ಶುಕ್ರವಾರ, ಡಿಸೆಂಬರ್ 6, 2019
19 °C
ಮೈತ್ರಿಗೆ ಕಾಯುತ್ತಿಲ್ಲ: ಬಿಜೆಪಿ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ ದೀರ್ಘ ಕಾಲದ ಮಿತ್ರಪಕ್ಷ

ಮಹಾರಾಷ್ಟ್ರದಲ್ಲಿ ಶಿವಸೇನಾ ದೊಡ್ಡಣ್ಣ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಕೂಟದಲ್ಲಿ ಶಿವಸೇನಾ ಯಾವತ್ತೂ ‘ದೊಡ್ಡಣ್ಣ’ನೇ ಎಂದು ಸೇನಾ ಮುಖಂಡ ಸಂಜಯ ರಾವತ್‌ ಹೇಳಿದ್ದಾರೆ. 

‘ಮಹಾರಾಷ್ಟ್ರದಲ್ಲಿನ ಮೈತ್ರಿಯಲ್ಲಿ ಸೇನಾ ದೊಡ್ಡಣ್ಣನಾಗಿಯೇ ಮುಂದುವರಿಯಲಿದೆ. ಆದರೆ, ಮೈತ್ರಿಗೆ ಬಿಜೆಪಿಯಿಂದ ಈವರೆಗೆ ಯಾವುದೇ ಪ್ರಸ್ತಾವ ಬಂದಿಲ್ಲ. ಪ್ರಸ್ತಾವ ಬರಲಿ ಎಂದು ನಾವು ಕಾಯುತ್ತ ಕುಳಿತಿಲ್ಲ’ ಎಂದೂ ಅವರು ಹೇಳಿದ್ದಾರೆ. 

ಬಿಜೆಪಿ ಮತ್ತು ಶಿವಸೇನಾ ನಡುವೆ ದೀರ್ಘ ಕಾಲದಿಂದ ಮೈತ್ರಿ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡುವುದು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸೇನಾ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು 2014ರವರೆಗೆ ನಡೆದುಕೊಂಡು ಬಂದಿತ್ತು. ಆದರೆ, 2014ರಲ್ಲಿ ಈ ಲೆಕ್ಕಾಚಾರ ಕೊನೆಗೊಂಡಿತು. ನರೇಂದ್ರ ಮೋದಿ ಅಲೆಯಲ್ಲಿ ತೇಲುತ್ತಿದ್ದ ಬಿಜೆ‍ಪಿ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿ 122 ಕ್ಷೇತ್ರಗಳಲ್ಲಿ ಗೆದ್ದಿತು. ಸೇನಾ 63 ಕ್ಷೇತ್ರಗಲ್ಲಿ ಮಾತ್ರ ಗೆಲುವು ಕಂಡಿತು. 

ಸರ್ಕಾರ ರಚನೆಗೆ ಬಿಜೆಪಿಗೆ ಸರಳ ಬಹುಮತದ ಕೊರತೆ ಇತ್ತು. ಕಿರಿಯ ಪಾಲುದಾರನಾಗಿ ಶಿವಸೇನಾ, ಸರ್ಕಾರವನ್ನು ಸೇರಿತು. 

ಸಾವರ್ಕರ್‌ಗೆ ‘ಭಾರತ ರತ್ನ’ ಕೊಡದಿದ್ದಕ್ಕೆ ಬೇಸರ: ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿರುವ ವೀರ ಸಾವರ್ಕರ್‌ ಅವರಿಗೆ ‘ಮೋದಿ ಯುಗ’ದಲ್ಲಿಯೂ ಭಾರತ ರತ್ನ ಪುರಸ್ಕಾರ ಸಿಗದಿರುವುದು ದುರದೃಷ್ಟಕರ ಎಂದು ಶಿವಸೇನಾ ಅಸಮಾಧಾನ ವ್ಯಕ್ತಪಡಿಸಿದೆ. 

ಅಸ್ಸಾಂನ ಗಾಯಕ ಭೂಪೆನ್‌ ಹಜಾರಿಕಾ ಅವರಿಗೆ ‘ಭಾರತ ರತ್ನ’ ನೀಡಿರುವುದು ಚುನಾವಣಾ ತಂತ್ರ, ಇದು ಸರಿಯಲ್ಲ ಎಂದೂ ಸೇನಾ ಹೇಳಿದೆ. 

ಸಾವರ್ಕರ್‌ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡಬೇಕು ಎನ್ನುವುದು ಸೇನಾದ ಬಹುಕಾಲದ ಬೇಡಿಕೆಯಾಗಿದೆ. ಸಾವರ್ಕರ್‌ ಅವರ ಕಟ್ಟಾ ಹಿಂದುತ್ವವಾದಿ ನಿಲುವಿನಿಂದಾಗಿ ಹಿಂದಿನ ಸರ್ಕಾರಗಳು ಅವರನ್ನು ನಿರ್ಲಕ್ಷಿಸಿವೆ. ಎನ್‌ಡಿಎ ಸರ್ಕಾರವಾದರೂ ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕೆಲ ವರ್ಷಗಳ ಹಿಂದೆ ಸಂಜಯ ರಾವತ್‌ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.  

ಪೌರತ್ವ ಮಸೂದೆ ಬಿಜೆಪಿ ವಿರುದ್ಧ ಒಂದಾದ ಮಿತ್ರಪಕ್ಷಗಳು
ಗುವಾಹಟಿ/ಶಿಲಾಂಗ್‌/ಐಜ್ವಾಲ್‌ (ಪಿಟಿಐ):
ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಯನ್ನು ಏಕಧ್ವನಿಯಲ್ಲಿ ವಿರೋಧಿಸಲು ಈಶಾನ್ಯ ರಾಜ್ಯಗಳ ಬಿಜೆಪಿಯ ಮಿತ್ರಪಕ್ಷಗಳು ಮಂಗಳವಾರ ಗುವಾಹಟಿಯಲ್ಲಿ ಸಭೆ ಸೇರಲಿವೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಮತ್ತು  ಪೌರತ್ವ ಮಸೂದೆ ವಿರೋಧಿಸಿ ಎನ್‌ಡಿಎದಿಂದ ಹೊರಬಂದಿರುವ ಅಸ್ಸಾಂ ಗಣ ಪರಿಷತ್‌ (ಎಜಿಪಿ) ಕೂಡ ಈ ಸಭೆಯಲ್ಲಿ ಭಾಗವಹಿಸಲಿವೆ.

ಮೇಘಾಲಯ ಮುಖ್ಯಮಂತ್ರಿ ಮತ್ತು ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಕಾನ್ರಾಡ್‌ ಕೆ. ಸಂಗ್ಮಾ ಸಭೆಯ ನೇತೃತ್ವ ವಹಿಸಿದ್ದಾರೆ.

ಎಂಎನ್‌ಎಫ್‌ (ಮಿಜೋರಾಂ), ಎನ್‌ಡಿಪಿಪಿ (ನಾಗಾಲ್ಯಾಂಡ್‌), ಐಪಿಎಫ್‌ಟಿ (ತ್ರಿಪುರಾ), ಎಸ್‌ಡಿಎಫ್ (ಸಿಕ್ಕಿಂ) ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿ ನೇತೃತ್ವದಲ್ಲಿ ಎಂಟು ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಎನ್‌ಇಡಿಎ (ಈಶಾನ್ಯ ರಾಜ್ಯಗಳ ಪ್ರಜಾಪ್ರಭುತ್ವ ಒಕ್ಕೂಟ) ಮೈತ್ರಿಕೂಟ ರಚಿಸಿಕೊಂಡಿವೆ.

ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಗೆ ಮೊದಲಿನಿಂದಲೂ ಈ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ಕೂಡ ಮಸೂದೆಗೆ ಆಕ್ಷೇಪ ಎತ್ತಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿತ್ರಪಕ್ಷಗಳ ವಿರೋಧದಿಂದ ಬಿಜೆಪಿ ಮುಜುಗರಕ್ಕೀಡಾಗಿದ್ದು, ಇಕ್ಕಟ್ಟಿಗೆ ಸಿಲುಕಿದೆ. ಎಂಟು ರಾಜ್ಯಗಳಲ್ಲಿ 25 ಲೋಕಸಭಾ ಕ್ಷೇತ್ರಗಳಿವೆ.


ಅಮಿತ್‌ ಶಾ

ಓನ್ಲಿ ರಾಹುಲ್‌, ಓನ್ಲಿ ಪ್ರಿಯಾಂಕಾ ಶಾ ಲೇವಡಿಗೆ ಒಮರ್‌ ತಿರುಗೇಟು
ಒಂದು ಶ್ರೇಣಿ, ಒಂದೇ ಪಿಂಚಣಿಯ (ಒನ್‌ ರ‍್ಯಾಂಕ್‌, ಒನ್‌ ಪೆನ್ಶನ್‌) ಸಂಕ್ಷಿಪ್ತಾಕ್ಷರಗಳನ್ನು ಬಳಸಿಕೊಂಡು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕಾಂಗ್ರೆಸ್‌ ಪಕ್ಷವನ್ನು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ ಪಾಲಿಗೆ ಒಆರ್‌ಒಪಿ ಎಂದರೆ ‘ಓನ್ಲಿ ರಾಹುಲ್‌, ಓನ್ಲಿ ಪ್ರಿಯಾಂಕಾ’ (ರಾಹುಲ್‌ ಮತ್ತು ಪ್ರಿಯಾಂಕಾ ಮಾತ್ರ) ಎಂದು ಅವರು ಹಮೀರ್‌ಪುರದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ತಂಗಿ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದನ್ನು ಈ ಮೂಲಕ ಶಾ ಹಂಗಿಸಿದ್ದಾರೆ. 

ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಇದಕ್ಕೆ ತಿರುಗೇಟು ನೀಡಿದ್ದಾರೆ. ಅತಿಯಾದ ಒಡೊಮಸ್‌ನಿಂದ (ಓವರ್‌ಡೋಸ್‌ ಆಫ್‌ ಓನ್ಲಿ ಮೋದಿ, ಓನ್ಲಿ ಶಾ– ಅತಿಯಾದ ಪ್ರಮಾಣದಲ್ಲಿ ಮೋದಿ ಮತ್ತು ಶಾ ಮಾತ್ರ) ದೇಶವು ತತ್ತರಿಸಿದೆ ಎಂದು ಅವರು ಹೇಳಿದ್ದಾರೆ. 

ಮಿತ್ರ ಪಕ್ಷಕ್ಕೆ ಅಪನಂಬಿಕೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಆಗಲಿದೆ. ಆ ಪ‍ಕ್ಷಕ್ಕೆ ಸುಮಾರು ನೂರು ಸ್ಥಾನಗಳು ಕಡಿಮೆಯಾಗಲಿವೆ ಎಂದು ಎನ್‌ಡಿಎ ಅಂಗಪಕ್ಷ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿಯ ಮುಖ್ಯಸ್ಥ ಓಂ ಪ್ರಕಾಶ್‌ ರಾಜ್‌ಭರ್‌ ಹೇಳಿದ್ದಾರೆ. ಸುದ್ದಿವಾಹಿನಿಗಳ ಸಮೀಕ್ಷೆಗಳು ‘ವಾಸ್ತವ’ ಎಂಬಂತೆ ಕಾಣಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಮೈತ್ರಿಗೆ ಕಾಂಗ್ರೆಸ್‌ ಬೆಂಬಲ ನೀಡಲಿ: ಅಖಿಲೇಶ್‌
ಲಖನೌ (ಪಿಟಿಐ): ‘ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷವು ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿಕೂಟವನ್ನು ಬೆಂಬಲಿಸಲೇಬೇಕು’ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಅಖಿಲೇಶ್‌ ಹಾಗೂ ಮಾಯಾವತಿ ಅವರ ಮೇಲೆ ತಮಗೆ ದ್ವೇಷವಿಲ್ಲ, ಗೌರವವಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಕಾಂಗ್ರೆಸ್‌ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ವಿರುದ್ಧ ಹೋರಾಡಬೇಕಾದರೆ ಅವರು ನಮ್ಮ ಮೈತ್ರಿಕೂಟವನ್ನು ಬೆಂಬಲಿಸಬೇಕು. ನಾವು ರಾಯ್‌ಬರೇಲಿ ಹಾಗೂ ಅಮೇಠಿ ಕ್ಷೇತ್ರಗಳನ್ನು ಈಗಾಗಲೇ ಅವರಿಗೆ ಬಿಟ್ಟುಕೊಟ್ಟಿದ್ದೇವೆ’ ಎಂದು ಅಖಿಲೇಶ್‌ ಹೇಳಿದ್ದಾರೆ.  ಕುಂಭಮೇಳದ ಪ್ರಯಾಗರಾಜ್‌ನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಡೆಯನ್ನು ಕಟುವಾಗಿ ಟೀಕಿಸಿರುವ ಅಖಿಲೇಶ್‌, ‘ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನನ್ನ ಆಡಳಿತದಲ್ಲಿ ಪ್ರಾರಂಭಿಸಿದ ಯೋಜನೆಗಳನ್ನು ಹೊರತುಪಡಿಸಿ, ತನ್ನದೇ ಆದ ಯಾವ ಯೋಜನೆ ಆರಂಭಿಸಿದೆ ಎಂಬುದನ್ನು ತಿಳಿಸಲಿ’ ಎಂದು ಸವಾಲು ಹಾಕಿದ್ದಾರೆ.

ಕುಂಭಮೇಳದ ಅಂಗವಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಅಖಿಲೇಶ್‌, ‘ನಮ್ಮ ಆಡಳಿತದಲ್ಲಿ ಕುಂಭಮೇಳದ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ, ಅದರಲ್ಲೂ ಮುಸ್ಲಿಂ ನಾಯಕರು ಮತ್ತು ಅಧಿಕಾರಿಗಳು ಮಾಡಿದ್ದರು. ಅಂದಿನ ನಗರಾಭಿವೃದ್ಧಿ ಸಚಿವ ಮೊಹಮ್ಮದ್‌ ಆಜಂ ಖಾನ್‌, ಆರೋಗ್ಯ ಸಚಿವ ಅಹಮ್ಮದ್‌ ಹಸನ್‌ ಹಾಗೂ ಮುಖ್ಯ ಕಾರ್ಯದರ್ಶಿ ಜಾವೇದ್‌ ಉಸ್ಮಾನಿ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಬಿಜೆಪಿಯಂತೆ ಜಾತಿ, ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವುದರಲ್ಲಿ ನಮಗೆ ನಂಬಿಕೆ ಇಲ್ಲ.  ನಮಗೆ ಜನರನ್ನು ಒಗ್ಗೂಡಿಸುವುದರಲ್ಲಿ ನಂಬಿಕೆ ಇದೆ’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು