5ನೇ ಹಂತದ ಚುನಾವಣೆ: ಮೋದಿ-ದೀದಿ ಪೈಪೋಟಿ, ಕಾಶ್ಮೀರದಲ್ಲಿ ಭದ್ರತೆಯೇ ಸವಾಲು

ಬುಧವಾರ, ಮೇ 22, 2019
29 °C

5ನೇ ಹಂತದ ಚುನಾವಣೆ: ಮೋದಿ-ದೀದಿ ಪೈಪೋಟಿ, ಕಾಶ್ಮೀರದಲ್ಲಿ ಭದ್ರತೆಯೇ ಸವಾಲು

Published:
Updated:

ಜೈಪುರ: ಐದನೇ ಹಂತದಲ್ಲಿ ಮತದಾನ ಆಗಲಿರುವ ರಾಜಸ್ಥಾನದ 12 ಕ್ಷೇತ್ರಗಳಲ್ಲಿ ವೈವಿಧ್ಯಮಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಬ್ಬರು ಮಾಜಿ ಕ್ರೀಡಾಳುಗಳು, ಒಬ್ಬರು ಮಾಜಿ ಐಎಎಸ್‌ ಮತ್ತು ಒಬ್ಬರು ಮಾಜಿ ಐಪಿಎಸ್‌ ಅಧಿಕಾರಿಗಳು ಹಾಗೂ ಇಬ್ಬರು ಸಂತರು ಕಣದಲ್ಲಿದ್ದಾರೆ. 

ಜೈಪುರ ಗ್ರಾಮಾಂತರ, ಬಿಕಾನೆರ್‌, ದೌಸಾ ಮತ್ತು ಅಲ್ವರ್‌ ಗಮನ ಸೆಳೆದಿರುವ ಕ್ಷೇತ್ರಗಳು. 

ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ರಾಜ್ಯವರ್ಧನ್‌ ರಾಥೋಡ್‌ ಮತ್ತು ಕೃಷ್ಣಾ ಪೂನಿಯಾ ಜೈಪುರ ಗ್ರಾಮಾಂತರ ಕ್ಷೇತ್ರದಲ್ಲಿ ಎದುರಾಳಿಗಳು. ಹಾಲಿ ಸಂಸದ ಮತ್ತು ಕೇಂದ್ರ ಸಚಿವ ರಾಥೋಡ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ನಂಬಿಕೊಂಡಿದ್ದಾರೆ. ರಾಷ್ಟ್ರೀಯ ಭದ್ರತೆಯೇ ರಾಥೋಡ್‌ ಅವರ ಪ್ರಚಾರದ ಮುಖ್ಯ ವಿಚಾರವಾಗಿತ್ತು. ಆದರೆ, ಸಂಸದ ಮತ್ತು ಸಚಿವರಾಗಿ ರಾಥೋಡ್‌ ಅವರು ಮಾಡಿದ್ದೇನು ಎಂದು ಪೂನಿಯಾ ಅವರು ಪ್ರಶ್ನಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ರಾಥೋಡ್‌ ಅವರ ಗೆಲುವಿನ ಅಂತರ 3.32 ಲಕ್ಷ ಮತಗಳು. ಜಾಟ್‌ ಸಮುದಾಯದವರೇ ಬಹುಸಂಖ್ಯೆಯಲ್ಲಿರುವ ಕ್ಷೇತ್ರ ಇದು. ಜಾತಿ ಲೆಕ್ಕಾಚಾರ ಪೂನಿಯಾ ಅವರಿಗೆ ಅನುಕೂಲಕರವಾಗಿದೆ. 

ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಅರ್ಜುನ್‌ ರಾಮ್‌ ಮೇಘವಾಲ್‌ ಅವರಿಗೆ ಸೋದರ ಸಂಬಂಧಿ ಕಾಂಗ್ರೆಸ್‌ನ ಮದನ್‌ಗೋಪಾಲ್‌ ಮೇಘವಾಲ್‌ ಭಾರಿ ಪೈಪೋಟಿ ಒಡ್ಡಿದ್ದಾರೆ. ಅರ್ಜುನ್‌ ರಾಮ್‌ ಮಾಜಿ ಐಎಎಸ್‌ ಅಧಿಕಾರಿಯಾಗಿದ್ದರೆ ಮದನ್‌ಗೋಪಾಲ್‌ ಅವರು ಮಾಜಿ ಐಪಿಎಸ್‌ ಅಧಿಕಾರಿ. 

ಸಂತರಾದ ಸುಮೇಧಾನಂದ ಸರಸ್ವತಿ ಮತ್ತು ಬಾಬಾ ಬಾಲಕಾಂತ್‌ ಅವರು ಕ್ರಮವಾಗಿ ಸಿಕರ್‌ ಮತ್ತು ಅಲ್ವರ್‌ನ ಬಿಜೆಪಿ ಅಭ್ಯರ್ಥಿಗಳು. ಸುಮೇಧಾನಂದ ಹಾಲಿ ಸಂಸದ. ಕೇಂದ್ರದ ಮಾಜಿ ಸಚಿವ ಭನ್ವರ್‌ ಜಿತೇಂದ್ರ ಸಿಂಗ್‌ ಅವರನ್ನು ಅಲ್ವರ್‌ನಲ್ಲಿ ಕಾಂಗ್ರೆಸ್‌ ಕಣಕ್ಕಿಳಿಸಿದೆ. 

ದೌಸಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಹಿಳೆಯರನ್ನು ಕಣಕ್ಕೆ ಇಳಿಸಿವೆ. ಮಾಜಿ ಸಂಸದೆ ಜಸ್ಕರು ಮೀನಾ ಬಿಜೆಪಿ ಅಭ್ಯರ್ಥಿ. ಶಾಸಕ ಮುರಾರಿ ಮೀನಾ ಅವರ ಹೆಂಡತಿ ಸವಿತಾ ಮೀನಾ ಅವರು ಕಾಂಗ್ರೆಸ್‌ ಅಭ್ಯರ್ಥಿ. 

ಏಪ್ರಿಲ್‌ 29ರಂದು ನಡೆದ ನಾಲ್ಕನೇ ಹಂತದಲ್ಲಿ ರಾಜಸ್ಥಾನದ 13 ಕ್ಷೇತ್ರಗಳಿಗೆ ಮತದಾನ ಆಗಿತ್ತು. ಐದನೇ ಹಂತದ ಮತದಾನದೊಂದಿಗೆ ಈ ರಾಜ್ಯದ ಎಲ್ಲ ಕ್ಷೇತ್ರಗಳ ಮತದಾನ ಪೂರ್ಣಗೊಳ್ಳುತ್ತದೆ. 

ಕ್ಷೇತ್ರದಲ್ಲಿ ನೆಲೆಗೊಳ್ಳಲು ಬಿಜೆಪಿ ಭಾರಿ ಪ್ರಯತ್ನ
ಕೋಲ್ಕತ್ತ:
ಪಶ್ಚಿಮ ಬಂಗಾಳದಲ್ಲಿ ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ನೆಲೆ ಗಟ್ಟಿಗೊಳಿಸಲು ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯದಲ್ಲಿ ತುರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿಯನ್ನು ತಡೆಯಲು ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹರಸಾಹಸ ನಡೆಸಿದ್ದಾರೆ.

ಈ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಪೈಕಿ ಬಾರಕ್‌ಪುರದಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಇಲ್ಲಿ, ಟಿಎಂಸಿಯ ದಿನೇಶ್‌ ದ್ವಿವೇದಿ ಮತ್ತು ಬಿಜೆಪಿಯ ಅರ್ಜುನ್‌ ಸಿಂಗ್‌ ಕಣದಲ್ಲಿದ್ದಾರೆ. ಟಿಎಂಸಿಯ ಶಾಸಕರಾಗಿದ್ದ ಅರ್ಜುನ್‌ ಸಿಂಗ್‌, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸೇರಿದ್ದಾರೆ. ಕ್ಷೇತ್ರದಲ್ಲಿ ಶೇ 40ರಷ್ಟಿರುವ ಹಿಂದಿ ಭಾಷಿಕ ಮತದಾರರೇ ನಿರ್ಣಾಯಕ ಎನ್ನಲಾಗಿದೆ.

ಬೊಂಗಾಂವ್‌ ಇನ್ನೊಂದು ಕುತೂಹಲಕರ ಕ್ಷೇತ್ರ. ಮತುವಾ ಸಮುದಾಯ ಇಲ್ಲಿನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುಸ ಸಾಧ್ಯತೆ ಇದೆ. 19ನೇ ಶತಮಾನದಲ್ಲಿ ಹರಿಚಂದ್‌ ಠಾಕೂರ್‌ ಸ್ಥಾಪಿಸಿದ ಈ ಪಂಥದ ಜನರು ಈ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಹಾಲಿ ಸಂಸದೆ ಮಮತಾ ಠಾಕೂರ್‌ ಅವರನ್ನು ಟಿಎಂಸಿ ಕಣಕ್ಕಿಳಿಸಿದೆ. ಅವರು ಮತುವಾ ಮಹಾಸಂಘದ ಅಧ್ಯಕ್ಷೆ. ಮತುವಾ ಸಮುದಾಯದ ಮುಖ್ಯಸ್ಥೆಯಾಗಿದ್ದ ವೀಣಾಪಾಣಿ ದೇವಿ ಅವರ ಮೊಮ್ಮಗ ಸಂತನು ಠಾಕೂರ್‌ ಅವರು ಬಿಜೆಪಿ ಅಭ್ಯರ್ಥಿ. ಮಮತಾ ಅವರು ವೀಣಾಪಾಣಿ ಅವರ ಸೊಸೆ.

ಈ ಹಂತದಲ್ಲಿ ಮತದಾನ ನಡೆಯಲಿರುವ ಎಲ್ಲ ಕ್ಷೇತ್ರಗಳನ್ನೂ ಕಳೆದ ಬಾರಿ ಟಿಎಂಸಿ ಗೆದ್ದುಕೊಂಡಿತ್ತು.

ಮತದಾನದ ವೇಳೆ ಶಾಂತಿ ಕಾಪಾಡುವುದೇ ಸವಾಲು
ಶ್ರೀನಗರ:
ಅನಂತನಾಗ್‌ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಹಂತದ ಮತದಾನ ಸೋಮವಾರ ನಡೆಯಲಿದೆ. ಈ ಹಂತದಲ್ಲಿ ಶೋಪಿಯಾನ್‌ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಮತದಾನ ಆಗಲಿದೆ. ಭಯೋತ್ಪಾದನಾ ಕೃತ್ಯಗಳ ಕೇಂದ್ರ ಸ್ಥಾನವಾಗಿರುವ ಈ ಜಿಲ್ಲೆಗಳಲ್ಲಿ ಮತದಾನದ ಸಂದರ್ಭದಲ್ಲಿ ಶಾಂತಿ ಕಾಪಾಡುವುದಕ್ಕೆ ಭದ್ರತಾ ಪಡೆಗಳು ಹರಸಾಹಸ ಪಡುತ್ತಿವೆ.

ಎರಡೂ ಜಿಲ್ಲೆಗಳಲ್ಲಿ ಚುನಾವಣೆಯ ಹುರುಪು ಮೊದಲೇ ಇರಲಿಲ್ಲ. ಶೋಪಿಯಾನ್‌ನಲ್ಲಿ ಮೂವರು ಸ್ಥಳೀಯ ಉಗ್ರರು ಶುಕ್ರವಾರ ಹತರಾಗಿದ್ದಾರೆ. ಬುರ್ಹಾನ್‌ ವಾನಿ ಗುಂಪಿನ ಕೊನೆಯ ಸದಸ್ಯ ಲತೀಫ್‌ ದರ್‌ ಕೂಡ ಹತ ಉಗ್ರರಲ್ಲಿ ಸೇರಿದ್ದಾನೆ. ಹಾಗಾಗಿ, ಮತದಾನದ ಬಗ್ಗೆ ಉದಾಸೀನ ಇನ್ನಷ್ಟು ಹೆಚ್ಚಾಗಿದೆ. ಪುಲ್ವಾಮಾ ಮತ್ತು ಶೋಪಿಯಾನ್‌ನ ಎಲ್ಲ ಮತಗಟ್ಟೆಗಳೂ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಪೊಲೀಸರ ಜತೆಗೆ ಅರೆ ಸೇನಾ ಪಡೆಗಳ 300 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಅನಂತನಾಗ್‌ ಕ್ಷೇತ್ರವು ಅತಿಸೂಕ್ಷ್ಮ ಎಂಬ ಗ್ರಹಿಕೆಯಿಂದಲೇ ಇಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿತ್ತು. ಏಪ್ರಿಲ್‌ 23, 29ರಂದು ಎರಡು ಹಂತಗಳಲ್ಲಿ ಮತದಾನ ಆಗಿದೆ. ಮೂರನೇ ಹಂತ ಸೋಮವಾರ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಇಲ್ಲಿ ಪಿಡಿಪಿ ಅಭ್ಯರ್ಥಿ. ನ್ಯಾಷನಲ್‌ ಕಾನ್ಫರೆನ್ಸ್‌ನ ಹಸನೈನ್‌ ಮಸೂದಿ ಅವರು ಭಾರಿ ಪೈಪೋಟಿ ಒಡ್ಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗುಲಾಂ ಅಹ್ಮದ್‌ ಮೀರ್‌ ಅವರು ಸ್ಪರ್ಧೆಯನ್ನು ತ್ರಿಕೋನವಾಗಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !