ಹೊರಗೆ ಮೈತ್ರಿಕೂಟ: ಒಳಗೊಳಗೇ ತಾಕಲಾಟ

ಸೋಮವಾರ, ಮಾರ್ಚ್ 18, 2019
31 °C
ಬಿಜೆಪಿ–ಶಿವಸೇನಾ, ಕಾಂಗ್ರೆಸ್–ಎನ್‌ಸಿಪಿಗೆ ಸವಾಲು ಒಡ್ಡಲಿವೆ ಸಣ್ಣಪುಟ್ಟ ಪಕ್ಷಗಳು

ಹೊರಗೆ ಮೈತ್ರಿಕೂಟ: ಒಳಗೊಳಗೇ ತಾಕಲಾಟ

Published:
Updated:

ಮುಂಬೈ: ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿಯು ಶಿವಸೇನಾ ಜತೆಗೆ ಮತ್ತು ಕಾಂಗ್ರೆಸ್‌ ಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಂಡಿವೆ. ಆದರೆ ಈ ಎರಡೂ ಮೈತ್ರಿಕೂಟಗಳು ನಮ್ಮನ್ನು ಕಡೆಗಣಿಸಿವೆ ಎಂದು ರಾಜ್ಯದ ಸಣ್ಣ–ಪುಟ್ಟ ಪ್ರಾದೇಶಿಕ ಪಕ್ಷಗಳು ಅಸಮಾಧಾನ ಹೊರಹಾಕಿವೆ.

ಈ ಮೈತ್ರಿಕೂಟಗಳ ವಿರುದ್ಧ ಪ್ರಾದೇಶಿಕ ಪಕ್ಷಗಳು ಹೊಸ ಮೈತ್ರಿಕೂಟವನ್ನು ರಚಿಸಿಕೊಳ್ಳುವ ಸುಳಿವನ್ನು ನೀಡಿವೆ.

‘ಪ್ರಾದೇಶಿಕ ಪಕ್ಷಗಳೆಲ್ಲವೂ ಪರಸ್ಪರ ಸಂಪರ್ಕದಲ್ಲಿವೆ. ಎನ್‌ಡಿಎ ಆಗಲೀ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವೇ ಆಗಲೀ ಈ ಅಸಮಾಧಾನವನ್ನು ಹೇಗೆ ಬಗೆಹರಿಸುತ್ತವೆ ಎಂಬುದನ್ನು ಕಾದು ನೋಡುತ್ತೇವೆ. ನಂತರ ನಮ್ಮ ತಂತ್ರವನ್ನು ರೂಪಿಸುತ್ತೇವೆ’ ಎಂದು ಪ್ರಾದೇಶಿಕ ಪಕ್ಷವೊಂದರ ಮುಖಂಡರು ತಿಳಿಸಿದ್ದಾರೆ.

2014ರ ಚುನಾವಣೆಯಲ್ಲಿ ಈ ಪಕ್ಷಗಳು ಎನ್‌ಡಿಎ ಅಥವಾ ಯುಪಿಎ ಪರವಾಗಿ ಕೆಲಸ ಮಾಡಿದ್ದವು. ಈ ಪಕ್ಷಗಳ ಕೆಲವು ಮುಖಂಡರು ಒಂದೋ ಕೇಂದ್ರ ಸರ್ಕಾರ ಅಥವಾ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಈ ನಾಯಕರು ಮತ್ತು ಅವರ ಪಕ್ಷಗಳನ್ನು ಕಡೆಗಣಿಸುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟಗಳಿಗೆ ದುಬಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಎನ್‌ಡಿಎ
* ಈ ಹಿಂದೆ ಮತ್ತು ಕೇಂದ್ರದಲ್ಲಿ ಈಗಲೂ ಎನ್‌ಡಿಎಯ ಭಾಗವಾಗಿರುವ ಹಲವು ಪ್ರಾದೇಶಿಕ ಪಕ್ಷಗಳನ್ನು ಈ ಮೈತ್ರಿಯಿಂದ ದೂರವಿಡಲಾಗಿದೆ. ಕೇಂದ್ರದಲ್ಲಿ ಈಗ ಸಚಿವರಾಗಿರುವ ರಾಮದಾಸ್ ಆಠವಲೆ ನೇತೃತ್ವದ ಆರ್‌ಪಿಐಗೆ, ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ್ ಪಕ್ಷ, ರಾಯತ್ ಕ್ರಾಂತಿ ಸಂಘಟನಾ ಮತ್ತು ಶಿವ ಸಂಗ್ರಾಮ ಪ್ರತಿಷ್ಠಾನಗಳಿಗೆ ಯಾವುದೇ ಕ್ಷೇತ್ರವನ್ನು ಬಿಜೆಪಿ ಮತ್ತು ಶಿವಸೇನಾಗಳು ಬಿಟ್ಟುಕೊಟ್ಟಿಲ್ಲ

* ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಸಂಸ್ಥಾಪಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ನಾರಾಯಣ ರಾಣೆ ಅವರೂ ಎನ್‌ಡಿಎಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸ್ವತಂತ್ರವಾಗಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ರಾಣೆ ಘೋಷಿಸಿದ್ದಾರೆ.

*
ಮುಂಬೈನಲ್ಲಿನ ಒಂದು ಕ್ಷೇತ್ರವನ್ನು ಒಳಗೊಂಡಂತೆ ಮೂರು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡುವಂತೆ ಬಿಜೆಪಿ ಮತ್ತು ಶಿವಸೇನಾಕ್ಕೆ ಬೇಡಿಕೆ ಇಟ್ಟಿದ್ದೆವು. ಈ ಬಗ್ಗೆ ಎರಡೂ ಪಕ್ಷಗಳು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ

–ರಾಮದಾಸ್ ಆಠವಲೆ, ಆರ್‌ಪಿಐ ಮುಖ್ಯಸ್ಥ ಮತ್ತು ಈಗ ಕೇಂದ್ರ ಸರ್ಕಾರದ ಸಚಿವ

**

ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟ
* ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ನೇತೃತ್ವದ ‘ಭಾರಿಪ ಬಹುಜನ ಮಹಾಸಂಘ’ದ ಜತೆ ಕಾಂಗ್ರೆಸ್ ನಡೆಸಿದ ಮಾತುಕತೆ ವಿಫಲವಾಗಿದೆ. ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಮತ್ತು ಸಂಘಟನೆಗಳನ್ನು ಸೇರಿಸಿಕೊಂಡು ಅವರು ‘ವಂಚಿತ ಬಹುಜನ ಆಘಾಡೀ’ ಎಂಬ ಮೈತ್ರಿಕೂಟವನ್ನು ರಚಿಸಿದ್ದಾರೆ. ಈ ಮೈತ್ರಿಕೂಟದಲ್ಲಿ ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷ, ದನಗರ್, ದಲಿತ, ಅಗ್ರಿ ಮತ್ತು ಕೋಲಿ ಸಮುದಾಯದ ಸಂಘಟನೆಗಳು ಸೇರಿವೆ.

 2014ರಲ್ಲಿ ಎನ್‌ಡಿಎಯಲ್ಲಿದ್ದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು ‘ಕೇಂದ್ರ ಸರ್ಕಾರವು ರೈತ ವಿರೋಧಿ’ ಎಂದು ಆರೋಪಿಸಿ ಎನ್‌ಡಿಎಯನ್ನು ತೊರೆದಿತ್ತು. ಈ ಪಕ್ಷವು ಈಗ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಆದರೆ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಆಗಲೀ, ಎನ್‌ಸಿಪಿ ಆಗಲೀ ಯಾವುದೇ ಭರವಸೆ ನೀಡಿಲ್ಲ.

*

ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆಗಿನ ಮಾತುಕತೆ ವಿಫಲವಾಗಿದೆ. ನಾವು ಇನ್ನೂ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ನಮ್ಮದೇ ಮೈತ್ರಿಕೂಟದಲ್ಲಿ ಚುನಾವಣೆಯನ್ನು ಎದುರಿಸಲಿದ್ದೇವೆ. ನಾವು 48 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದೇವೆ

–ಪ್ರಕಾಶ್ ಅಂಬೇಡ್ಕರ್, ವಂಚಿತ ಬಹುಜನ ಆಘಾಡೀ ಮುಂದಾಳು

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !