ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಗೆ ಸರಿಸಾಟಿಯಾಗದ ಮಹಾಮೈತ್ರಿ

Last Updated 23 ಮೇ 2019, 19:45 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಎಲ್ಲ ಲೆಕ್ಕಾಚಾರಗಳನ್ನು ಮೀರಿ ಭಾರಿ ಗೆಲುವು ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟಕ್ಕೆ ತೀವ್ರ ಮುಖಭಂಗವಾಗಿದ್ದು ಈ ಎರಡೂ ಕೂಟಗಳ ಪ್ರಮುಖ ನಾಯಕರು ಹೀನಾಯವಾಗಿ ಸೋತಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಎರಡು ವರ್ಷಗಳ ಹಿಂದೆ ಮಹಾಮೈತ್ರಿ ತೊರೆದು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು ಈ ಬಾರಿಯ ಫಲಿತಾಂಶ ರಾಜ್ಯದ ರಾಜಕೀಯ ದಿಕ್ಕನ್ನು ಬದಲಿಸಿದೆ. ಇದು ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಹಾಮೈತ್ರಿ ತೊರೆದ ನಿತೀಶ್‌ಕುಮಾರ್‌ಗೆ ಪಾಠ ಕಲಿಸಲು ಕಾಂಗ್ರೆಸ್‌, ಆರ್‌ಜೆಡಿ ಇನ್ನಿಲ್ಲದ ಪ್ರಯತ್ನ ಮಾಡಿದವು. ಆದರೆ, ಅದು ಫಲ ನೀಡಿಲ್ಲ. ಬಿಜೆಪಿ–ಜೆಡಿಯು–ಎಲ್‌ಜೆಪಿ ಗೆಲುವಿನ ನಾಗಾಲೋಟವನ್ನು ತಡೆಯುವಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಮುಗ್ಗರಿಸಿವೆ. ಮಹಾಮೈತ್ರಿ ಲೆಕ್ಕಕ್ಕೇ ಇಲ್ಲದಂತಾಗಿದೆ.

ರಾಜ್ಯದಲ್ಲಿನಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟ 38 ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಜೆಡಿಯು 2 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಇದಾದ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಎನ್‌ಡಿಎಯಿಂದ ಹೊರಬಂದು ಮಹಾಮೈತ್ರಿಕೂಟದೊಂದಿಗೆ (ಕಾಂಗ್ರೆಸ್‌, ಆರ್‌ಜೆಡಿ, ಜೆಡಿಯು) ಕೈಜೋಡಿಸಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟನಿರೀಕ್ಷೆಯಂತೆ ಅಧಿಕಾರಕ್ಕೆ ಬಂತು. ಆದರೆ, ಅಲ್ಪ ಅವಧಿಯಲ್ಲೇ ಕೂಟ ತೊರೆದು ಮತ್ತೆ ಎನ್‌ಡಿಎ ತೆಕ್ಕೆಗೆ ಬಂದ ನಿತೀಶ್‌
ಅವರ ನಡೆಯ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ನಡೆದಿದ್ದವು. ‘ಅವಕಾಶವಾದಿ’ ನಿತೀಶ್‌ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಆಗ ಕೇಳಿಬಂದಿದ್ದವು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಮತ್ತೆ ಬಿಜೆಪಿ–ಜೆಡಿಯು–ಎಲ್‌ಜೆಪಿ ಮೈತ್ರಿಕೂಟವನ್ನು ಬೆಂಬಲಿಸಿರುವುದು ಆ ಪಕ್ಷಗಳ ನಾಯಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು. ಈ ಪೈಕಿ ಬಿಜೆಪಿ, ಜೆಡಿಯು ತಲಾ 16 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿ ಸ್ಪರ್ಧೆ ಮಾಡಿದ್ದ ಎಲ್ಲ ಆರು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಕಾಡಿದ ಲಾಲು ಅನುಪಸ್ಥಿತಿ: ಮಂಕಾದ ಆರ್‌ಜೆಡಿ, ಕಾಂಗ್ರೆಸ್‌ ಭವಿಷ್ಯ

ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಆರ್‌ಜೆಡಿಯು ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡಿದ್ದ ಮೈತ್ರಿ ನಿರೀಕ್ಷಿತ ಫಲ ನೀಡಿಲ್ಲ. ಎರಡೂ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಿದ್ದು, ಈ ಫಲಿತಾಂಶವು ಆ ಪಕ್ಷಗಳ ಭವಿಷ್ಯವನ್ನು ಮಂಕಾಗಿಸಿದೆ.

ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್‌ ಅವರ ಅನುಪಸ್ಥಿತಿಯಲ್ಲಿ ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಒಂದು ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಕೇಂದ್ರ ಸಚಿವ ರಾಮ್‌ ಪಾಲ್‌ ವಿರುದ್ಧ ಸ್ಪರ್ಧೆ ಮಾಡಿದ್ದ ಲಾಲು ಪ್ರಸಾದ್‌ ಪುತ್ರಿ ಮೀಸಾ ಭಾರತಿ (ಪಾಟಲಿಪುತ್ರ) ಜಯಗಳಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೂ ಒಂದೇ ಸ್ಥಾನ ಧಕ್ಕಿದೆ

ಜೆಡಿಯು ಮತ್ತೆ ಎನ್‌ಡಿಎ ತೆಕ್ಕೆಗೆ ಮರಳಿದ್ದನ್ನು ವಿರೋಧಿಸಿ ಆ ಪಕ್ಷ ತೊರೆದು ಆರ್‌ಜೆಡಿಯಿಂದ ಸ್ಪರ್ಧೆ ಮಾಡಿದ್ದ ಹಿರಿಯ ಮುಖಂಡ ಶರದ್‌ ಯಾದವ್‌, ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ ಸೇರಿದ್ದ ನಟ ಶತ್ರುಘ್ನ ಸಿನ್ಹಾ, ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್, ಮಹಾಘಟ ಬಂಧನ್‌ ಅಡಿ ಸ್ಪರ್ಧೆ ಮಾಡಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್‌, ಮಾಜಿ ಮುಖ್ಯಮಂತ್ರಿ ಜೀತನ್‌ರಾಂ ಮಾಂಝಿ ಸೇರಿದಂತೆ ಪ್ರಮುಖರು ಸೋತಿದ್ದಾರೆ.

ಕೇಂದ್ರದ ಸಚಿವ ಗಿರಿರಾಜ್‌ ಸಿಂಗ್‌, ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಜಯಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT