೈರ್ಯ ಇರುವ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎನ್ನುತ್ತಿದೆ ಬಿಜೆಪಿ. ಇದರಿಂದ ಬಿಜೆಪಿಗೆ ನೆರವಾಗಲಿದೆಯೇ? ಕಾದು ನೋಡಬೇಕು.

Q - ಕ್ಯೂ (ಸರದಿ)
ಈವರೆಗಿನ ಮತದಾನದಲ್ಲಿ ದೇಶದ ಶೇ 60ಕ್ಕೂ ಹೆಚ್ಚು ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ ಚುನಾವಣಾ ಆಯೋಗದ ಮತ್ತು ರಾಜಕೀಯ ಪಕ್ಷಗಳ ಶ್ರಮದ ಕೊಡುಗೆಯೂ ಇದೆ. ಮತದಾನ ಪ್ರಮಾಣದಲ್ಲಿನ ಏರಿಳಿತವು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ. 

R - ರಾಹುಲ್ ಗಾಂಧಿ–ರಾಜ್ ಠಾಕ್ರೆ
ಈ ಇಬ್ಬರು ನಾಯಕರ ಪಕ್ಷಗಳ ತತ್ವ ಸಿದ್ಧಾಂತಗಳು ಭಿನ್ನ. ಆದರೆ ಇಬ್ಬರೂ ಮೋದಿಯ ಟೀಕಾಕಾರರು. ದೇಶದಾದ್ಯಂತ ಮೋದಿ ವಿರುದ್ಧದ ಅಲೆ ಸೃಷ್ಟಿಸಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ. ನಿರುದ್ಯೋಗ, ಗಬ್ಬರ್‌ ಸಿಂಗ್ ಟ್ಯಾಕ್ಸ್‌, ಚೌಕೀದಾರ್‌ ಚೋರ್ (ಕಾವಲುಗಾರನೇ ಕಳ್ಳ) ಎಂಬುದು ಮೋದಿಯ ವಿರುದ್ಧ ರಾಹುಲ್ ಸೃಷ್ಟಿಸಿದ ಸಂಕಥನಗಳಲ್ಲಿ ಪ್ರಮುಖವಾದವು. ಮೋದಿ ಹೇಳುತ್ತಿರುವ ಸಾಧನೆಗಳಿಗೂ ಸರ್ಕಾರದ ದಾಖಲೆಗಳಲ್ಲಿ ಇರುವ ದತ್ತಾಂಶಗಳಿಗೂ ತಾಳೆಯಾಗುತ್ತಿಲ್ಲ ಎಂಬುದನ್ನು ಡಿಜಿಟಲ್ ಸ್ಕ್ರೀನ್‌ನಲ್ಲಿ ತೋರಿಸುವ ಕೆಲಸವನ್ನು ರಾಜ್‌ ಠಾಕ್ರೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಹಳ್ಳಿ–ಹಳ್ಳಿಗಳಲ್ಲಿ ಅವರು ಜಾಗೃತಿ ಮೂಡಿಸುತ್ತಿದ್ದಾರೆ. ಮೋದಿ ಹೇಳುತ್ತಿರುವುದು ಸುಳ್ಳು ಎನ್ನುತ್ತಿದ್ದಾರೆ.

S - ಸೋನಿಯಾ
ಈ ಚುನಾವಣೆಯಲ್ಲಿ ಕಾಡುತ್ತಿರುವ ಮತ್ತೊಂದು ಅನುಪಸ್ಥಿತಿ ಎಂದರೆ ಅದು ಸೋನಿಯಾ ಗಾಂಧಿ ಅವರದ್ದು. ರಾಯಬರೇಲಿಯಲ್ಲಿ ಸ್ಪರ್ಧೆಗೆ ಇಳಿದಿದ್ದರೂ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ದೇಶದ ಉದ್ದಗಲಕ್ಕೂ ಓಡಾಡಿ ಪಕ್ಷದಲ್ಲಿ ಉತ್ಸಾಹ ತುಂಬಿದ್ದ ಸೋನಿಯಾ ಈಗ ಅನಾರೋಗ್ಯದ ಕಾರಣದಿಂದ ಮನೆಯಲ್ಲೇ ಉಳಿದಿದ್ದಾರೆ. ಆದರೆ ದೇಶದ ರಾಜಕಾರಣದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನವನ್ನು ಅವರಿನ್ನೂ ಬಿಟ್ಟುಕೊಟ್ಟಿಲ್ಲ.

T - ಟಿಡಿಪಿ, ಟಿಆರ್‌ಎಸ್‌
ಯಾವುದೇ ಮೈತ್ರಿಕೂಟವು ದೆಹಲಿಯ ಗದ್ದುಗೆ ಏರಲು ಟಿಆರ್‌ಎಸ್‌ ಮತ್ತು ಟಿಡಿಪಿ ನಿರ್ಣಾಯಕವಾಗಿವೆ. ಚುನಾವಣೆಯ ನಂತರ ಕೆ.ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್‌ ಯಾರ ಪರ ನಿಲ್ಲುತ್ತದೆ ಎಂಬುದರ ಆಧಾರದಲ್ಲಿ ಬಿಜೆಪಿ ಮತ್ತು ವಿರೋಧಿ ಪಾಳಯದ ಸ್ಥಾನ ನಿರ್ಧಾರವಾಗಲಿದೆ. ಆದರೆ ಟಿಆರ್‌ಎಸ್‌ಗೆ ಅಂತಹ ತೊಂದರೆಯೇನೂ ಇಲ್ಲ. ಆದರೆ ಟಿಡಿಪಿಗೆ ಇದು ಮಾಡು ಇಲ್ಲವೇ ಮಡಿ ಹೋರಾಟ. ವೈಎಸ್‌ಆರ್‌ ಕಾಂಗ್ರೆಸ್‌ ಎದುರು ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಹಿನ್ನಡೆ ಸಾಧಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ಟಿಡಿಪಿ ಮರೆಗೆ ಸರಿಯುವ ಸಾಧ್ಯತೆಯೇ ಹೆಚ್ಚು.

U - ಉತ್ತರ ಪ್ರದೇಶ
ದೆಹಲಿ ಗದ್ದುಗೆಯ ಹೆಬ್ಬಾಗಿಲು ಉತ್ತರಪ್ರದೇಶ. 2014ರಲ್ಲಿ ಬಿಜೆಪಿಯು ರಾಜ್ಯದ 80 ಕ್ಷೇತ್ರಗಳಲ್ಲಿ 71ರಲ್ಲಿ ಗೆಲುವು ಸಾಧಿಸಿತ್ತು. ಆನಂತರ ರಾಜ್ಯದಲ್ಲಿ ನಡೆದ ಹಲವು ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಬಿಜೆಪಿ ವಿರುದ್ಧ ಎಸ್‌ಪಿ–ಬಿಎಸ್‌ಪಿ ಒಂದಾಗಿವೆ. ಕಾಂಗ್ರೆಸ್‌ ಪ್ರತ್ಯೇಕವಾಗಿ ಕಣಕ್ಕೆ ಇಳಿದಿದೆ. ಪ್ರಬಲ ಪೈಪೋಟಿಯಲ್ಲಿ ಬಿಜೆಪಿ ಈ ಬಾರಿ ಕಳೆದುಕೊಳ್ಳುವುದೇ ಹೆಚ್ಚು ಎನ್ನುತ್ತಿದ್ದಾರೆ ತಜ್ಞರು. ಇದು ಬಿಜೆಪಿಗೆ ನಿಜಕ್ಕೂ ಒಳ್ಳೆಯ ಸುದ್ದಿಯಲ್ಲ.

V - ವಿವಿಪ್ಯಾಟ್
ಮತದಾನ ದೃಢೀಕರಣ ಯಂತ್ರ ವಿವಿಪ್ಯಾಟ್ ಈ ಚುನಾವಣೆಯ ಚರ್ಚಿತ ವಿಷಯಗಳಲ್ಲಿ ಒಂದು. ಪ್ರತಿ ಕ್ಷೇತ್ರದ ಶೇ 50ರಷ್ಟು ವಿವಿಪ್ಯಾಟ್‌ ರಶೀತಿಗಳನ್ನು ತಾಳೆ ಹಾಕಬೇಕು ಎಂದು ವಿರೋಧ ಪಕ್ಷಗಳು ಪಟ್ಟುಹಿಡಿದಿವೆ. ಆದರೆ ಕ್ಷೇತ್ರವೊಂದರ ಐದು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿದರೆ ಸಾಕು ಎಂದಿದೆ ಸುಪ್ರೀಂ ಕೋರ್ಟ್‌. ಆದೇಶ ಮರುಪರಿಶೀಲಿಸಿ ಎನ್ನುತ್ತಿವೆ ವಿರೋಧ ಪಕ್ಷಗಳು.

W ‌- ವಯನಾಡ್
ಈ ಚುನಾವಣೆಯಲ್ಲಿ ರಾಷ್ಟ್ರರಾಜಕಾರಣದಲ್ಲಿ ದಿಢೀರ್ ಎಂದು ಸುದ್ದಿಯಾದದ್ದು ವಯನಾಡ್ ಮಾತ್ರ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯ ಜತೆಗೆ ವಯನಾಡ್‌ನಿಂದಲೂ ಕಣಕ್ಕೆ ಇಳಿದಿದ್ದಾರೆ. ಇದು ಏಕಕಾಲದಲ್ಲಿ ಬಿಜೆಪಿಗೆ ಮತ್ತು ಎಡಪಕ್ಷಗಳಿಗೆ ಕಿರಿಕಿರಿ ಉಂಟುಮಾಡಿದೆ. ಎಡಪಕ್ಷಗಳಂತೂ, ‘ನೀವು ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿದ್ದೀರಾ ಅಥವಾ ಎಡಪಕ್ಷಗಳ ವಿರುದ್ಧ ಸ್ಪರ್ಧಿಸುತ್ತಿದ್ದೀರಾ’ ಎಂದೇ ಪ್ರಶ್ನಿಸಿವೆ.

 

X  -ಎಕ್ಸ್‌–ಪಿಎಂ ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ ಅವರು ಐದು ವರ್ಷಗಳ ಹಿಂದೆ ಪ್ರಧಾನಿ ಹುದ್ದೆ ಕಳೆದುಕೊಂಡಿರಬಹುದು ಅಷ್ಟೆ. ಆದರೆ ಇಂದಿನ ಪ್ರಧಾನಿ ಮೋದಿ ತಮ್ಮ ಟೀಕೆಗಳಲ್ಲಿ ಮನಮೋಹನ್ ಅವರ ಹೆಸರನ್ನು ಪಠಿಸುತ್ತಲೇ ಇರುತ್ತಾರೆ. ಕಾಂಗ್ರೆಸ್‌ ನಾಯಕರು ಸಹ ಕಠಿಣ ಸಂದರ್ಭಗಳಲ್ಲಿ ‘ಡಾಕ್ಟರ್ ಸಾಹೇಬ್’ (ಮನಮೋಹನ್‌ ಅವರನ್ನು ಹಾಗೆ ಕರೆಯುವುದು ರೂಢಿ) ಅವರನ್ನು ಎಡತಾಕುತ್ತಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ ಪ್ರಚಲಿತದಲ್ಲಿರುವ ನಾಯಕ ಇವರು. ಇವರನ್ನು ಅಮೃತಸರದಿಂದ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಬಯಸಿತ್ತು. ಆದರೆ 86 ವರ್ಷದ ಡಾಕ್ಟರ್‌ ಸಾಹೇಬ್ ‘ಆಗದು’ ಎಂದಿದ್ದಾರೆ.

Y - ಯೆಚೂರಿ
ಸಂಸತ್ತಿನಲ್ಲಿ ಸೀತಾರಾಂ ಯೆಚೂರಿ ನೇತೃತ್ವದ ಸಿಪಿಎಂ ಸದಸ್ಯರ ಸಂಖ್ಯೆ ಕಡಿಮೆ ಇರಬಹುದು. ಆದರೆ ಸರ್ಕಾರದ ವಿರುದ್ಧ ವಿಪಕ್ಷಗಳನ್ನು ಒಂದು ಮಾಡಿದ ಮತ್ತು ಸರ್ಕಾರದ ನೀತಿಗಳ ವಿರುದ್ಧ ಹೋರಾಟ ಸಂಘಟಿಸಿದ ಶ್ರೇಯ ಯೆಚೂರಿ ಮತ್ತು ಅವರ ಪಕ್ಷದ ನಾಯಕರಿಗೆ ಸಲ್ಲುತ್ತದೆ. ವಿಪಕ್ಷಗಳೆಲ್ಲವೂ ಬಾಯಿಬಿಡದೆ ಸುಮ್ಮನೆ ಕುಳಿತಿದ್ದಾಗ, ಯೆಚೂರಿ ದನಿ ಎತ್ತಿದ್ದರು. ಕಾಂಗ್ರೆಸ್‌ ಜತೆಗಿನ ಸೈದ್ಧಾಂತಿಕ ಭಿನ್ನತೆಯನ್ನು ಬದಿಗೊತ್ತಿ ಮೈತ್ರಿಯ ಅಗತ್ಯವಿದೆ ಎಂದಿದ್ದರು. ಆದರೆ ಅವರು ಆಶಿಸಿದ್ದ ಮೈತ್ರಿ ರೂಪುಗೊಳ್ಳಲೇ ಇಲ್ಲ.

Z - ಝೀರೊ ಆಸ್ತಿ
ನಾಲ್ಕು ಹಂತದ ಮತದಾನ ಮುಗಿದಿದೆ. ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಚರ್ಚೆ ಬಹಳ ಹಳೆಯದು. ಅದು ಇಲ್ಲಿನ ವಾಸ್ತವ. ಈವರೆಗೆ ಮುಗಿದ ಹಂತಗಳಲ್ಲಿ ಸ್ಪರ್ಧಿಸಿರುವ 56 ಅಭ್ಯರ್ಥಿಗಳ ಹೆಸರಿನಲ್ಲಿ ಇರುವ ಆಸ್ತಿ ಸೊನ್ನೆ. ಈ ಅಭ್ಯರ್ಥಿಗಳು ತಮ್ಮ ನಾಮಪತ್ರದ ಜತೆಗೆ ಸಲ್ಲಿಸಿದ ಪ್ರಮಾಣಪತ್ರಗಳ ಪ್ರಕಾರ ಅವರಲ್ಲಿ ಆಸ್ತಿ ಇಲ್ಲ. ಹಣವೇ ಮುಖ್ಯವಾಗಿರುವ ಚುನಾವಣೆಯಲ್ಲಿ ಹಣವೇ ಇಲ್ಲದವರು ಸ್ಪರ್ಧಿಸುತ್ತಾರೆ, ಅವರಿಗೆ ಪ್ರಜಾಪ್ರಭುತ್ವದಲ್ಲಿ ಅಂತಹ ನಂಬಿಕೆ ಇದೆ. ಅದು ಜನತಂತ್ರದ ಚೆಲುವೂ ಹೌದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು