ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಘಟಬಂಧನ ನಾಯಕನ ಹೆಸರು ಘೋಷಿಸಿ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸವಾಲು
Last Updated 18 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಜೈಪುರ: ವಿರೋಧ ಪಕ್ಷಗಳ ಮೈತ್ರಿಕೂಟವಾದ ‘ಮಹಾಘಟಬಂಧನ’ ನಾಯಕನ ಹೆಸರು ಘೋಷಿಸುವಂತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.

ಮಹಾಘಟಬಂಧನ ನಾಯಕರು ‘ಮೋದಿ ಹಠಾವೊ’ ಎಂಬ ಏಕೈಕ ಘೋಷಣೆಯೊಂದಿಗೆ ಒಂದುಗೂಡಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ಮೋದಿ ನೇತೃತ್ವದ ಸರ್ಕಾರ ಹುತಾತ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸೋಮವಾರ ಬಿಜೆಪಿ ಕಾರ್ಯಕರ್ತರ ಶಕ್ತಿಕೇಂದ್ರ ಸಮ್ಮೇಳನದಲ್ಲಿ ಹೇಳಿದರು.

ಭಯೋತ್ಪಾದನೆ ವಿರುದ್ಧ ಭಾರತ ಸ್ಪಷ್ಟ ನಿಲುವು ಹೊಂದಿದ್ದು ಯಾವುದೇ ಕಾರಣಕ್ಕೂ ಉಗ್ರವಾದವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

2019ರ ಲೋಕಸಭಾ ಚುನಾವಣೆ ಬಿಜೆಪಿ ಮತ್ತು ಭಾರತದ ದೃಷ್ಟಿಯಿಂದ ಅತಿ ಮಹತ್ವ ಪಡೆದಿದೆ ಎಂದು ಶಾ ಹೇಳಿದರು.

ಕಾಂಗ್ರೆಸ್ ಸೇರಿದ ಕೀರ್ತಿ ಆಜಾದ್
ನವದೆಹಲಿ (ಪಿಟಿಐ): ದರ್ಭಾಂಗ್‌ನ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಸಸೋಮವಾರ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಗಿತ್ತು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಸೋಮವಾರ ಭೇಟಿ
ಮಾಡಿದ ನಂತರ ಆಜಾದ್‌ ಅವರು ವಿಧ್ಯುಕ್ತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು. ಮರಳಿ ಮನೆಗೆ ಬಂದ ಅನುಭವವಾಗಿದೆ (ಘರ್‌ ವಾಪಸಿ) ಎಂದು ಅವರು ಪ್ರತಿಕ್ರಿಸಿದ್ದಾರೆ. ಬಿಜೆಪಿಯ ಮುಖವಾಡದ ಹಿಂದಿನ ಅಸಲಿ ಮುಖ ಬೇರೆ ಇದೆ. ಅದು ಗೊತ್ತಾದ ತಕ್ಷಣ 26 ವರ್ಷಗಳ ಸಂಬಂಧ ಕಡಿದುಕೊಳ್ಳಲು ನಿರ್ಧಾರ ಮಾಡಿದೆ ಎಂದು ಕೀರ್ತಿ ಆಜಾದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತೆಲುಗುದೇಶಂ ತೊರೆದ ಮತ್ತೊಬ್ಬ ಸಂಸದ
ಅಮರಾವತಿ (ಪಿಟಿಐ): ವಾರದ ಒಳಗಾಗಿ ತೆಲುಗುದೇಶಂ ಪಕ್ಷದ ಮತ್ತೊಬ್ಬ ಸಂಸದ ಪಕ್ಷವನ್ನು ತೊರೆದು ಸೋಮವಾರ ವೈಎಸ್‌ಆರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಅಮಲಾಪುರದ ಸಂಸದ ಪಂಡುಲಾ ರವೀಂದ್ರ ಬಾಬು ಅವರು ವೈ.ಎಸ್‌. ಜಗಮೋಹನ್‌ ರೆಡ್ಡಿ ಸಮ್ಮುಖದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸೇರಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಮಲಾಪುರ ಲೋಕಸಭಾ ಕ್ಷೇತ್ರದಿಂದ ಬಾಬು ಅವರಿಗೆ ಟಿಡಿಪಿ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇತ್ತು. ಹೀಗಾಗಿ ಅವರು ವೈಎಸ್‌ಆರ್ ಕಾಂಗ್ರೆಸ್‌ ಸೇರಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವಾರ ಅನಕಪಲ್ಲಿಯ ಟಿಡಿಪಿ ಸಂಸದ ಎಂ.ಶ್ರೀನಿವಾಸ ರಾವ್‌ ಮತ್ತು ಚಿರಾಲಾ ಶಾಸ ಅಂಚಿ ಕೃಷ್ಣಾ ಅವರು ಟಿಡಿಪಿ ತೊರೆದು ವೈಎಸ್‌ಆರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

ಪ್ರಜಾಕೂಟಕ್ಕೆ ಕಾಂಗ್ರೆಸ್‌ ವಿದಾಯ
ಹೈದರಾಬಾದ್ (ಪಿಟಿಐ): ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ರಾಜಕೀಯ ಪಕ್ಷಗಳ ಮೈತ್ರಿ ಬದಲಾವಣೆಯಾಗುವ ನಿರೀಕ್ಷೆ ಇದೆ.

ಟಿಡಿಪಿ, ತೆಲಂಗಾಣ ಜನಸಮಿತಿ (ಟಿಜೆಎಸ್‌) ಮತ್ತು ಸಿಪಿಐ ಜತೆ ಪ್ರಜಾಕೂಟ ರಚಿಸಿಕೊಂಡಿದ್ದ ಕಾಂಗ್ರೆಸ್‌ ಲೋಕಸಭಾ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸುವ ಇಂಗಿತ ಹೊಂದಿದೆ. ಸಿಪಿಐ ಮತ್ತು ಸಿಪಿಎಂ ಕೈಜೋಡಿಸುವ ಸಾಧ್ಯತೆ ಇದೆ.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಕೂಟ ಕಳಪೆ ಸಾಧನೆ ಕಾಂಗ್ರೆಸ್‌ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ. ಎಲ್ಲ 17 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಜತೆ ಕೈಜೋಡಿಸದಿರಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಕಳೆದ ಚುನಾವಣೆಯಲ್ಲಿ ಟಿಆರ್‌ಎಸ್‌ 11 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್‌ ಎರಡು ಮತ್ತು ಬಿಜೆಪಿ, ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಓವೈಸಿ ನೇತೃತ್ವದ ಎಐಎಂಐಎಂ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು.

ದೆಹಲಿ, ಪುದುಚೇರಿಗೆ ರಾಜ್ಯದ ಸ್ಥಾನಮಾನಕ್ಕೆ ಕೇಜ್ರಿವಾಲ್‌ ಆಗ್ರಹ
ಚೆನ್ನೈ (ಪಿಟಿಐ): ದೆಹಲಿ ಮತ್ತು ಪುದುಚೇರಿಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೋಮವಾರ ಆಗ್ರಹಿಸಿದ್ದಾರೆ. ಈ ಎರಡೂ ಕೇಂದ್ರಾಡಳಿತ ಪ್ರದೇಶದ ಜನರಿಗೆ ತಾರತಮ್ಯ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅವರ ವಿರುದ್ಧ ರಾಜಭವನದ ಮುಂಭಾಗ ಧರಣಿ ನಡೆಸುತ್ತಿರುವ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಂದಿದ್ದ ಅವರು ಇಲ್ಲಿ ಮಾತನಾಡಿದರು.

‘ಬೇಡಿ ಅವರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಮತ್ತು ಚುನಾಯಿತ ಸರ್ಕಾರಕ್ಕೆ ತೊಂದರೆ ಕೊಡುತ್ತಿದ್ದಾರೆ. ದೆಹಲಿಯಲ್ಲಿ ನಾವೂ ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಕೇಜ್ರಿವಾಲ್ ತಿಳಿಸಿದರು.

‘ದೆಹಲಿ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ಗಳು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದಿಂದ ನೇಮಕವಾದವರು. ನಾನು ನಾರಾಯಣ ಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೇನೆ’ ಎಂದು ಹೇಳಿದರು.

ಗೆಹ್ಲೋಟ್‌ ಹರ್ನಿಯಾ ಶಸ್ತ್ರಚಿಕಿತ್ಸೆ
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಭಾನುವಾರ ಮುಂಬೈ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬೇಗ ಗುಣಮುಖರಾಗುವಂತೆ ಪ್ರಧಾನಿ ಮೋದಿ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT