ರಾಮ ನಾಮ ಜಪಿಸಿ ಚುನಾವಣಾ ಕಹಳೆ

7
ಬಿಜೆಪಿ ರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ; ಹಿಂದುತ್ವ ಕಾರ್ಯತಂತ್ರ ಬಳಕೆಯ ಸುಳಿವು ಕೊಟ್ಟ ಅಮಿತ್‌ ಶಾ

ರಾಮ ನಾಮ ಜಪಿಸಿ ಚುನಾವಣಾ ಕಹಳೆ

Published:
Updated:
Prajavani

ನವದೆಹಲಿ: ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣಾ ಹೋರಾಟಕ್ಕೆ ಬಿಜೆಪಿ ಕಹಳೆ ಮೊಳಗಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಸಮಿತಿ ಸಮಾವೇಶದಲ್ಲಿ ‘ಅಬ್‌ಕಿ ಬಾರ್‌ ಫಿರ್‌ ಮೋದಿ ಸರ್ಕಾರ್‌’ (ಈ ಬಾರಿ ಮತ್ತೆ ಮೋದಿ ಸರ್ಕಾರ) ಎಂಬ ಘೋಷಣೆ ಹೊರಡಿಸಲಾಗಿದೆ. 

ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ಸಾಂವಿಧಾನಿಕ ಮಾರ್ಗದ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ ಎಂದು ಸಮಾವೇಶ ಉದ್ಘಾಟಿಸಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದರು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ವಿಳಂಬ ಮಾಡಲು ಕಾಂಗ್ರೆಸ್‌ ಪಕ್ಷವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಆರೋಪಿಸಿದರು. 

ರಾಮಮಂದಿರ ವಿಚಾರವನ್ನು ಶಾ ಅವರು ಹೇಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಜೋರಾಗಿ ಚಪ್ಪಾಳೆ ತಟ್ಟಿದರು. 

ಈ ಬಾರಿಯ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉಳಿದ ಎಲ್ಲರೂ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದೆ. ಪ್ರಸ್ತಾವಿತ ಮಹಾಮೈತ್ರಿಯು ಸಿದ್ಧಾಂತ ಮತ್ತು ನಾಯಕರು ಇಲ್ಲದ ಗುಂಪು ಎಂದು ಜರೆದಿದೆ. ಲೋಕಸಭಾ ಚುನಾವಣೆಯು ಸಿದ್ಧಾಂತಗಳ ನಡುವಣ ಸಮರ ಎಂದು ಹೇಳಿದೆ.  

ವಿರೋಧ ಪಕ್ಷಗಳೆಲ್ಲ ಬಿಜೆಪಿ ವಿರುದ್ಧ ಮಹಾಮೈತ್ರಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಶಾ ಅವರು ಹಿಂದುತ್ವಕ್ಕೆ ಮಹತ್ವ ನೀಡುವ ಮಾತುಗಳನ್ನು ಆಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯು ಪಾಣಿಪತ್‌ ಯುದ್ಧ ಎಂದು ಅವರು ಬಣ್ಣಿಸಿದ್ದಾರೆ. ಪಾಣಿಪತ್‌ ಯುದ್ಧದಲ್ಲಿ ಭಾರತದ ಮುಸ್ಲಿಂ ದೊರೆಗಳ ಬೆಂಬಲದದಲ್ಲಿ ಅಫ್ಗಾನಿಸ್ತಾನದ ದೊರೆಯು ಮರಾಠಾ ರಾಜನನ್ನು ಸೋಲಿಸಿದ್ದ. 

130 ಯುದ್ಧಗಳನ್ನು ಗೆದ್ದ ಬಳಿಕ 1761ರಲ್ಲಿ ಮರಾಠರು ಸೋತರು. ನಂತರದ 200 ವರ್ಷ ಭಾರತವು ಗುಲಾಮಗಿರಿ ಅನುಭವಿಸಬೇಕಾಯಿತು. 2019ರಲ್ಲಿ ಇದೇ ರೀತಿಯು ಯುದ್ಧ ನಡೆಯಲಿದೆ ಎಂದು ಸಮಾವೇಶವನ್ನು ಉದ್ಘಾಟಿಸಿ ಶಾ ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೆ ಗೆಲ್ಲಬೇಕು ಎಂಬುದನ್ನು ಅವರು ವಿವರಿಸಿದರು. 

2014ರ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷವು ಸಿದ್ಧಾಂತಗಳ ನಡುವಣ ಸಮರ ಎಂದು ಘೋಷಿಸಿತ್ತು. ಈ ಬಾರಿ ಶಾ ಅವರು ಚುನಾವಣೆಯು ಸಿದ್ಧಾಂತಗಳ ನಡುವಣ ಸಮರ ಎಂದು ಹೇಳಿದ್ದಾರೆ. 

ಬಿಜೆಪಿಯ ಕಾರ್ಯತಂತ್ರ ಯಾವುದು ಎಂಬ ಸುಳಿವನ್ನೂ ತಮ್ಮ ಭಾಷಣದಲ್ಲಿ ಶಾ ಬಿಟ್ಟುಕೊಟ್ಟಿದ್ದಾರೆ. ಮೇಲ್ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ಮೀಸಲಾತಿ ನೀಡಿದ್ದು ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಕೈಗೊಂಡ ಮಹತ್ವದ ನಿರ್ಧಾರ ಎಂದು ಅವರು ಹೇಳಿದರು. ವರ್ತಕರಿಗೆ ಜಿಎಸ್‌ಟಿಯಲ್ಲಿ ನೀಡಿರುವ ರಿಯಾಯಿತಿ, ಪಾಕಿಸ್ತಾನದ ಮೇಲೆ ನಡೆಸಿದ ನಿರ್ದಿಷ್ಟ ದಾಳಿ, ನೆರೆ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಮಸೂದೆ ಮುಂತಾದವುಗಳನ್ನು ಪ್ರಸ್ತಾಪಿಸಿದರು. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಅವರ ಜತೆಗಾರರನ್ನು ಶಾ ಅವರು ತೀವ್ರವಾಗಿ ಟೀಕಿಸಿದರು. ಸರ್ಕಾರವು ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರಲು ಯತ್ನಿಸುತ್ತಿದೆ. ಆದರೆ, ವಿರೋಧ ಪಕ್ಷಗಳು ಅದಕ್ಕೆ ಅಡ್ಡಿಯಾಗಿವೆ. ನುಸುಳುಕೋರರು ತಮ್ಮ ಸಂಬಂಧಿಕರೋ ಎಂಬ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷವು ವರ್ತಿಸುತ್ತಿದೆ. ಆ ಪಕ್ಷದ ಅಧ್ಯಕ್ಷರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಶಾ ಒತ್ತಾಯಿಸಿದರು. 

ಪಾಕಿಸ್ತಾನದ ಮೇಲೆ 2016ರ ಸೆಪ್ಟೆಂಬರ್‌ನಲ್ಲಿ ನಿರ್ದಿಷ್ಟ ದಾಳಿ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದರು. ಮೌನಿ ಬಾಬಾ (ಮನಮೋಹನ್‌ ಸಿಂಗ್‌) ಅವರಂತಲ್ಲದೆ ಮೋದಿ ಅವರು ನಿರ್ದಿಷ್ಟ ದಾಳಿ ನಡೆಸಲು ದೇಶದ ಧೀರ ಸೈನಿಕರಿಗೆ ಆದೇಶ ಕೊಟ್ಟರು. ಈ ಮೂಲಕ ಭಾರತವು ಅಮೆರಿಕ ಮತ್ತು ಇಸ್ರೇಲ್‌ನ ಸಾಲಿಗೆ ಸೇರುವಂತಾಯಿತು. ಈ ಎರಡು ದೇಶಗಳು ಮಾತ್ರ ಶತ್ರು ದೇಶದ ನೆಲಕ್ಕೆ ನುಗ್ಗಿ ತಮ್ಮ ಸೈನಿಕರನ್ನು ಕೊಂದವರ ಮೇಲೆ ಸೇಡು ತೀರಿಸಿಕೊಂಡಿವೆ ಎಂದರು.

ಬಿಜೆಪಿ ಜತೆಗೆ ಮೈತ್ರಿ ಇಲ್ಲವೇ ಇಲ್ಲ: ಸ್ಟಾಲಿನ್‌

ಚೆನ್ನೈ: ನಾಲ್ಕೂವರೆ ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಸಮಾನತೆ ಮತ್ತು ಒಕ್ಕೂಟ ಸ್ಫೂರ್ತಿಯನ್ನು ಕೈಬಿಟ್ಟಿದೆ. ಆ ಪಕ್ಷದ ಜತೆಗೆ ಯಾವತ್ತೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. 

‘ಹಳೆಯ ಗೆಳೆಯರಿಗೆ ಬಿಜೆಪಿ ಬಾಗಿಲು ಯಾವತ್ತೂ ತೆರೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ಸ್ಟಾಲಿನ್‌ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಮತ್ತು ಡಿಎಂಕೆ ನಡುವೆ ಮುಂದಿನ ದಿನಗಳಲ್ಲಿ ಮೈತ್ರಿ ಏರ್ಪಡಬಹುದು ಎಂಬ ಸುಳಿವು ಮೋದಿ ಹೇಳಿಕೆಯಲ್ಲಿ ಇತ್ತು ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಇದು ಬಹಳ ವಿಚಿತ್ರವಾದ ಹೇಳಿಕೆ ಮತ್ತು ಚುನಾವಣಾ ಪ್ರಚಾರ ಕಾರ್ಯತಂತ್ರ ಎಂದು ಸ್ಟಾಲಿನ್‌ ಅಭಿಪ್ರಾಯಪಟ್ಟಿದ್ದಾರೆ. 

ಮೋದಿ ಅವರು ದೇಶದ ಪ್ರತಿ ಸಂಸ್ಥೆಯನ್ನೂ ನಾಶ ಮಾಡಿದ್ದಾರೆ. ಸಮುದಾಯಗಳ ನಡುವೆ ಬಿರುಕು ಸೃಷ್ಟಿಸುವ ಭಾಷಣಗಳಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಅಂತಹ ವ್ಯಕ್ತಿ ತಮ್ಮನ್ನು ಅಟಲ್‌ ಬಿಹಾರಿ ವಾಜಪೇಯಿ ಅವರ ಜತೆಗೆ ಹೋಲಿಸಿಕೊಳ್ಳುತ್ತಿದ್ದಾರೆ ಎಂದು ಸ್ಟಾಲಿನ್‌ ಹೇಳಿದ್ದಾರೆ. 

ವಾಜಪೇಯಿ ನೇತೃತ್ವದ ಎನ್‌ಡಿಎ ಜತೆಗೆ ಡಿಎಂಕೆ ಮೈತ್ರಿ ಹೊಂದಿತ್ತು. ಅವರಿಗೆ ವಿಭಜನಕಾರಿ ಕಾರ್ಯಸೂಚಿ ಇಲ್ಲದ ಕಾರಣಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಮೈತ್ರಿ ಮಾಡಿಕೊಳ್ಳಲಾಗಿತ್ತು ಎಂದು ಸ್ಟಾಲಿನ್‌ ಹೇಳಿದರು. 

‘ಕರ್ನಾಟಕ ಸಾಲ ಮನ್ನಾ ವಿಫಲ’

ಕರ್ನಾಟಕದಲ್ಲಿ ರೈತರ ಸಾಲಮನ್ನಾ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟೀಕಿಸಿದರು. 

ದೆಹಲಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಷ್ಟ್ರೀಯ ಅಧಿವೇಶನದಲ್ಲಿ ‘ಸಮೃದ್ಧ ರೈತರಿಂದ ಸಮೃದ್ಧ ಭಾರತ’ ಎಂಬ ನಿರ್ಣಯ ಮಂಡಿಸಿದ ಅವರು, ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ಈಗ ರೈತರಿಗೆ ನೋಟಿಸ್‌ ನೀಡುತ್ತಿದೆ. ಇದರಿಂದ ರೈತರಿಗೆ ಪ್ರಯೋಜನದ ಬದಲು ಸಂಕಷ್ಟ ಎದುರಾಗಿದೆ ಎಂದು ಹರಿಹಾಯ್ದರು.

ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ರೈತರ ಹಿತ ರಕ್ಷಿಸುವ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು ಎಂದು ಅವರು ನೆನಪಿಸಿಕೊಂಡರು. 

ಪ್ರಧಾನಿ ಹುದ್ದೆಯಲ್ಲಿ ನರೇಂದ್ರಮೋದಿ ಅವರು ಮುಂದುವರಿದರೆ ತಮ್ಮ ಬದುಕಿನಲ್ಲಿ ಪರಿವರ್ತನೆ ಸಾಧ್ಯ ಎಂಬ ನಂಬಿಕೆ ರೈತ ಸಮುದಾಯದಲ್ಲಿ ಮೂಡಿದೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಿರ್ಣಯ ಸಮರ್ಥಿಸಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 3

  Sad
 • 2

  Frustrated
 • 10

  Angry

Comments:

0 comments

Write the first review for this !