ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಹಾಣ್‌ ಪಾತ್ರವೇನು: ಬಿಜೆಪಿಗೆ ದ್ವಂದ್ವ

ರಾಷ್ಟ್ರ ರಾಜಕಾರಣಕ್ಕೆ ಸೆಳೆಯಲು ಪಕ್ಷದ ಯತ್ನ * ರಾಜ್ಯದಲ್ಲೇ ಉಳಿಯಲು ಮಾಜಿ ಮುಖ್ಯಮಂತ್ರಿ ಬಯಕೆ
Last Updated 20 ಡಿಸೆಂಬರ್ 2018, 19:53 IST
ಅಕ್ಷರ ಗಾತ್ರ

ಭೋಪಾಲ್‌: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಯಾವ ಪಾತ್ರ ಕೊಡಬೇಕು ಎಂಬ ಇಕ್ಕಟ್ಟಿನಲ್ಲಿ ಬಿಜೆಪಿ ಇದೆ.

ಇತ್ತೀಚೆಗೆ ನಡೆದ ಮಧ್ಯ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಹಾಗಿದ್ದರೂ 13 ವರ್ಷ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಚೌಹಾಣ್‌ ಅವರು ಅಲ್ಲಿ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ, ಅವರ ನಾಯಕತ್ವದಲ್ಲಿ ಬಿಜೆಪಿ 109 ಸ್ಥಾನಗಳನ್ನು ಗೆದ್ದಿದೆ. ಇದು ಕಾಂಗ್ರೆಸ್‌ಗಿಂತ ಏಳು ಸ್ಥಾನಗಳಷ್ಟೇ ಕಡಿಮೆ.

ಚೌಹಾಣ್‌ ಅವರ ಜನಪ್ರಿಯತೆಯನ್ನು ಒಪ್ಪಿಕೊಂಡರೆ, ಆಡಳಿತ ವಿರೋಧಿ ಅಲೆ ಇದ್ದದ್ದು ರಾಜ್ಯ ಸರ್ಕಾರದ ವಿರುದ್ಧ ಅಲ್ಲ, ಬದಲಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಅತ್ಯಲ್ಪ ಅಂತರದ ಸೋಲಿನ ಹೊಣೆಯನ್ನು ಸಂಪೂರ್ಣವಾಗಿ ಚೌಹಾಣ್‌ ಅವರ ತಲೆಗೆ ಕಟ್ಟಿದರೆ ಲೋಕಸಭಾ ಚುನಾವಣೆಯಲ್ಲಿ ಅದು ಬಿಜೆಪಿ ಅವಕಾಶಗಳಿಗೆ ಇನ್ನಷ್ಟು ತೊಡಕು ಉಂಟುಮಾಡುತ್ತದೆ ಎಂಬುದು ಪಕ್ಷದ ಇಕ್ಕಟ್ಟಿಗೆ ಕಾರಣ.

ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯೇ ಇಲ್ಲ, ಕೊನೆಯ ಉಸಿರು ಇರುವವರೆಗೆ ರಾಜ್ಯಕ್ಕೆ ಸೀಮಿತ ಎಂದು ಚೌಹಾಣ್‌ ಅವರು ಹೇಳಿರುವುದು ಈ ದ್ವಂದ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ವಿದಿಶಾ ಲೋಕಸಭಾ ಕ್ಷೇತ್ರದಿಂದ ಚೌಹಾಣ್‌ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಯೋಚನೆಗೆ ಇದರಿಂದ ಹಿನ್ನಡೆಯಾಗಿದೆ. 2005ರಲ್ಲಿ ಮುಖ್ಯಮಂತ್ರಿಯಾಗುವ ಮೊದಲು ಐದು ಬಾರಿ ವಿದಿಶಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು. ಚೌಹಾಣ್‌ ಅವರ ಆಹ್ವಾನದ ಮೇರೆಗೆ ಸುಷ್ಮಾ ಸ್ವರಾಜ್‌ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ 2009 ಮತ್ತು 2014ರಲ್ಲಿ ಗೆದ್ದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸುಷ್ಮಾ ಅವರೂ ಘೋಷಿಸಿದ್ದಾರೆ. ಹಾಗಾಗಿ, ಬಿಜೆಪಿಗೆ ಅತ್ಯಂತ ಸುರಕ್ಷಿತವಾದ ಈ ಕ್ಷೇತ್ರ ಚೌಹಾಣ್‌ ಅವರ ಲೋಕಸಭೆ ಮರುಪ್ರವೇಶಕ್ಕೆ ಮುಕ್ತವಾಗಿತ್ತು. ಆದರೆ, ಅವರು ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಬೇಕು ಎಂಬ ಆಸೆ ಹೊಂದಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಮಾದರಿಯನ್ನು ಅನುಸರಿಸಲು ಚೌಹಾಣ್‌ ಬಯಸುತ್ತಿದ್ದಾರೆ. ಚುನಾವಣಾ ಸೋಲಿನ ಬಳಿಕ ಹೊಣೆಯನ್ನು ಅವರೇ ಹೊತ್ತುಕೊಂಡದ್ದು ಅಟಲ್‌ ಅವರ ಉದಾರವಾದಿ, ವಿನೀತ ವ್ಯಕ್ತಿತ್ವವನ್ನೇ ಹೋಲುತ್ತಿತ್ತು. ತಮ್ಮ ಉತ್ತರಾಧಿಕಾರಿ ಕಮಲನಾಥ್‌ ಅವರ ಪ್ರಮಾಣವಚನಕ್ಕೆ ಹಾಜರಾಗಿದ್ದು ಮಾತ್ರವಲ್ಲದೆ, ವೇದಿಕೆಯಲ್ಲಿ ಕಮಲನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಕೈಹಿಡಿದೆತ್ತಿ ಒಗ್ಗಟ್ಟು ಪ್ರದರ್ಶಿಸಿದರು. ಅದಾದ ಬಳಿಕ, ಕಮಲನಾಥ್‌ ಮತ್ತು ದಿಗ್ವಿಜಯ್‌ ಸಿಂಗ್‌ ಅವರನ್ನೂ ಭೇಟಿಯಾದರು.

ಮತದಾರರಿಗೆ ಕೃತಜ್ಞತೆ ಅರ್ಪಿಸಲು ರಾಜ್ಯದಾದ್ಯಂತ ಯಾತ್ರೆ ಕೈಗೊಳ್ಳಲು ಚೌಹಾಣ್‌ ಬಯಸಿದ್ದರು. ಆದರೆ, ಇದಕ್ಕೆ ಪಕ್ಷದ ಹೈಕಮಾಂಡ್‌ ಒಪ್ಪಿಗೆ ಕೊಟ್ಟಿಲ್ಲ. ಹಾಗಿದ್ದರೂ ಸ್ವಕ್ಷೇತ್ರ ಬುದ್ನಿಯಲ್ಲಿ ಅವರು ಬುಧವಾರ ಸಮಾರಂಭವೊಂದನ್ನು ಏರ್ಪಡಿಸಿದ್ದರು.

ಟೈಗರ್‌ ಝಿಂದಾ ಹೆ:ಚುನಾವಣಾ ಫಲಿತಾಂಶದಿಂದ ಎದೆಗುಂದಬೇಡಿ. ತಾವು ಜನರ ಮಧ್ಯದಲ್ಲಿಯೇ ಇರುವುದಾಗಿ ಬೆಂಬಲಿಗರಿಗೆ ಚೌಹಾಣ್‌ ಹೇಳಿದ್ದಾರೆ. ಸಲ್ಮಾನ್‌ ಖಾನ್‌ ನಾಯಕನಾಗಿದ್ದ ಸಿನಿಮಾವೊಂದರ ‘ಟೈಗರ್‌ ಝಿಂದಾ ಹೆ’ ಡೈಲಾಗನ್ನು ಅವರು ಹೇಳಿದ್ದಾರೆ.

ಮಹಾ ಮೈತ್ರಿ ಅಪ್ಪಿದ ಕುಶ್ವಾಹ
ನವದೆಹಲಿ: ಇತ್ತೀಚೆಗೆ ಎನ್‌ಡಿಎ ಮೈತ್ರಿಕೂಟದಿಂದ ಹೊರಗೆ ಬಂದಿರುವ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಕ್ಷವು (ಆರ್‌ಎಲ್‌ಎಸ್‌ಪಿ)ಬಿಜೆಪಿ ವಿರೋಧಿ ಪಕ್ಷಗಳ ಮಹಾಮೈತ್ರಿಕೂಟವನ್ನು ಅಧಿಕೃತವಾಗಿ ಗುರುವಾರ ಸೇರ್ಪಡೆಯಾಗಿದೆ.

ಕಾಂಗ್ರೆಸ್‌ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಸೇರ್ಪಡೆಯನ್ನು ಕುಶ್ವಾಹ ಘೋಷಿಸಿದರು.

ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌, ಆರ್‌ಜೆಡಿ ನಾಯಕತೇಜಸ್ವಿ ಯಾದವ್‌, ಹಿಂದುಸ್ತಾನ್‌ ಅವಾಮಿ ಮೋರ್ಚಾದ ಅಧ್ಯಕ್ಷ ಜಿತನ್‌ ರಾಮ್‌ ಮಾಂಝಿ, ಲೋಕತಾಂತ್ರಿಕ ಜನತಾ ದಳದ ನಾಯಕ ಶರದ್‌ ಯಾದವ್‌ ಮುಂತಾದವರುಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆರ್‌ಎಲ್‌ಎಸ್‌ಪಿ ಡಿಸೆಂಬರ್‌ 10ರಂದು ಎನ್‌ಡಿಎಯಿಂದ ಹೊರಗೆ ಬಂತು. ಕೇಂದ್ರ ಸಚಿವ ಸ್ಥಾನಕ್ಕೆ ಕುಶ್ವಾಹ ಅವರು ಅಂದೇ
ರಾಜೀನಾಮೆ ಕೊಟ್ಟರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಸಾಂವಿಧಾನಿಕವಾಗಿ ವರ್ತಿಸುತ್ತಿದೆ ಮತ್ತು ಹಿಂದುಳಿದ ವರ್ಗದ (ಒಬಿಸಿ) ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದರು.

ಎನ್‌ಡಿಎ ಮೈತ್ರಿಕೂಟವು ತಮ್ಮನ್ನು ಅವಮಾನಿಸುತ್ತಿರುವ ಈ ಸಂದರ್ಭದಲ್ಲಿ ತಮ್ಮ ಜತೆಗೆ ನಿಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮತ್ತು ಶರದ್‌ ಯಾದವ್‌ ಅವರಿಗೆ ಕುಶ್ವಾಹ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT